ಅಪರ್ಣಾ ಕೃಷ್ಣನ್
–ಸಂತೋಷ್ ಕೌಲಗಿ,ಜನಪದ ಸೇವಾ
ಟ್ರಸ್ಟ್,ಮೇಲುಕೋಟೆ
ಸಾವಿರದ ಒಂಬೈನೂರ ತೊಂಬತೈದು. ಮಾಹಿತಿ ತಂತ್ರಜ್ಞಾನ ಏರು ಗತಿಯಲ್ಲಿದ್ದ ವರ್ಷ. ಕಂಪ್ಯೂಟರ್ ವಿಜ್ಞಾನ ಓದಿದವರಿಗೆ ಎಲ್ಲಿಲ್ಲದ ಬೇಡಿಕೆ. ಅವರ ವೇತನವನ್ನು ಹಿಂದೆ ಯಾರೂ ಪಡೆದಿರಲಿಲ್ಲ. ಕಂಪ್ಯೂಟರ್ ಎಂಜಿನಿಯರ್ ಇರುವ ಮಧ್ಯಮ ವರ್ಗದ ಕುಟುಂಬಗಳು ಶ್ರೀಮಂತ ವರ್ಗದ ಗುಂಪಿಗೆ ಸೇರತೊಡಗಿದ್ದವು. ಅವರೆಲ್ಲರ ಆಸೆ ಮತ್ತು ಕನಸುಗಳು ಈಡೇರಿ, ಅವರು ಬಯಸಿದ ಸುಖ ನನಸಾಗತೊಡಗಿತು. ಪ್ರತಿಷ್ಠಿತ ಭಾರತೀಯ ವಿಜ್ಞಾನ ಮಂದಿರದಲ್ಲಿ ಓದಿ, ಬಹುರಾಷ್ಟ್ರೀಯ ಕಂಪನಿಯಲ್ಲಿ ಐದು ಅಂಕೆಯ ವೇತನ ಪಡೆಯುತ್ತಿದ್ದ ಮಧ್ಯಮ ವರ್ಗದ ಅಪರ್ಣಾ ಕೃಷ್ಣನ್, ಅದೇ ಕಾಲಮಾನದವರು. ಸಾಮಾನ್ಯ ಅಳತೆಗೋಲಿನ ಪ್ರಕಾರ ಯಶಸ್ಸಿನ ಉತ್ತುಂಗದಲ್ಲಿದ್ದ ಅವರು ಒಂದು ದಿನ ಇದ್ದಕ್ಕಿದ್ದಂತೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಬೇರೆ ದಿಕ್ಕಿಗೆ ಮುಖ ಮಾಡಲು ತೀರ್ಮಾನಿಸಿದರು. ಗೆಳೆಯರು, ನೆಂಟರು, ಇಷ್ಟರು ಇವಳಿಗೆ ತಲೆ ಕೆಟ್ಟಿದೆ ಎಂದು ತೀರ್ಮಾನಿಸಿದರು. ಇಷ್ಟೊಂದು ವೇತನ ಬರುತ್ತಿರುವ ಕೆಲಸವನ್ನು ಬಿಡುತ್ತಿದ್ದಾಳಲ್ಲ, ಶತ ಮೂರ್ಖತನ. ಹುಡುಗಿಗೆ ಬುದ್ಧಿ ಇಲ್ಲ ಎಂದು ಹೀಯಾಳಿಸಿದರು. ಹೀಗೆ ಮಾಡುವುದಿದ್ದರೆ ಏಕಿಷ್ಟು ಓದಬೇಕಿತ್ತು ಎಂದು ಮತ್ತೊಂದಿಷ್ಟು ಜನ ಹೇಳಿದರು. ಈ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದ ಅವರ ಅಚಲ ತೀರ್ಮಾನದ ಹಿಂದೆ ಮಹಾತ್ಮ ಗಾಂಧಿಯವರ “ಹಿಂದ್ ಸ್ವರಾಜ್’ ಕೆಲಸ ಮಾಡಿತ್ತು. ಒಂದು ದಿನ ದೆಹಲಿಯ ವಿಮಾನ ನಿಲ್ದಾಣದ ಪುಸ್ತಕದ ಅಂಗಡಿಯಲ್ಲಿ “ಹಿಂದ್ ಸ್ವರಾಜ್’ ಕೊಂಡರು. ಹೈದರಾಬಾದ್‌ಗೆ ಬಂದಿಳಿಯುವಷ್ಟರಲ್ಲಿ ಪುಸ್ತಕ ಓದಿ ಮುಗಿಸಿದ್ದರು. ವಿಮಾನ ನಿಲ್ದಾಣದಿಂದ ಮನೆ ಸೇರುವಷ್ಟರಲ್ಲಿ ಐದಂಕಿ ಸಂಬಳದ ಕೆಲಸ, ಬಂಗಲೆ, ಕಾರು ಎಲ್ಲವೂ ಅಮುಖ್ಯ ಎಂದು ಅನಿಸತೊಡಗಿತು. ತಮ್ಮ ಬಗ್ಗೆಯೇ ಕೀಳರಿಮೆ ಮೂಡತೊಡಗಿತು. ಪರಾವಲಂಬಿಯಾಗಿದ್ದೇನೆ; ಐಶಾರಾಮಿ ಬದುಕು ನಡೆಸಿದ್ದೇನೆ ಎನಿಸಿತು. ಇದೆಲ್ಲವನ್ನೂ ಬಿಡಬೇಕೆಂದು ಅನಿಸತೊಡಗಿತು.
ಅದೊಂದು ದಿನ ಪತಿ ನಾಗೇಶ್ ಜತೆಗೆ ಆಂಧ್ರಪ್ರದೇಶದ ತಿರುಪತಿ ಬಳಿ ಇರುವ ಸಣ್ಣ ಹಳ್ಳಿ ಪಲ್ಲಗುಟ್ಟಪಲ್ಲಿಗೆ ಹೊರಟುಬಿಟ್ಟರು. ಈ ಹಳ್ಳಿ ಬಗ್ಗೆ ಅವರ ಜೊತೆಗಾರರು, ಸಂಬAಧಿಗಳಿಗೆ ಗೊತ್ತಿರಲಿಲ್ಲ, ನಕ್ಷೆಯಲ್ಲೂ ಅದರ ಗುರುತಿಲ್ಲ. ಅದೊಂದು ದಲಿತ ಹಳ್ಳಿ. ದಲಿತವಾಡ ಎಂದೇ ಅದಕ್ಕೆ ಹೆಸರು. ಅಪರ್ಣಾ ಹಳ್ಳಿಗರ ಉದ್ಧಾರ ಮಾಡಬೇಕೆಂದು ಎನ್‌ಜಿಒ ಕಟ್ಟಲಿಲ್ಲ. ಸರ್ಕಾರದ ಅನುದಾನ, ವಿದೇಶಿ ದೇಣಿಗೆಗೆ ಕಾಯಲಿಲ್ಲ. ಹಳ್ಳಿಯವರೊಂದಿಗೆ ಹಳ್ಳಿಯವಳಾಗುವ ತೀರ್ಮಾನ ಮಾಡಿದರು. ದಲಿತವಾಡದಲ್ಲಿ ತಾವೂ ಒಂದು ಗುಡಿಸಲು ಹಾಕಿಕೊಂಡರು. ದೂರದ ಕೊಳವೆ ಬಾವಿಯಿಂದ ನೀರು ತಂದರು. ಸೌದೆ ಒಲೆಯಲ್ಲಿ ಅಡುಗೆ ಮಾಡಿಕೊಳ್ಳತೊಡಗಿದರು; ಅಲ್ಲಿನ ಬಡಜನ ಉಣ್ಣುವ ಊಟವನ್ನೇ ತಾವೂ ತಯಾರಿಸತೊಡಗಿದರು. ತಮ್ಮ ಮನೆಯ ಸಾರನ್ನು ಅವರಿಗೆ ಕೊಟ್ಟರು ಅವರಿಂದ ರೊಟ್ಟಿಯನ್ನು ತೆಗೆದುಕೊಂಡರು. ನಿಧಾನವಾಗಿ ಅವರಲ್ಲಿ ಅವರಾಗಿ ಹೋದರು.
ಹೆಣ್ಣುಮಕ್ಕಳ ಬದುಕನ್ನು ಸುಂದರಗೊಳಿಸಲು ಹಲವು ಯೋಜನೆಗಳನ್ನು ಕೈಗೊಂಡರು. ತಮ್ಮ ಬದುಕಿನ ಮಹತ್ವದ ಸಮಯವನ್ನು ಹಳ್ಳಿಗರಿಗಾಗಿ ಮೀಸಲಿಟ್ಟರು. ಇಂದು ಪಲ್ಲಗುಟ್ಟಪಲ್ಲಿ ಎಂದರೆ ಅಪರ್ಣಾ, ಅಪರ್ಣಾ ಎಂದರೆ ಪಲ್ಲಗುಟ್ಟಪಲ್ಲಿ. ಗಾಂಧಿಯವರಿಗೆ ಪ್ರಿಯವಾದ ಎಲ್ಲರ ನೋವನ್ನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲ್ಲಿ ಎಂಬುದನ್ನು ತಮ್ಮ ಬದುಕಿನಲ್ಲಿ ರೂಪಿಸಿಕೊಂಡಿರುವ ಅಪರ್ಣಾ, ಗೆದ್ದಿದ್ದಾರೆ. ಪಲ್ಲಗುಟ್ಟಪಲ್ಲಿಯ ಹೆಣ್ಣು ಮಕ್ಕಳ ಮುಖದಲ್ಲಿ ಮಂದಹಾಸ ತಂದಿದ್ದಾರೆ.