ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗಳಡಿ ರೈತರಿಗೆ ತ್ವರಿತ ಪರಿಹಾರ ನೀಡಲು ಎಲ್ಲ ತಾಲೂಕು ಕೇಂದ್ರಗಳಲ್ಲಿ ವಿಮಾ ಕಂಪನಿಗಳ ಕಚೇರಿ ತೆರೆಯಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಬೆಳೆ ವಿಮೆ ಯೋಜನೆ ಅನುಷ್ಠಾನದಲ್ಲಿನ ತೊಡಕುಗಳ ನಿವಾರಣೆ ಕುರಿತು ನಾನಾ ಇಲಾಖೆಗಳ ಅಧಿಕಾರಿಗಳು ಮತ್ತು ವಿಮಾ ಕಂಪನಿ ಪ್ರತಿನಿಧಿಗಳ ಸಭೆ ವಿಧಾನಸೌಧದಲ್ಲಿ ನಡೆಯಿತು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ವಿಮೆ ಕಂಪನಿಗಳ ನಡುವೆ ಸಮನ್ವಯ ಕುರಿತು ಚರ್ಚಿಸಲಾಯಿತು. ಅಧಿಕಾರಿಗಳು ಮತ್ತು ವಿಮೆ ಕಂಪನಿ ಪ್ರತಿನಿಧಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಬಾಕಿ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ಜಿಲ್ಲೆಗಳಿಗೆ ಭೇಟಿ ನೀಡಿ, ಜನಪ್ರತಿನಿಧಿಗಳ ಜತೆ ಸಭೆ ನಡೆಸಬೇಕು. ಅವರ ಸಲಹೆ ಆಧರಿಸಿ ಬೆಳೆ ವಿಮೆ ಪಾವತಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಜೋಷಿ ಸೂಚಿಸಿದರು. ಕೃಷಿ ಸಚಿವ ಬಿ.ಸಿ.ಪಾಟೀಲ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿ ಭೂತಾನಿ, ತೋಟಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್‌ಕುಮಾರ್ ದೀಕ್ಷಿತ್ ಪಾಲ್ಗೊಂಡಿದ್ದರು.
Courtesyg: Google (photo)