ರಾಜ್ಯಗಳಿಗೆ ಸಾಮೂಹಿಕ ಲಸಿಕಾ ಕಾರ್ಯಕ್ರಮದ ಮಾರ್ಗಸೂಚಿಯನ್ನು ರವಾನಿಸಿರುವ ಕೇಂದ್ರ ಸರ್ಕಾರ, ಮುಂಗಡವಾಗಿ ನೋಂದಾಯಿಸಿಕೊAಡವರಿಗೆ ಮಾತ್ರ ಕೋವಿಡ್ ನಿರೋಧಕ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದೆ. ಕೋವಿನ್(ಕೋವಿಡ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್ವರ್ಕ್) ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಒಂದು ಜಿಲ್ಲೆಗೆ ಒಂದೇ ಕಂಪನಿಯ ಲಸಿಕೆ ಪೂರೈಕೆ ಮಾಡಬೇಕು. ಲಸಿಕೆಯ ಬಳಕೆ ಅವಧಿ ಮುಕ್ತಾಯದ ದಿನಾಂಕ (ಎಕ್ಸ್ಪೈರಿ) ಇರುವುದಿಲ್ಲ. ಆರೋಗ್ಯ ಕಾರ್ಯಕರ್ತರು, ಪೊಲೀಸ್, ಅರೆ ಸೇನಾಪಡೆ ಸಿಬ್ಬಂದಿ ಮತ್ತಿತರರು, 50 ವರ್ಷ ದಾಟಿದವರು ಮತ್ತು ಬೇರೆ ರೋಗಗಳಿರುವ ಐವತ್ತು ವರ್ಷದೊಳಗಿನವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ. 50-60 ವರ್ಷ ಮತ್ತು 60 ವರ್ಷ ಮೇಲ್ಪಟ್ಟವರು ಎಂಬ ಎರಡು ವಿಭಾಗ ಮಾಡಲಾಗಿದೆ. ಕೋವಿಡ್ ತೀವ್ರತೆ ಮತ್ತು ಲಸಿಕೆ ಲಭ್ಯತೆ ಆಧರಿಸಿ, ಉಳಿದವರಿಗೆ ಲಸಿಕೆ ಒದಗಿಸಲಾಗುತ್ತದೆ. ಲಸಿಕಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶವಿಲ್ಲ ಎಂದು ಮಾರ್ಗಸೂಚಿ ಹೇಳಿದೆ.
ಲಸಿಕೆ ಸಾಗಣೆ ಪೆಟ್ಟಿಗೆ, ಬಾಟಲಿ ಅಥವಾ ಐಸ್ ಪ್ಯಾಕ್ಗೆ ಸೂರ್ಯನ ಕಿರಣ ನೇರವಾಗಿ ಬೀಳಬಾರದು. ಲಸಿಕೆ ಹಾಕುವಾಗ ಮಾತ್ರ ಮುಚ್ಚಳ ತೆರೆಯಬೇಕು, ಲಸಿಕೆ ನೀಡಿದ ಬಳಿಕ ಐಸ್ ಪ್ಯಾಕ್ ಮತ್ತು ಬಳಕೆಯಾಗದ ಲಸಿಕೆ ಬಾಟಲಿಗಳನ್ನು ನಿಗದಿತ ಪೆಟ್ಟಿಗೆಯಲ್ಲಿರಿಸಿ ಹಿಂತಿರುಗಿಸಬೇಕು ಎಂದು ಹೇಳಿದೆ.
Courtesyg: Google (photo)