ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ನ.11ರಿಂದ 13ರವರೆಗೆ ಕೃಷಿ ಮೇಳವನ್ನು ಆಯೋಜಿಸಿದೆ. ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ ನೀಡುವುದು ಮೇಳದ ಉದ್ದೇಶ. ಕರೋನಾ ನಿರ್ಬಂಧಗಳ ಹಿನ್ನಲೆಯಲ್ಲಿ ಮೇಳ ಸರಳವಾಗಿ ನಡೆಯಲಿದೆ. ಕೊರೊನಾ ಹಿನ್ನಲೆಯಲ್ಲಿ ಸಕಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಪ್ರತ್ಯಕ್ಷ ಹಾಗೂ ಡಿಜಿಟಲ್ ಮುಖಾಂತರ ಮೇಳ ಹಮ್ಮಿಕೊಳ್ಳಲಾಗಿದೆ. ಭಾರತೀಯ ಕೃಷಿ ಸಂಶೋಧನಾ ಪರಿಷತ್ ಉಪ ಮಹಾನಿರ್ದೇಶಕ ಎ.ಕೆ.ಸಿಂಗ್ ಅವರು ಆನ್‌ಲೈನ್ ಮೂಲಕ ನ.11ರ ಬೆಳಗ್ಗೆ 11 ಗಂಟೆಗೆ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಎಸ್. ರಾಜೇಂದ್ರ ಪ್ರಸಾದ್ ಹೇಳಿದರು. ಮೂರು ಹೊಸ ತಳಿಗಳು ಹಾಗೂ 17 ನೂತನ ತಂತ್ರಜ್ಞಾನಗಳ ಕೃಷಿ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗುತ್ತದೆ. 25ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಇರಲಿವೆ. ಮೇಳದ ವೀಕ್ಷಣೆಗೆ ಪ್ರತಿದಿನ 200 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮೇಳಕ್ಕೆ 18ರಿಂದ 60 ವರ್ಷದೊಳಗಿನವರಿಗೆ ಮಾತ್ರ ಅವಕಾಶವಿದ್ದು, ಜಿಕೆವಿಕೆ ಪ್ರವೇಶ ದ್ವಾರದಿಂದ ಸಾರಿಗೆ ವ್ಯವಸ್ಥೆ ಇರಲಿದೆ. ಮೇಳಕ್ಕೆ ಬರುವವರಿಗೆ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಎಂದು ಮಾಹಿತಿ ನೀಡಿದರು. ಕೃಷಿ ಪ್ರಶಸ್ತಿ ಪ್ರದಾನ: ಎಚ್.ಡಿ.ದೇವೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಸಿ.ಎಂ.ನವೀನ್ ಕುಮಾರ್ (ಹಾಸನ), ಸಿ.ಬೈರೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಎಂ.ಎನ್.ರವಿಶಂಕರ್ (ಕೋಲಾರ), ಎಂ.ಎಚ್.ಮರಿಗೌಡ ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿಗೆ ಎಂ.ಆನಂದ್ (ಹೊಸಕೋಟೆ), ಆರ್.ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿಗೆ ಕೆ.ಎಂ.ರಾಮಣ್ಣ (ಕೋಲಾರ), ಕೆನರಾ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿಗೆ ಎಚ್.ಕೆ.ಸುರೇಶ್ (ಶಿಡ್ಲಘಟ್ಟ), ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗೆ ಕೃಷಿ ವಿಶ್ವವಿದ್ಯಾನಿಲಯದ ಕೆ.ಶಿವರಾಮು ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟದ ಪ್ರಗತಿಪರ ರೈತರಿಗೆ 17 ರೈತ/ ರೈತ ಮಹಿಳಾ ಪ್ರಶಸ್ತಿ ಹಾಗೂ ತಾಲೂಕು ಮಟ್ಟದ 94 ಪ್ರಶಸ್ತಿಗಳನ್ನು ಮೇಳದಲ್ಲಿ ಪ್ರದಾನ ಮಾಡಲಾಗುತ್ತದೆ.
ಮಾಹಿತಿಗೆ: www.krishimela2020uasb.com, www.uasbangalore.edu.in, ಫೇಸ್ಬುಕ್:https://www.facebook.com/sis.uasb,
ಜೂಮ್: https://rawe2020.in/krishimela/zoom/
Courtesyg: Google (photo)