ಎಂಟು ತಿಂಗಳ ಬಿಡುವಿನ ಬಳಿಕ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಮಂಗಳವಾರ ಪುನರಾರಂಭವಾಗಿವೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಮತ್ತು ಕೋವಿಡ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದ್ದರಿಂದ, ವಿದ್ಯಾರ್ಥಿಗಳ ಹಾಜರಿ ಶೇ. ೩೦ಕ್ಕಿಂತ ಕಡಿಮೆ ಇತ್ತು. ಸುರಕ್ಷತಾ ಕ್ರಮಗಳು ತೃಪ್ತಿದಾಯಕವಾಗಿದ್ದರೆ ಮಾತ್ರ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಪೋಷಕರು ನಿರ್ಧರಿಸಿದ್ದರಿಂದ, ಹೆಚ್ಚು ವಿದ್ಯಾರ್ಥಿಗಳು ಕಂಡುಬರಲಿಲ್ಲ.
ಕೋವಿಡ್ ಪರೀಕ್ಷೆ ಮಾಡಿಸಿದ್ದರೂ, ಹಬ್ಬ ಮತ್ತು ಸಾಲು ರಜೆ ಇದ್ದುದರಿಂದ ಹಲವರಿಗೆ ವರದಿ ಲಭ್ಯವಾಗಿರಲಿಲ್ಲ. ಒಬ್ಬರಿಗೆ ಸೋಂಕು ತಗುಲಿದ್ದರೂ, ಉಳಿದವರಿಗೆ ಹರಡುವ ಸಾಧ್ಯತೆ ಇರುವುದರಿಂದ ಕೋವಿಡ್ ವರದಿ ತೋರಿಸದ ವಿದ್ಯಾರ್ಥಿಗಳಿಗೆ ಸಿಬ್ಬಂದಿ ಕಾಲೇಜಿನ ಒಳಗೆ ಬಿಡಲಿಲ್ಲ. ಕೋವಿಡ್ ಪರೀಕ್ಷೆ ಬೇಡ, ಥರ್ಮಲ್ ಸ್ಕ್ಯಾನ್ ಮಾತ್ರ ಮಾಡಿ, ಪ್ರವೇಶಕ್ಕೆ ಅವಕಾಶ ಕೊಡಿ ಎಂದು ಹಲವರು ಕೋರಿದರು. ಪೋಷಕರ ಅನುಮತಿ ಪತ್ರವಿಲ್ಲದ ವಿದ್ಯಾರ್ಥಿಗಳಿಗೂ ಪ್ರವೇಶ ನಿರಾಕರಿಸಲಾಯಿತು. ಬೆಂಗಳೂರಿನ ನಾನಾ ಕಾಲೇಜುಗಳಿಗೆ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಭೇಟಿ ನೀಡಿ ಪರಿಶೀಲಿಸಿದರು. “ಕ್ರಮೇಣ ಹಾಜರಿ ಹೆಚ್ಚಾಗಲಿದೆ. ಯುಜಿಸಿ ಮಾರ್ಗಸೂಚಿಯಂತೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಭೌತಿಕ ತರಗತಿಗೆ ಹಾಜರಾಗಲೇಬೇಕು ಎಂದು ಒತ್ತಾಯಿಸುವುದಿಲ್ಲ. ಆನ್‌ಲೈನ್ ತರಗತಿಗಳು ನಡೆಯಲಿವೆ. ಕಾಲೇಜಿಗೆ ಹಾಜರಾಗುವವರು ಕೋವಿಡ್ ನೆಗೆಟಿವ್ ವರದಿ ನೀಡಲೇಬೇಕು. ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಉತ್ತರ ಕರ್ನಾಟಕದ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಿ ವಿರಳವಾಗಿತ್ತು. ಗ್ರಾಮೀಣ ಭಾಗದಲ್ಲಿ ಸಾರಿಗೆ ಬಸ್ ಸಂಚಾರ ಇಲ್ಲದೆ ಇರುವುದು ಹಾಗೂ ರಿಯಾಯಿತಿ ಬಸ್ ಪಾಸ್ ಸಿಗದಿರುವುದು ಇದಕ್ಕೆ ಕಾರಣ.
Courtesyg: Google (photo)