ಜೈವಿಕ ಪಾರಂಪರಿಕ ತಾಣವಾಗಿ ಆದಿನಾರಾಯಣಸ್ವಾಮಿ ಬೆಟ್ಟಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಸಮೀಪದಲ್ಲಿರುವ ಆದಿನಾರಾಯಣಸ್ವಾಮಿ ಬೆಟ್ಟ ಹಾಗೂ ದಕ್ಷಿಣ ಜಿಲ್ಲೆ ಕಡಬ ತಾಲೂಕಿನ ಕುಮಾರಧಾರಾ ನದಿ ತೀರದ ಉರುಂಬಿಗೆ ಜೈವಿಕ ಸೂಕ್ಷ್ಮ ಪ್ರದೇಶ ಪಟ್ಟ ನೀಡಲು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿರ್ಧರಿಸಿದೆ. ಅಲ್ಲದೆ, ನೆಲಮಂಗಲದ ಮಹಿಮರಂಗ ಬೆಟ್ಟ, ಕೋಲಾರದ ಅಂತರಗಂಗೆ ಬೆಟ್ಟವನ್ನು ಕೂಡ ಜೀವವೈವಿಧ್ಯ ತಾಣ ಎಂದು ಘೋಷಿಸಲು ಮಂಡಳಿ ತೀರ್ಮಾನಿಸಿದೆ. ಚಿಕ್ಕಮಗಳೂರುನ ಸಖರಾಯಪಟ್ಟಣದ ಶಕುನಗಿರಿ ಬೆಟ್ಟ ಪ್ರದೇಶವನ್ನು ಪಕ್ಕದಲ್ಲೇ ಇರುವ ಹೊಗರೆ ಕಾನುಗಿರಿ ಪಾರಂಪರಿಕ ತಾಣಕ್ಕೆ ಸೇರಿಸಲು ಶಿಫಾರಸು ಮಾಡಿದೆ. ಎಂಟು ಸ್ಥಳಗಳನ್ನು ಮತ್ಸö್ಯಧಾಮ ಎಂದು ಘೋಷಿಸಲು ಮೀನುಗಾರಿಕೆ ಇಲಾಖೆಗೆ ಸೂಚಿಸಿರುವುದಲ್ಲದೆ, ಅಪರೂಪದ ಮೀನು ವೈವಿಧ್ಯದ ಏಳು ತಾಣಗಳನ್ನು ಗುರುತಿಸಿದೆ. ವಿನಾಶದ ಅಂಚಿನಲ್ಲಿರುವ ಕುಮಟ ತಾಲೂಕಿನ ಗಜನಿ ಕಗ್ಗ ಭತ್ತ, ಹಾಸನದ ರಾಜಮುಡಿ ಅಕ್ಕಿ ಮತ್ತು ಅಂಕೋಲ ತಾಲೂಕಿನ ಕರೇಈಶಾಡು ಮಾವಿನಹಣ್ಣು ತಳಿಗಳಿಗೆ ಕೇಂದ್ರ ಸರ್ಕಾರ ಜಿಯಾಗ್ರಾಫಿಕಲ್ ಇಂಡಿಕೇಟರ್(ಜಿಐ) ಸ್ಥಾನಮಾನ ನೀಡಬೇಕು ಎಂದೂ ಮಂಡಳಿ ಶಿಫಾರಸು ಮಾಡಿದೆ. ಬೆಳ್ಳಕ್ಕಿಗಳ ನೆಲೆಬೀಡು ಉತ್ತರ ಕನ್ನಡದ ಶಿರಸಿ ತಾಲೂಕಿನ ಸೋಂದಾ ಗ್ರಾಮದ ಮುಂಡಿಗೆ ಕೆರೆಯನ್ನು ಪಕ್ಷಿಧಾಮವೆಂದು ಘೋಷಿಸಲು ಶಿಫಾರಸು ಮಾಡಿದೆ.
ರಾಜ್ಯದಲ್ಲಿ 10 ಪಾರಂಪರಿಕ ವೃಕ್ಷಗಳನ್ನು ಗುರುತಿಸಿದ್ದು, ಇನ್ನಷ್ಟು ಪಾರಂಪರಿಕ ವೃಕ್ಷಗಳನ್ನು ಗುರುತಿಸಲು ತೀರ್ಮಾನಿಸಲಾಗಿದೆ. ಈ ವೃಕ್ಷಗಳನ್ನು ಜೀವವೈವಿಧ್ಯ ಕಾಯ್ದೆ ಅಡಿಯಲ್ಲಿ ಘೋಷಿಸಲು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ, ಸರ್ಕಾರದಿಂದ ಒಪ್ಪಿಗೆ ಪಡೆಯಲು ತೀರ್ಮಾನಿಸಲಾಗಿದೆ. ಗ್ರಾಮ ಸಾಮೂಹಿಕ ಭೂಮಿ, ಗ್ರಾಮ ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಕುರಿತು ಸಮೀಕ್ಷೆ ನಡೆಸಿ ವರದಿ ಪಡೆಯಲು ತಜ್ಞರ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
Courtesyg: Google (photo)