ಅನಂತಶಯನ.
–ಸಂತೋಷ ಕೌಲಗಿ
ಜನಪದ ಸೇವಾ ಟ್ರಸ್ಟ್
ಮೇಲುಕೋಟೆ-571431
ಅದು 2004-05. ಸ್ವಿಜ್ಟರ್ಲ್ಯಾಂಡ್ನಲ್ಲಿ 33 ವರ್ಷದ ಭಾರತೀಯ ಯುವಕನೊಬ್ಬ ಐ ಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ. ಕೈ ತುಂಬ ಹಣ. ಮದುವೆಯಾಗಿ ಒಂದೆರಡು ವರ್ಷ ಕಳೆದಿದೆ ಅಷ್ಟೆ. ಯಾವುದಕ್ಕೂ ಕಡಿಮೆ ಇಲ್ಲ. ಸುಖವಾದ ಬದುಕು. ಆದರೂ, ಆ ಯುವಕನಿಗೆ ನೆಮ್ಮದಿ ಇಲ್ಲ. ಪರಿಸರದ ಮೇಲೆ ಮನುಷ್ಯ ನಡೆಸುತ್ತಿರುವಅವ್ಯಾಹತ ದಾಳಿಯ ಬಗ್ಗೆ ಎಲ್ಲೋ ಒಳಗೆ ನೋವು. ಆದರೆ, ಏನು ಮಾಡಲೂ ಧೈರ್ಯ ಸಾಲದು. ಒಂದು ವಾರಾಂತ್ಯ ಮನೆಯಲ್ಲೇ ಕುಳಿತು ಅಟೆನ್ಬರೋ ನಿರ್ಮಿಸಿರುವ ಗಾಂಧಿ ಸಿನೆಮಾವನ್ನು ನೋಡಿದ ನಂತರ, ನಾನು ವಾಪಸ್ಸು ತಾಯಿ ನಾಡಿಗೆ ಹೋಗಿ ಬಿಡಬೇಕು. ಇಷ್ಟು ವರ್ಷ ಹಣ ಮಾಡಿದ್ದು ಸಾಕು ಎಂಬ ತೀರ್ಮಾನಕ್ಕೆ ಬಂದರು. ತಮ್ಮ ಊರಾದ ಚೆನ್ನೈಗೆ ಬಂದು ಇಳಿದರು. ಅವರೇ ಅನಂತಶಯನ. ಪ್ರೀತಿಯಿಂದ ಎಲ್ಲರ ಬಾಯಲ್ಲಿ ಅನಂತು.
ಇನ್ನು ಮುಂದೆ ಹಣಕ್ಕಾಗಿ ಯಾವುದೇ ಕೆಲಸ ಮಾಡುವುದಿಲ್ಲ. ಪ್ರಕೃತಿಯ ಉಳಿವು ಮತ್ತು ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತೇನೆ ಎಂದು ತೀರ್ಮಾನಿಸಿದರು. ಆದರೆ, ಏನು ಮಾಡಬೇಕು ಎನ್ನುವುದು ಗೊತ್ತಿಲ್ಲ. ರೈತರು ಬೆಳೆಗೆ ವಿಪರೀತವಾಗಿ ರಾಸಾಯನಿಕ ಬಳಸಿ ಭೂಮಿಯನ್ನು ಹಾಳು ಮಾಡುವುದಲ್ಲದೇ, ತಮ್ಮ ಆರೋಗ್ಯ/ಹಣವನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದರು. ಇಂಥ ಆಹಾರ, ತರಕಾರಿ ತಿನ್ನುವ ಗ್ರಾಹಕರೂ ಆಹಾರದೊಂದಿಗೆ ವಿಷ ಸೇವಿಸುತ್ತಿರುವುದನ್ನು ಕಂಡರು. ೨೦೦೬ ರಲ್ಲಿ ಸಮಾನ ಮನಸ್ಕ ಗೆಳೆಯರಿಂದ ಒಂದಿಷ್ಟು ಬಡ್ಡಿರಹಿತ ಸಾಲ ಪಡೆದು, ಚೆನ್ನೆನಲ್ಲಿ ಒಂದು ಮಳಿಗೆ ತೆರೆದು, ಅದಕ್ಕೆ “ರಿಸ್ಟೋರ್’ ಎಂದು ಹೆಸರಿಟ್ಟರು. ರಿಸ್ಟೋರ್ನ ಉದ್ದೇಶ ಸಣ್ಣ ರೈತರು ಮತ್ತು ಗ್ರಾಹಕರನ್ನು ಒಂದೆಡೆಗೆ ತರುವುದು ಹಾಗೂ ಸಣ್ಣ ರೈತರ ರಾಸಾಯನಿಕ ಮತ್ತು ವಿಷಮುಕ್ತ ಉತ್ಪನ್ನಗಳನ್ನು ಗ್ರಾಹಕರು ಕೊಳ್ಳುವಂತೆ ಮಾಡುವುದು. ರೈತರೇ ನಿರ್ಧರಿಸಿದ ಬೆಲೆಯನ್ನು ಗ್ರಾಹಕರು ಕೊಟ್ಟು ಖರೀದಿಸುವ ಸಂಸ್ಕೃತಿಯನ್ನು ಅನಂತಶಯನ ಬೆಳೆಸಿದರು. ಇಡೀ ವ್ಯವಹಾರ ಲಾಭರಹಿತವಾಗಿದ್ದು, ರಿಸ್ಟೋರ್ ಉತ್ಪಾದಕ ಮತ್ತು ಗ್ರಾಹಕರ ನಡುವಿನ ಕೊಂಡಿಯಂತೆ ಕೆಲಸ ಮಾಡತೊಡಗಿತು. ಗ್ರಾಹಕರು ಮತ್ತು ರೈತರನ್ನು ಪರಸ್ಪರ ಮುಖಾಮುಖಿಯಾಗಿಸಿತು. ಇಷ್ಟರಲ್ಲಿ ಅವರಿಗೆ ಗ್ರಾಮೀಣ ಭಾರತದ ಇನ್ನಿತರ ಸಮಸ್ಯೆಗಳೂ ಅರ್ಥವಾಗತೊಡಗಿತು.
ದೇಶದಲ್ಲಿ ಹತ್ತಿ ಬೆಳೆಗಾರರು ಅತಿ ಹೆಚ್ಚು ಕ್ರಿಮಿನಾಶಕ ಮತ್ತು ಗೊಬ್ಬರ ಬಳಸುತ್ತಾರೆ. ಜೊತೆಗೆ, ಆತ್ಮಹತ್ಯೆಗೆ ಶರಣಾಗುತ್ತಿರುವವರಲ್ಲಿ ಹೆಚ್ಚಿನವರು ಇವರೇ. ಅವರು ಹತ್ತಿಯ ಹಿಂದೆ ಹೊರಟರು. ಹತ್ತಿ ಅವರನ್ನು ಗಾಂಧಿಯ ಹಿಂದೆ ಕರೆದೊಯ್ಯಿತು. ಗಾಂಧಿಯವರು ಹತ್ತಿ ಎಳೆಯನ್ನು ಹಿಡಿದು ಸೂರ್ಯ ಮುಳುಗದ ಚಕ್ರಾಧಿಪತ್ಯವನ್ನು ಅಲುಗಾಡಿಸಿದ ಪ್ರಯೋಗದಿಂದ ಅವರು ಪ್ರಭಾವಿತರಾದರು. ವಸ್ತಕ್ಷೇತ್ರದಲ್ಲಿ ಕೆಲಸ ಮಾಡಲು ಹೊರಟಾಗ ಗಾರ್ಮೆಂಟ್ ಉದ್ಯಮದಲ್ಲಿ ಕೆಲಸಗಾರರ ಮುಖ್ಯವಾಗಿ, ಹೆಣ್ಣು ಮಕ್ಕಳ ಶೋಷಣೆಯನ್ನು ಕಂಡರು. ಸಮಸ್ಯೆ ಇರುವುದು ಕೇಂದ್ರಿಕೃತ ವ್ಯವಸ್ಥೆಯಲ್ಲಿ ಎಂದು ನಿರ್ಧರಿಸಿ, ಉಡುಪುಗಳನ್ನು ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ಹೊಲಿಗೆ ಯಂತ್ರಗಳಲ್ಲಿ, ಮಹಿಳೆಯರ ಕೈಯಲ್ಲಿ ಹೊಲಿಸತೊಡಗಿದರು. ಅವರಿಗೆ ಬೇಕಾದ ತರಬೇತಿ ನೀಡಿದರು. ಮಳೆ ಆಶ್ರಿತ ಸಣ್ಣ ಹಿಡುವಳಿದಾರರು, ಸಾವಯವ ಕೃಷಿ ಮತ್ತು ಮಿಶ್ರ ಬೆಳೆಯಲ್ಲಿ ದೇಸಿ ತಳಿ ಹತ್ತಿಯನ್ನು ಬೆಳೆಯುವಂತೆ ಪ್ರೇರೇಪಿಸಿ, ಆ ಹತ್ತಿಯನ್ನು ಕೈಯಿಂದ ನೂಲಿಸಿ, ಕೈ ಮಗ್ಗದಲ್ಲಿ ಬಟ್ಟೆ ಮಾಡಿಸಿ, ಸಾಮಾನ್ಯ ಹೊಲಿಗೆ ಯಂತ್ರದಲ್ಲಿ ಮಹಿಳೆಯರು ತಯಾರಿಸುವ ವಸ್ತವನ್ನು “ತುಲಾ’ ಹೆಸರಿನಲ್ಲಿ ಮಾರತೊಡಗಿದರು. ತುಲಾ ಎಂದರೆ ಸಂಸ್ಕöÈತದಲ್ಲಿ ತಕ್ಕಡಿ. ತಕ್ಕಡಿ ಎಂದರೆ ನ್ಯಾಯ. “ತುಲಾ’ ಭಾಗೀದಾರರು ಹಾಗೂ ಗ್ರಾಹಕರಿಗೂ ನ್ಯಾಯ ಒದಗಿಸುವುದಲ್ಲದೆ, ಪರಿಸರಕ್ಕೆ ನ್ಯಾಯ ಒದಗಿಸುವ ಬಟ್ಟೆಯಾಗಿ ಹೊರಹೊಮ್ಮಿತು.”ಈ ಇಡೀ ಪಯಣದಲ್ಲಿ ವಾಸ್ತವದ ಅರಿವು ಮಾಡಿಕೊಡುತ್ತ, ಶಾಶ್ವತವಾದ ಹಾಗೂ ನ್ಯಾಯವಾದ ಅರ್ಥ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಗಾಂಧಿ ಮತ್ತು ಕುಮಾರಪ್ಪ ಅವರಿಂದ ಕಲಿತೆ,’ ಎನ್ನುತ್ತಾರೆ 50ರ ಆಸುಪಾಸಿನಲ್ಲಿರುವ ಗಡ್ಡಧಾರಿ ಅನಂತು.