ಸರ್ಕಾರದ ಹಣ ಸೋರಿಕೆಯಾಗುವುದು, ಅಪಾತ್ರರಿಗೆ ಸಂದಾಯ ಆಗುವುದು ಆಶ್ರ‍್ಯಪಡಬೇಕಾದ ವಿಷಯವೇನಲ್ಲ. ಸೋರಿಕೆಯ ಇನ್ನೊಂದು ಪ್ರಕರಣದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ(ಪಿಎಂಕೆವೈ)ಯಡಿ 20.48 ಲಕ್ಷ ಅನರ್ಹರಿಗೆ 1,364.12 ಕೋಟಿ ರೂ. ಪ್ರೋತ್ಸಾಹಧನ ಪಾವತಿ ಮಾಡಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ. ಪ್ರೋತ್ಸಾಹಧನ ನೀಡುವ ಈ ಮಹತ್ವಾಕಾಂಕ್ಷಿ ಯೋಜನೆಗೆ 2019ರಲ್ಲಿ ಚಾಲನೆ ನೀಡಲಾಗಿದೆ. ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ ವೆಂಕಟೇಶ ನಾಯಕ್ ಎಂಬುವರು ಯೋಜನೆ ಕುರಿತು ಮಾಹಿತಿ ಕೋರಿ, ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.
ಪ್ರತಿಕ್ರಿಯಿಸಿರುವ ಕೇಂದ್ರ ಕೃಷಿ ಸಚಿವಾಲಯ, ಫಲಾನುಭವಿಗಳನ್ನು ಅನರ್ಹರು ಹಾಗೂ ಆದಾಯ ತೆರಿಗೆ ಪಾವತಿಸುವವರು ಎಂದು ವಿಂಗಡಿಸಿದ್ದು, ಶೇ.55.58ರಷ್ಟು ಆದಾಯತೆರಿಗೆ ಪಾವತಿದಾರರು ಹಾಗೂ ಶೇ.44.41 ಮಂದಿ ಅನರ್ಹ ರೈತರು ಇದ್ದಾರೆ. ಪಂಜಾಬ್, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಅನರ್ಹ ಫಲಾನುಭವಿಗಳು ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಪಾವತಿಯಾದ ಮೊತ್ತ ವಸೂಲಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಕೃಷಿ ಮಂತ್ರಾಲಯ ಹೇಳಿದೆ.
Courtesyg: Google (photo)