ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ಈಗಿರುವ ಸ್ಥಿತಿಯಲ್ಲಿ ಜಾರಿಗೊಳಿಸದಂತೆ ಆಗ್ರಹಿಸಿ, ಅರಣ್ಯ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ಕಸ್ತೂರಿ ರಂಗನ್ ವರದಿ ವಿರೋಧಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ವರದಿಯನ್ನು ಯಥಾವತ್ ಜಾರಿ ಮಾಡದಂತೆ ಆಗ್ರಹಿಸಿ ಕೇಂದ್ರ ಪತ್ರ ಬರೆಯಲಾಗುತ್ತದೆ ಎಂದರು.
ಡಿ.೩೧ರಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ. ಜನರ ಭಾವನೆಗಳಿಗೆ ವಿರುದ್ಧವಾಗಿ ವರದಿ ಜಾರಿ ಮಾಡದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಹಾಗೂ ಮಂಡಳಿಗೆ ಪ್ರಮಾಣಪತ್ರ ಸಲ್ಲಿಸುವಂತೆ ಕೇಳಲಾಗುವುದು. ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಗತ್ಯವಿದ್ದಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಮೇಲ್ಮನವಿ ಸಲ್ಲಿಸಲಾಗುವುದು. ಕೇರಳದಂತೆ ರಾಜ್ಯದಲ್ಲೂ ವಿನಾಯ್ತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರದ ಎದುರು ಬೇಡಿಕೆ ಇಡಲಾಗುವುದು ಎಂದರು. ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ 9 ಲಕ್ಷ ಹೆಕ್ಟೇರ್ ಜಮೀನಿನ ಒಡೆತನ ಕುರಿತು ವಿವಾದವಿದೆ. ಡೀಮ್ಡ್ ಅರಣ್ಯದ ವ್ಯಾಪ್ತಿಯಲ್ಲಿದ್ದ 6 ಲಕ್ಷ ಎಕರೆ ಕಂದಾಯ ಜಮೀನು ವಾಪಸ್ ಪಡೆಯಲಾಗಿದೆ. ಉಳಿಕೆ ಮೂರು ಲಕ್ಷ ಎಕರೆ ಜಮೀನಿನ ವಿವಾದ ಶೀಘ್ರ ಬಗೆಹರಿಸಲಾಗುವುದು ಎಂದರು.
Courtesyg: Google (photo)