ಜನೌಷಧ ಕೇಂದ್ರಗಳಲ್ಲಿ ಶೀಘ್ರವೇ ಕಡಿಮೆ ಬೆಲೆಯಲ್ಲಿ ಆಯುರ್ವೇದ ಔಷಧಿಗಳು ಲಭ್ಯವಾಗಲಿವೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ. ಜನೌಷಧ ಕೇಂದ್ರಗಳಲ್ಲಿ ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಗಳನ್ನು ನೀಡಲಾಗುತ್ತಿದ್ದು, ಶೇ.10 ರಿಂದ ಶೇ.90ರವರೆಗೆ ರಿಯಾಯ್ತಿ ನೀಡಲಾಗುತ್ತಿದೆ. ಜನರಿಕ್ ಮೆಡಿಸಿನ್ ಆ್ಯಪ್ ಬಳಸಿ ಮನೆ ಸಮೀಪದಲ್ಲಿ ಜನೌಷಧ ಮಳಿಗೆ ಎಲ್ಲಿದೆ ಎಂಬುದನ್ನು ಜನ ತಿಳಿದುಕೊಳ್ಳಬಹುದು. ಬೇಕಿರುವ ಔಷಧದ ಹೆಸರನ್ನು ನಮೂದಿಸಿದರೆ, ಅದೇ ಔಷಧಿಯ ಸಂಯೋಜನೆಯ ಬೇರೆ ಕಂಪನಿಗಳ ಉತ್ಪನ್ನಗಳು ಎಲ್ಲಿ ಲಭ್ಯವಿವೆ ಎಂಬುನ್ನು ತಿಳಿದುಕೊಳ್ಳಬಹುದು. ರಾಜ್ಯದ ನಾನಾ ಕಡೆ ಶೀಘ್ರವೇ 1,000 ಜನೌಷಧ ಮಳಿಗೆಗಳನ್ನು ಆರಂಭಿಸುವ ಗುರಿ ಇದೆ ಎಂದು ಹೇಳಿದರು.
ರಕ್ತದೊತ್ತಡ, ಮಧುಮೇಹ ಇತ್ಯಾದಿ ಖಾಯಿಲೆಗಳಿಗೆ ಬ್ರಾಂಡ್ ಇರುವ ಔಷಧಿಗೆ ಸುಮಾರು 2.000 ರಿಂದ 2.500ರೂ. ಕೊಡಬೇಕಾಗುತ್ತದೆ. ಆದರೆ, ಆ ಔಷಧಗಳು ಜನೌಷಧ ಮಳಿಗೆಯಲ್ಲಿ ಕೇವಲ 400 ರಿಂದ 500 ರೂ. ಲಭ್ಯವಾಗುತ್ತದೆ ಎಂದು ತಿಳಿಸಿದರು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಜನೌಷಧ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಸಹಕಾರ ಇಲಾಖೆ ಮಾಡುತ್ತಿದೆ. ಸಹಕಾರಿಗಳು ಕೇಂದ್ರದ ಈ ಜನಪರ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್, ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಮುಂತಾದವರು ಭಾಗವಹಿಸಿದ್ದರು.
Courtesyg: Google (photo)