ಮಕ್ಕಳು ಸೇವಿಸುವ ಏಕದಳ ಧಾನ್ಯ(ಸಿರಿಯಲ್) ಆಹಾರದಲ್ಲಿ ಅಧಿಕ ಸಕ್ಕರೆ, ಔಷಧಗಳಲ್ಲಿ ವಿಷ ವಸ್ತು, ಸಂಬಾರ ಪದಾರ್ಥದಲ್ಲಿ ಕೀಟನಾಶಕ, ಪೊಟ್ಟಣ ಕಟ್ಟಿದ ಆಹಾರದಲ್ಲಿ ಜಿರಲೆ…… ಇತ್ಯಾದಿ ಸರ್ವೇಸಾಮಾನ್ಯವಾಗಿದೆ. ಆಹಾರ ಸುರಕ್ಷತೆ ಯಲ್ಲಿ ದೇಶ ಏಕೆ ವಿಫಲವಾಗುತ್ತಿದೆ? ಮಕ್ಕಳು-ಯುವಜನರನ್ನು ರೋಗಿಗಳನ್ನಾಗಿಸುವ ಜಂಕ್ ಆಹಾರ ಬಳಕೆಯನ್ನು ನಿಯಂತ್ರಿಸಲು ಏಕೆ ಸಾಧ್ಯವಾಗುತ್ತಿಲ್ಲ? ಇದಕ್ಕೆ ದುರ್ಬಲ ನಿಯಂತ್ರಣ ವ್ಯವಸ್ಥೆ, ಅವ್ಯವಸ್ಥಿತ ಮೇಲುಸ್ತುವಾರಿ, ಸಂಬಂಧಿ ಸಿದ ಸಂಸ್ಥೆಗಳ ವೈಫಲ್ಯ, ಬಳಕೆದಾರರಲ್ಲಿ ಅರಿವಿನ ಕೊರತೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ದುರಾಸೆ ಸೇರಿದಂತೆ ಹಲವು ಕಾರಣಗಳಿವೆ. ಆಹಾರದೊಟ್ಟಿಗೆ ರಾಜಕೀಯ ತಳಕು ಹಾಕಿಕೊಂಡಿರುವುದು ಇನ್ನೊಂದು ಸಮಸ್ಯೆ. ಇದರಿಂದ 140 ಕೋಟಿ ಭಾರತೀಯರ ಆರೋಗ್ಯ-ಆರ್ಥಿಕತೆ ಅಪಾಯಕ್ಕೆ ಸಿಲುಕಿದೆ.
2015ರಲ್ಲಿ ಬಹುರಾಷ್ಟ್ರೀಯ ಕಂಪನಿ ನೆಸ್ಲೆ ಎಸ್‌ಎ ಉತ್ಪನ್ನವಾದ ಮ್ಯಾಗಿ ನೂಡಲ್ಸ್‌ನಲ್ಲಿ ಅನುಮತಿ ನೀಡಿದ್ದಕ್ಕಿಂತ ಅಧಿಕ ಪ್ರಮಾಣದಲ್ಲಿ ಸೀಸ ಹಾಗೂ ಮಾನೋಸೋಡಿಯಂ ಗ್ಲುಟಮೇಟ್(ಎಂಎಸ್‌ಜಿ) ಪತ್ತೆಯಾಗಿ, ಕೋಲಾಹಲ ಸೃಷ್ಟಿಯಾಗಿತ್ತು. 35,000 ಟನ್ ಸರಕನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯಬೇಕೆಂದು ನೆಸ್ಲೆ ಇಂಡಿಯಾಕ್ಕೆ ಸರ್ಕಾರ ಸೂಚಿಸಿತು. ಇದರಿಂದ ಆ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯ ಅರ್ಧದಷ್ಟು ಕಡಿಮೆಯಾಯಿತು. ಉತ್ತರ ಪ್ರದೇಶದಂಥ ಅರಾಜಕತೆ ತಾಂಡವವಾಡುತ್ತಿರುವ ರಾಜ್ಯದ ಅಂಗಡಿಯೊಂದರಿಂದ ಆಹಾರ ಸುರಕ್ಷತೆ ಅಧಿಕಾರಿಗಳು ಸಂಗ್ರಹಿಸಿದ ಕೆಲವು ಮ್ಯಾಗಿ ನೂಡಲ್ ಪೊಟ್ಟಣಗಳನ್ನು ಪರೀಕ್ಷೆಗೆ ಒಳಪಡಿಸಿ, ಉತ್ಪನ್ನವನ್ನು ನಿಷೇಧಿಸಲಾಯಿತು. ನವೆಂಬರ್‌ನಲ್ಲಿ ಮ್ಯಾಗಿ ಮತ್ತೆ ಅಂಗಡಿಗಳಲ್ಲಿ ಕಾಣಿಸಿಕೊಳ್ಳುವಷ್ಟರಲ್ಲಿ ಬಾಬಾ ರಾಮ್‌ದೇವ್ ಅವರ ಪತಂಜಲಿಯಿಂದ ಗೋಧಿ ನೂಡಲ್ ಮಾರುಕಟ್ಟೆಗೆ ಬಂದಿತ್ತು. ಪತಂಜಲಿ ಸಂಸ್ಥೆ ಆಹಾರ ನಿಯಂತ್ರಣ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೆ, ತನ್ನ ಉತ್ಪನ್ನ ಆರೋಗ್ಯಕರ ಎಂದು ಹೇಳಿಕೊಂಡಿತು. ರಾಮ್‌ದೇವ್ ಎನ್‌ಡಿಎ ಸರ್ಕಾರದ ನಿಕಟವರ್ತಿ; ಪ್ರಧಾನಿಗೆ ಬೇಕಾದವರು. ʻಪತಂಜಲಿಯ ಔಷಧಗಳು ಮಧುಮೇಹ, ಬೊಜ್ಜು, ಅಸ್ತಮಾಕ್ಕೆ ಶಾಶ್ವತ ಪರಿಹಾರ ನೀಡುತ್ತವೆ. ಸಂಸ್ಥೆಯ ಉತ್ಪನ್ನವಾದ ಕರೋನಿಲ್, ಕರೋನಾ-19ಕ್ಕೆ ರಾಮಬಾಣʼ ಎಂದು ರಾಮದೇವ್ 2020ರಲ್ಲಿ ಘೋಷಿಸಿದ್ದರು. ಭಾರತೀಯ ವೈದ್ಯರ ಸಂಘಟನೆ(ಐಎಂಎ) ಈ ಸಂಬಂಧ ದೂರು ಸಲ್ಲಿಸಿತು. ಸುಪ್ರೀಂ ಕೋರ್ಟ್ ತಪರಾಕಿ ನೀಡಿದ ಬಳಿಕ ರಾಮ್‌ದೇವ್ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದರು; ಈ ಸಂಬಂಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದರು. ತಮಾಷೆಯೆಂದರೆ, ಸೀಸದ ಅಂಶ ಪತ್ತೆಯಾಗಿದೆ ಎಂದು ನೆಸ್ಲೆ ಹಿಂಪಡೆದಿದ್ದ ಸರಕು ಸಿಂಗಾಪುರದ ಮಳಿಗೆಗಳಲ್ಲಿ ಇದ್ದಿತ್ತು; ಅಲ್ಲಿನ ಸರ್ಕಾರ ಅದು ಸುರಕ್ಷಿತ ಎಂದು ಹೇಳಿತ್ತು ಎಂದು ಪತ್ರಕರ್ತ, ಬ್ಲೂಮ್‌ಬರ್ಗ್‌ನ ಅಂಕಣಕಾರ ಆಂಡಿ ಮುಖರ್ಜಿ ಬರೆದಿದ್ದಾರೆ.
ತೀರ ಇತ್ತೀಚೆಗೆ ನೆಸ್ಲೆಯ ಮಕ್ಕಳ ಆಹಾರ ಮತ್ತು ಏಕದಳ ಧಾನ್ಯ ಆಧರಿತ ಪೇಯದಲ್ಲಿ ಅಧಿಕ ಸಕ್ಕರೆ ಅಂಶ ಇದೆ ಎಂದು ದೂರು ಕೇಳಿಬಂದಿತು. ಕಂಪನಿಯ ಕೆಲವು ಶೇರುದಾರರು ಈ ಸಂಬಂಧ ಬಹಳ ಹಿಂದೆಯೇ ಧ್ವನಿ ಎತ್ತಿದ್ದರು. ನೆಸ್ಲೆ ಉತ್ಪನ್ನಗಳಿಂದ ಆಗುತ್ತಿರುವ ವಿಪರಿಣಾಮ ಕುರಿತು ಅಭಿಪ್ರಾಯ ಸಂಗ್ರಹಿಸಬೇಕೆಂದು ಹೇಳಿದ್ದರು. ʻತಾನು ಬಡ ಮತ್ತು ಶ್ರೀಮಂತ ದೇಶಗಳ ನಡುವೆ ತಾರತಮ್ಯ ಮಾಡುತ್ತಿಲ್ಲ. ಮಕ್ಕಳ ಉತ್ಪನ್ನಗಳಲ್ಲಿನ ಸಕ್ಕರೆ ಅಂಶವನ್ನು ಕಾಲಕ್ರಮೇಣ ತೆಗೆದುಹಾಕಲಾಗುತ್ತದೆ,ʼ ಎಂದು ನೆಸ್ಲೆ ಹೇಳಿತು. ಆದರೆ, ಅದು ತನ್ನ ಮಾತು ಉಳಿಸಿಕೊಳ್ಳಲಿಲ್ಲ. ಸ್ವಿಟ್ಜರ್ಲೆಂಡಿನ ತನಿಖಾ ಸಂಸ್ಥೆಯೊಂದರ ಪ್ರಕಾರ, ಏಷ್ಯಾ ಮತ್ತು ಆಫ್ರಿಕದಲ್ಲಿ ಮಾರಾಟ ಮಾಡುತ್ತಿರುವ ಮಕ್ಕಳ ಆಹಾರದಲ್ಲಿ ಸಕ್ಕರೆ ಅಧಿಕ ಪ್ರಮಾಣದಲ್ಲಿ ಇದೆ. ಭಾರತದಲ್ಲಿ ಮಾರುತ್ತಿರುವ ಉತ್ಪನ್ನದಲ್ಲಿ ಗೀಳಿಗೆ ಕಾರಣವಾಗುವ ಸಕ್ಕರೆ ಇದೆ.
ಸಂಬಾರ ಪದಾರ್ಥದಲ್ಲಿ ವಿಷ: ಸಂಬಾರ ಪದಾರ್ಥಗಳ ಕತೆ ಇನ್ನೊಂದು ರೀತಿಯದು. ಕೆಲವು ವರ್ಷಗಳ ಹಿಂದೆ ದೇಶದಿಂದ ರಫ್ತಾದ ಮೆಣಸಿನಕಾಯಿ ಪುಡಿಯಲ್ಲಿ ಕ್ಯಾನ್ಸರ್‌ಕಾರಕ ಸುಡಾನ್ ರೆಡ್ ಬಣ್ಣ ಇತ್ತು ಎಂದು ಫ್ರಾನ್ಸ್ ನಿರ್ಬಂಧ ವಿಧಿಸಿತ್ತು. ಇತ್ತೀಚೆಗೆ ಹಾಂಕಾಂಗ್ ಹಾಗೂ ಸಿಂಗಾಪುರದ ಆಹಾರ ನಿಯಂತ್ರಕರು ಭಾರತದಿಂದ ರಫ್ತಾದ ಸಂಬಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಎಥಿಲೀನ್ ಆಕ್ಸೈಡ್(ಇಟಿಒ) ಅಪಾಯಕರ ಮಟ್ಟದಲ್ಲಿದೆ ಎಂದು ನಿಷೇಧಿ ಸಿದರು. ಎಂಡಿಎಚ್ ಕಂಪನಿಯ ಮೂರು ಮತ್ತು ಎವರೆಸ್ಟ್‌ನ ಒಂದು ಉತ್ಪನ್ನವನ್ನು ಹಿಂಪಡೆಯಬೇಕು ಎಂದು ಸಿಂಗಾಪುರ ಆಹಾರ ಏಜೆನ್ಸಿ ಆದೇಶಿಸಿತು. ಬಳಿಕ ಅಮೆರಿಕ ಮತ್ತು ಆಸ್ಟ್ರೇಲಿಯ ಸರ್ಕಾರಗಳು ಭಾರತದಲ್ಲಿ ಉತ್ಪಾದಿಸಿದ ಸ್ವಾದ ಹೆಚ್ಚಿಸುವ ಉತ್ಪನ್ನಗಳ ಮಾಹಿತಿ ಸಂಗ್ರಹಿಸಲು ಮುಂದಾದವು. ʻಈ ಸಂಬಾರ ಪದಾರ್ಥಗಳನ್ನು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಪರಿಶೀಲಿಸುತ್ತಿದೆʼ ಎಂದು ರಾಯ್ಟರ್ಸ್ ವರದಿ ಮಾಡಿತು. ತಮ್ಮ ಉತ್ಪನ್ನಗಳು ಸುರಕ್ಷಿತ ಎಂದು ಎಂಡಿಎಚ್ ಹಾಗೂ ಎವರೆಸ್ಟ್ ಹೇಳಿದವು. ಸಂಬಾರ ಪದಾರ್ಥಗಳಲ್ಲಿ ಕೀಟನಾಶಕದ ಶೇಷಾಂಶದ ಗರಿಷ್ಠ ಮಿತಿಯನ್ನು ಹತ್ತು ಪಟ್ಟು ಹೆಚ್ಚಿಸಿರುವುದು ಸಮಸ್ಯೆಗೆ ಕಾರಣ ಎಂಬ ಮಾಧ್ಯಮ ವರದಿಗಳು ʼಸುಳ್ಳು ಹಾಗೂ ದುರುದ್ದೇಶಪೂರಿತʼ ಎಂದು ಭಾರತೀಯ ಆಹಾರ ಸುರಕ್ಷೆ ಹಾಗೂ ಮಾನಕ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಪ್ರತಿಕ್ರಿಯಿಸಿತು.
ಭಾರತ ಸಂಬಾರ ಪದಾರ್ಥಗಳ ಅತ್ಯಂತ ದೊಡ್ಡ ಉತ್ಪಾದಕ. ವಾರ್ಷಿಕ ವಹಿವಾಟು ಅಂದಾಜು 32,000 ಕೋಟಿ ರೂ. ವೈದ್ಯಕೀಯ ಉಪಕರಣಗಳ ಶುದ್ಧೀಕರಣಕ್ಕೆ ಬಳಸುವ ಎಥಿಲೀನ್ ಆಕ್ಸೈಡ್, ಒಂದು ಕೀಟನಾಶಕ ಹಾಗೂ ಸ್ಥಿರೀಕರಿಸುವ ಏಜೆಂಟ್. ಅದು ಲ್ಯುಕೇಮಿಯ, ಲಿಂಪೋಮಾ ಸೇರಿದಂತೆ ಹಲವು ಕ್ಯಾನ್ಸರಿಗೆ ಕಾರಣವಾಗುತ್ತದೆ. ಉಷ್ಣ ವಲಯದ ವಾತಾವರಣದಲ್ಲಿ ಸಂಬಾರ ಪದಾರ್ಥ, ಗಿಡಮೂಲಿಕೆ ಮತ್ತು ಎಳ್ಳು ಬಹುಬೇಗ ಹಾಳಾಗುತ್ತವೆ. ಇದನ್ನು ತಡೆಯಲು ಶೀತಲೀಕರಿಸಿ, ಬ್ಯಾಕ್ಟೀರಿಯಾ, ವೈರಸ್ (ಸಾಲ್ಮೊನೆಲ್ಲಾ ಮತ್ತು ಇ-ಕೋಲೈ) ಹಾಗೂ ಶಿಲೀಂಧ್ರಗಳನ್ನು ನಾಶಪಡಿಸಲು ಎಥಿಲೀನ್ ಆಕ್ಸೈಡ್ ಬಳಸಲಾಗುತ್ತದೆ. ಇಟಿಒ ದೇಶದಲ್ಲಿ ಕೀಟನಾಶಕ ಎಂದು ನೋಂದಣಿಯಾಗಿಲ್ಲ; ಬದಲಾಗಿ, ಧೂಪಕ(ಫ್ಯೂಮಿಗಂಟ್)ದಂತೆ ಬಳಕೆಯಾಗುತ್ತದೆ. ಅದು ಆಹಾರದಲ್ಲಿ ಸಕ್ರಿಯಗೊಂಡು, 2 ರಸಾಯನಿಕಗಳನ್ನು ಬಿಡುಗಡೆಗೊಳಿಸುತ್ತದೆ- ಎಥಿಲೀನ್ ಗ್ಲೈಕಾಲ್ ಮತ್ತು 2 ಕ್ಲೋರೋಎಥೆನಾಲ್. ಇದರಲ್ಲಿ ಎಥಿಲೀನ್ ಗ್ಲೈಕಾಲ್ ಅತ್ಯಂತ ಅಪಾಯಕಾರಿ. ಕೆಮ್ಮಿನ ಔಷಧದಲ್ಲಿ ಬೆರಕೆಯಾಗಿ, ಆಫ್ರಿಕ ಮತ್ತಿತರ ದೇಶಗಳಲ್ಲಿ ಹಲವು ಮಕ್ಕಳ ಸಾವಿಗೆ ಕಾರಣವಾಗಿತ್ತು.
ಸಂಬಾರ ಮಂಡಳಿ ಈಗ ಹಾಂಗ್‌ಕಾಂಗ್ ಹಾಗೂ ಸಿಂಗಾಪುರಕ್ಕೆ ರವಾನೆಯಾಗುವ ಸಿದ್ಧಪಡಿಸಿದ ಆಹಾರ/ಸಂಬಾರ ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ ಉಪಸ್ಥಿತಿಯ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ಈ ಸಂಬಂಧ ಸಮಗ್ರ ಮಾರ್ಗಸೂಚಿಯನ್ನು ರೂಪಿಸಿದೆ. ಯುರೋಪಿಯನ್ ಯೂನಿಯನ್ನಿನ ಸದಸ್ಯ ರಾಷ್ಟ್ರಗಳಲ್ಲಿ 2020ರ ಬಳಿಕ 527 ಇಟಿಒ ವಿಷ ಪ್ರಕರಣ ಪತ್ತೆಯಾಗಿದೆ. ಕಳೆದ 24 ವರ್ಷಗಳಲ್ಲಿ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಭಾರತದ 40,000ಕ್ಕೂ ಅಧಿಕ ಆಹಾರ-ಔಷಧ ಉತ್ಪನ್ನಗಳನ್ನು ತಿರಸ್ಕರಿಸಿದೆ. ಆದರೆ, ತಿರಸ್ಕರಿಸಲು ಕಾರಣ ಬಹಿರಂಗಗೊಳಿಸಿಲ್ಲ. ಈ ಮೊದಲು ಸಾಲ್ಮೊನೆಲ್ಲಾ, ಲೇಬಲ್ ತಪ್ಪಾಗಿ ಅಂಟಿಸುವಿಕೆ ಹಾಗೂ ದುರ್ವಾಸನೆ ಬಂದಲ್ಲಿ ಮಾತ್ರ ಪರಿಶೀಲನೆ ನಡೆಸುತ್ತಿತ್ತು. ಈಗ ಕೀಟನಾಶಕಗಳ ಶೇಷಾಂಶವು ಉತ್ಪನ್ನಗಳನ್ನು ತಿರಸ್ಕರಿಸಲು ಪ್ರಮುಖ ಕಾರಣವಾಗಿದೆ. ಎಫ್‌ಎಸ್‌ಎಸ್‌ಎಐ ರಫ್ತುದಾರರಿಗೆ ಈ ಸಂಬಂಧ ಹಲವು ಬಾರಿ ಎಚ್ಚರಿಸಿದ್ದರೂ ಪ್ರಯೋಜನವಾಗಿಲ್ಲ.
ಪ್ರಾಧಿಕಾರದ ಸಬಲೀಕರಣ ಅಗತ್ಯ: ದೇಶದಲ್ಲಿ ಬಳಕೆಯಾಗುವ ಮತ್ತು ರಫ್ತಾಗುವ ಉತ್ಪನ್ನಗಳ ಗುಣಮಟ್ಟವನ್ನು ಹಲವು ಸಂಸ್ಥೆಗಳು ಪರೀಕ್ಷಿಸುತ್ತವೆ; ಆಹಾರ ಸುರಕ್ಷಿತವೇ ಮತ್ತು ಆರೋಗ್ಯಕರವೇ ಎಂದು ಪರಿಶೀಲಿಸಲು ಎಫ್‌ಎಸ್‌ಎಸ್‌ಎಐ ರೂಪಿಸಿದ ಮಾನದಂಡಗಳನ್ನು ಬಳಸಲಾಗುತ್ತದೆ; ರಫ್ತು ಉತ್ಪನ್ನಗಳು ಜಾಗತಿಕ ಗುಣಮಟ್ಟ ಮಾನದಂಡ(ಕೋಡೆಕ್ಸ್ ಅಲಿಮೆಂಟೇರಿಯಸ್)ಗಳಿಗೆ ಅನುಗುಣವಾಗಿದೆಯೇ ಎಂದು ರಫ್ತು ಪರಿಶೀಲನೆ ಮಂಡಳಿ(ಎಕ್ಸ್‌ಪೋರ್ಟ್ ಇನ್‌ಸ್ಪೆಕ್ಷನ್ ಕೌನ್ಸಿಲ್,ಇಐಸಿ) ಪರೀಕ್ಷಿಸುತ್ತದೆ. ಮಂಡಳಿಯು ಕೊಚ್ಚಿ, ಚೆನ್ನೈ, ಮುಂಬಯಿ, ಕೋಲ್ಕತ್ತಾ ಹಾಗೂ ದಿಲ್ಲಿಯಲ್ಲಿ ಪ್ರಯೋಗಾಲಯಗಳನ್ನು ಹೊಂದಿದೆ. ಸಂಬಾರ ಮಂಡಳಿ ತನ್ನದೇ ಪ್ರಯೋಗಾಲಯಗಳನ್ನು ಹೊಂದಿದೆ. ಎಫ್‌ಎಸ್‌ಎಸ್‌ಎಐ ಪ್ರಕಾರ, 2020-21 ಹಾಗೂ 2022-23ರಲ್ಲಿ ಪರೀಕ್ಷಿಸಿದ ಅರ್ಧದಷ್ಟು ಸ್ಯಾಂಪಲ್‌ಗಳ ಗುಣಮಟ್ಟ ಉತ್ತಮವಾಗಿರಲಿಲ್ಲ. 2018ರ ಬಳಿಕ ಹಾಲು, ಹಾಲಿನ ಉತ್ಪನ್ನಗಳು, ಖಾದ್ಯ ತೈಲ, ಟೀ, ಬೇಳೆಕಾಳು, ಅಕ್ಕಿ ಹಾಗೂ ಸಂಬಾರ ಪದಾರ್ಥಗಳನ್ನು ಪರೀಕ್ಷಿಸಲಾಗುತ್ತಿದೆ. 2024ರಲ್ಲಿ 4.5 ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು, ಫಲಿತಾಂಶವನ್ನು ಸಾರ್ವಜನಿಕಗೊಳಿಸಿಲ್ಲ. ಪ್ರಾಧಿಕಾರವು ಆಹಾರ ಉತ್ಪನ್ನಗಳಿಗೆ 700ಕ್ಕೂ ಅಧಿಕ ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ. ಆಹಾರಕ್ಕೆ ಸೇರ್ಪಡೆ ಮಾಡುವ ಸ್ವಾದ ವಸ್ತುಗಳು ಮತ್ತು ಸಂಸ್ಕರಿಸಲು ಬಳಸುವ 350 ವಸ್ತುಗಳನ್ನು ಸೇರ್ಪಡೆಗೊಳಿಸಿದೆ. ದೇಶಿ ಮಾನದಂಡಗಳನ್ನು ಕೋಡೆಕ್ಸ್‌ಗೆ ಅನುಗುಣವಾಗಿ ಸಮರಸಗೊಳಿಸಲಾಗಿದೆ. ಆದರೆ, 2023ರಲ್ಲಿ ತಜ್ಞರ ಸಮಿತಿ ಹಾಗೂ 21 ವೈಜ್ಞಾನಿಕ ಸಮಿತಿಯನ್ನು ಪುನಾರಚಿಸಿ, ಸದಸ್ಯ ಬಲವನ್ನು 11 ರಿಂದ 9ಕ್ಕೆ ಇಳಿಸಿದೆ. ಇದರಿಂದ ವೈವಿಧ್ಯತೆ-ಪರಿಣತಿ ಕಡಿಮೆಯಾಗಿದೆ.
ಕರ್ನಾಟಕದ ಆಹಾರ ಸುರಕ್ಷಾ ಸೂಚ್ಯಂಕ ಶೇ.37(ಗುಜರಾತ್ ಗರಿಷ್ಠ ಶೇ.48.5. ತ್ರಿಪುರ ಕನಿಷ್ಠ ಶೇ.24.5) ಇದೆ. ಶೇ. 50ರಷ್ಟು ವ್ಯಾಪಾರಿಗಳು ರಾಜ್ಯಗಳ ವ್ಯಾಪ್ತಿಯಲ್ಲಿ ಬರುವುದರಿಂದ, ಕಾಯಿದೆಯ ಅನುಷ್ಠಾನ ರಾಜ್ಯ ಸರ್ಕಾರಗಳ ಜವಾ ಬ್ದಾರಿ. ಸಾಮಾನ್ಯವಾಗಿ ಉತ್ಪನ್ನವೊಂದನ್ನು ಪರೀಕ್ಷಿಸಲು 4 ಸ್ಯಾಂಪಲ್ ತೆಗೆದುಕೊಳ್ಳಲಾಗುತ್ತದೆ. ಮೊದಲನೆಯದನ್ನು ರಾಜ್ಯ ಮಟ್ಟದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ. ಫಲಿತಾಂಶ ತೃಪ್ತಿಕರವಾಗಿಲ್ಲ ಎಂದು ಉತ್ಪಾದಕನಿಗೆ ಅನ್ನಿಸಿದರೆ, ಪ್ರಾಧಿಕಾರ ದೃಢೀಕರಿಸಿದ ಪ್ರಯೋಗಾಲಯದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಲಾಗುತ್ತದೆ. ಆನಂತರವೂ ವಿವಾದ ಬಗೆಹರಿಯದಿದ್ದರೆ, ಪರಾಮರ್ಶನ ಪ್ರಯೋಗಾಲಯ(18 ಇವೆ)ದಲ್ಲಿ ಪರೀಕ್ಷಿಸಲಾಗುತ್ತದೆ ಮತ್ತು ಈ ಫಲಿತಾಂಶವನ್ನು ಎರಡೂ ಪಕ್ಷಗಳು ಒಪ್ಪಿಕೊಳ್ಳಬೇಕು. 4ನೇ ಸ್ಯಾಂಪಲ್ ಕಾಯ್ದಿರಿಸಲಾಗುತ್ತದೆ. ಆದರೆ, ರಾಜ್ಯಗಳಲ್ಲಿ ಮಾನವ-ಆರ್ಥಿಕ ಸಂಪನ್ಮೂಲದ ಕೊರತೆಯಿಂದಾಗಿ, ಸಮರ್ಪಕವಾಗಿ ಪರೀಕ್ಷೆ ನಡೆಯುತ್ತಿಲ್ಲ. ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ 2022ರ ವರದಿ ಪ್ರಕಾರ, ರಾಜ್ಯಗಳಲ್ಲಿ ಆಹಾರ ಸುರಕ್ಷತೆ ಅಧಿಕಾರಿಗಳ ತೀವ್ರ ಕೊರತೆಯಿದ್ದು, ಶೇ 50ರಷ್ಟು ಹುದ್ದೆಗಳು ಖಾಲಿ ಇವೆ. ಕೆಲವು ರಾಜ್ಯಗಳಲ್ಲಿ ಪೂರ್ಣಾವಧಿ ಆಹಾರ ಆಯುಕ್ತರೇ ಇಲ್ಲ! ಇದರಿಂದ 2017-2020ರ ಅವಧಿಯಲ್ಲಿ ಕರ್ನಾಟಕದಲ್ಲಿ 5,000 ಹಾಗೂ 2022-23ರಲ್ಲಿ 5,200 ಸ್ಯಾಂಪಲ್‌ಗಳನ್ನು ಮಾತ್ರ ಪರೀಕ್ಷಿಸಲಾಗಿದೆ(ಕೇಂದ್ರ ಆರೋಗ್ಯ ಮಂತ್ರಾಲಯದ ಮಾಹಿತಿ).
ಅನುಷ್ಠಾನದಲ್ಲಿ ಕೊರತೆ: ಯುರೋಪಿಯನ್ ಯೂನಿಯನ್ನಿನ ಆಹಾರ ಸುರಕ್ಷಾ ಪ್ರಾಧಿಕಾರದ ಅಧಿಕಾರಿಗಳು ಸೆಪ್ಟೆಂಬರ್ 2020-ಏಪ್ರಿಲ್ 2024ರ ಅವಧಿಯಲ್ಲಿ 527 ಉತ್ಪನ್ನಗಳಲ್ಲಿ ಎಥಿಲೀನ್ ಆಕ್ಸೈಡ್‌ನ್ನು ಪತ್ತೆ ಹಚ್ಚಿದ್ದಾರೆ. ಇದರಲ್ಲಿ ಎಳ್ಳು(313), ಸಂಬಾರ ಪದಾ ರ್ಥ-ಗಿಡಮೂಲಿಕೆ(60), ಡಯಟ್ ಆಹಾರಗಳು(ಶೇ.48), ಇತರ ಆಹಾರ ಉತ್ಪನ್ನಗಳು(34) ಹಾಗೂ ಎರಡು ಪಶು ಆಹಾರ ಇದೆ. ಈ ರಾಷ್ಟ್ರ ಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸುವ ಆನ್‌ಲೈನ್ ವೇದಿಕೆಯಾದ ರಾಪಿಡ್ ಅಲರ್ಟ್ ಸಿಸ್ಟಂ ಫಾರ್ ಫುಡ್ ಆಂಡ್ ಫೀಡ್(ಆರ್‌ಎಎಸ್‌ಎಫ್‌ಎಫ್) ಪ್ರಕಾರ, 527ರಲ್ಲಿ 332 ಉತ್ಪನ್ನಗಳು ಭಾರತ ಮೂಲದವು. ಇಟಿಒ ಬಳಸಿ ಕಡಿಮೆ ವೆಚ್ಚದಲ್ಲಿ ಆಹಾರ ಉತ್ಪನ್ನಗಳು ಹಾಳಾಗದಂತೆ ಕಾಯ್ದಿಡಬಹುದು. ಯುರೋಪಿಯನ್ ಯೂನಿಯನ್ ಕೆಜಿಯೊಂದಕ್ಕೆ 0.1 ಮಿಲಿಗ್ರಾಂ ಬಳಕೆಗೆ ಅನುಮತಿ ನೀಡಿದೆ. ಸೆಪ್ಟೆಂಬರ್ 2022ರಲ್ಲಿ ಸಂಬಾರ ಮಂಡಳಿಯು ರಫ್ತುದಾರರು ಇಟಿಒ ಪರೀಕ್ಷೆ ನಡೆಸಲೇಬೇಕು ಎಂದು ಹೇಳಿತ್ತು. ಆದರೆ, 2022- 23ರಲ್ಲಿ 121 ಉತ್ಪನ್ನಗಳಲ್ಲಿ ಇಟಿಒ ಪತ್ತೆಯಾಗಿದ್ದು, ದೇಶಿ ಉತ್ಪಾದಕರು ಬಳಕೆಯನ್ನು ನಿಯಂತ್ರಿಸಲು ಗಂಭೀರ ಪ್ರಯತ್ನ ನಡೆಸಿಲ್ಲ ಎಂದು ಸ್ಪಷ್ಟವಾಗಲಿದೆ. ಸರ್ಕಾರ ಕೂಡ ಇಟಿಒ ನಿಷೇಧಕ್ಕೆ ಆಸಕ್ತಿ ತೋರಿಸುತ್ತಿಲ್ಲ.
ಕಲಬೆರಕೆ ಎನ್ನುವುದು ದೇಶದಲ್ಲಿ ಒಂದು ಸಂಸ್ಕೃತಿ ಆಗಿಬಿಟ್ಟಿದೆ. ದೇಶ ಜನರಿಕ್ ಔಷಧಗಳ ಅತಿ ದೊಡ್ಡ ಪೂರೈಕೆದಾರ. ಈ ಔಷಧಗಳ ಗುಣಮಟ್ಟದ ಬಗ್ಗೆ ದೂರುಗಳಿವೆ. ಗಾಂಬಿಯ ಹಾಗೂ ಉಜ್ಬೆಕಿಸ್ತಾನಕ್ಕೆ ರವಾನೆಯಾದ ಕೆಮ್ಮಿನ ಔಷಧಗಳಲ್ಲಿ ಮಿಶ್ರಗೊಂಡಿದ್ದ ಡೈಎಥಿಲೀನ್ ಗ್ಲೈಕಾಲ್(ಡಿಇಜಿ)ನಿಂದ ಹಲವು ಮಕ್ಕಳು ಮೃತಪಟ್ಟವು. ದೇಶದಲ್ಲೂ ಡಿಇಜಿ ಕಲಬೆರಕೆಯಿಂದ ಹಲವು ಸಾವುನೋವು ಸಂಭವಿಸಿದೆ. ಅಸುರಕ್ಷಿತ ಔಷಧಗಳ ವಿರುದ್ಧ ಹೋರಾಡುತ್ತಿರುವ ವಿಷಲ್ ಬ್ಲೋವರ್(ಸೀಟಿ ಊದುವವ) ಮತ್ತು ದೇಶದ ಅತ್ಯಂತ ದೊಡ್ಡ ಜನರಿಕ್ ಔಷಧ ತಯಾರಿಕೆ ಸಂಸ್ಥೆಯಾದ ರಾನ್‌ಬಕ್ಷಿ ಲ್ಯಾಬೊರೇಟರೀಸ್‌ನ ಮಾಜಿ ನಿರ್ದೇಶಕ ಹಾಗೂ ಸಂಶೋಧನೆ ವಿಭಾಗದ ಜಾಗತಿಕ ಮುಖ್ಯಸ್ಥ ದಿನೇಶ್ ಠಾಕೂರ್, ಇಂಥ ಟೀಕೆಗಳನ್ನು ಕೂಡ ರಾಷ್ಟ್ರೀಯವಾದಿ ಮಸೂರದಿಂದ ನೋಡಲಾಗುತ್ತದೆ. ಸರ್ಕಾರವನ್ನು ಟೀಕಿಸುವುದು ದೇಶವನ್ನು ಟೀಕಿಸಿದಂತೆ; ಇಂಥವರು ದೇಶದ್ರೋಹಿಗಳು ಎನ್ನುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ ಎಂದು ಹೇಳುತ್ತಾರೆ.
ಇತ್ತೀಚೆಗೆ ದಿಲ್ಲಿಯ 2 ಕಾರ್ಖಾನೆಗಳ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ನಕಲು ಸಂಬಾರ ಪದಾರ್ಥಗಳು ಸಿಕ್ಕವು: ಅವನ್ನು ಕೊಳೆತ ಎಲೆ ಮತ್ತು ಅಕ್ಕಿ, ಮುಗ್ಗುಲು ಹಿಡಿದ ತೃಣ ಧಾನ್ಯಗಳು, ಮರದ ಹೊಟ್ಟಿನಿಂದ ತಯಾರಿಸಲಾಗಿತ್ತು. ಕಲಬೆರಕೆ ಪ್ರವೃತ್ತಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರಿಗೆ ಧಕ್ಕೆಯಾಗಿದೆ. ಆದರೆ, ಸಂಬಂಧಿಸಿದ ಪ್ರಾಧಿಕಾರ-ಸಂಸ್ಥೆಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ʻಎಲ್ಲವೂ ಚೆನ್ನಾಗಿದೆʼ ಎಂದು ಕಥೆ ಕಟ್ಟುತ್ತಿವೆ. ಉದ್ಯಮ ಸಂಕಷ್ಟ ಎದುರಾದಾಗ ಪ್ರತಿಕ್ರಿಯಿಸುವ ಬದಲು ವೈಜ್ಞಾನಿಕ ಪರೀಕ್ಷಾ ಸೌಲಭ್ಯಗಳ ಸ್ಥಾಪನೆ, ಸಬಲೀಕರಣ ಮಾಡಬೇಕಿದೆ. ಉತ್ಪಾದಕರು ಸ್ವದೇಶಿ-ವಿದೇಶಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಖಾತ್ರಿಪಡಿಸಬೇಕು. ಇದಕ್ಕಾಗಿ ಈ ಸಂಸ್ಥೆಗಳು ನಿಷ್ಪಕ್ಷಪಾತ ಮತ್ತು ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. 2022-23ರಲ್ಲಿ ದೇಶದಿಂದ ರಫ್ತಾದ ಕೃಷಿ ಮತ್ತು ಸಂಸ್ಕರಿಸಿದ ಆಹಾರೋತ್ಪನ್ನಗಳ ಮೌಲ್ಯ 53.1 ಶತಕೋಟಿ ಡಾಲರ್. ಗುಣಮಟ್ಟ ಕಾಯ್ದುಕೊಳ್ಳ ದಿದ್ದರೆ, ರಫ್ತು ತನ್ನಿಂತಾನೇ ಕಡಿಮೆಯಾಗುತ್ತದೆ. ಆಹಾರೋದ್ಯಮ ಮನಸ್ಸು ಮಾಡಿದರೆ, ಇಟಿಒಗೆ ಪರ್ಯಾಯಗಳ ಶೋಧ ಕಷ್ಟವೇನಲ್ಲ. ಗಾಮಾ ಕಿರಣ ಬಳಸಬಹುದೇ ಎಂದು ಪರಿಶೀಲಿಸಬಹುದು.
ರಫ್ತಾಗುವ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದವಾಗಿರಬೇಕು; ಆದರೆ, ಅವೇ ವಿಷಯುಕ್ತವಾಗಿವೆ ಎಂದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ, ನಾವೆಲ್ಲರೂ ತಿನ್ನುವ ಆಹಾರ ಪದಾರ್ಥಗಳ ಸ್ಥಿತಿಯೇನು? ಉಣ್ಣುವ ಅನ್ನ ವಿಷವಾದರೆ, ಕಾಯುವವರು ಯಾರು?
-ಮಾಧವ ಐತಾಳ್