ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ)ಯನ್ನು 70 ವರ್ಷ ದಾಟಿದ ಎಲ್ಲರಿಗೂ ವಿಸ್ತರಿಸಲಾಗುತ್ತದೆ ಎಂದು ಒಕ್ಕೂಟ ಸರ್ಕಾರ ಇತ್ತೀಚೆಗೆ ಹೇಳಿದೆ. ವಾರ್ಷಿಕ 5 ಲಕ್ಷ ರೂ. ನಗದುರಹಿತ ಆರೋಗ್ಯ ಸೇವೆ ಕಲ್ಪಿಸುವ ಈ ಯೋಜನೆಯು ಖಾಸಗಿ ವಿಮೆ ಕಂಪನಿಗಳ ಆರೋಗ್ಯ ಪಾಲಿಸಿದಾರರು ಅಥವಾ ಉದ್ಯೋಗಿಗಳ ರಾಜ್ಯ ವಿಮಾ ಸಂಘಟನೆ(ಇಎಸ್‌ಐಸಿ)ಯಡಿ ಪ್ರಯೋಜನ ಪಡೆಯುತ್ತಿರುವವರಿಗೂ ಅನ್ವಯವಾಗಲಿದೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(ಸಿಜಿಎಚ್‌ಎಸ್)ಯಡಿ ಇರುವವರು ಅದರಲ್ಲೇ ಮುಂದುವರಿಯಬಹುದು ಇಲ್ಲವೇ ಪಿಎಂಎಜೆವೈ ಆಯ್ಕೆ ಮಾಡಿಕೊಳ್ಳಬಹುದು.
ದೇಶದ ಸಮಸ್ತರಿಗೂ 2030ರೊಳಗೆ ಸಾರ್ವತ್ರಿಕ ಆರೋಗ್ಯ ಸುರಕ್ಷೆ(ಯುಎಚ್‌ಸಿ) ಎಂಬ ಸರ್ಕಾರದ ನೀತಿಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ(ಎಸ್‌ಡಿಜಿ)ಗಳಿಗೆ ಅನುಗುಣವಾಗಿದೆ. ಜನರ ಮೇಲೆ ಯಾವುದೇ ಆರ್ಥಿಕ ಹೊರೆ ಹೊರಿಸದೆ, ಎಲ್ಲರಿಗೂ ಆರೋಗ್ಯ ಸೇವೆಗಳು ಲಭ್ಯವಾಗಬೇಕು ಎನ್ನುವುದು ಆಶಯಕ್ಕೆ ಪೂರಕವಾಗಿ ಪಿಎಂಎಜೆವೈ ಹಾಗೂ ರಾಜ್ಯ ಸರ್ಕಾರಗಳ ಹಲವು ಪ್ರಾಯೋಜಿತ ಆರೋಗ್ಯ ವಿಮೆ ಯೋಜನೆಗಳು ಇವೆ. ನಮ್ಮದು ಯುವಜನರು ಅಧಿಕ ಸಂಖ್ಯೆಯಲ್ಲಿರುವ ದೇಶ. ಇಲ್ಲಿ ಹಿರಿಯ ನಾಗರಿಕ(60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರು)ರ ಸಂಖ್ಯೆ 2020ರಲ್ಲಿ 149 ದಶಲಕ್ಷ ಇದ್ದು, 2050ಕ್ಕೆ ಇದು 347 ದಶಲಕ್ಷಕ್ಕೆ ಹೆಚ್ಚುವ ಸಾಧ್ಯತೆ ಇದೆ. ಜನಸಂಖ್ಯೆ ಮತ್ತು ಜೀವಿತಾವಧಿ ಹೆಚ್ಚಿದಂತೆ, ಹಿರಿಯ ನಾಗರಿಕರ ಸಂಖ್ಯೆಯೂ ಹೆಚ್ಚಳಗೊಳ್ಳುತ್ತದೆ. ಕೂಡು ಕುಟುಂಬಗಳು ಕಡಿಮೆಯಾಗಿರುವುದರಿಂದ, ಹಿರಿಯ ನಾಗರಿಕರಲ್ಲಿ ಹೆಚ್ಚಿನವರು ಒಂಟಿಯಾಗಿರುವ ಅನಿವಾರ್ಯ ಸೃಷ್ಟಿಯಾಗಿದೆ. ನಿವೃತ್ತರು ಅಥವಾ ದುಡಿಯುವ ವಯಸ್ಸು ದಾಟಿರುವವರು ಇಲ್ಲವೇ ಪಿಂಚಣಿ ಸೌಲಭ್ಯ ಇಲ್ಲದವರು ಆರ್ಥಿಕವಾಗಿ ಅಸಹಾಯಕರಾಗಿರುತ್ತಾರೆ. ಪಿಎಂಜೆಎವೈ ವಿಸ್ತರಣೆಯಿಂದ 70 ವರ್ಷ ದಾಟಿದ 60 ದಶಲಕ್ಷ ಹಿರಿಯರಿಗೆ ಪ್ರಯೋಜನ ಆಗಲಿದೆ ಎಂದು ಅಂದಾಜಿಸ ಲಾಗಿದೆ.
ಐಆರ್‌ಡಿಎಐ ಹೊಸ ನಿಯಮಗಳು: ಇದಕ್ಕೆ ಪೂರಕವಾಗಿ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎಐ) 2024ರ ನಿಯಮಗಳು ಏಪ್ರಿಲ್ 1,2024ರಿಂದ ಜಾರಿಗೊಂಡಿವೆ. ʻಎಲ್ಲರಿಗೂ ಆರೋಗ್ಯʼ ಎಂಬ ಪ್ರಾಧಿಕಾರದ ಗುರಿಗೆ ಅನುಗುಣವಾಗಿ ಈ ಅಧಿಸೂಚನೆ ಹೊರಬಂದಿದೆ. ಜೀವ, ಆರೋಗ್ಯ ಮತ್ತು ಸಾಮಾನ್ಯ ವಿಮೆಗೆ ಸಂಬಂಧಿಸಿದಂತೆ ಹಲವು ಸುಧಾರಣೆಗಳನ್ನು ಪರಿಚಯಿಸಿರುವ ಕಾಯಿದೆಯು ಆರೋಗ್ಯ ವಿಮೆಗೆ ವಯಸ್ಸಿನ ಮಿತಿಯನ್ನು ಹೆಚ್ಚಿಸಿತು. 2016ರ ಆರೋಗ್ಯ ವಿಮೆ ನಿಯಮಗಳು 65 ವರ್ಷದ ಮಿತಿ ಹೇರಿದ್ದವು. ಆದರೆ, ಈಗ ಗರಿಷ್ಠ ಪ್ರವೇಶ ವರ್ಷ 99. ಹೊಮ್ಮುತ್ತಿರುವ ಮಾರುಕಟ್ಟೆಯ ಅಗತ್ಯಗಳಿಗೆ ಶೀಘ್ರವಾಗಿ ಸ್ಪಂದಿಸುವುದು, ವಹಿವಾಟು ಸುರಳೀತಗೊಳಿಸುವುದು ಹಾಗೂ ಪಾಲಿಸಿದಾರರ ಹಿತಾಸಕ್ತಿಯನ್ನು ರಕ್ಷಿಸುತ್ತಲೇ, ವಿಮೆಯ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ವಿಮೆ ಕಂಪನಿಗಳ ಉತ್ಪನ್ನಗಳು ಕೈಗೆಟಕುವ ದರದಲ್ಲಿ ಲಭಿಸುವಂತೆ ಮಾಡುವುದು ಈ ನಿಯಮಗಳ ಉದ್ದೇಶ.
ಆರೋಗ್ಯ ವಿಮೆಯ ʻನಿರ್ದಿಷ್ಟ ಕಾಯುವಿಕೆ ಅವಧಿ(ಸ್ಪೆಸಿಫಿಕ್ ವೇಟಿಂಗ್ ಪೀರಿಯಡ್)ʼಯನ್ನು 4 ರಿಂದ 3 ವರ್ಷಕ್ಕೆ ಇಳಿಸಲಾಗಿದೆ. ಈ ಸೌಲಭ್ಯ ಪಡೆಯಲು ವಿಮೆ ಕಂತು ತಪ್ಪಿಸದೆ ಕಟ್ಟಬೇಕು. ಈ ಮೊದಲೇ ಇರುವ ಕಾಯಿಲೆ(ಪಿಇಡಿ, ಪ್ರಿ ಎಕ್ಸಿಸ್ಟಿಂಗ್ ಡಿಸೀಸ್)ಯನ್ನು ವಿವರಿಸಲು 3 ವರ್ಷ ಕಾಲ ನಿಗದಿಗೊಳಿಸಲಾಗಿದೆ. ಆಯುಶ್ (ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ, ಸಿದ್ಧ ಮತ್ತು ಹೋಮಿಯೋಪಥಿ) ಚಿಕಿತ್ಸೆಯನ್ನು ಸೇರ್ಪಡೆಗೊಳಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಕಾಯಿಲೆಯೊಂದಕ್ಕೆ ಚಿಕಿತ್ಸೆ ಪಡೆದಿರುವವರಿಗೆ ನವೀಕರಣವನ್ನು ನಿರಾಕರಿಸಬಾರದು ಹಾಗೂ ಹಿರಿಯ ನಾಗರಿಕರ ವಿಮೆ ಸಂಬಂಧಿತ ದೂರುಗಳ ನಿರ್ವಹಣೆಗೆ ಪ್ರತ್ಯೇಕ ಚಾನೆಲ್ ಖಾತ್ರಿಗೊಳಿಸಬೇಕು ಎಂದು ಪ್ರಾಧಿಕಾರ ಸಲಹೆ ನೀಡಿದೆ.
ಪ್ರಾಧಿಕಾರವು ವಿಮೆ ಉತ್ಪನ್ನಗಳ ಬೆಲೆ ನಿಗದಿಯಲ್ಲಿ ಮಧ್ಯಪ್ರವೇಶಿಸದಿದ್ದರೂ, ʻಕಂತಿನ ಮೊತ್ತವನ್ನು ಪಾಲಿಸಿ ಅವಧಿ ಮುಗಿಯುವವರೆಗೆ ಬದಲಿಸಬಾರದು. ಪ್ರೀಮಿಯಂನ್ನು ಹಲವು ಕಂತುಗಳಲ್ಲಿ ಕಟ್ಟಲು ಅವಕಾಶ ಕೊಡಬೇಕು; ಎಳೆಯ ಪ್ರಾಯದಲ್ಲೇ ವಿಮೆ ಮಾಡಿಸುವವರಿಗೆ ಪ್ರೋತ್ಸಾಹ ಹಾಗೂ ಚಿಕಿತ್ಸೆ ಬಳಿಕ ಆಸ್ಪತ್ರೆಗಳ ಬಿಲ್ ಬೇಗ ಬಿಡುಗಡೆಗೊಳಿಸಬೇಕು,ʼ ಎಂದು ನಿಯಮಗಳು ಹೇಳಿವೆ.
ಆದರೆ, ಇಷ್ಟು ಸಾಕೇ?: ಹಿರಿಯ ನಾಗರಿಕರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು. ರೋಗಪತ್ತೆ ಪ್ರಕ್ರಿಯೆ ಹಾಗೂ ತಂತ್ರಜ್ಞಾನ ಆಧರಿತ ರೋಗೋಪಚಾರದಿಂದಾಗಿ, ವೆಚ್ಚ ದುಬಾರಿ ಆಗಲಿದೆ. ಉದಾಹರಣೆಗೆ, ಅಧಿಕ ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ಸಮಸ್ಯೆ, ಮಾನಸಿಕ ಸಮಸ್ಯೆ, ಅರ್ಥೈಟಿಸ್‌ನಂಥ ಕಾಯಿಲೆಗಳಿಗೆ ದೀರ್ಘಕಾಲೀನ ಚಿಕಿತ್ಸೆ ಅಗತ್ಯವಿದೆ. ಪಿಜೆಎಎಂವೈ ಈ ಭಾರವನ್ನು ನಿರ್ವಹಿಸಬಲ್ಲದೇ? ಸಾರ್ವತ್ರಿಕ ಆರೋಗ್ಯ ಸುರಕ್ಷೆ (ಯೂನಿ ವರ್ಸಲ್ ಹೆಲ್ತ್ ಕವರೇಜ್, ಯುಎಚ್‌ಸಿ)ಯ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಮತ್ತು ವಿಶ್ವ ಬ್ಯಾಂಕ್ ಎರಡು ಶಿಫಾರಸು ಮಾಡಿವೆ; ಅವೆಂದರೆ, ಆರ್ಥಿಕ ಸುರಕ್ಷೆಯ ವ್ಯಾಪ್ತಿ ಮತ್ತು ಸೇವೆಯ ವಿಸ್ತರಣೆಯ ಮಟ್ಟ. ಮೊದಲನೆಯದನ್ನು ಆರೋಗ್ಯ ಸೇವೆಗೆ ವ್ಯಕ್ತಿಯೊಬ್ಬ ಮಾಡಿದ ಸ್ವಂತ ವೆಚ್ಚ, ವಿಪತ್ತಿನಿಂದ ಆದ ವೆಚ್ಚ ಹಾಗೂ ಆರೋಗ್ಯ ಸೇವೆಗೆ ಮಾಡಿದ ವೆಚ್ಚದಿಂದ ಉಂಟಾದ ಬಡತನವನ್ನು ಗಣಿಸಿ, ಲೆಕ್ಕ ಹಾಕಲಾಗುತ್ತದೆ. ಎರಡನೆಯದನ್ನು, ಸೇವೆಯ ವ್ಯಾಪ್ತಿಯ ಸೂಚ್ಯಂಕದಿಂದ ಮೌಲ್ಯಮಾಪನ ಮಾಡಲಾಗುತ್ತದೆ. ಇದು 14 ವಿವಿಧ ಗುರುತುಗಳನ್ನು ಆಧರಿಸಿ ಅಳೆಯಲಾಗುತ್ತದೆ. ಪಿಎಂಎಜೆವೈ ಈ ಎರಡು ಅಂಶಗಳಲ್ಲೂ ಹಿಂದೆ ಬಿದ್ದಿದೆ; ಅದು ಪ್ರಾಥಮಿಕ ಉಪಚಾರ ಅಗತ್ಯವಿರುವ ಹಲವು ಆರೋಗ್ಯ ಸಮಸ್ಯೆಗಳನ್ನು ಒಳಗೊಂಡಿಲ್ಲ. ಆರೋಗ್ಯ ಸೇವೆಗಳು ಆಸ್ಪತ್ರೆಗೆ ಸೇರಿಸಬೇಕಾದ ಕಾಯಿಲೆಗಳಿಗೆ ಸೀಮಿತವಾಗಿವೆ. ಹೊರರೋಗಿ ಸೇವಾ ಶುಲ್ಕ ಹಾಗೂ ಔಷಧ ವೆಚ್ಚವನ್ನು ಸೇರಿಸದೆ ಇರುವುದರಿಂದ, ರೋಗಿಗಳ ಮೇಲೆ ಭಾರಿ ಹೊರೆ ಬೀಳುತ್ತಿದೆ. ದ್ವಿತೀಯ ಮತ್ತು ತೃತೀಯ ಹಂತದ ಸೇವೆಯಲ್ಲೂ ಹೊರರೋಗಿ ಆರೈಕೆಯನ್ನು ಸೇರಿಸಿಲ್ಲ. ರೋಗಿಗಳು ಈ ಹಂತದಲ್ಲಿ ಹಲವು ಬಾರಿ ವೈದ್ಯರನ್ನು ಭೇಟಿ ಮಾಡ ಬೇಕಾಗುತ್ತದೆ. ಆಗ ತನ್ನದೇ ಜೇಬಿನಿಂದ ಶುಲ್ಕ ಪಾವತಿಸಬೇಕಾಗುತ್ತದೆ.
ಮಹಾಲೇಖಪಾಲ(ಸಿಎಜಿ)ರ 2023ರ ವರದಿಯು ಪಿಎಂಎಜೆವೈ ಅನುಷ್ಠಾನದಲ್ಲಿ ಹಲವು ಲೋಪದೋಷಗಳನ್ನು ಪತ್ತೆ ಹಚ್ಚಿದೆ; ರೋಗಿಗಳ ದಾಖಲಿನಲ್ಲಿ ವಂಚನೆಯಲ್ಲದೆ, ಹಲವು ರಾಜ್ಯಗಳಲ್ಲಿ ಸೇವೆಯಲ್ಲಿ ಗುಣಮಟ್ಟದ ಕೊರತೆಯನ್ನು ಎತ್ತಿ ತೋರಿಸಿದೆ. ಕಾರ್ಯ ನಿರ್ವಹಿಸದ ಯಂತ್ರಗಳು, ಹಾಸಿಗೆ ಕೊರತೆ, ರಕ್ತದ ಬ್ಯಾಂಕ್ ಇಲ್ಲದೆ ಇರುವುದು ಮತ್ತು ತುರ್ತುಪರಿಸ್ಥಿತಿಯಲ್ಲಿ ವಾಹನ ಲಭ್ಯವಿಲ್ಲದೆ ಇರುವುದನ್ನು ಪತ್ತೆ ಹಚ್ಚಿದೆ.
ಹಲವು ರಾಜ್ಯಗಳ 2 ಮತ್ತು 3 ನೇ ಹಂತದ ನಗರಗಳಲ್ಲಿ ಅರ್ಹ ಆಸ್ಪತ್ರೆಗಳ ಕೊರತೆಯಿಂದ, ಪಿಎಂಎಜೆವೈಯನ್ನು ಅಲ್ಲಿಗೆ ವಿಸ್ತರಿಸಿಲ್ಲ. ಇದರಿಂದ, ಕೊರೋನಾ-19 ರ ಸಂದರ್ಭದಲ್ಲಿ ಅಪಾರ ಸಾವುನೋವು ಸಂಭವಿಸಿದೆ. ಪಿಎಂಎಜೆವೈ ವಿವಿಧ ಕಾಯಿಲೆಗಳ ಚಿಕಿತ್ಸೆಗೆ ನಿಗದಿಪಡಿಸಿರುವ ಶುಲ್ಕಗಳು ಸಮರ್ಪಕವಾಗಿಲ್ಲವೆಂದು ಹಾಗೂ ಪಾವತಿಯಲ್ಲಿ ವಿಳಂಬದಿಂದ ಖಾಸಗಿ ಆಸ್ಪತ್ರೆಗಳು ಅಸಮಾಧಾನಗೊಂಡಿವೆ. ಹಿರಿಯ ನಾಗರಿಕರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಲ್ಲಿ, ಅವರು ಅನೇಕ ಪರಿಣತ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಇದರಿಂದ ಆಸ್ಪತ್ರೆಗೆ ಬಿಲ್ ಪಾವತಿ ಇನ್ನಷ್ಟು ವಿಳಂಬವಾಗಲಿದೆ. ಆದರೆ, ಪಿಎಂಎಜೆವೈಯಿಂದ ಸ್ಥಿರವಾಗಿ ಮತ್ತು ನಿರಂತರವಾಗಿ ಆದಾಯ ಬರುವುದರಿಂದ, ಹಲವು ಖಾಸಗಿ ಆಸ್ಪತ್ರೆಗಳು ಯೋಜನೆಯಲ್ಲಿ ಭಾಗವಹಿಸಿವೆ. ಒಂದು ಅಂದಾಜಿನ ಪ್ರಕಾರ, ಪಿಎಂಎಜೆವೈಗೆ ನಿಗದಿಪಡಿಸಿದ ಮೊತ್ತದಲ್ಲಿ 2/3 ಭಾಗ ಖಾಸಗಿ ಆಸ್ಪತ್ರೆಗಳಿಗೆ ಹೋಗಿದೆ. ಇಷ್ಟಲ್ಲದೆ, ಖಾಸಗಿ ಆಸ್ಪತ್ರೆಗಳು ತಮ್ಮದೇ ಶರತ್ತುಗಳನ್ನು ವಿಧಿಸುತ್ತವೆ; ಅಲ್ಲದೆ, ಅವು ನಗರ ಕೇಂದ್ರಿತ ಮತ್ತು ಗ್ರಾಮೀಣ ಪ್ರಧೇಶಗಳಲ್ಲಿ ಅವುಗಳ ಉಪಸ್ಥಿತಿ ಕಡಿಮೆ. ಹೀಗಾಗಿ, ಪಿಎಂಎಜೆವೈಯನ್ನು ದೇಶಾದ್ಯಂತ ವಿಸ್ತರಿಸಲು, ಅನುಷ್ಠಾನಗೊಳಿಸಲು ಖಾಸಗಿ ಆಸ್ಪತ್ರೆಗಳಿಂದ ಸಾಧ್ಯವಿಲ್ಲ.
ಉಳಿದ ಮಾರ್ಗವೇನು?: ದೇಶದ ಸಮಸ್ತರಿಗೂ 2030ರೊಳಗೆ ಸಾರ್ವತ್ರಿಕ ಆರೋಗ್ಯ ಸುರಕ್ಷೆ(ಯುಎಚ್‌ಸಿ) ಒದಗಿಸಲು ಇರುವ ಏಕೈಕ ಮಾರ್ಗವೆಂದರೆ, ಸಾರ್ವಜನಿಕ ಆರೋಗ್ಯ ಸೇವೆ ವ್ಯವಸ್ಥೆಯ ಸಬಲೀಕರಣ ಮತ್ತು ಸಾಮರ್ಥ್ಯ ವರ್ಧನೆ. ಸಾರ್ವತ್ರಿಕ ಆರೋಗ್ಯ ಸುರಕ್ಷೆ(ಯುಎಚ್‌ಸಿ)ಯನ್ನು ಸಕಲರಿಗೂ ಕ್ಷಮತೆ, ಸಮತೆ ಹಾಗೂ ಆರ್ಥಿಕವಾಗಿ ಕೈಗೆಟಕುವಂತೆ ತಲುಪಿಸಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ ಮಾತ್ರವೇ ಸಾಧ್ಯ. ಆದರೆ, ಘೋಷಣೆಗಳ ಹೊರತು ಸರ್ಕಾರಗಳು ಈ ಸವಾಲಿಗೆ ಸೂಕ್ತ-ಸಮರ್ಪಕವಾಗಿ ಪ್ರತಿಕ್ರಿಯಿಸುತ್ತಿವೆಯೇ? ಇಲ್ಲ.
ಪ್ರತಿಯಾಗಿ, ಸರ್ಕಾರಗಳು ಜಿಲ್ಲಾಸ್ಪತ್ರೆಗಳನ್ನು ಖಾಸಗೀಕರಣಗೊಳಿಸುತ್ತಿವೆ ಮತ್ತು ಖಾಸಗಿಯವರಿಗೆ ನೀಡುವ ಪ್ರಸ್ತಾಪಗಳು ಕೇಳಿಬರುತ್ತಿವೆ. ರಾಜ್ಯದ 9 ಜಿಲ್ಲಾಸ್ಪತ್ರೆಗಳ ಖಾಸಗೀಕರಣ ಪ್ರಸ್ತಾಪವಿದೆ. ರಾಯಚೂರು, ಮಂಡ್ಯ, ಶಿವಮೊಗ್ಗ, ಕೊಡಗು, ಗದಗ್, ಬೀದರ್, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಬೆಳಗಾವಿ ಹಾಗೂ ಚಾಮರಾಜನಗರದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಮಾನದಂಡಕ್ಕೆ ಅನುಗುಣವಾದ ಜಿಲ್ಲಾಸ್ಪತ್ರೆಗಳೇ ಇಲ್ಲ(ನಿರ್ದಿಷ್ಟ ಭೌಗೋಳಿಕ ಪ್ರದೇಶ ಮತ್ತು ಜನಸಂಖ್ಯೆಗೆ ಅನುಗುಣವಾಗಿರುವ, 101ರಿಂದ 501 ಹಾಸಿಗೆಗಳಿರುವ ಆಸ್ಪತ್ರೆ). 11 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯ ಕಾಲೇಜು ಇಲ್ಲ.
ನಮಗೆ ಬೇಕಿರುವುದು ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತ ಸೇರಿದಂತೆ, ಸಮಗ್ರ ಆರೋಗ್ಯ ಸೇವೆ ಪೂರೈಸಬಲ್ಲ ಸಾರ್ವಜನಿಕ ಸೇವಾ ವ್ಯವಸ್ಥೆ. ಯುಎಚ್‌ಸಿಯ ಮರುವಿನ್ಯಾಸದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಹೊರತುಪಡಿಸಿದರೆ, ಭಾರಿ ಬೆಲೆ ತೆರಬೇಕಾಗುತ್ತದೆ. ಉದಾಹರಣೆಗೆ, ಅಮೆರಿಕ. ಅಲ್ಲಿ ವೈದ್ಯಕೀಯ ವೆಚ್ಚ ಭಾರಿ ದುಬಾರಿ. ಅಮೆರಿಕ ಸದಸ್ಯನಾಗಿರುವ ಅಧಿಕ ಆದಾಯವಿರುವ ದೇಶಗಳ ಗುಂಪು ಒಇಸಿಡಿ(ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿ ಸಂಘಟನೆ) ದೇಶಗಳಿಗೆ ಹೋಲಿಸಿದರೆ, ಅಮೆರಿಕದಲ್ಲಿ ಜೀವಿತಾವಧಿ ಕಡಿಮೆ ಮತ್ತು ಆರೋಗ್ಯ ವೆಚ್ಚ ಹೆಚ್ಚು ಇದೆ. ಅಮೆರಿಕನ್ನರ ಜೀವಿತಾವಧಿ 79 ವರ್ಷ(2019ರಲ್ಲಿ)ದಿಂದ 76 ವರ್ಷಕ್ಕೆ ಕುಸಿದಿದೆ(2022).
ಪಿಎಂಎಜೆವೈ ಅನ್ನು ಆಶಾ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಅಂಗನವಾಡಿ ಸಿಬ್ಬಂದಿಗೂ ವಿಸ್ತರಿಸುವುದಾಗಿ 2024-25ರ ಬಜೆಟ್‌ನಲ್ಲಿ ಒಕ್ಕೂಟ ಸರ್ಕಾರ ಹೇಳಿದೆ. ಇದು ಸ್ವಾಗತಾರ್ಹ: ಆದರೆ, ಈ ಕಾರ್ಯಕ್ರಮಕ್ಕೆ ಕಳೆದ ಆಯವ್ಯಯಕ್ಕೆ ಹೋಲಿಸಿದರೆ, ಈ ಆರ್ಥಿಕ ವರ್ಷದಲ್ಲಿ ಅನುದಾನ ನೀಡಿಕೆ ಶೇ.1.4ರಷ್ಟು ಮಾತ್ರ ಹೆಚ್ಚಳವಾಗಿದೆ. ಈ ಮೊತ್ತದಿಂದ 70 ವರ್ಷ ದಾಟಿದ ಹಿರಿಯರು ಸೇರಿದಂತೆ, ಎಲ್ಲ ಫಲಾನುಭವಿಗಳಿಗೆ ಉಚಿತ ಆರೋಗ್ಯ ಸೇವೆ ನೀಡಲು ಸಾಧ್ಯವಿಲ್ಲ. ಜಿಡಿಪಿಯ ಶೇ.2.5 ರಷ್ಟು ಪಾಲು ಆರೋಗ್ಯ ಕ್ಷೇತ್ರಕ್ಕೆ ಮೀಸಲಿದಡೆ ಇದ್ದರೆ, ಯುಎಚ್‌ಸಿ ವೇಗ ಗಳಿಸಿಕೊಳ್ಳುವುದು ಸಾಧ್ಯವಿಲ್ಲ. ಮೂಲಸೌಲಭ್ಯ ವಿಸ್ತರಣೆ ಮತ್ತು ಮಾನವ ಸಂಪನ್ಮೂಲ ಕೊರತೆಯನ್ನು ತುಂಬಲು ಹೂಡಿಕೆ ಅಗತ್ಯವಿದೆ. ಜೊತೆಗೆ, ರಾಷ್ಟ್ರೀಯ ಆರೋಗ್ಯ ಮಿಷನ್(ಎನ್‌ಎಚ್‌ಎಂ) ಮೂಲಕ ಸೇವೆ ನೀಡಲು ಇನ್ನಷ್ಟು ಹಣ ಬೇಕಾಗುತ್ತದೆ.
ಹಿರಿಯ ನಾಗರಿಕರಿಗೆ ಡಿಜಿಟಲ್ ಸಾಕ್ಷರತೆಯ ಕೊರತೆ ಇರಬಹುದಾದ್ದರಿಂದ, ವಿಮೆಗೆ ಜೋಡಣೆಯಾಗಿರುವ ಸೇವೆಗಳನ್ನು ಗುರುತಿಸಲು ಹಾಗೂ ಪಡೆದುಕೊಳ್ಳಲು ಕಷ್ಟವಾಗಬಹುದು. ಇದರಿಂದ ಅವರಿಗೆ ಆರೋಗ್ಯ ಸೇವೆ ನೀಡಲು ವಿಮೆಗೆ ಜೋಡಣೆಯಾಗದ ಮಾದರಿ ಸೂಕ್ತವಾಗಲಿದೆ. ಪಿಎಂಎಜೆವೈ 2 ಮತ್ತು 3ನೇ ಹಂತದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶ ಹೊಂದಿದೆ. ಇಂಥ ವಿಮೆ ಆಧರಿತ ಸೇವೆಯನ್ನು ಸಮರ್ಪಕವಾಗಿ ವಿನ್ಯಾಸಗೊಳಿಸಬೇಕಿದೆ. ಅದು ವಿಮೆ ಆಧರಿಸಿದ ವ್ಯವಸ್ಥೆ ಆಗಬೇಕೇ ಹೊರತು ವಿಮೆ ನಿರ್ದೇಶಿತ ವ್ಯವಸ್ಥೆ ಅಗಿರಬಾರದು.
ವಿಮೆ ಮೇಲೆ ತೆರಿಗೆ ಹೊರೆ: ದೇಶದ ಬಹುಪಾಲು ಕುಟುಂಬಗಳ ಸ್ಥಿತಿ ಹೇಗಿದೆಯೆಂಂದರೆ, ಮನೆಯಲ್ಲಿ ಒಬ್ಬರು ಕಾಯಿಲೆ ಬಿದ್ದರೆ ಸಾಲದ ಉರುಳು ಬಿಗಿಯಾಗುತ್ತದೆ. ಇದರ ಜೊತೆಗೆ, ಜನರ ಮೇಲೆ ಹೆಣ ಭಾರದ ತೆರಿಗೆ ಇದೆ. ರಾಜ್ಯ-ಕೇಂದ್ರ ಸರ್ಕಾರಗಳು 2021-22ರಲ್ಲಿ ಸಂಗ್ರಹಿಸಿದ ಜಿಎಸ್‌ಟಿ ಮೊತ್ತ 14.7 ಲಕ್ಷ ಕೋಟಿ ರೂ. ಇದರಲ್ಲಿ ಶೇ.50ರಷ್ಟಿರುವ ಬಡವರ ಪಾಲು ಶೇ.64.3(2/3). ಶೇ.40ರಷ್ಟು ಇರುವ ಮಧ್ಯಮ ವರ್ಗದವರು ಶೇ.40 ಮತ್ತು ಉಳಿಕೆ ಶೇ.10 ರಷ್ಟು ಮಂದಿ ಶೇ.3-4ರಷ್ಟು ಜಿಎಸ್‌ಟಿ ಪಾವತಿಸಿದ್ದಾರೆ. ಏಣಿಯ ಕೆಳಗಿನ ಹಂತದಲ್ಲಿರುವ ಶೇ.50ರಷ್ಟು ಮಂದಿ ತಮ್ಮ ಆದಾಯದಲ್ಲಿ ಹೆಚ್ಚು ಪಾಲು ಅಪರೋಕ್ಷ ತೆರಿಗೆ ತೆರುತ್ತಾರೆ. ಮೇಲಿನ ಸ್ತರದ ಶೇ.10 ಮಂದಿಗೆ ಹೋಲಿಸಿದರೆ, ಇವರು ತೆರುವ ಅಪರೋಕ್ಷ ತೆರಿಗೆ((ಜಿಎಸ್‌ಟಿ, ಎಕ್ಸೈಸ್ ಡ್ಯೂಟಿ ಮತ್ತು ವ್ಯಾಟ್, ಮೌಲ್ಯವರ್ಧಿತ ತೆರಿಗೆ) ಪ್ರಮಾಣ ಆರು ಪಟ್ಟು ಹೆಚ್ಚು. ಆದರೆ, ಆರ್ಥಿಕ ಅಸಮಾನತೆ ಎಷ್ಟು ತೀವ್ರವಾಗಿದೆ ಎಂದರೆ, ಮೇಲಿನ ಹಂತದ ಶೇ.1ರಷ್ಟು ಮಂದಿ ಬಳಿ ಶೇ.40.6 ರಷ್ಟು ಐಶ್ವರ್ಯ ಸಂಗ್ರಹವಾಗಿದೆ(2021); ಕೆಳಗಿನ ಶೇ.50ರಷ್ಟು ಮಂದಿ ಬಳಿ ಇರುವುದು ಒಟ್ಟು ಐಶ್ವರ್ಯದ ಶೇ.3 ಮಾತ್ರ. ಜಗತ್ತಿನಲ್ಲಿ ಅತಿ ಹೆಚ್ಚು ಬಡವರು(2.289 ಕೋಟಿ) ಇಲ್ಲಿದ್ದಾರೆ. ವಿಶ್ವ ಸಂಸ್ಥೆ ಪ್ರಕಾರ, ದೇಶದಲ್ಲಿರುವ ಬಡವರ ಸಂಖ್ಯೆ 23.4 ಕೋಟಿ. ಅದೇ ಹೊತ್ತಿನಲ್ಲಿ ಶತಕೋಟ್ಯಧೀಶರ ಸಂಖ್ಯೆ 102(2020) ರಿಂದ 166(2022)ಕ್ಕೆ ಹೆಚ್ಚಿದೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ. ಜನರಿಗೆ ಆರೋಗ್ಯ ಸೇವೆ ಒದಗಿಸಲಾಗದ ಸರ್ಕಾರ, ಸಾರ್ವತ್ರಿಕ ಆರೋಗ್ಯ ವಿಮೆಯನ್ನಾದರೂ ಒದಗಿಸಬಹುದಿತ್ತು. ಬದಲಾಗಿ, ವಿಮೆ ಕಂತು ಮೇಲೆ ಶೇ.18 ಜಿಎಸ್‌ಟಿ ವಿಧಿಸುತ್ತಿದೆ. ತೆರಿಗೆ ಕಡಿಮೆ ಮಾಡಬೇಕೆಂಬ ಸಂಸದರು ಹಾಗೂ ನಾಗರಿಕ ಸಮಾಜದ ಒತ್ತಾಯದ ಹಿನ್ನೆಲೆಯಲ್ಲಿ ಜಿಎಸ್‌ಟಿ ಮಂಡಳಿಯಲ್ಲಿ ಈ ಸಂಬಂಧ ಚರ್ಚೆ ನಡೆದಿದೆ. ಹಿರಿಯ ನಾಗರಿಕರ 5 ಲಕ್ಷ ರೂ. ಮೊತ್ತದ ವಿಮೆಗೆ ಜಿಎಸ್‌ಟಿ ವಿನಾಯಿತಿ ನೀಡಬೇಕೆಂದು ಮಂಡಳಿ ಶಿಫಾರಸು ಮಾಡಿದೆ. ಆದರೆ, ಒಮ್ಮೆ ಆಸ್ಪತ್ರೆ ಸೇರಿದರೆ, ಈ ಮೊತ್ತ ಏನೇನೂ ಸಾಲುವುದಿಲ್ಲ. ವಿಮೆ ಕಂತು ಮೇಲೆ ತೆರಿಗೆ ವಿಧಿಸುತ್ತಿರುವುದು ಅಮಾನವೀಯ.
ಸಂವಿಧಾನವು ಎಲ್ಲರಿಗೂ ಘನತೆಯಿಂದ ಬದುಕುವ ಹಕ್ಕು ಕೊಟ್ಟಿದೆ. ʻಆರೋಗ್ಯ ರಕ್ಷಣೆಯು ಮಾನವ ಹಕ್ಕುಗಳ ಮೂಲಭೂತ ಭಾಗವಾಗಿರಬೇಕು. ಸರ್ಕಾರ ಎಲ್ಲ ನಾಗರಿಕರಿಗೆ, ವಿಶೇಷವಾಗಿ, ಬಡತನ ರೇಖೆಗಿಂತ ಕೆಳಗಿರುವವರಿಗೆ ಆರೋಗ್ಯ ವಿಮೆ ಒದಗಿಸಬೇಕುʼ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ʻ1918ರ ಇನ್ಫ್ಲುಯೆನ್ಜಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯನ್ನು ಬಳಸಿಕೊಂಡು, ಬಡವರು ಮತ್ತು ದಲಿತರಿಗೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಲಾಯಿತು. ವೈದ್ಯಕೀಯ ಸಂಸ್ಥೆಗಳಲ್ಲಿ ಮಾತ್ರವಲ್ಲದೆ, ಎಲ್ಲೆಡೆ ಜಾತಿ-ವರ್ಗ ಅಸಮಾನತೆಯನ್ನು ತೊಡೆಯುವುದು ರಾಜ್ಯದ ಅತ್ಯಗತ್ಯ ಜವಾಬ್ದಾರಿʼ ಎಂದು ಅವರು ಹೇಳಿದ್ದರು. ಆದರೆ, ಟ್ರಿಲಿಯನ್ ಆರ್ಥಿಕತೆಯ ಭ್ರಮೆಯಲ್ಲಿರುವ ಆಡಳಿತಗಾರರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸೊರಗಿ, ಹಣವಿದ್ದವರಿಗೆ ಮಾತ್ರ ಆರೋಗ್ಯ ಸೇವೆಗಳು ಸಿಗುತ್ತಿವೆ. ಜನರು ಅಸಮಾನ ಸಾಮಾಜಿಕ ವಾಸ್ತವದೊಂದಿಗೆ ಸೆಣಸಾಡುವಂತಾಗಿದೆ. ಇದರಿಂದಾಗಿ, ಆಂಬ್ಯುಲೆನ್ಸ್ ಲಭ್ಯವಿಲ್ಲದೆ ಪ್ರೀತಿಪಾತ್ರರ ಶವವನ್ನು ಬೈಕ್‌ನಲ್ಲಿ ಸಾಗಿಸಿದ್ದು ಇಲ್ಲವೇ ರೋಗಿಯನ್ನು ಚಿಕಿತ್ಸೆಗೆ ಜೋಲಿಯಲ್ಲಿ ರಾತ್ರಿಯಿಡೀ ಹೊತ್ತು ಆಸ್ಪತ್ರೆಗೆ ಕರೆತಂದಿದ್ದು ನಮ್ಮ ಆತ್ಮಸಾಕ್ಷಿಯನ್ನು ಕಾಡುವುದಿಲ್ಲ.
-ಮಾಧವ ಐತಾಳ್