ಕೊರೋನಾ ನಂತರ ಎಲ್ಲ ರಂಗಗಳಲ್ಲಿ ಆರ್ಥಿಕ ಚಟುವಟಿಕೆ ಉತ್ತೇಜಿಸಲು ಪ್ಯಾಕೇಜ್ ನೀಡುತ್ತಿರುವ ಕೇಂದ್ರ ಸರ್ಕಾರ, ಆ ಉಪಕ್ರಮದ ಮುಂದುವರಿದ ಭಾಗವಾಗಿ 2.65 ಲಕ್ಷ ಕೋಟಿ ರೂ. ಮೊತ್ತದ ಇನ್ನೊಂದು ಪ್ಯಾಕೇಜ್ ಪ್ರಕಟಿಸಿದೆ. ರಸಗೊಬ್ಬರಕ್ಕೆ ಸಬ್ಸಿಡಿ ನೀಡಲು 65 ಸಾವಿರ ಕೋಟಿ ರೂ., ಪ್ರಧಾನ ಮಂತ್ರಿ ವಸತಿ ಯೋಜನೆಗೆ 18 ಸಾವಿರ ಕೋಟಿ ರೂ., ಗರೀಬ್ ಕಲ್ಯಾಣ್ ಯೋಜನೆಗೆ 10 ಸಾವಿರ ಕೋಟಿ ರೂ. ಪ್ಯಾಕೇಜ್‌ನಲ್ಲಿ ಸೇರಿವೆ. ದೇಶದ ಅರ್ಥ ವ್ಯವಸ್ಥೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂಜರಿಕೆಯ ಸ್ಥಿತಿಗೆ ಹೊರಳಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿರುವ ಸಂದರ್ಭದಲ್ಲೇ ಈ ಪ್ಯಾಕೇಜ್ ಘೋಷಣೆಯಾಗಿದೆ. ಮನೆ ಖರೀದಿ ಮತ್ತು ಡೆವಲಪರ್‌ಗಳಿಗೆ ಆದಾಯ ತೆರಿಗೆ ವಿನಾಯಿತಿ, ಉದ್ಯೋಗ ಅವಕಾಶ ಸೃಷ್ಟಿಸುವವರಿಗೆ ಉತ್ತೇಜನ ನೀಡುವಿಕೆ ಪ್ಯಾಕೇಜ್‌ನಲ್ಲಿ ಸೇರಿದೆ. ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಈವರೆಗೆ ಪ್ರಕಟಿಸಿರುವ ಪ್ಯಾಕೇಜ್ ಮೊತ್ತ 30 ಲಕ್ಷ ಕೋಟಿ ರೂ. ತಲುಪಿದೆ. ಇದು ದೇಶದ ಅರ್ಥ ವ್ಯವಸ್ಥೆಯ ಗಾತ್ರದ ಶೇ.15ಕ್ಕೆ ಸಮ. ಪ್ರಸ್ತುತ ಪ್ಯಾಕೇಜ್ ಬುಧವಾರ ಒಪ್ಪಿಗೆ ನೀಡಿರುವ 10 ಉದ್ಯಮ ವಲಯಗಳಿಗೆ ಅನುಕೂಲ ಕಲ್ಪಿಸುವ ಉತ್ಪಾದನೆ ಆಧಾರಿತ ಉತ್ತೇಜನಾ ಕೊಡುಗೆ(ಪಿಎಲ್‌ಐ)ಗಳಿಗೆ ಸಂಬAಧಿಸಿದೆ. ಪಿಎಲ್‌ಐ ಯೋಜನೆ ಮೊತ್ತವಾದ 1.46 ಲಕ್ಷ ಕೋಟಿ ರೂ. ಒಟ್ಟು ಆಂತರಿಕ ಉತ್ಪನ್ನದ ಶೇ. 9ರಷ್ಟಾಗುತ್ತದೆ. ಹೋಟೆಲ್, ಪ್ರವಾಸೋದ್ಯಮ, ಸಾರಿಗೆ, ಜವಳಿ ಸೇರಿದಂತೆ ಸಂಕಷ್ಟಕ್ಕೀಡಾಗಿರುವ 26 ವಲಯಗಳಿಗೆ ಪ್ರಕಟಿಸಿರುವ 3 ಲಕ್ಷ ಕೋಟಿ ರೂ. ಮೊತ್ತದ ತುರ್ತು ಸಾಲ ಖಾತರಿ ಯೋಜನೆಯನ್ನು ಕೇಂದ್ರ ವಿಸ್ತರಿಸಿದೆ. ನವೆಂಬರ್ ೩೦ಕ್ಕೆ ಕೊನೆಗೊಳ್ಳಬೇಕಿದ್ದ ಯೋಜನೆಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಹೆಚ್ಚುವರಿಯಾಗಿ 10 ಸಾವಿರ ಕೋಟಿ ರೂ. ನೀಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಮೊತ್ತವನ್ನು ನರೇಗಾ ಅಥವಾ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಬಳಸಿಕೊಳ್ಳಬೇಕು. ಇದು ಬಜೆಟ್‌ನಲ್ಲಿ ನರೇಗಾಕ್ಕೆ ನೀಡಿದ 61 ಸಾವಿರ ಕೋಟಿ ರೂ. ಹಾಗೂ ಮೊದಲ ಪ್ಯಾಕೇಜ್‌ನಲ್ಲಿ ಪ್ರಕಟಿಸಿದ್ದ 40 ಸಾವಿರ ಕೋಟಿ ರೂ.ಗೆ ಹೆಚ್ಚುವರಿಯಾಗಿ ಸೇರಿಕೊಳ್ಳಲಿದೆ. ಕೋವಿಡ್ ಲಸಿಕೆ ಸಂಶೋಧನೆಗೆ 900 ಕೋಟಿ ರೂ. ಒದಗಿಸಲಾಗುವುದು ಎಂದು ತಿಳಿಸಿದರು.
ಆರ್ಥಿಕ ಹಿಂಜರಿತ:
ಪ್ಯಾಕೇಜ್‌ಗಳ ಘೋಷಣೆಯ ನಡುವೆಯೂ ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಬೆಳವಣಿಗೆ ದರವು ಸತತ ಎರಡನೆಯ ತ್ರೈಮಾಸಿಕದಲ್ಲಿಯೂ ಶೂನ್ಯಕ್ಕಿಂತ ಕಡಿಮೆ ಇರಲಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರ್ಥಿಕ ಹಿಂಜರಿತದ ಸ್ಥಿತಿಗೆ ಕಾಲಿಡಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.(–)23.9ರಷ್ಟು ಇತ್ತು. ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅದು ಶೇ.(–)8.9ರಷ್ಟು ಕುಸಿತ ಕಾಣಲಿದೆ ಎಂದು ಆರ್‌ಬಿಐನ ಹಣಕಾಸು ನೀತಿ ವಿಭಾಗದ ಅಧಿಕಾರಿ ಪಂಕಜ್ ಕುಮಾರ್ ತಮ್ಮ ‘ಎಕನಾಮಿಕ್ ಆ್ಯಕ್ಟಿವಿಟಿ ಇಂಡೆಕ್ಸ್’ ಲೇಖನದಲ್ಲಿ ಬರೆದಿದ್ದಾರೆ.
. Courtesyg: Google (photo)