ಆನ್‌ಲೈನ್ ತರಗತಿಯನ್ನು ನಿಗದಿಯಂತೆ ನಡೆಸಲು ಖಾಸಗಿ ಶಾಲೆಗಳು ಸಮ್ಮತಿಸಿವೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕೋವಿಡ್ ಬಿಕ್ಕಟ್ಟಿನಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ೧೫ ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿವೆ. ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಅವರು ನ.೨೭ರಂದು ಸಭೆ ನಡೆಸಿದರು. ಖಾಸಗಿ ಶಾಲೆಗಳ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಅರಿವು ಇದೆ. ಸಭೆಯಲ್ಲಿ ನಡೆದ ಮಾತುಕತೆಯ ವಿವರವನ್ನು ಸಚಿವರ ಮುಂದೆ ಇಡಲಾಗುವುದು ಎಂದು ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ಖಾಸಗಿ ಅನುದಾನರಹಿತ ಸಂಸ್ಥೆಗಳ ಬೋಧಕ–ಬೋಧಕೇತರ ಸಿಬ್ಬಂದಿ ಸಂಬಳ ಹಾಗೂ ವೇತನವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವೇಶ ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದಿಲ್ಲ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರಿಂದ ಬಹಳಷ್ಟು ಪೋಷಕರು ಶುಲ್ಕ ಪಾವತಿಸುತ್ತಿಲ್ಲ ಎಂದು ಖಾಸಗಿ ಶಾಲೆಗಳ ಪದಾಧಿಕಾರಿಗಳು ಅಳಲು ತೋಡಿಕೊಂಡರು. ಶುಲ್ಕ ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಆಹಾರ ಕಿಟ್ ಹಾಗೂ ಗೌರವಧನ ನೀಡಬೇಕು ಮತ್ತು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
Courtesyg: Google (photo)