ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಬೆಳೆ ಬಹುತೇಕ ನಾಶವಾಗಿದ್ದು, ರೈತರಿಗೆ ಭಾರಿ ನಷ್ಟವುಂಟು ಮಾಡಿದೆ. ಕಳೆದ ೧೦ ವರ್ಷದÀಲ್ಲಿ ಇದೇ ಮೊದಲ ಬಾರಿಗೆ ಬಿತ್ತನೆ ಮಾಡಿದ ಸಂಪೂರ್ಣ ಬೆಳೆ ನಾಶವಾಗಿದೆ. ನಿರಂತರ ಮಳೆಯಿಂದ ಈರುಳ್ಳಿ ಕೀಳಲು ಸಾಧ್ಯವಾಗದೆ ಮಳೆ ನೀರು ಹೊಲಗಳಲ್ಲಿ ನೀರು ನಿಂತು, ಗಡ್ಡೆ ಸಂಪೂರ್ಣ ಕೊಳೆತು ಹೋಗಿದೆ. ಫಸಲು ಕಿತ್ತವರು ಕೂಡ ಮಳೆಯಿಂದಾಗಿ ಬೆಲೆಯನ್ನು ಎತ್ತಲು ಸಾಧ್ಯವಾಗದೆ ಹೊಲದಲ್ಲೇ ಬಿಟ್ಟಿದ್ದು, ಮೊಳಕೆ ಬಂದು ಹಾಳಾಗಿದೆ. ಮುಂಗಾರು ಹಂಗಾಮಿನ ಈರುಳ್ಳಿ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬರುತ್ತದೆ. ಆದರೆ, ಈ ವರ್ಷ ಬಾಗಲಕೋಟೆ ಎಪಿಎಂಸಿಗೆ ಅತ್ಯಂತ ಕಡಿಮೆ ಪ್ರಮಾಣದ ಈರುಳ್ಳಿ ಆವಕಗೊಂಡಿದೆ. ಅಕ್ಟೋಬರ್ ೧-೨೧ ರವರೆಗೆ ಕೇವಲ ೨,೫೮೦ ಕ್ವಿಂಟಾಲ್ ಈರುಳ್ಳಿ ಆವಕಗೊಂಡಿದೆ. ಹುಬ್ಬಳ್ಳಿ ಎಪಿಎಂಸಿಯಲ್ಲಿ ಆವಕಗೊಂಡ ಈರುಳ್ಳಿ ಪ್ರಮಾಣ ೨೮,೪೩೯ ಕ್ವಿಂಟಲ್. ಕಳೆದ ವರ್ಷ ಇದೇ ಅವಧಿಯಲ್ಲಿ೨,೩೪,೫೮೩ ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಬಂದಿತ್ತು. ಬಾಗಲಕೋಟೆ ಎಪಿಎಂಸಿಯಲ್ಲಿ ಈರುಳ್ಳಿ ಕ್ವಿಂಟಲ್‌ಗೆ ಗರಿಷ್ಠ ೪,೦೦೦ ರೂ. ಇದೆ. ಉತ್ತರ ಕರ್ನಾಟಕದ ಅತಿ ದೊಡ್ಡ ಮಾರುಕಟ್ಟೆಯಾದ ಹುಬ್ಬಳ್ಳಿ ಎಪಿಎಂಸಿಯಲ್ಲಿ ಗರಿಷ್ಠ ೯೦೦೦ ರೂ.ಗೆ ಆವಕ ಆಗಿದೆ. ಆದರೆ, ರೈತರ ಬಳಿ ಈರುಳ್ಳಿಯೇ ಇಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ೮೦-೧೦೦ ರೂ. ಇದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಈ ಹಿಂದೆ ಸ್ಥಳೀಯ ಈರುಳ್ಳಿ ಪೂರೈಕೆ ಕಡಿಮೆ ಆದಾಗ, ಮಹಾರಾಷ್ಟçದಿಂದ ಈರುಳ್ಳಿ ಆಗಮಿಸುತ್ತಿತ್ತು. ಆದರೆ, ಈ ವರ್ಷ ಅಲ್ಲಿ ಕೂಡ ಮಳೆಗೆ ಈರುಳ್ಳಿ ಹಾಳಾಗಿದೆ.