ಆರೋಗ್ಯ ಸೇತು ಆ್ಯಪ್ ಅಭಿವೃದ್ಧಿಪಡಿಸಿದವರು ಯಾರು ಎನ್ನುವ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಆಯೋಗವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ನ್ಯಾಯಾಲಯಗಳು ಆ್ಯಪ್‌ನ್ನು ಕಡ್ಡಾಯಗೊಳಿಸಬಾರದು ಎಂದು ಸೂಚನೆ ನೀಡಿದ್ದರೂ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿ ಆರೋಗ್ಯ ಸೇತು ಆ್ಯಪ್ ಬಳಸಲಾಗಿತ್ತು.ಸುತ್ತಮುತ್ತ ಇರಬಹುದಾದ ಸೋಂಕಿತರ ಪತ್ತೆ ಹಾಗೂ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದೇವೆಯೇ ಎನ್ನುವುದನ್ನೂ ತಿಳಿದುಕೊಳ್ಳಲು ನೆರವಾಗಲಿದೆ ಎಂದುಕೊಂಡು ಲಕ್ಷಾಂತರ ಜನರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ರೈಲು, ಮೆಟ್ರೊ, ಪಾಸ್‌ಪರ‍್ಟ್ ಕಚೇರಿ ಮತ್ತಿತರ ಕಡೆ ಆ್ಯಪ್‌ನ್ನು ಕಡ್ಡಾಯಗೊಳಿಸಲಾಗಿತ್ತು. ಸಚಿವಾಲಯಗಳ ಜಾಲತಾಣಗಳನ್ನು ಅಭಿವೃದ್ಧಿಪಡಿಸುವ ನ್ಯಾಷನಲ್ ಇನ್ರ‍್ಮೇಟಿಕ್ಸ್ ಸೆಂಟರ್(ಎನ್‌ಐಸಿ) ಆ್ಯಪ್‌ನ್ನು ಅಭಿವೃದ್ಧಿಪಡಿಸಿದೆ ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಮಾಹಿತಿ ಹಕ್ಕು ಅರ್ಜಿ ಮೂಲಕ ಮಾಹಿತಿ ಕೇಳಿದಾಗ, ಆ್ಯಪ್ ಅಭಿವೃದ್ಧಿಪಡಿಸಿದವರು ಯಾರು ಎನ್ನುವುದು ತಿಳಿದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಎನ್‌ಐಸಿ ಪ್ರತಿಕ್ರಿಯೆ ನೀಡಿವೆ. ಅಧಿಕಾರಿಗಳು ಮಾಹಿತಿ ನಿರಾಕರಿಸುವಂತಿಲ್ಲ. ಆ್ಯಪ್ ಅಭಿವೃದ್ಧಿಪಡಿಸಿದವರು ಯಾರು? ದಾಖಲೆಗಳು ಎಲ್ಲಿವೆ ಎನ್ನುವುದನ್ನು ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ವಿವರಿಸಲು ಆಗಲಿಲ್ಲ. ಇದು ಅಸಂಬದ್ಧ ಎಂದು ಎಂದು ಮಾಹಿತಿ ಹಕ್ಕು ಆಯೋಗ ಹೇಳಿದೆ. ನ.೨೪ರಂದು ಸಂಬಂಧಿಸಿದ ಅಧಿಕಾರಿಗಳು ಆಯೋಗದ ಮುಂದೆ ಹಾಜರಾಗಬೇಕು ಎಂದಿರುವ ಆಯೋಗ, ಆರ್‌ಟಿಐ ಅರ್ಜಿಗೆ ಈ ರೀತಿ ಹಾರಿಕೆ ಉತ್ತರ ನೀಡಿರುವುದು ಹಾಗೂ ಮಾಹಿತಿ ನೀಡದೆ ಇರುವುದಕ್ಕೆ ಕೇಂದ್ರ ಸರ್ಕಾರದ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ಆಯೋಗವು ಪ್ರಶ್ನಿಸಿದೆ.
ಆ್ಯಪ್ ಅಭಿವೃದ್ಧಿಪಡಿಸಿದವರು ಯಾರು ಎನ್ನುವ ಮಾಹಿತಿ ನೀಡುವಲ್ಲಿ ಸಚಿವಾಲಯಗಳು ವಿಫಲವಾಗಿವೆ ಎಂದು ಆರ್‌ಟಿಐ ಕಾರ್ಯಕರ್ತ ಸೌರವ್ ದಾಸ್ ಆಯೋಗಕ್ಕೆ ದೂರು ನೀಡಿದ್ದರು. ಆ್ಯಪ್ ಅಭಿವೃದ್ಧಿಪಡಿಸಲು ಪ್ರಸ್ತಾವ ಸಲ್ಲಿಸಿದವರು ಯಾರು? ಇದಕ್ಕೆ ಒಪ್ಪಿಗೆ ನೀಡಿದ ದಾಖಲೆ, ಅಭಿವೃದ್ಧಿಪಡಿಸಿದ ಕಂಪನಿಗಳ ವಿವರ, ಆ್ಯಪ್ ಅಭಿವೃದ್ಧಿಗೆ ಕೈಜೋಡಿಸಿದ ಸರ್ಕಾರದ ಇಲಾಖೆಗಳು ಹಾಗೂ ವ್ಯಕ್ತಿಗಳ ವಿವರ ಹಾಗೂ ಈ ಸಂಬಂಧ ಇರುವ ದಾಖಲೆಗಳನ್ನು ಆರ್‌ಟಿಐ ಮೂಲಕ ದಾಸ್ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎನ್‌ಐಸಿ, ಆ್ಯಪ್ ಅಭಿವೃದ್ಧಿಗೆ ಸಂಬಂಧಿಸಿದ ಪೂರ್ಣ ದಾಖಲೆಗಳು ತನ್ನ ಬಳಿ ಇಲ್ಲ ಎಂದು ತಿಳಿಸಿತ್ತು. ಮಾಹಿತಿ ತಂತ್ರಜ್ಞಾನ ಇಲಾಖೆ ಅರ್ಜಿಯನ್ನು ರಾಷ್ಟಿçÃಯ ಇ-ಆಡಳಿತ ವಿಭಾಗಕ್ಕೆ ವರ್ಗಾಯಿಸಿತ್ತು. ಇದು ತನಗೆ ಸಂಬಂಧಿಸಿದ್ದಲ್ಲ ಎಂದು ಇ-ಆಡಳಿತ ವಿಭಾಗ ಹೇಳಿತ್ತು. ಮಾಹಿತಿ ಆಯೋಗ ಇ-ಆಡಳಿತ ವಿಭಾಗಕ್ಕೂ ನೋಟಿಸ್ ನೀಡಿದೆ. ಖಾಸಗಿತನ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಹೇಳಿದ ಬಳಿಕವೂ ಸರ್ಕಾರಗಳು ಜನರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುತ್ತಿರುವುದು ಕೋರ್ಟ್ನ ಆದೇಶದ ಉಲ್ಲಂಘನೆ ಆಗುತ್ತದೆ. ಇದೊಂದು ಗಂಭೀರ ಪ್ರಕರಣ.