ಡಿಜಿಟಲ್ ಇಂಡಿಯಾ ದೇಶದ ಜೀವನವಿಧಾನವಾಗಿ ಬದಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ೨೩ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಮಾತನಾಡಿ, ಐದು ವರ್ಷಗಳ ಹಿಂದೆ ಆರಂಭವಾದ ಡಿಜಿಟಲ್ ಇಂಡಿಯಾ, ಬಡವರು ಹಾಗೂ ನಿರ್ಲಕ್ಷಿತ ವರ್ಗದವರ ಜೀವನದಲ್ಲಿ ಪರಿವರ್ತನೆ ತಂದಿದೆ. ಭೀಮ್ ಪಾವತಿ ಆ್ಯಪ್ ಇದಕ್ಕೊಂದು ಸಾಕ್ಷಿ. ಡಿಜಿಟಲ್ ಇಂಡಿಯಾ ಮಾನವ ಕೇಂದ್ರಿತ ಯೋಜನೆಯಾಗಿದ್ದು, ಮನುಷ್ಯರ ಘನತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಜನರ ಜೀವನದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದಲ್ಲದೆ, ಸರ್ಕಾರದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ದೇಶದ ಲಕ್ಷಾಂತರ ರೈತರ ಖಾತೆಗಳಿಗೆ ಒಂದೇ ಒಂದು ಕ್ಲಿಕ್ನಿಂದ ಹಣ ವರ್ಗಾವಣೆ ಮಾಡಲಾಯಿತು ಎಂದರು. ದೇಶಕ್ಕೆ ೨೫ ವರ್ಷಗಳ ಹಿಂದೆ ಕಾಲಿಟ್ಟ ಇಂಟರ್ನೆಟ್, ಇಂದು ದೇಶದಲ್ಲಿ ೭೫ ಕೋಟಿ ಸಂಪರ್ಕಗಳಿವೆ. ಇದರಲ್ಲಿ ಅರ್ಧದಷ್ಟು ಕಳೆದ ನಾಲ್ಕು ವರ್ಷಗಳಲ್ಲಿ ಸೇರ್ಪಡೆ ಆಗಿದೆ. ನಾವೀಗ ಮಾಹಿತಿ ಯುಗದ ಮಧ್ಯದಲ್ಲಿದ್ದೇವೆ. ದೇಶವೀಗ ಮುಂದಿನ ಜಿಗಿತಕ್ಕೆ ಸಿದ್ಧವಾಗಿದೆ. ನಮ್ಮಲ್ಲಿ ಅತ್ಯುತ್ತಮ ಬುದ್ಧಿವಂತ ಜನ ಇದ್ದಾರೆ, ದೊಡ್ಡ ಮಾರುಕಟ್ಟೆಯೂ ಇದೆ. ಸ್ಥಳೀಯ ತಂತ್ರಜ್ಞಾನ ಜಾಗತಿಕ ಮಟ್ಟಕ್ಕೂ ಸಲ್ಲುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ, ನಾವು ಅಭಿವೃದ್ಧಿಪಡಿಸುವ ತಂತ್ರಜ್ಞಾನ-ಪರಿಹಾರಗಳು ಜಾಗತಿಕ ಮಟ್ಟಕ್ಕೂ ಅನ್ವಯವಾಗುವಂತಿರಬೇಕು ಎಂದು ಹೇಳಿದರು.
ಹಿಂದೆ ಯುದ್ಧಗಳಲ್ಲಿ ಆನೆ-ಕುದುರೆ ಬಳಸಲಾಗುತ್ತಿತ್ತು. ಆನಂತರ, ಮದ್ದುಗುಂಡುಗಳು ಬಂದವು. ದೇಶ ರಕ್ಷಣಾ ಕ್ಷೇತ್ರದ ತಂತ್ರಜ್ಞಾನದಲ್ಲಿ ಅತ್ಯುನ್ನತ ಸ್ಥಾನ ಪಡೆದಿದೆ. ಯುಎವಿ, ಡ್ರೋನ್ ಮತ್ತಿತರ ಕ್ಷೇತ್ರಗಳಲ್ಲಿ ಯುವ ಜನರು ಹೆಚ್ಚು ಆವಿಷ್ಕಾರ ಮಾಡಬೇಕು ಎಂದು ಹೇಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಶಾಸಕ ರಿಜ್ವಾನ್ ಆರ್ಷದ್ ಮತ್ತಿತರರು ಮಾತನಾಡಿದರು.
Courtesyg: Google (photo)