ಕಳೆದ ಕೆಲವು ವರ್ಷಗಳಲ್ಲಿ ಕಾರ್ಪೊರೇಟ್ ಕಂಪನಿಗಳು ಸಾಲ ಮರುಪಾವತಿ ಮಾಡದಿರುವ ಪ್ರಮಾಣ ಹೆಚ್ಚಿರುವುದು ಹಾಗೂ ಕಾರ್ಪೊರೇಟ್ ಆಡಳಿತವು ಭಾರತದಲ್ಲಿ ಚೆನ್ನಾಗಿ ಇಲ್ಲದಿರುವ ಕಾರಣ, ಬ್ಯಾಂಕ್‌ಗಳ ಮಾಲೀಕತ್ವ ಹೊಂದಲು ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಕಲ್ಪಿಸುವುದರ ಬಗ್ಗೆ ಎಸ್‌ಆ್ಯಂಡ್‌ಪಿ ರೇಟಿಂಗ್ಸ್ ಸಂಸ್ಥೆ ಪ್ರಶ್ನೆಗಳನ್ನು ಎತ್ತಿದೆ. ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕುಗಳ ಪ್ರವರ್ತಕರಾಗಲು ಅವಕಾಶ ಕಲ್ಪಿಸಬಹುದು, ಪ್ರವರ್ತಕರ ಷೇರು ಪಾಲಿಗೆ ಇರುವ ಮಿತಿಯನ್ನು ಈಗಿನ ಶೇ.೧೫ರಷ್ಟರಿಂದ, ಶೇ.೨೬ರಷ್ಟಕ್ಕೆ ಹೆಚ್ಚಿಸಲು ಅವಕಾಶ ಕೊಡಬಹುದು ಎಂದು ಆರ್‌ಬಿಐನ ಆಂತರಿಕ ಸಮಿತಿಯೊಂದು ಹಿಂದಿನ ವಾರ ಪ್ರಸ್ತಾವ ಸಲ್ಲಿಸಿದೆ. ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್‌ಗಳ ಮಾಲೀಕತ್ವ ವಹಿಸಿಕೊಳ್ಳಲು ಅವಕಾಶ ಕೊಡುವ ವಿಚಾರವಾಗಿ ಆಂತರಿಕ ಸಮಿತಿಯು ಹಿತಾಸಕ್ತಿಗಳ ಸಂಘರ್ಷ, ಆರ್ಥಿಕ ಶಕ್ತಿ ಒಂದೇ ಕಡೆ ಕೇಂದ್ರೀಕೃತ ಆಗುವುದು ಮತ್ತು ಹಣಕಾಸಿನ ಸ್ಥಿರತೆ ಕುರಿತು ವ್ಯಕ್ತಪಡಿಸಿರುವ ಕಳವಳಗಳು ಸಂಭಾವ್ಯ ಅಪಾಯವನ್ನೂ ಹೇಳುತ್ತಿವೆ. ಕಾರ್ಪೊರೇಟ್ ಕಂಪನಿಗಳು ಬ್ಯಾಂಕ್‌ಗಳ ಮಾಲೀಕರೂ ಆದಾಗ, ತಮ್ಮದೇ ಸಮೂಹದ ಕಂಪನಿಗಳಿಗೆ ಸಾಲ ಕೊಡುವ, ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಅಪಾಯ ಹೆಚ್ಚಿರುತ್ತದೆ. ಕಾರ್ಪೊರೇಟ್ ಸಂಸ್ಥೆಯೊಂದು ಸಾಲ ಮರುಪಾವತಿಯಲ್ಲಿ ವಿಫಲವಾಗಿ, ಅದರ ದುಷ್ಪರಿಣಾಮ ಹಣಕಾಸು ವಲಯದ ಮೇಲೆ ಆಗುವ ಅಪಾಯ ಕೂಡ ಹೆಚ್ಚುತ್ತದೆ ಎಂದು ಎಸ್‌ಆ್ಯಂಡ್ ಪಿ ಹೇಳಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶದ ಕಾರ್ಪೊರೇಟ್ ವಲಯದ ಸಾಧನೆ ಚೆನ್ನಾಗಿಯೇನೂ ಇಲ್ಲ. ಕಾರ್ಪೊರೇಟ್ ಕಂಪನಿಗಳು ಸಾಲ ಮರುಪಾವತಿ ಮಾಡದಿರುವ ಪ್ರಮಾಣ ದೊಡ್ಡದಿದೆ. ಈ ವರ್ಷದ ಮಾರ್ಚ್ವರೆಗಿನ ಅಂಕಿ–ಅಂಶದ ಅನ್ವಯ, ಕಾರ್ಪೊರೇಟ್ ವಲಯಕ್ಕೆ ನೀಡಿದ ಒಟ್ಟು ಸಾಲದಲ್ಲಿ ಶೇ.13ರಷ್ಟು ಸಾಲ ಮರಳಿ ಬಂದಿಲ್ಲ ಎಂದು ಕೂಡ ಎಸ್‌ಆ್ಯಂಡ್‌ಪಿ ಹೇಳಿದೆ. ಆದರೆ, ಚೆನ್ನಾಗಿ ನಡೆಯುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಬ್ಯಾಂಕಿAಗ್ ಚಟುವಟಿಕೆ ಆರಂಭಿಸಲು ಅವಕಾಶ ಕೊಡುವುದರಿಂದ ಹಣಕಾಸು ವಲಯದ ಸ್ಥಿರತೆಗೆ ನೆರವು ಸಿಗಬಹುದು ಎಂದು ಹೇಳಿದೆ.
Courtesyg: Google (photo)