ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಮಂಡಿಸಿದ ಕೇಂದ್ರ ಬಜೆಟ್, ಜಿ-20ರ ಬ್ರೆಜಿಲ್‌ಅಧ್ಯಕ್ಷತೆಯಡಿ ಮುಂಚೂಣಿಗೆ ಬಂದಿರುವ ಐಶ್ವರ್ಯ ತೆರಿಗೆ ಹಾಗೂ ಅನಂತ್‌ಅಂಬಾನಿ ವಿವಾಹ-ಇವೆಲ್ಲವೂ ಪರಸ್ಪರ ಜೋಡಿಸಲ್ಪಟ್ಟ ಘಟನೆಗಳು.
ಕಳೆದ ಸಾಲಿನ ಜಿ-20 ಸಮಾವೇಶದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿತ್ತು ಹಾಗೂ ಅದನ್ನು ಮೋದಿ ಅವರ ಅಭೂತಪೂರ್ವ ಸಾಧನೆ ಎಂಬಂತೆ ಬಿಂಬಿಸಲಾಯಿತು. ಈ ಸಂಬಂಧ ಸಮಾವೇಶದ ವೇಳೆ ಬಿಡುಗಡೆಯಾದ ದ ರಿಸರ್ಚ್‌ಅಂಡ್‌ಇನ್ಫರ್ಮೇಷನ್‌ಸಿಸ್ಟಮ್‌ಫಾರ್‌ಡೆವಲಪಿಂಗ್‌ಕಂಟ್ರೀಸ್‌ಪ್ರಕಟಿಸಿದ 171 ಪುಟಗಳ ಇ-ದಾಖಲೆ ʼದ ಗ್ರಾಂಡ್‌ಸಕ್ಸೆಸ್‌ಆಫ್‌ಜಿ-20 ಭಾರತ್‌ಪ್ರೆಸಿಡೆನ್ಸಿ: ವಿಷನರಿ ಲೀಡರ್‌ಶಿಪ್, ಇನ್‌ಕ್ಲೂಸಿವ್‌ಅಪ್ರೋಚ್ʼ ನಲ್ಲಿ ಸರ್ಕಾರಿ ಅಧಿಕಾರಿಗಳು/ಕೃಪಾಪೋಷಿತ ಲೇಖಕರು ಬರೆದ ಲೇಖನಗಳಿದ್ದು, ದಾಖಲೆಯಲ್ಲಿ ʻಬಡತನʼ ಪದ ಎರಡು ಬಾರಿ ಮಾತ್ರ ಬಳಕೆಯಾಗಿದೆ.
2024ಕ್ಕೆ ಬರೋಣ. 2023ರ ಡಿಸೆಂಬರಿನಲ್ಲಿ ಜಿ-20 ಸಮಾವೇಶದ ಅಧ್ಯಕ್ಷತೆ ವಹಿಸಿಕೊಂಡ ಬ್ರೆಜಿಲ್, ಕೆಲವೇ ತಿಂಗಳಲ್ಲಿ ಐಶ್ವರ್ಯ ಅಸಮಾನತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಕೇಳಲಾರಂಭಿಸಿತು. ಬ್ರೆಜಿಲ್‌ಮುಂದಾಳತ್ವದಲ್ಲಿ ಫ್ರಾನ್ಸ್, ಜರ್ಮನಿ, ದಕ್ಷಿಣ ಆಫ್ರಿಕ ಮತ್ತು ಸ್ಪೇನ್‌ಹಾಗೂ ಅಂತಾರಾಷ್ಟ್ರೀಯ ವಿತ್ತ ನಿಧಿ(ಐಎಂಎಫ್)ಇದರಲ್ಲಿ ಒಂದಾದವು. ಜುಲೈ 10ರಂದು 19 ದೇಶಗಳ ಮಾಜಿ ಮುಖ್ಯಸ್ಥರು ಜಿ-20 ದೇಶಗಳ ಮುಂದಾಳುಗಳಿಗೆ ಪತ್ರ ಬರೆದು, ಜಗತ್ತಿನ ಅತ್ಯಂತ ಶ್ರೀಮಂತರಿಗೆ ತೆರಿಗೆ ವಿಧಿಸಬೇಕೆಂಬ ಪ್ರಸ್ತಾವವನ್ನು ಪರಿಗಣಿಸಬೇಕೆಂದು ಕೋರಿದ್ದಾರೆ; ʼಮಾಜಿ ನಾಯಕರಾದ ನಾವು ಅಪರೂಪದ ಅವಕಾಶವೊಂದು ಸಿಕ್ಕಿದಾಗ ಅದನ್ನು ಗುರುತಿಸಬಲ್ಲೆವು. ತೆರಿಗೆಗಳು ನಾಗರಿಕ, ಶ್ರಮಶೀಲ ಮತ್ತು ಸಮೃದ್ಧ ಸಮಾಜದ ಬುನಾದಿಗಳು. ಆದರೆ, ಪ್ರಸ್ತುತ ಜಗತ್ತಿನಲ್ಲಿ ಅತ್ಯಂತ ಶ್ರೀಮಂತರು ಶಿಕ್ಷಕರು/ಕಾರ್ಮಿಕರಿಗಿಂತ ಹೆಚ್ಚು ತೆರಿಗೆ ಸಲ್ಲಿಸುತ್ತಿದ್ದಾರೆ. ಶತಕೋಟ್ಯಧೀಶರು ತಮ್ಮ ಐಶ್ವರ್ಯದಲ್ಲಿ ಶೇ.0.5ಕ್ಕಿಂತ ಕಡಿಮೆ ತೆರಿಗೆ ನೀಡುತ್ತಿದ್ದಾರೆ. ಸಂವಹನ, ಶಿಕ್ಷಣ, ಆರೋಗ್ಯ ಮತ್ತು ಮೂಲಸೌಲಭ್ಯಗಳ ನಿರ್ಮಾಣಕ್ಕೆ ಬಳಕೆಯಾಗಬೇಕಿದ್ದ ಬಿಲಿಯನ್‌ಗಟ್ಟಲೆ ಹಣ, ಕೆಲವು ಅತಿ ಶ್ರೀಮಂತರ ಬಳಿ ಅನುತ್ಪಾದಕವಾಗಿ ಬಿದ್ದಿದೆʼ ಎಂದು ಕೋಸ್ಟರಿಕ, ಚಿಲಿ, ನೆದರ್ಲೆಂಡ್ಸ್, ಲಾಟ್ವಿಯಾ, ಕೆನಡಾ, ನ್ಯೂಜಿಲೆಂಡ್,ಆಸ್ಟ್ರೇಲಿಯ, ಸ್ಪೇನ್, ಲಿಥುವೇನಿಯಾ, ಆಸ್ಟ್ರಿಯ, ದಕ್ಷಿಣ ಕೊರಿಯ, ಪೋಲೆಂಡ್, ಬೆಲ್ಜಿಯಂ, ಸ್ವೀಡನ್, ಗ್ರೀಸ್, ಸ್ಪೇನ್, ಸ್ಲೊವೇನಿಯ ಮತ್ತು ಫ್ರಾನ್ಸಿನ ಮಾಜಿ ಮುಖ್ಯಸ್ಥರು ಪತ್ರಕ್ಕೆ ಸಹಿ ಹಾಕಿದ್ದರು.
ಹೊಸದೆಹಲಿಯಲ್ಲಿ ಸೆಪ್ಟೆಂಬರಿನಲ್ಲಿ ಪ್ರಾರಂಭಗೊಂಡ ಈ ಚಿಂತನೆಯ ಬೀಜಗಳು ಬ್ರೆಜಿಲ್‌ಅಧ್ಯಕ್ಷ ಲೂಯಿಜ್‌ಇನಾಷಿಯೋ ಲುಲಾ ಡ ಸಿಲ್ವ ಅವರ ಹೇಳಿಕೆಯಂತೆ, ʻನಾವು ಬದಲಾವಣೆಯನ್ನು ತರಬೇಕೆಂದುಕೊಂಡಿದ್ದರೆ, ಅಂತಾರಾಷ್ಟ್ರೀಯ ಕಾರ್ಯಸೂಚಿಯ ಕೇಂದ್ರದಲ್ಲಿ ಅಸಮಾನತೆಯನ್ನು ಇರಿಸಬೇಕು. ತಡೆಯಬಹುದಾದ ವಿಷಯಗಳಿಗೆ ನಿರಂತರ ಲಕ್ಷ್ಯ ನೀಡಲು ಮತ್ತು ಪರಿಹರಿಸಲು ಪ್ರಯತ್ನ ಪಡಬೇಕು. ಅಟ್ಲಾಂಟಿಕ್‌ನಿಂದ ಭಾರಿ ಪ್ರಮಾಣದ ಹಣ ಹರಿದು ಒಂದೆಡೆ ಜಗತ್ತು ಅತ್ಯಂತ ಐಶ್ವರ್ಯಭರಿತವಾಗಿರುವುದು ಮತ್ತು ಇನ್ನೊಂದೆಡೆ ಭಾರಿ ಸಂಖ್ಯೆಯ ಬಡಜನರು ಇರುವುದು ಮನುಷ್ಯತ್ವದ ದೃಷ್ಟಿಯಿಂದ ಅಸಮಂಜಸʼ.
ʻಬ್ರೆಜಿಲಿಯನ್‌ತಿರುವುʼ ಎಂದೇ ಹೆಸರಾದ ಈ ನಿಲುವು, ಭಾರತದ ಜಿ20 ಅಧ್ಯಕ್ಷತೆಗೆ ತದ್ವಿರುದ್ಧವಾಗಿದೆ. ನವದೆಹಲಿಯ ಜಿ-20 ಸಮಾವೇಶದ ಬಳಿಕ ಬಿಡುಗಡೆಯಾದ 37 ಪುಟಗಳ ಹೇಳಿಕೆಯಲ್ಲಿ ʻಅಸಮಾನತೆʼ ಪದ ಎರಡು ಬಾರಿ ಉಲ್ಲೇಖವಾಗಿದ್ದರೂ, ಅದನ್ನು ತಡೆಯಲು ಯಾವುದೇ ಕ್ರಿಯಾಯೋಜನೆಯನ್ನು ಒಳಗೊಂಡಿರಲಿಲ್ಲ. ಆದರೆ, ಬ್ರೆಜಿಲ್‌ಅಧ್ಯಕ್ಷ ಸ್ಥಾನಕ್ಕೇರಿದ 4 ತಿಂಗಳಿನಲ್ಲೇ ಬ್ರೆಜಿಲ್, ಜರ್ಮನಿ, ದಕ್ಷಿಣ ಆಫ್ರಿಕ ಮತ್ತು ಸ್ಪೇನಿನ ವಿತ್ತ ಸಚಿವರು ʻದ ಗಾರ್ಡಿಯನ್ʼ ನಲ್ಲಿ ಜಂಟಿ ಸಂಪಾದಕೀಯ ಬರೆದು, ಜಾಗತಿಕ ಅಸಮಾನತೆ ಮತ್ತು ಹವಾಮಾನ ಸಂಕಷ್ಟಕ್ಕೆ ಸಿಲುಕಿರುವ ಜಗತ್ತನ್ನು ಉಳಿಸಲು ಭಾರಿ ಶ್ರೀಮಂತರಿಗೆ ಹೆಚ್ಚು ತೆರಿಗೆ ವಿಧಿಸುವುದೊಂದೇ ಉಳಿದ ಮಾರ್ಗ ಎಂದು ವಾದಿಸಿದ್ದರು. ʻಶತ ಕೋಟ್ಯಧೀಶರು ತಮ್ಮ ಐಶ್ವರ್ಯದಲ್ಲಿ ಶೇ.2ರಷ್ಟು ತೆರಿಗೆ ನೀಡಿದರೆ, ಸಾಮಾಜಿಕ ನ್ಯಾಯದ ಉತ್ತೇಜನ ಹಾಗೂ ಹಣದ ಮರುಹಂಚಿಕೆಯ ಪರಿಣಾಮಕಾರಿತ್ವದಲ್ಲಿ ನಂಬಿಕೆ ಹೆಚ್ಚಲಿದೆ. ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಮೂಲಸೌಲಭ್ಯದಂಥ ಸಾರ್ವಜನಿಕ ಸೇವೆಗಳಲ್ಲಿ ಹೂಡಿಕೆ ಮಾಡಲು ಸರ್ಕಾರಕ್ಕೆ ಹಣ ಸಿಗುತ್ತದೆ,ʼ ಎಂದು ಹೇಳಿದ್ದರು.
ಅತಿ ಶ್ರೀಮಂತರಲ್ಲಿ ತೆರಿಗೆ ಕಳ್ಳತನ ಸಮಸ್ಯೆಯನ್ನು ಪರಿಹರಿಸಲು ಹಾಗೂ ತೆರಿಗೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಸಂಯೋಜಿತ ಮತ್ತು ಜಾಗತಿಕವಾಗಿ ಒಪ್ಪಿತ ಮಾರ್ಗವಾಗಿ ಐಶ್ವರ್ಯ ತೆರಿಗೆಯನ್ನು ಮುಂದೊತ್ತಲಾಗುತ್ತಿದೆ. ಈ ಸಂಬಂಧ ಜಿ20 ದೇಶಗಳಿಗೆ ಸಲಹೆ ನೀಡುತ್ತಿರುವ ಪ್ಯಾರಿಸ್‌ಸ್ಕೂಲ್‌ಆಫ್‌ಎಕನಾಮಿಕ್ಸ್‌ನ ಅರ್ಥಶಾಸ್ತ್ರಜ್ಞ ಗೇಬ್ರಿಯಲ್‌ಜುಕ್ಮನ್, ನ್ಯೂಯಾರ್ಕ್‌ಟೈಮ್ಸ್‌ನಲ್ಲಿ ಬರೆಯುತ್ತಾರೆ; ʻಉದಾರವಾದಿ ಪ್ರಜಾಪ್ರಭುತ್ವಗಳಲ್ಲಿ ಸಮಾಜಗಳನ್ನು ಕೊರೆಯುತ್ತಿರುವ ಅಸಮಾನತೆಯನ್ನು ತೊಡೆದು ಹಾಕಬೇಕೆಂಬ ರಾಜಕೀಯ ಅಲೆಗಳು ಸೃಷ್ಟಿಯಾಗುತ್ತಿವೆ. ಅತಿ ಶ್ರೀಮಂತರ ಮೇಲಿನ ಕನಿಷ್ಠ ತೆರಿಗೆಯು ಬಂಡವಾಳಶಾಹಿಯನ್ನು ಸರಿಪಡಿಸಿಬಿಡುವುದಿಲ್ಲ; ಆದರೆ, ಅದು ಮೊದಲ ಹೆಜ್ಜೆಯಷ್ಟೇʼ.
19 ದೇಶಗಳು, ಆಫ್ರಿಕಾ ಗಣರಾಜ್ಯ ಮತ್ತು ಯುರೋಪಿಯನ್‌ಯೂನಿಯನ್‌ಒಳಗೊಂಡಿರುವ ಜಿ20, ಇದೇ ಮೊದಲ ಬಾರಿಗೆ ಅತಿ ಶ್ರೀಮಂತರಿಗೆ ತೆರಿಗೆ ವಿಧಿಸುವ ಪ್ರಸ್ತಾವದ ಮೂಲಕ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. 135 ಸದಸ್ಯ ರಾಷ್ಟ್ರಗಳ ಸಂಘಟನೆಯಾದ ಒಇಸಿಡಿ(ಆರ್ಗನೈಸೇಷನ್‌ಫಾರ್‌ಎಕನಾಮಿಕ್‌ಕೋಆಪರೇಷನ್‌ಆಂಡ್‌ಡೆವಲಪ್ಮೆಂಟ್)ಕೂಡ ಕಾರ್ಪೊರೇಟ್‌ತೆರಿಗೆಗೆ ಸಮ್ಮತಿಸಿದ್ದು, ಈ ವರ್ಷ ಜಾರಿಗೆ ಬರಲಿದೆ. ʻಜಾಗತಿಕ ಕನಿಷ್ಠ ತೆರಿಗೆ(ಜಿಎಂಟಿ)ʼ ವ್ಯವಸ್ಥೆಯು ಬಹುರಾಷ್ಟ್ರೀಯ ಉದ್ಯಮ(ಎಂಎನ್‌ಇ)ಗಳ ಮೇಲೆ ತೆರಿಗೆ ವಿಧಿಸುವ ಅಂತಾರಾಷ್ಟ್ರೀಯ ಸಹಕಾರದ ಪ್ರಮುಖ ಹೆಜ್ಜೆ. 750 ದಶಲಕ್ಷ ಯುರೋಗಿಂತ ಹೆಚ್ಚು ಆದಾಯವಿರುವ ಕಂಪನಿಗಳು ಎಲ್ಲೇ ಕಾರ್ಯ ನಿರ್ವಹಿಸುತ್ತಿರಲಿ, ಕನಿಷ್ಠ ಶೇ.15ರಷ್ಟು ತೆರಿಗೆ ನೀಡುವುದನ್ನು ಜಿಎಂಟಿ ಖಾತ್ರಿಗೊಳಿಸುತ್ತದೆ.
ಇಷ್ಟು ಮಾತ್ರವಲ್ಲದೆ, ಅಂತಾರಾಷ್ಟ್ರೀಯ ವಿತ್ತ ನಿಧಿ(ಐಎಂಎಫ್) ಇದೇ ಮೊದಲ ಬಾರಿಗೆ ಅತಿ ಶ್ರೀಮಂತರಿಗೆ ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಸಮ್ಮತಿಸಿದೆ. ಐಎಂಎಫ್‌ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಗೀವಾ, ʼತೆರಿಗೆ ವ್ಯವಸ್ಥೆಯಲ್ಲಿನ ಲೋಪದೋಷಗಳ ನಿವಾರಣೆ ಮತ್ತು ಅತಿ ಶ್ರೀಮಂತರು ತೆರಿಗೆ ನೀಡುವುದನ್ನು ಖಾತ್ರಿಗೊಳಿಸುವುದರಿಂದ, ಸುಸ್ಥಿರ ಹಾಗೂ ಒಳಗೊಳ್ಳುವ ಅಭಿವೃದ್ಧಿಗೆ ಅಗತ್ಯವಾದ ಹಣ ಕ್ರೋಡೀಕರಣಗೊಳ್ಳುತ್ತದೆʼ ಎಂದು ಹೇಳಿದ್ದಾರೆ. ಐಎಂಎಫ್‌ಕಳೆದ ಸೆಪ್ಟೆಂಬರಿನಲ್ಲಿ ಅತಿ ಶ್ರೀಮಂತರಿಗೆ ತೆರಿಗೆ ವಿಧಿಸುವ ಮೂಲಕ ಬಡವರನ್ನು ರಕ್ಷಿಸಬೇಕು ಎಂದು ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿತ್ತು.
ಆದರೆ, ʻವಿಕಸಿತಗೊಳ್ಳುತ್ತಿರುವ ಭಾರತʼದಲ್ಲಿ ಸ್ವಾತಂತ್ರ್ಯಕ್ಕೆ ಮೊದಲಿಗಿಂತ ಹೆಚ್ಚು ಆದಾಯ ಮತ್ತು ಐಶ್ವರ್ಯ ಅಸಮಾನತೆ ಇದೆ.
ಜಿ20 ನಿಲುವು ಕುರಿತು ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್, ಪ್ರಧಾನಿ ಅವರನ್ನು ಕೇಳಿದೆ. ಭಾರತ ಅತಿ ಶ್ರೀಮಂತರ ಮೇಲೆ ಜಾಗತಿಕ ಕನಿಷ್ಠ ತೆರಿಗೆ(ಜಿಎಂಟಿ)ಯನ್ನು ಬೆಂಬಲಿಸಿ, ದೇಶದಲ್ಲಿ ಅದನ್ನು ಜಾರಿಗೊಳಿಸುವುದೇ? ಇದೇ ಹೊತ್ತಿನಲ್ಲಿ ಮುಖೇಶ್‌ಅಂಬಾನಿ ಅವರ ಪುತ್ರನ ಮದುವೆಯ ವೈಭೋಗದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. 100 ಶತಕೋಟಿ ಡಾಲರ್‌ಗಿಂತ ಅಧಿಕ ಆಸ್ತಿ ಇರುವ ಅಂಬಾನಿ ಅವರ ಪುತ್ರನ ಮದುವೆಗೆ ಪ್ರಧಾನಿ ಮತ್ತಿತರ ಗಣ್ಯರು ಆಗಮಿಸಿದ್ದರು. ಆರ್‌ಎಸ್‌ಎಸ್‌ಮುಖ್ಯಸ್ಥ ಮೋಹನ್‌ಭಾಗವತ್, ಮುಂಬೈ ಮನೆಗೆ ರಾತ್ರಿಯೂಟಕ್ಕೆ ಹೋಗಿದ್ದರು. ಈ ಬಿಂಬಗಳು ಅಸಮಾನತೆ ವಿರುದ್ಧದ ಜಾಗತಿಕ ನಿಲುವು ಮತ್ತು ಅತಿ ಶ್ರೀಮಂತರ ಪ್ರಾಬಲ್ಯ ಕಡಿಮೆಗೊಳಿಸಬೇಕೆಂಬ ನಿಲುವಿಗೆ ತದ್ವಿರುದ್ಧವಾಗಿದೆ.
ಜಿ20 ನಿಲುವು ಕುರಿತು ಪ್ರತಿಕ್ರಿಯೆ ನೀಡುವಂತೆ ಕಾಂಗ್ರೆಸ್, ಪ್ರಧಾನಿ ಅವರನ್ನು ಕೇಳಿದೆ. ಭಾರತ ಅತಿ ಶ್ರೀಮಂತರ ಮೇಲೆ ಜಾಗತಿಕ ಕನಿಷ್ಠ ತೆರಿಗೆ(ಜಿಎಂಟಿ)ಯನ್ನು ಬೆಂಬಲಿಸಿ, ದೇಶದಲ್ಲಿ ತೆರಿಗೆ ಸಂಹಿತೆಯೊಂದನ್ನು ಜಾರಿಗೊಳಿಸುವುದೇ? ಅನುಮಾನ. ಕಾರ್ಪೊರೇಟ್‌ಕಂಪನಿಗಳ ಉದ್ದಾರವೇ ಗುರಿಯಾಗಿರುವ ಸರ್ಕಾರದಿಂದ ಇದನ್ನು ನಿರೀಕ್ಷಿಸಲಾರದು.
ಪ್ರತಿಗಾಮಿ, ಸುಲಿಗೆಕೋರ ತೆರಿಗೆ ನೀತಿ: 2024-25ರ ಬಜೆಟ್‌ಮಂಡನೆಯಾಗಿದೆ. ಬಿಹಾರ-ಆಂಧ್ರಕ್ಕೆ ಬಂಪರ್‌ಲಾಟರಿ ಹೊಡೆದಿದೆ. ಆದರೆ, ಜನಸಾಮಾನ್ಯರಿಗೆ ಸಿಕ್ಕಿದ್ದೇನು? ವ್ಯಕ್ತಿಯೊಬ್ಬರ ವಾರ್ಷಿಕ ವೇತನ 15 ಲಕ್ಷ ರೂ. ದಾಟಿದ್ದರೆ, ಶೇ.30 ನೇರ ತೆರಿಗೆ. ಒಂದುವೇಳೆ ಹಣ ಉಳಿಕೆ ಮಾಡಿ, ಹೂಡಿಕೆ ಮಾಡುತ್ತಾರೆ ಎಂದಿಟ್ಟುಕೊಳ್ಳಿ- ಲಾಭ ಗಳಿಸದೆ ಇದ್ದಲ್ಲಿ ನಷ್ಟ ಅನುಭವಿಸುತ್ತಾರೆ. ಒಂದು ವೇಳೆ ಅಲ್ಪಾವಧಿ ಹೂಡಿಕೆ ಮಾಡಿ ಶೀಘ್ರ ಲಾಭ ಗಳಿಸಿದರೆ, ಶೇ. 20 ತೆರಿಗೆ. ದೀರ್ಘಾವಧಿ ಹೂಡಿಕೆ ಮಾಡಿ, ಲಾಭ ಗಳಿಸಿದರೆ, ಶೇ.12.5 ತೆರಿಗೆ. ಒಂದುವೇಳೆ ಹೂಡಿಕೆ ಮಾಡದೆ ವೆಚ್ಚ ಮಾಡಿದಿರಿ ಎಂದುಕೊಳ್ಳೋಣ-ಮೂಲಭೂತ ಅಗತ್ಯಗಳಿಗೆ ವೆಚ್ಚ ಮಾಡಿದರೆ ಶೇ.12 ತೆರಿಗೆ; ಸ್ವಲ್ಪ ಐಷಾರಾಮಿ ವಸ್ತು ಕೊಂಡರೆ ಶೇ.18 ಹಾಗೂ ಬಹಳ ಐಷಾರಾಮಿ ವಸ್ತು ಕೊಂಡರೆ, ಶೇ.28 ತೆರಿಗೆ ನೀಡಬೇಕಾಗುತ್ತದೆ. ಜನಸಾಮಾನ್ಯರ ಮೇಲೆ ತೆರಿಗೆ ಭಯೋತ್ಪಾದನೆ ನಡೆಯುತ್ತಿದೆ.
ಸ್ಟಾಕ್‌ಗಳು, ರಿಯಲ್‌ಎಸ್ಟೇಟ್‌ಮತ್ತು ಚಿನ್ನದಂಥ ಹೂಡಿಕೆಯಿಂದ ಬರುವ ಲಾಭಕ್ಕೆ ಕ್ಯಾಪಿಟಲ್‌ಗೇನ್‌ತೆರಿಗೆ ವಿಧಿಸಲಾಗುತ್ತದೆ. ಈ ಆಸ್ತಿಗಳನ್ನು ಖರೀದಿಸಿದ ವರ್ಷದೊಳಗೆ ಮಾರಿದರೆ, ಗಳಿಕೆ ಮೇಲೆ ಲಾಭಕ್ಕೆ ಶೇ.20 ತೆರಿಗೆ ಹಾಗೂ ವರ್ಷಾನಂತರ ಮಾರಿದರೆ ಶೇ. 12.5 ರಷ್ಟು ತೆರಿಗೆ ನೀಡಬೇಕಾಗುತ್ತದೆ. ಈ ಮೊದಲು ಈ ತೆರಿಗೆಗಳು ಕ್ರಮವಾಗಿ ಶೇ.15 ಮತ್ತು ಶೇ.10 ಇದ್ದಿತ್ತು. ಮನೆ ಕಟ್ಟುವವರು ಸಾಲ ಮಾಡಿರುತ್ತಾರೆ. ಬಡ್ಡಿ ಸಮೇತ ಇಎಂಐ ಕಟ್ಟುತ್ತಿರುತ್ತಾರೆ. ನಿವೇಶನ ಇಲ್ಲವೇ ಮನೆ ಖರೀದಿಸುವಾಗ ಸ್ಟ್ಯಾಂಪ್‌ಡ್ಯೂಟಿ, ನೋಂದಣಿ ಶುಲ್ಕ ಕಟ್ಟಿರುತ್ತಾರೆ. ಆದರೆ, ಮನೆ ಕಟ್ಟಿದ ಮೇಲೆ ಮಾರಿದರೆ ಅದಕ್ಕೆ ಮತ್ತೆ ತೆರಿಗೆ ಕಟ್ಟಬೇಕಾಗುತ್ತದೆ!
ಕೋವಿಡ್ ಸಮಯದಲ್ಲಿ ಉದ್ಯೋಗ ನಷ್ಟ ಮತ್ತು ಆದಾಯದಲ್ಲಿ ಕುಸಿತವನ್ನು ಸರಿದೂಗಿಸಲು, ಹಲವರು ಸ್ಟಾಕ್‌ಗಳು ಖರೀದಿಗೆ ಮುಂದಾದರು. ಈಕ್ವಿಟಿಗಳ ಮಾರಾಟ ಬರುವ ಲಾಭದ ಮೇಲೆ ತೆರಿಗೆ ಹೆಚ್ಚಳ ಆಕ್ರೋಶಕ್ಕೆ ಕಾರಣವಾಗಿದೆ.
ವಿತ್ತ ಮಂತ್ರಾಲಯದ ಆರ್ಥಿಕ ಸಮೀಕ್ಷೆ ಪ್ರಕಾರ, ನ್ಯಾಷನಲ್‌ಸ್ಟಾಕ್‌ವಿನಿಮಯ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡವರ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ(9.2 ಕೋಟಿ). ಪ್ರತಿಯಾಗಿ, ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಕಡಿಮೆಯಾಗುತ್ತಿದೆ. ಆರ್‌ಬಿಐ ಪ್ರಕಾರ, 2012-23ರ ಅವಧಿಯಲ್ಲಿ ಠೇವಣಿ ಪ್ರಮಾಣ ಶೇ.51ರಿಂದ ಶೇ.43ಕ್ಕೆ ಕುಸಿದಿದೆ. ಆದರೆ, ಈಕ್ವಿಟಿಗಳಲ್ಲಿ ಹೂಡಿಕೆ ಶೇ.11.2 ರಿಂದ ಶೇ.17.6ಕ್ಕೆ ಹೆಚ್ಚಿದೆ. ಈಕ್ವಿಟಿಗಳ ಮಾರಾಟದ ಮೇಲಿನ ಇಂಡೆಕ್ಸೇಷನ್‌ಸೌಲಭ್ಯ ತೆಗೆದು ಹಾಕಿರುವುದರಿಂದ, ದೀರ್ಘ ಕಾಲ ಇರಿಸಿಕೊಂಡರೆ, ಹೆಚ್ಚು ತೆರಿಗೆ ವಿಧಿಸಲಾಗುತ್ತದೆ.
ಸೆಪ್ಟೆಂಬರ್2019ರಲ್ಲಿ ಬಿಜೆಪಿ ಕಾರ್ಪೊರೇಟ್‌ತೆರಿಗೆ ಕಡಿತಗೊಳಿಸಿದ ಬಳಿಕ, ವೈಯಕ್ತಿಕ ಆದಾಯ ತೆರಿಗೆ(ಪಿಐಟಿ) ಹೆಚ್ಚುತ್ತಿದೆ. ಫೆಬ್ರವರಿ 2024ರಲ್ಲಿ ಒಟ್ಟು ತೆರಿಗೆಯಲ್ಲಿ ಆದಾಯ ತೆರಿಗೆ ಪಾಲು ಶೇ.28 ಇದ್ದಿತ್ತು. ಇನ್ನೊಂದು ಪ್ರವೃತ್ತಿಯೆಂದರೆ, ನೇರ ತೆರಿಗೆ ಕಡಿಮೆಯಾಗುತ್ತಿದ್ದು(ವ್ಯಕ್ತಿ-ಕಾರ್ಪೊರೇಟ್‌ಗಳ ಆದಾಯದ ಮೇಲೆ ವಿಧಿಸುವ ತೆರಿಗೆ), ಅಪ್ರತ್ಯಕ್ಷ ತೆರಿಗೆ ಹೆಚ್ಚುತ್ತಿದೆ. ನೇರ ತೆರಿಗೆ ಕಡಿಮೆಗೊಳಿಸುವುದನ್ನು ಪ್ರಗತಿಪರ ಎನ್ನಲಾಗುತ್ತದೆ. ಏಕೆಂದರೆ, ಕಡಿಮೆ ದುಡಿಯುವವರು ಕಡಿಮೆ ತೆರಿಗೆ ಪಾವತಿಸುತ್ತಾರೆ. ಅಪ್ರತ್ಯಕ್ಷ ತೆರಿಗೆ(ಜಿಎಸ್ಟಿ ಮತ್ತು ಅಬ್ಕಾರಿ ಸುಂಕ)ಯನ್ನು ಎಲ್ಲರೂ ಸಮಾನವಾಗಿ ಪಾವತಿಸುತ್ತಾರೆ. ಆದ್ದರಿಂದ ಅದು ಪ್ರತಿಗಾಮಿ.
1980ರ ಬಳಿಕ ಕಡಿಮೆಯಾಗಿದ್ದ ಅಪ್ರತ್ಯಕ್ಷ ತೆರಿಗೆ ಕಳೆದ ದಶಕದಿಂದ ಹೆಚ್ಚುತ್ತಿದೆ. ಬದಲಾಗಿ, ನೇರ ತೆರಿಗೆ ಪಾಲು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ತೆರಿಗೆ ಪಾವತಿಸುವವರಲ್ಲಿ ವಾರ್ಷಿಕ 3-7 ಲಕ್ಷ ರೂ. ಆದಾಯ ಇರುವವರು ಹೆಚ್ಚು.ನಂತರ 7-10 ಲಕ್ಷ, 10-12 ಲಕ್ಷ,12-15 ಲಕ್ಷ, 15 ಲಕ್ಷ ರೂ. ಗಿಂತ ಅಧಿಕ, 25-50 ಲಕ್ಷ ರೂ. ಹಾಗೂ 50 ಲಕ್ಷಕ್ಕಿಂತ ಅಧಿಕ ಆದಾಯ ಇರುವವರು ಬೆರಳೆಣಿಕೆಯಷ್ಟು ಇರುತ್ತಾರೆ. ವರ್ಷದಿಂದ ವರ್ಷಕ್ಕೆ ಬಡವರು-ಮಧ್ಯಮ ವರ್ಗದವರ ಮೇಲೆ ತೆರಿಗೆ ಹೊರೆ ಹೆಚ್ಚುತ್ತಿದೆ.
ಆರ್ಥಿಕ ಸ್ಥಿತಿ ಕುಸಿತ: ಭಾರತೀಯ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಕೆಲವು ವರ್ಷಗಳಿಂದ ಕುಸಿದಿದೆ. ದೇಶದ ಜಿಡಿಪಿಯಲ್ಲಿ ಕಾರ್ಮಿಕರ ಪಾಲು ಕುಸಿದಿದ್ದರೂ ಆದಾಯಕ್ಕೆ ಹೋಲಿಸಿದರೆ ಗೃಹ ಕೃತ್ಯ ವೆಚ್ಚ ಹೆಚ್ಚಿರುವುದರಿಂದ, ಉಳಿತಾಯ ಕಡಿಮೆಯಾಗಿದೆ; ಸಾಲ ಹೆಚ್ಚುತ್ತಿದೆ. ಆದರೆ, ವೈಯಕ್ತಿಕ ಆದಾಯ ತೆರಿಗೆ(ಪಿಐಟಿ) ಸಂಗ್ರಹ ಹೆಚ್ಚುತ್ತಿದೆ. 2021ರಲ್ಲಿ ಪಿಐಟಿ, ಕಾರ್ಪೊರೇಟ್‌ತೆರಿಗೆಯನ್ನು ದಾಟಿತು. 2024-25ರಲ್ಲಿ ಇನ್ನಷ್ಟು ಹೆಚ್ಚಿದ್ದು, ಜಿಡಿಪಿಯ ಶೇ.3.6 ತಲುಪಿದೆ. ವಿತ್ತ ಸಚಿವೆ ತಮ್ಮ ಬಜೆಟ್‌ಭಾಷಣದಲ್ಲಿ ʻಸಾಂಪ್ರದಾಯಿಕ ಡಿವಿಡೆಂಡ್‌ತೆರಿಗೆ ವ್ಯವಸ್ಥೆ ಅಳವಡಿಸಿಕೊಂಡಿರುವುದರಿಂದ, ಕಾರ್ಪೊರೇಟ್‌ಗಳು ಡಿವಿಡೆಂಡ್‌ಹಂಚಿಕೆ ತೆರಿಗೆ(ಡಿಡಿಟಿ) ಪಾವತಿಸಬೇಕಿಲ್ಲʼ ಎಂದು ಹೇಳಿದರು.
2023ರಲ್ಲಿ ಅಮೆರಿಕದಲ್ಲಿ ಕಾರ್ಪೊರೇಟ್‌ಈಕ್ವಿಟಿ ಮತ್ತು ಮ್ಯೂಚುಯಲ್‌ಫಂಡ್‌ಶೇರುಗಳನ್ನು ಶೇ.20 ರಷ್ಟು ಅತಿ ಶ್ರೀಮಂತರು ಬಳಿ ಜಮೆಯಾಗಿತ್ತು. ನಮ್ಮಲ್ಲಿ ಕೂಡ ಅತಿ ಶ್ರೀಮಂತರು ಈಕ್ವಿಟಿ ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಹೊಂದಿರುವುದರಿಂದ, ಇವರಿಗೆ ಶೇ.25-42ರಷ್ಟು ತೆರಿಗೆ ವಿಧಿಸಬಹುದು.
2020ರಲ್ಲಿ ಕೊನೆಯ ಬಾರಿ ಕಾರ್ಪೊರೇಟ್‌ತೆರಿಗೆಯಡಿ 50,400 ಕೋಟಿ ರೂ. ಡಿಡಿಟಿ ಸಂಗ್ರಹವಾಗಿತ್ತು; ಅಂದರೆ, ಒಟ್ಟು ಡಿವಿಡೆಂಡ್2.9 ಲಕ್ಷ ಕೋಟಿ ರೂ.(ಜಿಡಿಪಿಯ ಶೇ.1.4). 2024ರಲ್ಲಿ ಒಟ್ಟು ಡಿವಿಡೆಂಡ್5.5 ಲಕ್ಷ ಕೋಟಿ ರೂ.(ಜಿಡಿಪಿಯ ಶೇ.1.9)ಗೆ ಹೆಚ್ಚಿರುವ ಸಾಧ್ಯತೆ ಇದೆ. ಈ ಮೊತ್ತಕ್ಕೆ ಶೇ.30ರಷ್ಟು ತೆರಿಗೆ ವಿಧಿಸಿದರೆ, ಅದು ಜಿಡಿಪಿಯ ಶೇ.0.6 ಆಗಲಿದೆ. 2019ರಲ್ಲಿ ಕಾರ್ಪೊರೇಟ್‌ತೆರಿಗೆ ಕಡಿತಗೊಳಿಸಿದ ಬಳಿಕ ಕಂಪನಿಗಳ ಲಾಭ ದುಪ್ಪಟ್ಟಾಗಿದೆ. ಆದರೆ, ಅವು ಕೊಡುತ್ತಿರುವ ತೆರಿಗೆ ಕಡಿಮೆಯಾಗುತ್ತಿದೆ. ಕೋವಿಡ್‌ಬಳಿಕ ಅತಿ ಶ್ರೀಮಂತರ ಐಶ್ವರ್ಯ ಅಸಮಾನವಾಗಿ ಬೆಳೆದಿದೆ.
ದುರಂತವೆಂದರೆ, ನಾಗರಿಕರ ಆರೋಗ್ಯ ವಿಮೆ ಕಂತಿನ ಮೇಲೆ ಶೇ.18 ಜಿಎಸ್‌ಟಿ ಹಾಕಲಾಗುತ್ತದೆ. ವಿಮೆ ನಾಗರಿಕರ ಅಗತ್ಯ. ಸರ್ಕಾರ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಯನ್ನು ನೀಡಲು ವಿಫಲವಾಗಿರುವುದರಿಂದ, ಜನ ಖಾಸಗಿ ವಿಮೆ ಕಂಪನಿಗಳನ್ನು ಆಧರಿಸಬೇಕಾಗಿ ಬಂದಿದೆ.
ಅಜೀಂ ಪ್ರೇಮ್‌ಜಿ ರಾಜ್ಯದ ಶಾಲೆಗಳಿಗೆ ̧1500 ಕೋಟಿ ರೂ ನೀಡಿದರು. ಅವರಿಗೆ ವಂದನೆ ಸಲ್ಲಿಸೋಣ.ಆದರೆ, ಅಂಬಾನಿ ಪುತ್ರನ ವಿವಾಹಕ್ಕೆ 5,000 ಕೋಟಿ ರೂ. ವೆಚ್ಚ ಮಾಡಿರುವುದು ನಮ್ಮಂಥ ದೇಶದಲ್ಲಿ ನಿರ್ಲಜ್ಜೆಯ ಪರಮಾವಧಿ. ಈಂಥ ಸನ್ನಿವೇಶದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಯಾವುದೇ ತಾರ್ಕಿಕತೆ ಇಲ್ಲದ ತೆರಿಗೆಗಳನ್ನು ವಿಧಿಸಿ ಜನಸಾಮಾನ್ಯರ ಸುಲಿಗೆ ನಡೆಸುತ್ತಿದ್ದು, ಕ್ರೋನಿ ಬಂಡವಾಳಶಾಹಿಗೆ ದಾರಿ ಮಾಡಿಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ಬ್ರೆಜಿಲ್‌ಮತ್ತಿತರ ದೇಶಗಳ ಅತಿ ಶ್ರೀಮಂತರಿಗೆ ಹೆಚ್ಚು ತೆರಿಗೆ ವಿಧಿಸಬೇಕು ಎನ್ನುವ ಪ್ರಸ್ತಾಪಕ್ಕೆ ಭಾರತ ಸರ್ಕಾರ ಓಗೊಡುವ ಸಾಧ್ಯತೆ ಇರುವುದಿಲ್ಲ. ಎನ್‌ಡಿಎ-3.0 ದೇಶದ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅವಕಾಶವಿದ್ದಿತ್ತು.
-ಮಾಧವ ಐತಾಳ್