ಆರ್ಥಿಕ ಉತ್ತೇಜನ ಪ್ಯಾಕೇಜ್ ಅನಿವಾರ್ಯ

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ಜಾರಿಗೊಳಿಸುವುದು ಮುಖ್ಯವಾಗಲಿದೆ ಎಂದು ಆರ್‌ಬಿಐ ಮಾಜಿ ಗವರ್ನರ್ ಬಿಮಲ್ ಜಲಾನ್ ತಿಳಿಸಿದಾರೆ. ವಿತ್ತೀಯ ಉತ್ತೇಜನ ಜಾರಿಯಲ್ಲಿರುವುದರಿಂದ ಮತ್ತೊಂದು ಸುತ್ತಿನ ಪ್ಯಾಕೇಜ್ ನೀಡಿ, ವಿತ್ತೀಯ ಕೊರತೆ ಹೆಚ್ಚಿಸುವುದು ಬೇಡ ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆರ್ಥಿಕ ಚೇತರಿಕೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸುವ ಮೂಲಕ ಮಹತ್ವದ ಕೆಲಸ ಮಾಡಿದೆ. ಯೋಜನೆಗಳಿಗೆ ನೀಡಲಾದ ಮೊತ್ತವನ್ನು ಆದಷ್ಟು ಬೇಗ ವೆಚ್ಚ ಮಾಡಲು ಆರಂಭಿಸಬೇಕು ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಮೇ ತಿಂಗಳಿನಲ್ಲಿ 20 ಲಕ್ಷ ಕೋಟಿ ರೂ. ಮೊತ್ತದ ಆತ್ಮನಿರ್ಭರ ಭಾರತ ಕೊಡುಗೆ ಘೋಷಿಸಿತು. ಈವರೆಗೆ ಮೂರು ಸುತ್ತಿನ ಆರ್ಥಿಕ ಕೊಡುಗೆಗಳನ್ನು ಘೋಷಿಸಿದೆ. ಶೀಘ್ರದಲ್ಲೇ ಇನ್ನೊಂದು ಸುತ್ತಿನ ಆರ್ಥಿಕ ಕೊಡುಗೆ ಘೋಷಿಸಲಿದ್ದಾರೆ ಎಂದು ಆರ್ಥಿಕ ವ್ಯವಹಾರಗಳ ಸಚಿವ ತರುಣ್ ಬಜಾಜ್ ಇತ್ತೀಚೆಗೆ ಹೇಳಿದ್ದಾರೆ. ಕೋವಿಡ್ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಉಂಟುಮಾಡಿದ್ದರೂ, ಈಗ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಉದ್ಯೋಗ ನಷ್ಟ ಹಾಗೂ ಆರ್ಥಿಕ ಬೆಳವಣಿಗೆಯಲ್ಲಿನ ಕುಸಿತ 2021ರ ಅಂತ್ಯದ ವೇಳೆಗೆ ಸರಿಹೋಗಲಿದೆ. ಮುಂದಿನ ತಿಂಗಳುಗಳಲ್ಲಿ ಬೇರಾವುದೇ ಬಿಕ್ಕಟ್ಟು ಎದುರಾಗದೇ ಇದ್ದರೆ, 2021–22ರಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.6 ರಿಂದ ಶೇ.7ರ ಮಟ್ಟದಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ. ಕೋವಿಡ್‌ನಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 9.5ರಷ್ಟು ಇಳಿಕೆಯಾಗಲಿದೆ ಎಂದು ಆರ್‌ಬಿಐ ಅಂದಾಜು ಮಾಡಿದೆ.

Journalist,Translator,avid bibliophile

Leave a Reply

Your email address will not be published. Required fields are marked *

Back To Top