ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದಲ್ಲಿದ್ದ ಆರ್ಗೈಲ್ ಎನ್ನುವ ಹೆಸರಿನ ವಿಶ್ವದ ಅತ್ಯಂತ ದೊಡ್ಡ ನಸುಗೆಂಪು ಬಣ್ಣದ ವಜ್ರ(ಪಿಂಕ್ ಡೈಮಂಡ್)ದ ಗಣಿಯನ್ನು ಮುಚ್ಚಲಾಗಿದೆ ಎಂದು ಪ್ರವರ್ತಕ ಕಂಪನಿ ರಿಯೊ ಟಿಂಟೊ ಹೇಳಿದೆ. ವಜ್ರದ ಹರಳುಗಳ ಸಂಪನ್ಮೂಲ ಖಾಲಿಯಾಗಿರುವುದು ಗಣಿಯನ್ನು ಮುಚ್ಚಲು ಕಾರಣ. ವಿಶ್ವದಲ್ಲಿ ಉತ್ಪತ್ತಿಯಾಗುತ್ತಿರುವ ನಸುಗೆಂಪು ಬಣ್ಣದ ವಜ್ರದ ಶೇ.೯೦ ರಷ್ಟನ್ನು ಆರ್ಗೈಲ್ ಗಣಿಯಿಂದ ತೆಗೆಯಲಾಗುತ್ತಿತ್ತು. ೧೯೭೯ರಲ್ಲಿ ಇಲ್ಲಿ ವಜ್ರದ ಪದರ ಪತ್ತೆಯಾಗಿತ್ತು. ನಾಲ್ಕು ವರ್ಷದ ಬಳಿಕ ಕಂಪನಿ ಇಲ್ಲಿ ಉತ್ಖನನ ಆರಂಭಿಸಿತ್ತು. ಈವರೆಗೆ ೮೬.೫೦ ಕೋಟಿ ಕ್ಯಾರೆಟ್ ವಜ್ರಗಳನ್ನು ಉತ್ಪಾದನೆ ಮಾಡಲಾಗಿದೆ. ಗಣಿಗಾರಿಕೆ ಸ್ಥಗಿತಗೊಳಿಸಿ, ಭೂಮಿಯನ್ನು ಮರುಸ್ಥಾಪಿಸಿ, ಮೂಲ ವಾರಸುದಾರರಿಗೆ ನೀಡುತ್ತೇವೆ ಎಂದು ಸಂಸ್ಥೆಯ ವ್ಯವಸ್ಥಾಪಕ ಆಂಡ್ರೂ ವಿಲ್ಸನ್ ಹೇಳಿದ್ದಾರೆ. ಕಳೆದ ಎರಡು ದಶಕದಲ್ಲಿ ಇಲ್ಲಿನ ವಜ್ರಗಳ ಮೌಲ್ಯ ಶೇ. ೫೦೦ರಷ್ಟು ಅಧಿಕವಾಗಿದೆ. ಪ್ರಸ್ತುತ ಪ್ರತಿ ಕ್ಯಾರೆಟ್ ನಸುಗೆಂಪು ಬಣ್ಣದ ವಜ್ರದ ಬೆಲೆ ೩೦ ಲಕ್ಷ ರೂ.ಇದೆ. ಆರ್ಗೈಲ್ ಗಣಿ ಮುಚ್ಚಿದ್ದರಿಂದ ವಜ್ರದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಭರಣ ತಯಾರಕರು ತಿಳಿಸಿದ್ದಾರೆ.
Courtesyg: Google (photo)