ಕುಲಾಂತರಿ ಬೆಳೆ: ಆಡಿಸುವಾತನ ಮಾತೇ ಅಂತಿಮವೇ?

ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ(ಎಂಒಇಎಫ್‌ಸಿ) ಮಂತ್ರಾಲಯಕ್ಕೆ ಎಲ್ಲ ಭಾಗಿದಾರರನ್ನು ಒಳಗೊಂಡು ಕುಲಾಂತರಿ(ಜಿಎಂ, ಜೈವಿಕವಾಗಿ ಬದಲಿಸಿದ ಬೆಳೆಗಳು) ಕುರಿತು ರಾಷ್ಟ್ರೀಯ ಕಾರ್ಯನೀತಿಯೊಂದನ್ನು ರೂಪಿಸಬೇಕೆಂದು ಹೇಳಿದೆ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವನ್ನು ಒಳಗೊಳ್ಳಬೇಕು; ಕೃಷಿ ಸೇರಿದಂತೆ ಕೆಲವು ವಿಷಯಗಳು ರಾಜ್ಯ ಪಟ್ಟಿಗೆ ಸೇರುವುದರಿಂದ, ಸಂವಿಧಾನದ ಚೌಕಟ್ಟಿನಲ್ಲಿ ಇದು ಅಗತ್ಯ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ಸಂಜಯ್‌ ಕರೋಲ್‌ ಅವರ ಪೀಠ ಹೇಳಿದೆ. ಕುಲಾಂತರಿಗಳಿಗೆ ಸಂಬಂಧಿಸಿದಂತೆ  ರೈತರು, ಬಳಕೆದಾರರು, ವಿಜ್ಞಾನಿಗಳು ಮತ್ತು ಉತ್ಪಾದಕ ಕಂಪನಿಗಳೊಂದಿಗೆ ಬಹಿರಂಗ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರೀಯ ಕಾರ್ಯನೀತಿ ರೂಪಿಸಬೇಕು ಎಂದು ಹೇಳಿದೆ. ಆಗಸ್ಟ್‌ ಮಾಸದಲ್ಲಿ ಚಂಡೀಗಢದಲ್ಲಿ ಸೇರಿದ 18 ರಾಜ್ಯಗಳ 90 ರೈತ ಮುಖಂಡರು ʻಕುಲಾಂತರಿಗಳು ಬೇಡʼ ಎಂದು ಒತ್ತಾಯಿಸಿದರು. ದೇಶದಲ್ಲಿ ಬಿಟಿ ತಳಿಗಳನ್ನು(ಬದನೆ, ಸಾಸಿವೆ, ಭತ್ತ ಇತ್ಯಾದಿ) ಬಿಡಿ ಬಿಡಿಯಾಗಿ ಪರಿಚಯಿಸಲು ಪ್ರಯತ್ನಗಳು ನಡೆಯುತ್ತಿರುವುದರಿಂದ, ಸಂಘಟನೆ-ಸಂಸ್ಥೆಗಳು ಮತ್ತೆ ಮತ್ತೆ ನ್ಯಾಯಾಲಯದ ಕದ ತಟ್ಟಬೇಕಾಗಿ ಬರುತ್ತಿದೆ. ಸರ್ಕಾರ ಏನಾದರೂ ಮಸಲತ್ತು ನಡೆಸಬಹುದು ಎನ್ನುವುದು ರೈತ ಸಂಘಗಳ ಆತಂಕ.

ಪ್ರಸ್ತುತ ಎಲ್ಲ ರಾಜ್ಯಗಳು ಜಿಎಂ ಬೆಳೆಗಳ ಬಗ್ಗೆ ಮುನ್ನೆಚ್ಚರಿಕೆ ಮಾರ್ಗ ಬಳಸಿವೆ; ಕೆಲವು ರಾಜ್ಯಗಳು ನಿಷೇಧಿಸಿದ್ದರೆ, ಹೆಚ್ಚಿನ ರಾಜ್ಯಗಳು ತೆರೆದ ಬಯಲಿನಲ್ಲಿ ಪ್ರಯೋಗಾರ್ಥ ಕೃಷಿಯನ್ನು ನಿಷೇಧಿಸಿವೆ. ಈ ತಂತ್ರಜ್ಞಾನ ಬದಲಿಸಲು ಸಾಧ್ಯವಿಲ್ಲದ ಮಾಲಿನ್ಯ ಉಂಟುಮಾಡುತ್ತದೆ ಎನ್ನುವುದು ಇದಕ್ಕೆ ಕಾರಣ. ಕುಲಾಂತರಿ ಹತ್ತಿಯ ಅಹಿತಕರ ಅನುಭವ ಮುನ್ನೆಚ್ಚರಿಕೆ ಮಾರ್ಗ ಹಿಡಿಯಲು ಕಾರಣ. ದೇಶದಲ್ಲಿ ಅಧಿಕೃತವಾಗಿ ಅಂಗೀಕಾರ ಪಡೆದಿರುವ ಏಕೈಕ ಕುಲಾಂತರಿ ಬೆಳೆ ಹತ್ತಿ ಮಾತ್ರ. 2001ರಲ್ಲಿ ಗುಜರಾತಿನಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಜಿಎಂ ಹತ್ತಿ ಬೆಳೆಯಲಾಯಿತು. ಪರಿಸ್ಥಿತಿಯನ್ನು ನಿರ್ವಹಿ ಸಲು ವಿಫಲವಾದ ನಿಯಂತ್ರಣ ಸಂಸ್ಥೆಗಳು, ಮಾರ್ಚ್‌ 2002ರಲ್ಲಿ ಕುಲಾಂತರಿ ಹತ್ತಿಗೆ ಅನುಮತಿ ನೀಡಿದವು. 22 ವರ್ಷಗಳ ಬಳಿಕ ಬಿಟಿ ಹತ್ತಿಯ ವೈಫಲ್ಯ ಢಾಳಾಗಿ ಕಣ್ಣಿಗೆ ಹೊಡೆಯುತ್ತಿದೆ. ಬಿಟಿ ಹತ್ತಿ ಸಾಂಪ್ರದಾಯಿಕ ಹತ್ತಿಗಿಂತ ಹೆಚ್ಚು ಇಳುವರಿ ನೀಡಲಿಲ್ಲ; ದೇಶದಲ್ಲಿ 2005-06ರಲ್ಲಿ ಕುಲಾಂತರಿ ಹತ್ತಿಯನ್ನು ಶೇ.12ರಷ್ಟು ಬೆಳೆ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಇಳುವರಿ ಹೆಕ್ಟೇರಿಗೆ 472 ಕೆಜಿ ಇತ್ತು. 2023-24ರಲ್ಲಿ ಬಿತ್ತನೆಯಾದ ಹೆಚ್ಚಿನ ಹತ್ತಿ ಬಿಟಿಯಾಗಿದ್ದರೂ, ಇಳುವರಿ 429 ಕೆಜಿಗೆ ಇಳಿದಿದೆ. ಕುಲಾಂತರಿ ತಳಿ ಬಾಲ್‌ವರ್ಮ್‌ನಿಂದ ಬೆಳೆ ಹಾನಿಯನ್ನು ತಡೆಯುತ್ತದೆ. ಇದರಿಂದ ಕೀಟನಾಶಕಗಳ ಬಳಕೆ ಕಡಿಮೆಯಾಗಲಿದೆ ಎನ್ನಲಾಗಿತ್ತು. ಆದರೆ, ಕೀಟನಾಶಕಗಳ ಎಕರೆವಾರು ಹಾಗೂ ಒಟ್ಟು ಬಳಕೆ ಎರಡೂ ಹೆಚ್ಚಿದೆ. ರಾಸಾಯನಿಕ ಗೊಬ್ಬರದ ಬಳಕೆ ಕೂಡ 3 ಪಟ್ಟು ಹೆಚ್ಚಿದ್ದು, ಸರ್ಕಾರದ ಮೇಲೆ ಸಬ್ಸಿಡಿ ಹೊರೆ ಅಧಿಕಗೊಂಡಿದೆ. ಬಾಲ್‌ವರ್ಮ್‌ ಕಾಲಕ್ರಮೇಣ ಬಿಟಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುತ್ತದೆ ಎಂಬ ಆತಂಕ ನಿಜವಾಯಿತು. ನಸುಗೆಂಪು ಬಾಲ್‌ವರ್ಮ್‌ ಕಾಟ ಮಿತಿ ಮೀರಿದ್ದು, ದೇಶದ ಹಲವು ಪ್ರಾಂತ್ಯಗಳಲ್ಲಿ ಹತ್ತಿ ಕೃಷಿ ಕಡಿಮೆಯಾಗಿದೆ. ಬೆಳೆ ಹಾನಿಯಿಂದ ರೈತರು ಬಸವಳಿದಿದ್ದಾರೆ. ಕುಲಾಂತರಿ ಹತ್ತಿಯನ್ನು ಉತ್ಪಾದಿಸಿದ ಬಹುರಾಷ್ಟ್ರೀಯ ಕಂಪನಿ ಇಲ್ಲವೇ ಬೆಳೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ ಬೆಳೆ ನಾಶಕ್ಕೆ ಪರಿಹಾರ ನೀಡುತ್ತಿಲ್ಲ. ಬದಲಾಗಿ, ರಾಜ್ಯ ಸರ್ಕಾರಗಳು ಪರಿಹಾರ ನೀಡುತ್ತಿವೆ. ಇಂಥ ತಂತ್ರಜ್ಞಾನ ಅಭಿವೃದ್ಧಿಪಡಿಸಿದವರು ಇಲ್ಲವೇ ಉತ್ಪಾದಕರು ಯಾವುದೇ ಹೊಣೆ ಹೊತ್ತುಕೊಳ್ಳದೆ ತಪ್ಪಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಉದಾಹರಣೆ. ಕೇಂದ್ರ ಸರ್ಕಾರ ಕುಲಾಂತರಿ ಹತ್ತಿ ಹಲವು ರೈತರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡಿದೆ.

ಇದರಿಂದ, ಜಗತ್ತಿನ ಅತ್ಯಂತ ದೊಡ್ಡ ಸಾವಯವ ಹತ್ತಿ ಉತ್ಪಾದಕ/ರಫ್ತುದಾರ ಎಂಬ ಅಗ್ಗಳಿಕೆಯನ್ನು ದೇಶ ಕಳೆದುಕೊಂಡಿದೆ. ದೇಶದ ಬಹುತೇಕ ದೇಶಿ ಹತ್ತಿ ತಳಿಗಳ ಬೀಜಗಳು ಕುಲಾಂತರಿಯಿಂದ ಕಲಬೆರಕೆಯಾಗಿವೆ. ಒಂದು ವೇಳೆ ರೈತರೊಬ್ಬರು ಕುಲಾಂತರಿ ಅಲ್ಲದ ಹತ್ತಿಯನ್ನು ಬೆಳೆಯೋಣ ಎಂದುಕೊಂಡರೆ, ದೇಶಿ ಬೀಜ ಮುಕ್ತ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ; ಉತ್ಪಾದಕ ಕಂಪನಿಗೆ ಒಂದು ಋತು ಇಲ್ಲವೇ ವರ್ಷ ಮೊದಲು ಬೇಡಿಕೆ ಇರಿಸಬೇಕಾಗುತ್ತದೆ. ಹೀಗಿದ್ದರೂ, ಬೀಜ ಸಿಗುವ ಖಾತ್ರಿಯಿಲ್ಲ. ಭಾರತೀಯ ಕೃಷಿ ಸಂಶೋಧನೆ ಮಂಡಳಿ(ಐಸಿಎಆರ್)ಯ ಸೋಪೋರಿ ಸಮಿತಿ ಪ್ರಕಾರ, ದೇಶಿ ಬಿಕನೇರಿ ನರ್ಮ ತಳಿಯು ಕೃಷಿ ವಿಶ್ವವಿದ್ಯಾನಿಲಯವೊಂದರ ಕ್ಷೇತ್ರ ಪ್ರಯೋಗದಲ್ಲಿ ಮಾನ್ಸಾಂಟೊದ ವಂಶವಾಹಿಯಿಂದ ಕಲಬೆರಕೆಯಾಗಿದೆ. ದೇಶದ ಕೃಷಿ ವಿಶ್ವವಿದ್ಯಾನಿಲಯ-ಸಂಶೋಧನಾ ಸಂಸ್ಥೆಗಳಲ್ಲಿರುವ ವಂಶವಾಹಿ ದ್ರವ್ಯದ ಶುದ್ಧತೆ ಬಗ್ಗೆ ಪ್ರಶ್ನೆ ಎತ್ತಿದೆ.

ಆಹಾರ ಸುರಕ್ಷೆ ಮತ್ತು ಮಾನದಂಡಗಳ ಕಾಯಿದೆ 2006ರಡಿ ರಚನೆಯಾದ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ)ವು ಕುಲಾಂತರಿ ಖಾದ್ಯತೈಲ ಸೇರಿದಂತೆ ಹಲವು ಜಿಎಂ ಆಹಾರಗಳ ಮಾರಾಟಕ್ಕೆ ಅನುಮತಿ ನೀಡಿದೆ. ಇದರಿಂದ ಆಹಾರ ಸರಪಳಿ ಕೂಡ ಮಲಿನವಾಗಿದೆ. ಜಿಎಂ ಆಹಾರ ಪೊಟ್ಟಣಕ್ಕೆ ಚೀಟಿ ಅಂಟಿಸುವಿಕೆಗೆ ಸಂಬಂಧಿಸಿದ ವಿಭಾಗ 23ನ್ನು ಅನುಷ್ಠಾನಗೊಳಿಸಲು ಹೇಳಿರುವ ಸುಪ್ರೀಂ ಕೋರ್ಟ್‌, ಕಾಯಿದೆಯ ವಿಭಾಗ 22 ವಿಧಿಸುವ ಯಾವುದೇ ನಿಯಂತ್ರಣಗಳನ್ನು ಹೇರಿಲ್ಲ. ಭಾರತದಲ್ಲಿ ಹೆಚ್ಚಿನ ಪಾಲು ಆಹಾರ ಪದಾರ್ಥಗಳು ತೆರೆದ ರೀತಿಯಲ್ಲಿ ಮಾರಾಟವಾಗುವುದರಿಂದ, ಪೊಟ್ಟಣದ ಮೇಲೆ ಚೀಟಿ ಅಂಟಿಸುವಿಕೆಯು ಒಂದು ಅರ್ಥಹೀನ ಚಟುವಟಿಕೆಯಾಗಲಿದೆ. ಹಾಗೂ, ಚೀಟಿ ಅಂಟಿಸುವಿಕೆಯು ಸುರಕ್ಷತೆ ಇಲ್ಲವೇ ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ಖಾತ್ರಿಗೊಳಿಸುವುದಿಲ್ಲ.

2005ರ ಆರಂಭದಲ್ಲಿ ಅರುಣಾ ರಾಡ್ರಿಗಸ್(ರಿಟ್‌ ಅರ್ಜಿ ಸಂಖ್ಯೆ 260, ಸುಪ್ರೀಂ ಕೋರ್ಟ್)‌ಅವರು ಸ್ವಾಭಾವಿಕ ಪರಿಸರ, ಹೊಲಗದ್ದೆ ಮತ್ತು ಆಹಾರವನ್ನು ಕೃಷಿ ರಾಸಾಯನಿಕಗಳು ಮತ್ತು ಕುಲಾಂತರಿಗಳಿಂದ ಮುಕ್ತಗೊಳಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 20 ವರ್ಷಗಳ ಬಳಿಕ ಕುಲಾಂತರಿಗಳು ಮನುಷ್ಯ, ಪ್ರಾಣಿಗಳ ಆರೋಗ್ಯಕ್ಕೆ ಹಾನಿಕರ ಎಂಬುದು ಸಾಬೀ ತಾಗಿದೆ. 2005-2015ರ ಅವಧಿಯಲ್ಲಿ ಜಗತ್ತಿನೆಲ್ಲೆಡೆ ಕುಲಾಂತರಿ ಹತ್ತಿ, ಮೆಕ್ಕೆ ಜೊಳ, ಸೋಯಾ, ರೇಪ್‌ ಸೀಡ್‌, ಕನೋಲಾ ಸೇರಿದಂತೆ ಹಲವು ಬೆಳೆಗಳು ವಿಜೃಂಭಿಸಿದವು. ಅಮೆರಿಕ, ಬ್ರೆಜಿಲ್‌, ಅರ್ಜೆಂಟೀನಾ, ಆಸ್ಟ್ರೇಲಿಯ ಕೂಡ ಕುಲಾಂತರಿ ಹತ್ತಿ ಬೆಳೆದವು. ಆದರೆ, ಈಗ ಬಿಟಿ ಬೆಳೆಗಳ ಉಬ್ಬರ ಇಳಿದಿದೆ. 2023ರ ಸಮೀಕ್ಷೆ ಪ್ರಕಾರ, ಜಗತ್ತಿನ ಒಟ್ಟು ಕೃಷಿ ಕ್ಷೇತ್ರವಾದ 468 ಕೋಟಿ ಹೆಕ್ಟೇರಿನಲ್ಲಿ ಕುಲಾಂತರಿ ಬೆಳೆ ಇರುವುದು 21 ಕೋಟಿ ಹೆಕ್ಟೇರಿನಲ್ಲಿ ಮಾತ್ರ(ಶೇ.4). ಐದು ದೇಶಗಳಲ್ಲಿ ಅದು ಔದ್ಯಮಿಕ ಬೆಳೆ; ಆಹಾರ ಬೆಳೆಯಲ್ಲ. ಕುಲಾಂತರಿ ಹತ್ತಿಯನ್ನು ಈಜಿಪ್ಟ್‌, ಪೆರು, ಟರ್ಕಿ ಸೇರಿದಂತೆ 13 ದೇಶಗಳು ಕೈ ಬಿಟ್ಟಿವೆ. ಜಪಾನಿನಲ್ಲಿ ಬಿಟಿ ಬೆಳೆಗೆ ಅವಕಾಶವಿಲ್ಲ; ಫಿಲಿಪ್ಪೀನ್ಸ್‌ನ ನ್ಯಾಯಾಲಯ ಇತ್ತೀಚೆಗೆ ಬಿಟಿ ಬದನೆ-ಭತ್ತಕ್ಕೆ ನಿಷೇಧ ಹೇರಿದೆ. ಸರ್ಕಾರದ ದಾಖಲೆಗಳ ಪ್ರಕಾರ, ಕುಲಾಂತರಿ ಹತ್ತಿ ಸೋಲುತ್ತಿದೆ.ಹೀಗಿದ್ದರೂ, ಬಹುರಾಷ್ಟ್ರೀಯ ಕಂಪನಿಗಳು ಹೊಸ ಕುಲಾಂತರಿ ಬೆಳೆಗಳನ್ನು ಬಿಡುಗಡೆಗೊಳಿಸುವ ಹುನ್ನಾರ ಮುಂದುವರಿಸಿವೆ. ಹಿಂದೊಮ್ಮೆ ಬಿಟಿ ಬದನೆಯನ್ನು ಪರಿಚಯಿಸಲು ಮಾನ್ಸಾಂಟೋ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಪರಿಸರ ಸಚಿವರಾಗಿದ್ದ ಜೈರಾಮ್‌ ರಮೇಶ್‌ ಅವರು 2010ರಲ್ಲಿ ಬೆಂಗಳೂರು ಸೇರಿದಂತೆ ದೇಶದ 10 ನಗರಗಳಲ್ಲಿ ಸಾರ್ವಜನಿಕ ಸಮಾಲೋಚನೆ ನಡೆಸಿದರು. ಬೆಂಗಳೂರಿನಲ್ಲಿ ನಡೆದಿದ್ದ ಸಭೆಯಲ್ಲಿ ಎಚ್‌.ಡಿ. ದೇವೇಗೌಡ, ಯು.ಆರ್‌.ಅನಂತಮೂರ್ತಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡು ಕುಲಾಂತರಿ ಬದನೆ ವಿರುದ್ಧ ಧ್ವನಿಯೆತ್ತಿದರು. ಅಂತಿಮವಾಗಿ ಕೇಂದ್ರ ಸರ್ಕಾರವು ಮುನ್ನೆಚ್ಚರಿಕೆ ತತ್ವ ಆಧರಿಸಿ, ಬಿಟಿ ಬೆಳೆಗಳ ಮೇಲೆ ಅನಿರ್ದಿಷ್ಟಾವಧಿ ನಿಷೇಧ ವಿಧಿಸಿತು.

ಕುಲಾಂತರಿ ಸಾಸಿವೆಯದು ಇನ್ನೊಂದು ಕಥೆ. 10 ವರ್ಷಗಳ ಹಿಂದೆ ಮಾನ್ಸಾಂಟೋ ಬಿಟಿ ತಂತ್ರಜ್ಞಾನದ ತುಣುಕೊಂದನ್ನು ದಿಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಡಾ.ದೀಪಕ್ ಪೈಂತಾಲ್‌ ಅವರಿಗೆ ನೀಡಿತ್ತು. ಅವರು ಅದರಿಂದ ಕುಲಾಂತರಿ ಸಾಸಿವೆ ಸೃಷ್ಟಿಸಿ, ಬಿಡುಗಡೆಗೊಳಿಸಲು ತಿಣುಕುತ್ತಿದ್ದಾರೆ. ಕುಲಾಂತರಿ ಸಾಸಿವೆ ಅಧಿಕ ಇಳುವರಿಯನ್ನೇನೂ ಕೊಡುವುದಿಲ್ಲ. ಬಳಕೆಯಲ್ಲಿರುವ ಹೈಬ್ರಿಡ್‌ ತಳಿಗಳು ಇದಕ್ಕಿಂತ ಅಧಿಕ ಇಳುವರಿ ನೀಡುತ್ತವೆ. ಆದರೆ, ಇದು ಕಳೆನಾಶಕಕ್ಕೆ ಪ್ರತಿರೋಧ ಗುಣ ಹೊಂದಿದ್ದು, ಕೀಟನಾಶಕ ಬಳಸಿದರೆ ಕಳೆ ಮಾತ್ರ ಸಾಯುತ್ತದೆ. ಈ ಕಳೆನಾಶಕದಿಂದ ಮನುಷ್ಯರ ಆರೋಗ್ಯ, ಪರಿಸರ, ಜಲಮೂಲಗಳು, ದುಂಬಿ, ಜೇನುನೊಣ, ಚಿಟ್ಟೆ, ಎರೆಹುಳು, ಹೈನು ನೀಡುವ ರಾಸುಗಳ ಮೇಲೆ ಆಗುವ ಪರಿಣಾಮವೇನು ಎಂಬುದು ಗೊತ್ತಿಲ್ಲ. ಬಿಟಿ ಸಾಸಿವೆಯಿಂದ ಕಂಪನಿಗೆ ಲಾಭ ಆಗದೆ ಇರಬಹುದು; ಆದರೆ, ಸಾಸಿವೆಗೆ ಅನುಮತಿ ಸಿಕ್ಕರೆ ಸಾಲುಸಾಲಾಗಿ ಬೆಂಡೆ, ಟೊಮೇಟೊ, ಆಲೂಗಡ್ಡೆ, ಸೌತೆ, ಮೆಣಸು, ಅವರೆ, ಭತ್ತ ಇತ್ಯಾದಿ ಬೆಳೆಗಳ ಬಿಟಿ ತಳಿಗೆ ಅನುಮತಿ ಕೋರಿ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಇದನ್ನು ಪ್ರಶ್ನಿಸುವವರು ನ್ಯಾಯಾಲಯಕ್ಕೆ ಅಲೆದಾಡಬೇಕಾಗುತ್ತದೆ.

ಎಚ್‌ಟಿ(ಸಸ್ಯನಾಶಕಗಳಿಗೆ ಪ್ರತಿರೋಧ, ಹರ್ಬಿಸೈಡ್‌ ರೆಸಿಸ್ಟೆಂಟ್‌) ಬೆಳೆಗಳಿಗೆ ಅವಕಾಶ: ಜಾಗತಿಕ ಇಲ್ಲವೇ ಕುಲಾಂತರಿ ಹತ್ತಿ ವೈಫಲ್ಯದಿಂದ ಜಿಇಎಸಿ ಇಲ್ಲವೇ ಐಸಿಎಆರ್‌ ಪಾಠ ಕಲಿತಂತೆ ಇಲ್ಲ. ದೇಶದ ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ ಎ‌ಚ್‌ಟಿ ಹತ್ತಿ ಬೆಳೆಯುತ್ತಿದ್ದರೂ, ಜೈವಿಕ ಎಂಜಿನಿಯರಿಂಗ್‌ ಮೇಲ್ವಿಚಾರಣೆ ಸಮಿತಿ(ಜಿಇಎಸಿ) ಕಣ್ಣು ಮುಚ್ಚಿ ಕುಳಿತುಕೊಂಡಿದೆ. ಎಚ್‌ಟಿ ಹತ್ತಿಯ ಅಕ್ರಮ ಕೃಷಿಯೊಂದಿಗೆ, ಬೀಜದ ಅಕ್ರಮ ವ್ಯಾಪಾರ ಹಾಗೂ ಗ್ಲೈಫೋಸೇಟ್‌ ಕೀಟನಾಶಕದ ವ್ಯಾಪಕ ಬಳಸುವಿಕೆ ನಡೆದಿದೆ.

ಇಷ್ಟಲ್ಲದೆ, ಐಸಿಎಆರ್‌ ಎರಡು ಎಚ್‌ಟಿ ಬಾಸ್ಮತಿ ತಳಿ(ಪೂಸಾ ಬಾಸ್ಮತಿ 1979 ಹಾಗೂ 1985) ಹಾಗೂ 2 ಬಾಸ್ಮತಿಯಲ್ಲದ ತಳಿಗಳನ್ನು ಅಭಿವೃದ್ಧಿಗೊಳಿಸಿದೆ. ಇವು ಕಳೆನಾಶಕ ಇಮಾಝೆತಾಪೈರ್‌ಗೆ ಪ್ರತಿರೋಧ ಶಕ್ತಿ ಹೊಂದಿವೆ. ಜೊತೆಗೆ, ಎಚ್‌ಟಿ ಗೋಧಿಯ ಬಿಡುಗಡೆಗೂ ಸಿದ್ಧತೆ ನಡೆಸಿದೆ. ಎಚ್‌ಟಿ ತಳಿಗಳನ್ನು ಜೀವಿಗಳು-ಸೂಕ್ಷ್ಮಜೀವಿಗಳ ವಂಶವಾಹಿಗಳನ್ನು ತಿದ್ದಿ(ಇಂಡ್ಯೂಸ್ಡ್‌ ಕೆಮಿಕ‌ಲ್  ಮ್ಯುಟಾಜೆನೆಸಿಸ್‌) ಮೂಲಕ ಉತ್ಪಾದಿಸಲಾಗಿದೆ; ಇಂಥ ಬೆಳೆಗಳ ಅಭಿವೃದ್ಧಿಗೆ ಹಲವು ವರ್ಷ ಬೇಕಿದ್ದು, ಜಿಇಎಸಿ ಮತ್ತು ಇತರ ನಿಯಂತ್ರಣ ಸಂಸ್ಥೆಗಳಿಗೆ ಗೊತ್ತಿರಲೇ ಬೇಕು. ಅಷ್ಟಲ್ಲದೆ, ಜಿಇಎಸಿ ಸಮಿತಿಯಲ್ಲಿ ಐಸಿಎಆರ್‌ನ ಪರಿಣತ ಸದಸ್ಯರೊಬ್ಬರು ಇರುತ್ತಾರೆ. ಐಸಿಎಆರ್‌ ಎಚ್‌ಟಿ ಬೆಳೆ ಅಭಿವೃದ್ಧಿಪಡಿಸುತ್ತಿದ್ದಾಗ ಇವರೇನು ಮಾಡುತ್ತಿದ್ದರು?ಈ ವ್ಯವಹಾರಗಳೆಲ್ಲವೂ ಕೊಡುಕೊಳು ಮೂಲಕ ನಡೆಯುತ್ತದೆ.

ಎಚ್‌ಟಿ ಬೆಳೆಗಳು ವಿಫಲ ತಂತ್ರಜ್ಞಾನ ಆಧರಿಸಿದ್ದು, ಪ್ರಾಣಿ-ಮನುಷ್ಯರಿಗೆ ಅಪಾಯಕಾರಿ. ಸುಪ್ರೀಂ ಕೋರ್ಟ್‌ ನೇಮಿಸಿದ ತಾಂತ್ರಿಕ ಪರಿಣತರ ಸಮಿತಿ(ಟಿಇಸಿ) 2012-13ರಲ್ಲಿ ಎಚ್‌ಟಿ ಬೆಳೆಗಳನ್ನು ನಿಷೇಧಿಸಬೇಕೆಂದು ಶಿಫಾರಸು ಮಾಡಿತ್ತು. ಜೊತೆಗೆ, ಅರ್ಜಿದಾರರು ಸಲ್ಲಿಸಿದ ಪ್ರಾಣಿಗಳ ಮೇಲಿನ ಅಧ್ಯಯನ ಒಳಗೊಂಡ ಪೂರ್ವೇತಿಹಾಸ ದಾಖಲೆಗಳು ಬಿಟಿ ಹತ್ತಿ/ಬದನೆಯ ವಿಪರಿಣಾಮಗಳನ್ನು ಹೇಳಿದ್ದು, ನಿಯಂತ್ರಣ ವ್ಯವಸ್ಥೆ ಅವುಗಳನ್ನು ತಡೆಯಬೇಕಿತ್ತು ಎಂದು ಟಿಇಸಿ ಮತ್ತು ಸಂಸದೀಯ ಸ್ಥಾಯಿ ಸಮಿತಿಗಳು ಹೇಳಿದ್ದವು. ಈ ಬೆಳೆಗಳು ಘೋರ ಪರಿಣಾಮ ಬೀರುತ್ತವೆ(ಬ್ರೆಜಿಲ್‌, ಅಮೆರಿಕ ಹಾಗೂ ಅರ್ಜೆಂಟೀನಾದಲ್ಲಿ 40 ವರ್ಷಕ್ಕೂ ಅಧಿಕ ಕಾಲ ಎಚ್‌ಟಿ ಬೆಳೆ ಬೆಳೆದ ಬಳಿಕ ಇದು ಸಾಬೀತಾಗಿದೆ) ಮತ್ತು ಬೆಳೆಯೊಂದರ ಮೂಲಸ್ಥಾನದಲ್ಲಿ ಎಚ್‌ಟಿ ಬೆಳೆ ಕೂಡದು. ಭತ್ತ- ಸಾಸಿವೆಯ ಮೂಲಸ್ಥಾನ ಭಾರತ. ಹೀಗಿದ್ದರೂ, ಐಸಿಎಆರ್‌ ಇಂಥ ಸಾಹಸಕ್ಕೆ ಏಕೆ ಮುಂದಾಯಿತು?

ಕರಾಳ ಕೂಟ: ಭಾರತ ಮತ್ತು ಅಮೆರಿಕದಲ್ಲಿನ ನಿಯಂತ್ರಣ ಏಜೆನ್ಸಿಗಳು ಆಹಾರ ಸಂಸ್ಕರಣೆ ಉದ್ಯಮ, ಕೃಷಿ ವ್ಯಾಪಾರ ಕಂಪನಿಗಳು ಹಾಗೂ ರಾಸಾಯನಿಕ-ಕೀಟನಾಶಕ ಉತ್ಪಾದಕರ ಜೇಬಿನಲ್ಲಿವೆ.

ಈ ಬಹುರಾಷ್ಟ್ರೀಯ ಸಂಸ್ಥೆಗಳ ಆರ್ಥಿಕ-ಮಾನವ ಸಂಪನ್ಮೂಲ ಸಾಮರ್ಥ್ಯ ಅಸದಳವಾದುದು. ಐಸಿಎಆರ್‌ 2018ರಲ್ಲಿ ಮಾನ್ಸಾಂಟೋ ಜತೆ ಹಾಗೂ ಕೃಷಿ ಸಾಧನಗಳ ಉತ್ಪಾದಕ ಬೇಯರ್‌ ಜೊತೆ 2023ರಲ್ಲಿ ಒಪ್ಪಂದ ಮಾಡಿಕೊಂಡಿದೆ. ಜರ್ಮನಿಯ ಔಷಧ ಕಂಪನಿಯಾದ ಬೇಯರ್‌, ಅಮೆರಿಕದ ರಾಸಾಯನಿಕಗಳ ಉತ್ಪಾದಕ ಕಂಪನಿಯೊಂದಿಗೆ ಸೇರಿಕೊಂಡಿದೆ. ನಾನ್‌ ಹಾಡ್ಜ್‌ಕಿನ್ಸ್‌ ಲಿಂಪೋಮಾ (ರಕ್ತದ ಕ್ಯಾನ್ಸರ್)ಕ್ಕೆ ಔಷಧ ಉತ್ಪಾದಿಸುವ ಬೇಯರ್‌ ಮತ್ತು ಆ ಕಾಯಿಲೆಗೆ ಕಾರಣವಾಗುವ ರೌಂಡ್‌ಅಪ್‌(ಗ್ಲೈಫೋಸೇಟ್‌) ಕೀಟನಾಶಕ ಉತ್ಪಾದಿಸುವ ಮಾನ್ಸಾಂಟೋ ಜೊತೆ ಒಂದಾಗುತ್ತದೆ! ರೌಂಡ್ಅಪ್‌ ಅಮೆರಿಕದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕೀಟನಾಶಕ ಮತ್ತು ಅಲ್ಲಿನ ನ್ಯಾಯಾಲಯಗಳಲ್ಲಿ ಬೇಯರ್‌ ಮೇಲೆ 1 ಲಕ್ಷಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಕಂಪನಿಯು ನಾನ್‌ ಹಾಡ್ಜ್‌ಕಿನ್ಸ್‌ ಲಿಂಪೋಮಾ ರೋಗಿಗಳಿಗೆ ಕಳೆದ ಕೆಲವು ವರ್ಷದಲ್ಲಿ 11 ಶತಕೋಟಿ ಡಾಲರ್‌ ಪರಿಹಾರ ನೀಡಿದೆ ಎಂದು ಸ್ಟಾನ್‌ಫರ್ಡ್‌ ವಿಶ್ವವಿದ್ಯಾನಿಲಯದ ಡಾ. ಕೇಸಿ ಮೀನ್ಸ್‌ ಹೇಳುತ್ತಾರೆ. ರೌಂಡ್‌ಅಪ್‌ ಎಂಡೋಕ್ರೈನ್‌ ಉತ್ಪಾದನೆಯಲ್ಲಿ ಅಡಚಣೆ ಉಂಟುಮಾಡುವುದರಿಂದ, ಜನನ ದೋಷಗಳಿಗೆ ಕಾರಣವಾಗುತ್ತದೆ. ಮಾನ್ಸಾಂಟೋ ಮತ್ತು ಅಮೆರಿಕದ ಪರಿಸರ ಏಜೆನ್ಸಿಗೆ ಗ್ಲೈಫೋಸೇಟ್‌ ಕ್ಯಾನ್ಸರಿಗೆ ಕಾರಣವಾಗುತ್ತದೆ ಎಂದು 40 ವರ್ಷಗಳಿಂದ ಗೊತ್ತಿತ್ತು. ಆದರೂ, ಕಣ್ಣು-ಕಿವಿ-ಬಾಯಿ ಮುಚ್ಚಿಕೊಂಡಿದ್ದವು.

ಕೆನಡಾದ ಸೆಂಟರ್‌ ಫಾರ್‌ ರಿಸರ್ಚ್‌ ಆನ್‌ ಗ್ಲೋಬಲೈಸೇಷನ್‌ನ ಸಂಶೋಧಕ ಮತ್ತು ಲೇಖಕ ಕಾಲಿನ್‌ ಟಾ‌ಡ್‌ಹಂಟರ್‌ ಪ್ರಕಾರ, ಅಮೆಜಾನ್‌, ಮೈಕ್ರೋಸಾಫ್ಟ್‌, ಗೂಗಲ್‌ ಹಾಗೂ ಫೇಸ್‌ಬುಕ್‌ನಂಥ ದತ್ತಾಂಶ ಕಂಪನಿಗಳು ಸಾಂಪ್ರದಾಯಿಕ ಕೃಷಿ ಉದ್ಯಮ ಸಂಸ್ಥೆಗಳಾದ ಕಾರ್ಟೆವಾ, ಬೇಯರ್‌, ಕಾರ್ಗಿಲ್‌ ಮತ್ತು ಸಿಂಜೆಂಟಾ ಜೊತೆಗೆ ಕೈ ಜೋಡಿಸಿವೆ. ಬಿಲ್‌ ಮತ್ತು ಮೆಲಿಂಡಾ ಗೇಟ್ಸ್‌ ಫೌಂಡೇಷನ್‌ ಹಾಗೂ ಬ್ಲಾಕ್‌ರಾಕ್‌ ಮತ್ತು ವ್ಯಾನ್‌ಗಾರ್ಡ್‌ನಂಥ ಭಾರಿ ಹಣಕಾಸು ಸಂಸ್ಥೆಗಳೂ ಇವುಗಳ ಜೊತೆಗೆ ಕೈಜೋಡಿಸಿವೆ. ಇವೆಲ್ಲವೂ ತಮ್ಮ ಕೃಷಿ ಮಾದರಿ ಹಾಗೂ ಆಹಾರ ಸಂಸ್ಕೃತಿಯನ್ನು ಜಗತ್ತಿನ ಮೇಲೆ ಹೇರುತ್ತಿವೆ.

ಇದು ಆತ್ಮನಿರ್ಭರದ ಲಕ್ಷಣವಲ್ಲ: ನಮ್ಮ ಆಹಾರ ಮತ್ತು ಕೃಷಿಯಲ್ಲಿ ಖಾಸಗಿ ಹಿತಾಸಕ್ತಿಗಳ ಹಿಡಿತದ ಮೂಲ 20 ವರ್ಷಗಳ ಹಿಂದೆ ಸಹಿ ಹಾಕಲ್ಪಟ್ಟ ನಾಲೆಜ್‌ ಇನಿಷಿಯೇಟಿವ್‌ ಇನ್‌ ಅಗ್ರಿಕಲ್ಚರ್‌ ಆಂಡ್‌ ಎಜುಕೇಷನ್‌ (ಕೆಐಎ)ನಲ್ಲಿದೆ. ಈ ಒಪ್ಪಂದದ ಮೂಲಕ ಭಾರತ ಸರ್ಕಾರವು ತನ್ನ ಜೈವಿಕ ವೈವಿಧ್ಯದ ಕೀಲಿಕೈಯನ್ನು ಅಮೆರಿಕಕ್ಕೆ ಒಪ್ಪಿಸಿತು. ದೇಶದ 47 ಕೃಷಿ ಪ್ರಯೋಗಾಲಯ ಗಳು/ವಿಶ್ವವಿದ್ಯಾನಿಲಯಗಳಲ್ಲಿದ್ದ ವಂಶವಾಹಿ ಬ್ಯಾಂಕ್‌ನ್ನು ಐಸಿಎಆರ್‌ ಪರಭಾರೆ ಮಾಡಿತು. ಈ ಒಪ್ಪಂದ ಈಗ ಸಕ್ರಿಯವಾಗಿಲ್ಲ. ಆದರೆ, ಅದರ ವಿಷದ ಬೇರುಗಳು ಎಲ್ಲೆಡೆ ಹರಡಿಕೊಂಡು ಬಿಟ್ಟಿವೆ.

ದೇಶದ ತ್ರಿವರ್ಣ ಧ್ವಜದಲ್ಲಿ ಬಳಕೆಯಾಗುವ ಹತ್ತಿಯ ನಿಯಂತ್ರಣ ಬಹುರಾಷ್ಟ್ರೀಯ ಕಂಪನಿಯ ಹಿಡಿತದಲ್ಲಿ ಇರುವುದು ʻಆತ್ಮನಿರ್ಭರ ಭಾರತʼದ ಲಕ್ಷಣ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕುಲಾಂತರಿ ಕುರಿತ ರಾಷ್ಟ್ರೀಯ ಕಾರ್ಯನೀತಿ ರೂಪಿಸಲು ಮತ್ತೊಮ್ಮೆ ಸಮಾಲೋಚನೆ ನಡೆಸುವ ಅಗತ್ಯವಿದೆಯೇ? ಖಂಡಿತ ಇಲ್ಲ. ಆದರೆ, ಆಳುವವರನ್ನು ಆಳುವವರು ಬೇರೆಯೇ ಇರುತ್ತಾರೆ. ಬಿಟಿ ಬದನೆ ವಿರುದ್ಧ ನಿರ್ಣಯಕ್ಕೆ ಕಾರಣರಾದ ಜೈಯರಾಂ ರಮೇಶ್‌ ಅವರನ್ನು ಯುಪಿಎ ಸರ್ಕಾರ ಕಿತ್ತುಹಾಕಿ, ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ರವಾನಿಸಿತು. ಅವರ ಸ್ಥಾನಕ್ಕೆ ಬಂದ ಜಯಂತಿ ನಟರಾಜನ್‌ ಅವರು ಪರಿಸರ ಮಂತ್ರಾಲಯದಲ್ಲಿ ಉಳಿದುಕೊಂಡಿದ್ದ ಎಲ್ಲ ಕಡತಗಳಿಗೆ ಸಹಿ ಹಾಕಿ ಮುಕ್ತಿ ಕಾಣಿಸಿದರು!

-ಋತ

Journalist,Translator,avid bibliophile

Leave a Reply

Your email address will not be published. Required fields are marked *

Back To Top