ಕಲ್ಯಾಣ ಕರ್ನಾಟಕಕ್ಕೆ 10 ಸಾವಿರ ಶಿಕ್ಷಕರ ನೇಮಕಕ್ಕೆ ಪ್ರಸ್ತಾಪ:ಎಸ್. ಸುರೇಶ್ ಕುಮಾರ್

ಬೆಂಗಳೂರು ಫೆ,19: ನಂಜುಂಡಪ್ಪ ವರದಿಯಂತೆ ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ವಿಶೇಷ ಶೈಕ್ಷಣಿಕ ವಲಯಗಳನ್ನು ಸ್ಥಾಪಿಸಿ ಅಭಿವೃದ್ಧಿಗೊಳಿಸಲು ಮತ್ತು ಆ ಭಾಗದ ಶಾಲೆಗಳಿಗೆ 10 ಸಾವಿರ ಶಿಕ್ಷಕರ ನೇಮಕಕ್ಕೆ 2021-22ನೇ ಸಾಲಿನ ಬಜೆಟ್‍ನಲ್ಲಿ ಅವಕಾಶ ಕಲ್ಪಿಸಬೇಕೆಂದು ಮುಖ್ಯಮಂತ್ರಿಯವರನ್ನು ಕೋರಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮುಖ್ಯಮಂತ್ರಿಯವರೊಂದಿಗೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಸಂಬಂಧ ಅವಶ್ಯ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಅಳವಡಿಕೆ ನಿಟ್ಟಿನಲ್ಲಿ ನೀತಿ ನಿರೂಪಣೆಗೆ ಶಿಕ್ಷಣ ಆಯೋಗ ಸ್ಥಾಪನೆಗೆ ಮನವಿ ಮಾಡಲಾಗಿದೆ ಎಂದರು.

50 ವರ್ಷ ಹಳೆಯದಾದ 14613 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳ ಹಾಗೂ 634 ಸರ್ಕಾರಿ ಪ್ರೌಢಶಾಲೆಗಳ ಕಟ್ಟಡ ನಿರ್ವಹಣೆಗೆ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.ಸ್ಥಳೀಯ ಸಂಸ್ಥೆಗಳ ಮೂಲಕ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ ಎರಡು ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಲಭ್ಯ ಒದಗಿಸಿ ಮಾದರಿ ಶಾಲೆಗಳನ್ನಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದೆ. ಪಂಚಾಯತ್​ ವಾರ್ಡ್​​ ಪಬ್ಲಿಕ್ ಶಾಲೆಗಳ ಸ್ಥಾಪನೆಗೆ ಕ್ರಮ ವಹಿಸುವುದು. ರಾಜ್ಯ ಸಾಕ್ಷರತಾ ಅಭಿಯಾನ ಕಾರ್ಯಕ್ರಮದ ಮೂಲಕ 30 ಸಾವಿರ ಅನಕ್ಷರಸ್ಥರಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಸಾಕ್ಷರತಾ ಕಾರ್ಯಕ್ರಮ ರೂಪಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಖಾ ಗ್ರಂಥಾಲಯಗಳು, ಮಕ್ಕಳ ಗ್ರಂಥಾಲಯಗಳ ಡಿಜಿಟಲೀಕರಣ ಮತ್ತು ಗ್ರಂಥಾಲಯ ತರಬೇತಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾಪವನ್ನು ಹೊಂದಲಾಗಿದೆ. ಕೇಂದ್ರೀಯ ವಿದ್ಯಾಲಯ ಶಾಲೆಗಳ ಮಾದರಿಯಲ್ಲಿ ರಾಜ್ಯದ 276 ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಸ್ತಾವೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Journalist,Translator,avid bibliophile

Leave a Reply

Your email address will not be published. Required fields are marked *

Back To Top