ಪ್ರಧಾನ ಮಂತ್ರಿ ಜನಧನ ಯೋಜನೆಯ (ಪಿಎಂಜೆಡಿವೈ) ಅಡಿ ಖಾತೆ ತೆರೆದವರ ಪೈಕಿ ಶೇಕಡ 50ರಷ್ಟಕ್ಕಿಂತ ಹೆಚ್ಚಿನವರು ಮಹಿಳೆಯರು. ಮಾಹಿತಿ ಹಕ್ಕು ಕಾಯ್ದೆಯ (ಆರ್ಟಿಐ) ಅಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರವಾಗಿ ಈ ಮಾಹಿತಿ ಸಿಕ್ಕಿದೆ. ಒಟ್ಟು 22.44 ಕೋಟಿ ಖಾತೆಗಳು ಮಹಿಳೆಯರ, 18.19 ಕೋಟಿ ಖಾತೆಗಳು ಪುರುಷರ ಹೆಸರಿನಲ್ಲಿವೆ. ಒಟ್ಟು 3.01 ಕೋಟಿ ಖಾತೆಗಳಲ್ಲಿ ಹಣ ಇರಲಿಲ್ಲ. ಈ ವರ್ಷದ ಏಪ್ರಿಲ್ 1ಕ್ಕೆ ಹೋಲಿಸಿದರೆ, ಈ ಖಾತೆಗಳಲ್ಲಿ ಇರುವ ಠೇವಣಿ ಮೊತ್ತದಲ್ಲಿ ಸೆಪ್ಟೆಂಬರ್ ಮೊದಲ ವಾರದವರೆಗೆ ಶೇಕಡ 8.5ರಷ್ಟು ಹೆಚ್ಚಳ ಆಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಜನಧನ ಖಾತೆಗಳಲ್ಲಿ ಇದ್ದ ಒಟ್ಟು ಮೊತ್ತ ₹ 1.30 ಲಕ್ಷ ಕೋಟಿ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.