ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧವಾಗಿ ನಾಲ್ಕು ಮಸೂದೆಗಳನ್ನು ಹಾಗೂ ನಿರ್ಣಯವನ್ನು ಪಂಜಾಬ್ ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ವಿವಾದಾಸ್ಪದ ಕಾನೂನುಗಳ ವಿರುದ್ಧದ ಕಾಂಗ್ರೆಸ್ ಹೋರಾಟಕ್ಕೆ, ವಿಧಾನಸಭೆಯಲ್ಲಿ ವಿಪಕ್ಷಗಳಾದ ಅಕಾಲಿದಳ, ಆಮ್ ಆದ್ಮಿ ಪಕ್ಷ(ಎಎಪಿ) ಹಾಗೂ ಇನ್ಸಾಫ್ ಪಕ್ಷ ಬೆಂಬಲ ನೀಡಿವೆ. ಈ ಮೂಲಕ ಕೃಷಿ ಕಾನೂನಿನ ವಿರುದ್ಧ ನಿರ್ಣಯ ಮಂಡಿಸಿದ ದೇಶದ ಮೊದಲ ರಾಜ್ಯವಾಗಿ ಪಂಜಾಬ್ ಗುರುತಿಸಿ ಕೊಂಡಿದೆ. ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಹಾಗೂ ಹರಿಯಾಣದಲ್ಲಿ ಪ್ರತಿಭಟನೆಗಳು ಮುಂದುವರಿದಿರುವ ಸಂದರ್ಭದಲ್ಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಮಸೂದೆಗಳ ಕುರಿತು ವಿಧಾನಸಭೆಯಲ್ಲಿ ಸುಮಾರು ಐದು ಗಂಟೆ ಚರ್ಚೆ ನಡೆದಿದ್ದು, ಬಿಜೆಪಿಯ ಇಬ್ಬರು ಶಾಸಕರು ಕಲಾಪ ಬಹಿಷ್ಕರಿಸಿದ್ದರು. ಸಂಸತ್ ಅಂಗೀಕರಿಸಿದ ಕಾನೂನುಗಳಿಗೂ ರಾಜ್ಯವು ಮಾಡಿದ ಕಾನೂನುಗಳಿಗೂ ವ್ಯತ್ಯಾಸವಿದ್ದರೆ, ರಾಜ್ಯದ ಕಾನೂನು ಜಾರಿಯಾಗಲು ಸಂವಿಧಾನದ ೨೫೪(೨)ನೇ ವಿಧಿಯಡಿ ರಾಷ್ಟ್ರಪತಿಯವರ ಅನುಮತಿ ಅಗತ್ಯವಾಗಿದೆ. ಹೀಗಾಗಿ ಪಂಜಾಬ್ ವಿಧಾನಸಭೆಯು ಈ ಮಸೂದೆಗಳನ್ನು ಅಂಗೀಕರಿಸಿದ್ದರೂ, ಇದಕ್ಕೆ ರಾಷ್ಟ್ರಪತಿಯವರ ಅನುಮತಿ ಬೇಕಾಗಿರುವ ಕಾರಣದಿಂದ, ಕೇಂದ್ರ ಹಾಗೂ ರಾಜ್ಯದ ನಡುವೆ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ. ಮಸೂದೆ ಹಾಗೂ ನಿರ್ಣಯವು ಅಂಗೀಕಾರವಾದ ಬಳಿಕ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ವಿರೋಧ ಪಕ್ಷದ ನಾಯಕ ಹರ್ಪಾಲ್ ಸಿಂಗ್ ಚೀಮಾ ಸೇರಿದಂತೆ ಹಲವು ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ, ಮಸೂದೆಗಳಿಗೆ ಅನುಮತಿ ಕೋರಿದರು.ರಾಷ್ಟ್ರಪತಿ ಭೇಟಿ: ‘ಈ ಮಸೂದೆಗಳಿಗೆ ಅನುಮತಿ ದೊರೆಯದೇ ಹೋದರೆ ನಾವು ಕಾನೂನಿನ ಆಸರೆ ಪಡೆಯುತ್ತೇವೆ. ನವೆಂಬರ್ ಮೊದಲ ವಾರದಲ್ಲಿ ರಾಷ್ಟ್ರಪತಿಯವರನನು ಭೇಟಿಯಾಗಲುಸಮಯಾವಕಾಶ ಕೋರಿದ್ದೇನೆ’ ಎಂದು ಅಮರಿಂದರ್ ಸಿಂಗ್ ತಿಳಿಸಿದರು. ‘ರಾಷ್ಟ್ರಪತಿಯವರ ಬಳಿ ಮಸೂದೆಗಳು ಹೋದರೆ ಅವರು ಇದಕ್ಕೆ ಒಪ್ಪಿಗೆ ನೀಡಬಹುದು, ನೀಡದೇ ಇರಬಹುದು. ಆದರೆ ಇದನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲು ನಮ್ಮ ಬಳಿ ಕಾನೂನು ತಜ್ಞರಿದ್ದಾರೆ’ ಎಂದರು.