ಕೋವಿಡ್ ಕೃಷಿ ಚಟುವಟಿಕೆ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಇದರಿಂದ ಕೃಷಿ ವರಮಾನ ಹೆಚ್ಚಳ ನಿರೀಕ್ಷಿಸಿದ್ದು, ಟ್ರ್ಯಾಕ್ಟರ್ ಮಾರಾಟದಲ್ಲೂ ಏರಿಕೆ ಕಂಡುಬರಲಿದೆ ಎಂದು ರೇಟಿಂಗ್ಸ್ ಸಂಸ್ಥೆ ಕ್ರಿಸಿಲ್ ಅಭಿಪ್ರಾಯಪಟ್ಟಿದೆ. ಟ್ರ್ಯಾಕ್ಟರ್ ಮಾರಾಟ ಶೇ.1ರಷ್ಟು ಕುಸಿಯಲಿದೆ ಎಂದು ಕ್ರಿಸಿಲ್ ಅಂದಾಜು ಮಾಡಿತ್ತು. ಆದರೆ, ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ನಿರೀಕ್ಷೆಗಿಂತ ವೇಗವಾಗಿ ಚೇತರಿಕೆ ಕಾಣಲಿದ್ದು, ಶೇ.10-12ರಷ್ಟು ಪ್ರಗತಿ ಸಾಧ್ಯವಾಗಲಿದೆ. ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಮುಂಗಾರು ಬಿತ್ತನೆ ಗರಿಷ್ಠ ಮಟ್ಟದಲ್ಲಿದೆ. ಇದರಿಂದ ಕೃಷಿ ವರಮಾನ ಹೆಚ್ಚಾಗಲಿದೆ. ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಟ್ರ್ಯಾಕ್ಟರ್ ಉದ್ಯಮ ಶೇ.12ರಷ್ಟು ಪ್ರಗತಿ ಸಾಧಿಸಿದೆ.ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಕ್ರಮವಾಗಿ ಶೇ.45 ಮತ್ತು ಶೇ.13ರಷ್ಟು ಬೇಡಿಕೆ ಬಂದಿದೆ. ಹಣಕಾಸು ವರ್ಷದಲ್ಲಿ ಕೃಷಿ ವಲಯದ ಮೇಲೆ ಸರ್ಕಾರದ ವೆಚ್ಚ ಹೆಚ್ಚಾಗಿದ್ದು, ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ಇದೆಲ್ಲವೂ ಕೃಷಿ ವರಮಾನ ಹೆಚ್ಚಳಕ್ಕೆ ಕಾರಣವಾಗಲಿವೆ. ಇದರಿಂದ ಟ್ರ್ಯಾಕ್ಟರ್ ಮಾರಾಟ ಹೆಚ್ಚಲಿದೆ ಎಂದು ಕ್ರಿಸಿಲ್ ನಿರ್ದೇಶಕ ಗೌತಮ್ ಶಾಹಿ ಹೇಳಿದ್ದಾರೆ.
Courtesyg: Google (photo)