2025-26ರ ಆಯವ್ಯಯ ಭಾಷಣದಲ್ಲಿ ವಿತ್ತ ಸಚಿವೆ, ʼಅಣುಶಕ್ತಿ ಕಾಯಿದೆ(ಎಇಅ) ಮತ್ತು ಅಣು ಅವಘಡಗಳಿಗೆ ನಾಗರಿಕ ಹೊಣೆಗಾರಿಕೆ ಕಾಯಿದೆ(ಸಿಎಲ್‌ಎನ್‌ಡಿಎ)ಗೆ ತಿದ್ದುಪಡಿ ತರಲಾಗುವುದುʼ ಎಂದು ಘೋಷಿಸಿದರು; ಅಣು ಶಕ್ತಿ ಕ್ಷೇತ್ರಕ್ಕೆ 20,000 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿದರು.
ಅಣು ದುರಂತ ಸಂಭವಿಸಿದಲ್ಲಿ ಸ್ಥಾವರಗಳ ಉತ್ಪಾದಕರು-ಪೂರೈಕೆದಾರರ ಮೇಲೆ ಕನಿಷ್ಠ ಹೊಣೆಗಾರಿಕೆ ಹೊರಿಸುವ ಈ ಕಾಯಿದೆ ಮೇಲೆ ಅಮೆರಿಕದ ಅಣು ಸ್ಥಾವರಗಳ ಉತ್ಪಾದಕರು/ಸಾಧನ-ಸಲಕರಣೆಗಳ ಪೂರೈಕೆ ದಾರರು ಅಸಮಾಧಾನಗೊಂಡಿದ್ದಾರೆ. 2010ರ ಸಿಎಲ್‌ಎನ್‌ಡಿಎ ಕಾಯಿದೆಯು ಅಣುಶಕ್ತಿ ಉತ್ಪಾದನೆಗೆ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ. ಎನ್‌ಡಿಎ ಈ ಕಾಯಿದೆಯನ್ನು ಬದಲಿಸುವುದಿಲ್ಲ ಎಂದು 2015ರಲ್ಲಿ ಹೇಳಿತ್ತು. ಈಗ ಅದು ತದ್ವಿರುದ್ಧ ನಿಲುವು ತೆಗೆದುಕೊಂಡಿದೆ. ವಿತ್ತ ಸಚಿವೆಯ ಘೋಷಣೆಯಿಂದ ಅಮೆರಿಕ ಮೂಲದ ಕಂಪನಿಗಳಿಗೆ ಖುಷಿ ಆಗಿರಬಹುದು. ಆದರೆ, ಉತ್ಪಾದಕರ ಮೇಲಿನ ಹೊಣೆಗಾರಿಕೆಯನ್ನು ತೆಗೆದು ಹಾಕುವ ಮೂಲಕ ಜನರ ಸುರಕ್ಷತೆಯನ್ನು ಅಡಕ್ಕೆ ಇಡಲಾಗಿದೆ; ಗಂಭೀರ ಪರಿಣಾಮ ಉಂಟಾಗಲಿದೆ.
ಭಾರತ 2021ರ ಗ್ಲಾಸ್ಗೋ ಪರಿಸರ ಸಮಾವೇಶ(ಸಿಒಪಿ 26)ದಲ್ಲಿ 2030ರ ಅಂತ್ಯಕ್ಕೆ 5 ಪಕ್ಷ ಮೆಗಾವಾಟ್ ಇಂಗಾಲರಹಿತ ವಿದ್ಯುತ್ ಉತ್ಪಾದಿಸುವುದಾಗಿ ಘೋಷಿಸಿತ್ತು. ಇದಕ್ಕಾಗಿ ಅದು ಆರಿಸಿಕೊಂಡಿದ್ದು ಅಣು ಶಕ್ತಿಯನ್ನು. ಅಣುಶಕ್ತಿ ಉತ್ಪಾದನೆ ಒಂದು ಸಂಕೀರ್ಣ ಹಾಗೂ ಅತ್ಯಂತ ಅಪಾಯಕರ ಪ್ರಕ್ರಿಯೆ. ಪವನ, ಸೌರ ಹಾಗೂ ಜೈವಿಕ ಇಂಧನದಿಂದ ಈಗಾಗಲೇ 1.75 ಲಕ್ಷ ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ದೇಶ 2047ರ ವೇಳೆಗೆ 100 ಗಿಗಾವಾಟ್ ಅಣು ವಿದ್ಯುತ್ ಉತ್ಪಾದನೆಯ ಗುರಿ ಇರಿಸಿಕೊಂಡಿದ್ದು, ಇದಕ್ಕೆ 2.27 ಲಕ್ಷ ಕೋಟಿ ರೂ. ಅಗತ್ಯವಿದೆ. ಮುಂದಿನ 8 ವರ್ಷದಲ್ಲಿ ದೇಶಿ ನಿರ್ಮಿತ 5 ಸಣ್ಣ/ಮಧ್ಯಮ ಸ್ಥಾವರಗಳು ಕಾರ್ಯ ನಿರ್ವಹಿಸಲಿವೆ ಎಂದು ಹೇಳಿಕೊಂಡಿದೆ. ಈ ಕ್ಷೇತ್ರಕ್ಕೆ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಲು ಅಣುಶಕ್ತಿ ಕಾಯಿದೆಗೆ ತಿದ್ದುಪಡಿಗೆ ಮುಂದಾಗಿದೆ.
ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅಣುವಿದ್ಯುತ್ ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿದ್ದು, ವಾರ್ಷಿಕ 6,700 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿವೆ. ಇವೆಲ್ಲವೂ ರಾಷ್ಟ್ರೀಯ ಅಣು ವಿದ್ಯುತ್ ಕಾರ್ಪೊರೇಷನ್ ನಿಯಮಿತ(ಎನ್‌ಪಿಸಿಐಎಲ್) ಒಡೆತನದಲ್ಲಿವೆ. ಸರ್ಕಾರ 2008ರಲ್ಲಿ ಅಮೆರಿಕದ ವೆಸ್ಟಿಂಗ್‌ಹೌಸ್ ಎಲೆಕ್ಟ್ರಿಕ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಕಂಪನಿ ಆಂಧ್ರಪ್ರದೇಶದ ಕೊವ್ವಾಡದಲ್ಲಿ ನಿರ್ಮಿಸುತ್ತಿರುವ 6,000 ಮೆಗಾವಾಟ್ ಸಾಮರ್ಥ್ಯದ ಸ್ಥಾವರ ಇನ್ನೂ ಪೂರ್ಣಗೊಂಡಿಲ್ಲ; ಆರ್ಥಿಕ ಮುಗ್ಗಟ್ಟು ಹಿನ್ನಡೆಗೆ ಕಾರಣ. ಅಣು ವಿದ್ಯುತ್ ಉತ್ಪಾದನೆಯಲ್ಲಿ ಖಾಸಗಿಯವರಿಗೆ ಅವಕಾಶ ಇಲ್ಲದಿರುವುದನ್ನು ಪ್ರಶ್ನಿಸಿ ಸಂದೀಪ್ ಎನ್ನುವವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಣು ವಿದ್ಯುತ್ ಉತ್ಪಾದನೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ; ಅತ್ಯತಂತ ಅಪಾಯಕಾರಿ ಆಗಿರುವುದರಿಂದ ಕಠಿಣ ಮುನ್ನೆಚ್ಚರಿಕೆ ಅಗತ್ಯವಿದೆ. ಖಾಸಗಿಯವರಿಂದ ಸಮಗ್ರ ಮುನ್ನೆಚ್ಚರಿಕೆ ಸಾಧ್ಯವಿಲ್ಲ ಎಂದಿದ್ದ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿತ್ತು.
ತೆಳುವಾಗುತ್ತಲೇ ನಡೆದ ಕಾನೂನು: ಅಣುಶಕ್ತಿ ಸ್ಥಾವರಗಳು ಅಪಘಾತದ ಸಂಭವನೀಯತೆಯೊಟ್ಟಿಗೆ ಬರುತ್ತವೆ. 2011ರಲ್ಲಿ ಜಪಾನಿನ ಫುಕುಷಿಮಾದಲ್ಲಿ ಸಂಭವಿಸಿದ ಸ್ಥಾವರಗಳ ಸರಣಿ ಕರಗುವಿಕೆಯನ್ನು ಸ್ಮರಿಸಿಕೊಳ್ಳಿ; ಇಂಥ ದುರ್ಘಟನೆಗಳು ಸಂತ್ರಸ್ಥರು, ಸ್ಥಾವರದ ನಿರ್ವಹಣೆ ಮಾಡುವ ಸಂಸ್ಥೆ (ಭಾರತದಲ್ಲಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್) ಹಾಗೂ ಪೂರೈಕೆದಾರ ಕಂಪನಿಯನ್ನು ಬಾಧಿಸುತ್ತವೆ. ಭೋಪಾಲ್ ದುರಂತ(1984)ದ ಬಳಿಕ ನಡೆದ ದೆಹಲಿಯ ಓಲಿಯಂ ಸೋರಿಕೆ ಪ್ರಕರಣ(1986)ದಲ್ಲಿ ಸುಪ್ರೀಂ ಕೋರ್ಟ್, ʼಇಂಥ ಘಟನೆಗೆ ಕಾರಣವಾದ ಕಂಪನಿಯು ಪ್ರಕರಣದ ಜವಾಬ್ದಾರಿ ಹೊರಬೇಕುʼ ಎಂದು ಹೇಳಿತು. ಆದರೆ, 2010ರಲ್ಲಿ ಯುಪಿಎ ಸರ್ಕಾರ ಈ ತೀರ್ಪನ್ನು ದುರ್ಬಲಗೊಳಿಸುವ, ಅಣು ದುರಂತಗಳಿಗೆ ಮೀಸಲಾದ ವಿಶೇಷ ಕಾನೂನೊಂದನ್ನು ಸೃಷ್ಟಿಸಿತು. ಈ ಕಾನೂನಿನ ಪ್ರಕಾರ, ಘಟಕದ ನಿರ್ವಹಣೆ ಮಾಡುವವರು ಅವಘಡದ ಜವಾಬ್ದಾರಿ ಹೊರಬೇಕಿದ್ದು, ಗರಿಷ್ಠ ಪರಿಹಾರ ಮೊತ್ತವನ್ನು 1,500 ಕೋಟಿ ರೂ.ಗೆ ನಿಗದಿಗೊಳಿಸಿತು. ಅಣು ದುರಂತದಿಂದ ಸಂತ್ರಸ್ಥರಿಗೆ ಆಗುವ ಆರ್ಥಿಕ ಹಾನಿ ಬಹಳ ಹೆಚ್ಚು. ಹೀಗಾಗಿ ಈ ಮೊತ್ತ ಅತಿ ಕಡಿಮೆ. ಜಪಾನಿನ ಸೆಂಟರ್ ಫಾರ್ ಎಕನಾಮಿಕ್ ರಿಸರ್ಚ್ ನ ಅಂದಾಜಿನ ಪ್ರಕಾರ, ಫುಕುಷಿಮಾ ಸ್ಥಾವರಗಳ ಶುಚೀಕರಣ ಕಾರ್ಯಕ್ಕೆ ತಗಲುವ ವೆಚ್ಚ 20-46 ಲಕ್ಷ ಕೋಟಿ ರೂ.! ಇದು ಭಾರತದ ಕಾನೂನು ವಿಧಿಸುವ ಗರಿಷ್ಠ ಮೊತ್ತದ 250 ಪಟ್ಟು ಹೆಚ್ಚು. ನಾಗರಿಕ ಸಮಾಜ ಮತ್ತು ಪ್ರತಿಪಕ್ಷಗಳ ಪ್ರತಿರೋಧಕ್ಕೆ ಮಣಿದ ಯುಪಿಎ ಸರ್ಕಾರ ʼರೈಟ್ ಟು ರಿಕೋರ್ಸ್ʼ(ಅಪಘಾತವು ಪೇಟೆಂಟ್ ಹೊಂದಿರುವ ಅಥವಾ ಅಂತರ್ಗತ ಲೋಪಗಳಿರುವ ಸಾಧನ-ಸಲಕರಣೆಯಿಂದ ಇಲ್ಲವೇ ಕಳಪೆ ಗುಣಮಟ್ಟದ ಸೇವೆಯಿಂದ ಸಂಭವಿಸಿದ್ದರೆ, ಸ್ಥಾವರವನ್ನು ನಿರ್ವಹಿಸುತ್ತಿರುವ ದೇಶವು ಸಂತ್ರಸ್ಥರಿಗೆ ನೀಡುವ ಪರಿಹಾರವನ್ನು ಪೂರೈಕೆದಾರನಿಂದ ವಸೂಲು ಮಾಡಬಹುದು) ಎಂಬ ಶರತ್ತನ್ನು ಸೇರ್ಪಡೆ ಗೊಳಿಸಿತು.
ಈ ಶರತ್ತಿನಿಂದ ಸ್ಥಾವರ-ಸಾಧನ/ಸಲಕರಣೆ ಪೂರೈಸುವವರು ಅಸಮಾಧಾನಗೊಂಡಿದ್ದರು. ಇವರನ್ನು ಸಂತೃಪ್ತಿಗೊಳಿಸಲು ಸರ್ಕಾರ ʻರೈಟ್ ಆಫ್ ರಿಕೋರ್ಸ್ʼ ನ್ನು ತೆಳುಗೊಳಿಸಿತು. ಇದಕ್ಕೆ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿತ್ತು. 2015ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಭೇಟಿ ನೀಡಿದ ಬಳಿಕ ಆಂತರಿಕ ವ್ಯವಹಾರಗಳ ಸಚಿವಾಲಯವು ʻಪದೇಪದೇ ಕೇಳುವ ಪ್ರಶ್ನೆ(ಎಫ್‌ಎಕ್ಯು)ʼ ಪ್ರಕಟಿಸಿತು; ಸ್ಥಾವರಗಳನ್ನು ನಿರ್ವಹಿಸುವ ದೇಶಗಳ ಹಕ್ಕು ಗಳನ್ನು ಬದಿಗೆ ತಳ್ಳಿ, ಪೂರೈಕೆದಾರರು ಮತ್ತು ಎನ್‌ಪಿಸಿಐಎಲ್ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಬಹುದು ಎಂದು ಹೇಳಿತು. ಭಾರತದಲ್ಲಿ ಕಾನೂನು ಸಮಸ್ಯೆಗೆ ಸಿಲುಕಿಕೊಳ್ಳಲು ಸಿದ್ಧವಿಲ್ಲದ ಅಮೆರಿಕದ ಪೂರೈಕೆದಾರರು ಇದರಿಂದ ತೃಪ್ತರಾಗಲಿಲ್ಲ. ಈಗ ನಿಗದಿಪಡಿಸಿರುವ 15,000 ಕೋಟಿ ರೂ. ಪರಿಹಾರ ಮೊತ್ತ ಕಡಿಮೆ ಇದ್ದರೂ, ಮುಂದಿನ ಸರ್ಕಾರವು ಅಪಘಾತದಿಂದಾಗುವ ಮಾನವಜೀವ-ಆಸ್ತಿ ನಾಶವನ್ನು ಲೆಕ್ಕಿಸುವ ಸಾಧ್ಯತೆ ಇದೆ. ಆಗ ಕಂಪನಿಗಳು ತೊಂದರೆಗೆ ಸಿಲುಕುತ್ತವೆ. ಜೊತೆಗೆ, ದೇಶದಲ್ಲಿ ಸಂಭವಿಸಬಹುದಾದ ಅಪಘಾತದ ಕನಿಷ್ಠ ಹೊಣೆಗಾರಿಕೆ ಹೊತ್ತುಕೊಂಡರೆ, ಈ ಕಂಪನಿಗಳು ಬೇರೆ ದೇಶಗಳಲ್ಲಿ ಮಾಡಿಕೊಂಡಿರುವ ʻಯಾವುದೇ ಹೊಣೆಗಾರಿಕೆ ಹೊರುವುದಿಲ್ಲʼ ಎಂಬ ಒಪ್ಪಂದಕ್ಕೆ ಧಕ್ಕೆಯುಂಟಾಗಲಿದೆ. ಜವಾಬ್ದಾರಿ ಹೊರುವಿಕೆ ನಿಯಮವು ಅಪಘಾತದಲ್ಲಿ ಪೂರೈಕೆದಾರರ ಪಾತ್ರವೇನು ಎಂಬುದನ್ನು ಲೆಕ್ಕಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ, ಒಂದುವೇಳೆ ಅವಘ ಡ ಸಂಭವಿಸಿದಲ್ಲಿ ಸಂತ್ರಸ್ಥರು ಕಂಪನಿಯ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಬಹುದು. ಇದು ಕಂಪನಿಗಳಿಗೆ ಸಮಸ್ಯೆ ಸೃಷ್ಟಿಸುತ್ತದೆ.
ಅಮೆರಿಕದ ಪ್ರಾಬಲ್ಯ: ಅಣು ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಅಮೆರಿಕ ಪಾರಮ್ಯ ಸಾಧಿಸಿದೆ. ಜನರಲ್ ಎಲೆಕ್ಟ್ರಿಕ್, ಹಿಟಾಚಿ ನ್ಯೂಕ್ಲಿಯರ್ ಎನರ್ಜಿ, ವೆಸ್ಟಿಂಗ್‌ಹೌಸ್ ಮತ್ತು ರೋಸಾಟಂ ಮತ್ತಿತರ ಕಂಪನಿಗಳು ಈ ಕ್ಷೇತ್ರದ ಸಂಪೂರ್ಣ ಹಿಡಿತ ಹೊಂದಿವೆ. ಈ ಕಂಪನಿಗಳು ರಾಜಕೀಯವಾಗಿ ಪ್ರಭಾವಶಾಲಿಯಾಗಿದ್ದು, ಇವುಗಳ ಪರವಾಗಿ ಸರ್ಕಾರದ ಅಧಿಕಾರಿಗಳು ಲಾಬಿ ನಡೆಸುತ್ತಾರೆ. ರಾಜಕೀಯವಾಗಿ ಪ್ರಭಾವಿಗಳಾಗಿರುವ ಈ ಕಂಪನಿಗಳ ಪರವಾಗಿ ಅಮೆರಿಕದ ಅಧಿಕಾರಿಗಳು ಸಕ್ರಿಯವಾಗಿ ಲಾಬಿ ಮಾಡುತ್ತಾರೆ. ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಎರಿಕ್ ಗಾರ್ಸೆಟ್ಟಿ, ಅಣು ಕಾಯಿದೆಗೆ ತಿದ್ದುಪಡಿಗೆ ಸಂಬಂಧಿಸಿದಂತೆ ತಾವು ಆಡಳಿತ ಹಾಗೂ ಪ್ರತಿಪಕ್ಷ ಗಳ ಮುಖಂಡರನ್ನು ಭೇಟಿಯಾಗಿದ್ದಾಗಿ ಇತ್ತೀಚೆಗೆ ತಿಳಿಸಿದ್ದರು. ಭಾರತ-ಅಮೆರಿಕ ನಾಗರಿಕ ಅಣು ಒಪ್ಪಂದದ ಬಳಿಕ ಅಮೆರಿಕದ ತಯಾರಕರು ಒಂದೇ ಒಂದು ಅಣು ಸ್ಥಾವರವನ್ನೂ ಮಾರಾಟ ಮಾಡಲು ಆಗಿಲ್ಲ ಎಂದು ಸೇರಿಸಿದ್ದರು.
ಹಣ ಬಲದಿಂದ ಅಣುದುರಂತಗಳ ವೈಜ್ಞಾನಿಕ ಕಾರಣಗಳನ್ನು ಮುಚ್ಚಿಹಾಕಲಾಗಿದೆ. ವಾಸ್ತವ ಏನೆಂದರೆ, ಹೆಚ್ಚಿನ ಅಣು ದುರಂತಗಳಿಗೆ ಸ್ಥಾವರಗಳ ವಿನ್ಯಾಸದಲ್ಲಿನ ದೋಷ ಪ್ರಮುಖ ಕಾರಣ. ಫುಕುಷಿಮಾ ದುರಂತಕ್ಕೆ ಮೊದಲ ಹಂತದ ಅಡೆತಡೆಯಲ್ಲಿನ ವೈಫಲ್ಯ ಕಾರಣ. ಒಂದು ವೇಳೆ ವಿಕಿರಣದಿಂದ ಬಿಸಿಯಾದ ಸ್ಥಾವರವನ್ನು ತಂಪುಗೊಳಿಸುವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದರೆ, ಘಟಕಗಳು ಕರಗುತ್ತಿರಲಿಲ್ಲ. ಅಮೆರಿಕ ಅಣು ಶಕ್ತಿ ಆಯೋಗವು ಸ್ಥಾವರವನ್ನು ವಿನ್ಯಾಸಗೊಳಿಸಿದ್ದ ಜನ ರಲ್ ಎಲೆಕ್ಟ್ರಿಕ್ ಕಂಪನಿಗೆ ಈ ಕುರಿತು 1972ರಲ್ಲೇ ಎಚ್ಚರಿಸಿತ್ತು ಮತ್ತು ಭವಿಷ್ಯದಲ್ಲಿ ಇಂಥ ವಿನ್ಯಾಸಗಳಿಗೆ ನಿರ್ಮಾಣ ಪರವಾನಗಿ ನೀಡಬಾರದು ಎಂದು ಶಿಫಾರಸು ಮಾಡಿತ್ತು. ಆದರೆ, ಜನರಲ್ ಎಲೆಕ್ಟ್ರಿಕ್ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ; ಏಕೆಂದರೆ, ಜಪಾನಿನ ಕಾನೂನಿನ ಪ್ರಕಾರ, ಅಪಘಾತ ಸಂಭವಿಸಿದರೆ ಕಂಪನಿ ಸಂತ್ರಸ್ಥರಿಗೆ ಪರಿಹಾರ ನೀಡಬೇಕಿರಲಿಲ್ಲ. ಫುಕುಷಿಮಾ ದುರಂತದ ಸಂತ್ರಸ್ಥರಿಗೆ ಜನರಲ್ ಎಲೆಕ್ಟ್ರಿಕ್ ಯಾವುದೇ ಪರಿಹಾರ ನೀಡಲಿಲ್ಲ.
1979ರ ತ್ರೀ ಮೈಲ್ ಅಣು ದುರಂತ ಕುರಿತು ತನಿಖೆ ನಡೆಸಲು ಅಮೆರಿಕ ಸರ್ಕಾರ ನೇಮಿಸಿದ್ದ ಕೆಮೆನಿ ಆಯೋಗವು, ʻಅಣುಸ್ಥಾವರವನ್ನು ಪೂರೈಸಿದ್ದ ಬಾಬ್‌ಕಾಕ್ ಮತ್ತು ವಿಲ್‌ಕಾಕ್ಸ್ ಕಂಪನಿಯು ಸುರಕ್ಷತೆ ವ್ಯವಸ್ಥೆಯಲ್ಲಿನ ಲೋಪವನ್ನು ಗುರುತಿಸಿತ್ತು; ಸ್ಥಾವರವನ್ನು ಖರೀದಿಸುವ ದೇಶಗಳು ಆ ಲೋಪವನ್ನು ಸರಿಪಡಿಸಿಕೊಳ್ಳಬೇಕು ಎಂದು ತಂತ್ರಜ್ಞರೊಬ್ಬರು ಸ್ಪಷ್ಟ ಸೂಚನೆ ನೀಡಿದ್ದರು. ಆದರೆ, ಬಾಬ್‌ಕಾಕ್ ಮತ್ತು ವಿಲ್‌ಕಾಕ್ಸ್ ಈ ಎಚ್ಚರಿಕೆ ಯನ್ನು ನಿರ್ಲಕ್ಷಿಸಿತುʼ ಎಂದು ಹೇಳಿತ್ತು.
ಅಮೆರಿಕ ವಿನ್ಯಾಸಗೊಳಿಸುತ್ತಿರುವ ಪ್ರಮುಖ ಅಣು ಸ್ಥಾವರ ಮಾದರಿ-ಎಪಿ 1000. ಇಂಥ 4 ಸ್ಥಾವರಗಳ ನಿರ್ಮಾಣದ ಗುರಿಯಿತ್ತು. ದಕ್ಷಿಣ ಕರೋಲಿನಾದಲ್ಲಿ ನಿರ್ಮಾಣವಾಗಬೇಕಿದ್ದ 2 ಸ್ಥಾವರಗಳು ವಿಳಂಬ ಹಾಗೂ ವೆಚ್ಚದ ಹೆಚ್ಚಳದಿಂದ ಸ್ಥಗಿತಗೊಂಡಿವೆ; ಇವುಗಳ ನಿರ್ಮಾಣಕ್ಕೆ 9 ಶತಕೋಟಿ ಡಾಲರ್ ವೆಚ್ಚ ಮಾಡಲಾಗಿತ್ತು. ಜಾರ್ಜಿಯಾದ 2 ಸ್ಥಾವರಗಳ ನಿರ್ಮಾಣ ವೆಚ್ಚ 36.8 ಶತಕೋಟಿ ಡಾಲರ್. ನಿರ್ಮಾಣಕ್ಕೆ ಮುನ್ನ ಮಾಡಿದ್ದ ಅಂದಾಜು 9 ಶತಕೋಟಿ ಡಾಲರ್‌ಗಿಂತ ಶೇ.250ರಷ್ಟು ಅಧಿಕ. ಇಂಥ ದುಬಾರಿ ಸ್ಥಾವರಗಳಿಂದ ಉತ್ಪಾದನೆಯಾಗುವ ವಿದ್ಯುತ್ ಕೂಡ ದುಬಾರಿಯಾಗಿರುತ್ತದೆ. ಅಮೆರಿಕದ ಅಣು ಸ್ಥಾವರಗಳು ಅತ್ಯಂತ ದುಬಾರಿಯಾಗಿದ್ದು, ಅವುಗಳ ಆಮದು ಆರ್ಥಿಕ ದುಸ್ಸಾಹಸ ಆಗಲಿದೆ. ʻಭಾರತದಲ್ಲಿ ಕಾರ್ಮಿಕ ವೆಚ್ಚ ಕಡಿಮೆ ಇದ್ದರೂ, ಜಲ-ಪವನ-ಸೌರ ವಿದ್ಯುತ್‌ಗೆ ಹೋಲಿಸಿದರೆ, ಅಣು ವಿದ್ಯುತ್ ಬೆಲೆ ಹಲವು ಪಟ್ಟು ಹೆಚ್ಚು ಇರಲಿದೆʼ ಎಂದು ಎಕನಾ ಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ(ಇಪಿಡಬ್ಲ್ಯು)ಯ 2013 ರ ಅಧ್ಯಯನ ಹೇಳಿತ್ತು. ವಿತ್ತ ಸಚಿವೆ ಹೇಳಿರುವ 10ರಿಂದ 300 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಣ್ಣ ಮಾಡ್ಯುಲಾರ್ ಸ್ಥಾವರ(ಎಸ್ಎಂಆರ್)ಗಳು ತಮ್ಮ ಗಾತ್ರದಿಂದಾಗಿ, ಆರ್ಥಿಕವಾಗಿ ಲಾಭದಾಯಕ ಆಗುವುದಿಲ್ಲ. ಇಂಥ 5 ಸ್ಥಾವರಗಳನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ದೇಶೀಯವಾಗಿ ನಿರ್ಮಿಸಲಾಗುವುದು ಎಂದು ಸಚಿವೆ ಹೇಳಿದ್ದಾರೆ. ಅಮೆರಿಕದ ನ್ಯೂಸೇಲ್ ಪವರ್ ಕಾರ್ಪೊರೇಷನ್ ರೂಪಿಸಿರುವ ಎಸ್‌ಎಂಆರ್‌ಗಳು ಬಹಳ ದುಬಾರಿ. ಇವು ಬೇರೆ ಸ್ಥಾವರಗಳಿಗಿಂತ ಹೆಚ್ಚು ತ್ಯಾಜ್ಯವನ್ನು ಸೃಷ್ಟಿಸುತ್ತವೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ 2022ರ ಅಧ್ಯಯನ ತಿಳಿಸಿದೆ. ಹೀಗಾಗಿ, ಈ ಸ್ಥಾವರಗಳಿಗೆ ಜಾಗತಿಕವಾಗಿ ವಿರೋಧವಿದೆ. ವಿಶ್ವ ಪರಮಾಣು ಒಕ್ಕೂಟದ ಪ್ರಕಾರ, ಇಂಥ ಐದು ಸ್ಥಾವರಗಳು ಕಾರ್ಯಾರಂಭ ಮಾಡಿವೆ.
ಅಣು ವಿದ್ಯುತ್ ಉತ್ಪಾದನೆಯಲ್ಲಿ ಖಾಸಗಿಯವರಿಗೆ ಅವಕಾಶ ಇಲ್ಲದಿರುವುದನ್ನು ಪ್ರಶ್ನಿಸಿ ಸಂದೀಪ್ ಎನ್ನುವವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಣು ವಿದ್ಯುತ್ ಉತ್ಪಾದನೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ ಮತ್ತು ವೈಜ್ಞಾನಿಕವಾಗಿ ಕ್ಲಿಷ್ಟ ಪ್ರಕ್ರಿಯೆ. ಖಾಸಗಿಯವರಿಂದ ಸಮಗ್ರ ಮುನ್ನೆಚ್ಚರಿಕೆ ಸಾಧ್ಯವಿಲ್ಲ ಎಂದಿದ್ದ ಕೋರ್ಟ್, ಅರ್ಜಿ ವಜಾಗೊಳಿಸಿತ್ತು. ಅಣು ವಿದ್ಯುತ್ ಸ್ಥಾವರಗಳಿಂದ ವಿಕಿರಣ ಸೋರಿಕೆ ಮತ್ತು ಅಣು ತ್ಯಾಜ್ಯ ನಿರ್ವಹಣೆ ಅತ್ಯಂತ ಕ್ಲಿಷ್ಟ ಹಾಗೂ ದುಬಾರಿ ಪ್ರಕ್ರಿಯೆಗಳು. ಸ್ಥಾವರಗಳಲ್ಲಿ ಇಂಧನವಾಗಿ ಬಳಸುವ ಯುರೇನಿಯಂನ ಗಣಿಗಾರಿಕೆ, ಸಾಗಣೆ, ಸಂಸ್ಕರಣೆ ಸೇರಿದಂತೆ ಎಲ್ಲ ಹಂತದಲ್ಲೂ ವಿಕಿರಣದ ಬಾಧೆ ಇರಲಿದೆ. ಚೆರ್ನೋಬಿಲ್, ಫುಕುಷಿಮಾ ದುರಂತದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಮಿಳು ನಾಡಿನ ಕೂಡಂಕುಲಂ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದಂತೆ ಹಲವು ಶರತ್ತುಗಳನ್ನು ವಿಧಿಸಿತ್ತು. ಅಣು ಸ್ಥಾವರಗಳ ಸುರಕ್ಷತೆ ಕುರಿತ ಉತ್ಪಾದಕರ ಹೇಳಿಕೆಗಳು ವಿಶ್ವಾಸಾರ್ಹವಲ್ಲ ಎಂಬುದು ಸಾಬೀತಾಗಿದೆ. ಎಪಿ 1000 ಸ್ಥಾವರದಿಂದ ಭಾರಿ ಪ್ರಮಾಣದ ವಿಕಿರಣ ಹೊರಹೊಮ್ಮುವ ಸಾಧ್ಯತೆ 50 ದಶಲಕ್ಷ ವರ್ಷದಲ್ಲಿ ಒಮ್ಮೆ ಮಾತ್ರ ಎಂದು ವೆಸ್ಟಿಂಗ್‌ಹೌಸ್ ಹೇಳುತ್ತದೆ. ಅಣು ಸ್ಥಾವರಗಳು ಸುರಕ್ಷಿತವಾಗಿದ್ದು ಅಪಘಾತದ ಸಾಧ್ಯತೆಯೇ ಇಲ್ಲವಾಗಿರುವಾಗ, ಪರಿಹಾರ ನೀಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ಏಕೆ? ಅಪಘಾತ ಸಂಭವಿಸಿದಲ್ಲಿ ಪರಿಹಾರದ ಪಡೆಯುವ ಸಾಧ್ಯ ತೆ ಇಲ್ಲದೆ ಇರುವವರು ತಮ್ಮ ಆಸ್ತಿ ಹಾಗೂ ಜೀವವನ್ನು ಏಕೆ ಕಳೆದುಕೊಳ್ಳಬೇಕು? ತಾವು ಜಾಗತಿಕವಾಗಿ ಬಲಿಷ್ಟ ನಾಯಕ ಎಂದು ಸ್ವಯಂ ಘೋಷಿಸಿ ಕೊಳ್ಳುವ ಪ್ರಧಾನಿ, ದೇಶಿ ಕಂಪನಿಗಳ ಲಾಭವನ್ನಷ್ಟೇ ನೋಡುವ ಅ ಮೆರಿಕದ ಒತ್ತಡಕ್ಕೆ ಮಣಿದಿರುವುದೇಕೆ? ಭಾರತೀಯರ ಸುರಕ್ಷತೆ ಮತ್ತು ಬದುಕಿನ ಮೂಲಭೂತ ಹಕ್ಕು ರಕ್ಷಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ.
ʻಕಿನ್ನರರು ನುಗ್ಗಲು ಹಿಂಜರಿಯುವ ಎಡೆಗೆ ಮೂರ್ಖ ನುಗ್ಗುತ್ತಾನೆʼ ಎಂಬ ಮಾತಿನಂತೆ ಅಣು ರಾಕ್ಷಸನಿಗೆ ದೇಶ ಹೆಬ್ಬಾಗಿಲು ತೆರೆಯುತ್ತಿದೆ.