ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 60 ವರ್ಷ ಮೇಲಿನವರು, ಬೇರೆ ಕಾಯಿಲೆ ಹೊಂದಿರುವ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರೆದಿದೆ. ಕೋವಿಡ್ ಲಸಿಕೆ ಪಡೆಯಲು ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.
ಹೌದು.. ಕೋವಿನ್ ಪೋರ್ಟಲ್‌ನಲ್ಲಿ ಲಕ್ಷಾಂತರ ಮಂದಿ ಕೋವಿಡ್ ಲಸಿಕೆಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಪರಿಣಾಮ ಮಾರ್ಚ್ ಅಂತ್ಯದ ವರೆಗೂ ಸ್ಲಾಟ್ ಗಳು ಬುಕ್ ಆಗಿವೆ. ಏಪ್ರಿಲ್ ನಲ್ಲಷ್ಟೇ ಸ್ಲಾಟ್ ಗಳು ಖಾಲಿ ಇವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೊಂದಾಯಿಸಿಕೊಂಡು ಹತ್ತಿರದ ಲಸಿಕಾ ವಿತರಣಾ ಕೇಂದ್ರದಲ್ಲಿ ಲಸಿಕೆ ಪಡೆಯುವಂತೆ ಸರ್ಕಾರ ಸೂಚಿಸಿತ್ತು. ಆದರೆ ಈ ಪ್ರಕ್ರಿಯೆಗೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಲಕ್ಷಾಂತರ ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರಿಣಾಮ ಮಾರ್ಚ್ ಅಂತ್ಯದವರೆಗೂ ಹತ್ತಿರ ಆಸ್ಪತ್ರೆಗಳಲ್ಲಿ ಸ್ಲಾಟ್ ಗಳು ಬುಕ್ ಆಗಿವೆ. ಹೀಗಾಗಿ ಏಪ್ರಿಲ್ ನಲ್ಲಷ್ಟೇ ಹೊಸದಾಗಿ ಹೆಸರು ನೊಂದಾಯಿಸಿಕೊಳ್ಳುವವರಿಗೆ ಸ್ಲಾಟ್ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಇನ್ನು ಲಸಿಕೆ ನೋಂದಾವಣಿಗೆ ಪ್ರಯತ್ನಿಸುತ್ತಿದ್ದ ಸಾವಿರಾರು ಮಂದಿಗೆ ಇದು ನಿರಾಶೆ ಮೂಡಿಸಿದ್ದು, ಮಾರ್ಚ್ 1ರಿಂದಲೇ ಆನ್‌ಲೈನ್‌ನಲ್ಲಿ ನೋಂದಾಯಿಸಲು ಪ್ರಯತ್ನಿಸುತ್ತಿರುವ ಟಿ ದಾಸರಹಳ್ಳಿಯ ನಿವಾಸಿ ಗುರುರಾಜ ರಾವ್ (75 ವರ್ಷ) ನಿರಾಶೆಗೊಂಡಿದ್ದಾರೆ. ‘ಕಳೆದ ಮೂರು ದಿನಗಳಿಂದ ನಾನು ಸ್ಲಾಟ್ ಕಾಯ್ದಿರಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇಡೀ ಮಾರ್ಚ್‌ನಲ್ಲಿ ಯಾವುದೇ ಸ್ಲಾಟ್ ಗಳು ಲಭ್ಯವಿಲ್ಲ ಎಂದು ಅಪ್ಲಿಕೇಶನ್ ತೋರಿಸುತ್ತದೆ. ನಾನಿರುವ ಜಾಗ ದಾಸರಹಳ್ಳಿ ವಲಯದ ವ್ಯಾಪ್ತಿಗೆ ಬರುವುದರಿಂದ, ನಾನು ಈ ವಲಯದ ಅಡಿಯಲ್ಲಿ ಪಟ್ಟಿ ಮಾಡಲಾದ ಎಲ್ಲಾ ಆಸ್ಪತ್ರೆಗಳನ್ನು ವ್ಯಾಕ್ಸಿನೇಷನ್ಗಾಗಿ ಪ್ರಯತ್ನಿಸಿದೆ. ಆದರೆ ಒಂದೇ ಆಸ್ಪತ್ರೆಯು ಲಭ್ಯತೆಯನ್ನು ತೋರಿಸುತ್ತಿಲ್ಲ. ನಾನು ಎದುರಿಸಿದ ಇನ್ನೊಂದು ಸಮಸ್ಯೆ ಎಂದರೆ ನೋಂದಾಯಿಸಿದ ನಂತರ ನನಗೆ ಒಟಿಪಿ ಸಿಗಲಿಲ್ಲ. ನಾನು ಅದನ್ನು ಮತ್ತೊಂದು ಫೋನ್ ಮೂಲಕ ಪ್ರಯತ್ನಿಸಬೇಕಾಗಿತ್ತು, ಇದರಲ್ಲಿ ಒಟಿಪಿ 30 ನಿಮಿಷಗಳ ನಂತರ ಬಂದಿತು. ಆದರೆ ಪೋರ್ಟಲ್ ನಲ್ಲಿ 1.30 ನಿಮಿಷಗಳಲ್ಲೇ ಒಟಿಪಿ ನಮೂದಿಸಬೇಕಿತ್ತು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಂತೆಯೇ ಬೆಂಗಳೂರಿನ ವೈಟ್‌ಫೀಲ್ಡ್ ನಿವಾಸಿ ಉಮಾ ನಾರಾಯಣ್ ಅವರು ಮಹಾದೇವಪುರ ವಲಯದಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕೇಂದ್ರಗಳಲ್ಲಿ ಈ ತಿಂಗಳ ಸ್ಲಾಟ್‌ಗಳ ಅಲಭ್ಯತೆಯನ್ನು ಎದುರಿಸಿದ್ದಾರೆ. ಜಾಹಿರಾತಿನಲ್ಲಿ ತೋರಿಸುತ್ತಿರುವಂತೆ ಪೋರ್ಟಲ್ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಸರಿ ಹೋಗುವ ವಿಶ್ವಾಸವಿದೆ ಎಂದು ಹೇಳಿದರು.
ಅಂತೆಯೇ ಐದು ಹಿರಿಯ ನಾಗರಿಕರ ಹೆಸರುಗಳನ್ನು ಕೋವಿನ್ ಪೋರ್ಟಲ್ ನಲ್ಲಿ ನೋಂದಾಯಿಸಲು ಪ್ರಯತ್ನಿಸಿದ ಹೆಬ್ಬಾಳದ 30 ವರ್ಷದ ನಿವಾಸಿಯೊಬ್ಬರು ಸ್ಲಾಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಸ್ಪಾಟ್ ನೋಂದಣಿ ಪ್ರಾರಂಭಿಸುವುದು ಉತ್ತಮ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಮಾಹಿತಿ ನೀಡಿದ ಬಿಬಿಎಂಪಿ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಅವರು, ‘ನಾವು ನಗರ ಪ್ರದೇಶಗಳಲ್ಲಿಯೂ ಸ್ಪಾಟ್ ನೋಂದಣಿಗೆ ಅವಕಾಶ ನೀಡಿದ್ದೇವೆ. ಆದರೆ ಇದು ಭಾಗಶಃ ಪೂರ್ಣಗೊಳ್ಳಲು ಆಸ್ಪತ್ರೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.