ರಾಜ್ಯದ 30 ಜಿಲ್ಲೆಗಳು ಸಲ್ಲಿಸಿದ್ದ ಜನತಾ ಜೀವವೈವಿಧ್ಯ ದಾಖಲು(ಪಿಬಿಆರ್) ವರದಿಯನ್ನು ಕರ್ನಾಟಕ ಜೀವವೈವಿಧ್ಯ ಮಂಡಳಿ ವಾಪಸ್ ಕಳಿಸಿದೆ. ವರದಿ ಸಮರ್ಪಕವಾಗಿಲ್ಲದ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡಿ ಕಳಿಸಬೇಕು ಎಂದು ಸೂಚಿಸಿದೆ. ವರದಿ ತಯಾರಿಕೆಯ ಉಸ್ತುವಾರಿಯನ್ನು ಆಯಾ ಜಿಲ್ಲೆಯ ಸಾಮಾಜಿಕ ಅರಣ್ಯ ವಿಭಾಗ ವಹಿಸಿಕೊಂಡಿದೆ. ವರದಿ ತಯಾರಿಕೆ ಸಂಬಂಧ ಹಲವು ಬಾರಿ ಮಾಹಿತಿ ನೀಡಿದ್ದರೂ, ದಾಖಲೆ ಸಮರ್ಪಕವಾಗಿಲ್ಲ. ತಿದ್ದುಪಡಿಗಳನ್ನು ಸರಿಪಡಿಸಿ, ಪುನಃ ವರದಿ ಸಲ್ಲಿಸಬೇಕು ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಹಸಿರು ನ್ಯಾಯ ಮಂಡಳಿಯ ಸೂಚನೆಯನ್ವಯ ರಾಷ್ಟ್ರೀಯ ಜೀವವೈವಿಧ್ಯ ಮಂಡಳಿಯು ಪಿಬಿಆರ್ ವರದಿ ಸಲ್ಲಿಸುವಂತೆ ಜುಲೈನಲ್ಲಿ ಎಲ್ಲ ಜಿಲ್ಲೆಗಳಿಗೆ ಆದೇಶಿಸಿತ್ತು. ಕೋವಿಡ್ ಲಾಕ್ಡೌನ್ ಇದ್ದುದರಿಂದ, ೧೫ ದಿನದಲ್ಲಿ ಸಮರ್ಪಕವಾಗಿ ಸಮೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಸುಸ್ಥಿರ ಅಭಿವೃದ್ಧಿ ಯೋಜನೆ ರೂಪಿಸಲು ಗ್ರಾಮ ಮಟ್ಟದ ಜೀವವೈವಿಧ್ಯ ದಾಖಲೆ ವರದಿ ಅಡಿಪಾಯವಾಗಬೇಕು ಎನ್ನುವುದು ಆಶಯ. ಕೆಲವು ಜಿಲ್ಲೆಗಳಲ್ಲಿ ಒಬ್ಬರೇ ಸಂಯೋಜಕರು ನಾಲ್ಕೈದು ಗ್ರಾಮಪಂಚಾಯಿತಿಗಳ ವರದಿಯನ್ನು ಸಿದ್ಧಪಡಿಸಿದ್ದರು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಿಗೆ ಈವರೆಗೆ ಗೌರವಧನ ಪಾವತಿಯಾಗಿಲ್ಲ. ಹೀಗಾಗಿ, ಅವರು ತಿದ್ದುಪಡಿ ಕಾರ್ಯದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆ ವ್ಯವಸ್ಥಿತವಾಗಿ ನಡೆಸಿ, ವರದಿ ಸಲ್ಲಿಕೆಯಾಗಿದೆ. ಜಿಲ್ಲೆಗಳಿಂದ ಸಲ್ಲಿಕೆಯಾದ ವರದಿಗಳ ಪರಿಶೀಲನೆ ನಡೆಯುತ್ತಿದ್ದು, ಲೋಪದೋಷ ಕಂಡುಬಂದಿದ್ದರಿಂದ ವಾಪಸ್ ಕಳುಹಿಸಲಾಗುತ್ತಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಜೀವವೈವಿಧ್ಯ ದಾಖಲಾತಿ ನಡೆಯಬೇಕು. ಸಂಯೋಜಕರ ಗೌರವಧನ ಹಂತಹಂತವಾಗಿ ಬಿಡುಗಡೆಯಾಗಲಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ತಿಳಿಸಿದರು.
Courtesyg: Google (photo)