‘ನಮ್ಮ ಕಾರ್ಗೋ’ ಸೇವೆ ಹಾಗೂ ರಕ್ತದಾನದ ಬಸ್‌ಗೆ ಸಿಎಂ ಚಾಲನೆ

ಬೆಂಗಳೂರು,ಫೆ.26- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೂತನ ಪಾರ್ಸಲ್ ಕಾರ್ಗೊ ಸೇವೆ ಮತ್ತು ಕೆಎಸ್‍ಆರ್‍ಟಿಸಿ, ಕಿದ್ವಾಯಿ, ರೋಟರಿ ಸಹಯೋಗದೊಂದಿಗೆ ನಿರ್ಮಿಸಿರುವ ಮೊಬೈಲ್ ರಕ್ತದಾನದ ಬಸ್‍ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು. ವಿಧಾನಸೌಧ ಮುಂಭಾಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಗೊ ಸೇವೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟದಲ್ಲಿದ್ದು, ಪರ್ಯಾಯ ಮಾರ್ಗದ ಆದಾಯವನ್ನು ಕಂಡುಕೊಂಡಿರುವುದು ಸಮಯೋಚಿತವಾಗಿದೆ ಎಂದು ಹೇಳಿದರು.

ರಾಜ್ಯದ ಕೆಎಸ್‍ಆರ್‍ಟಿಸಿ ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಪ್ರತಿದಿನ 51 ಲಕ್ಷ ಕಿ.ಮೀ ಸಂಚರಿಸಿ 38 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿವೆ ಎಂದರು. ಇತ್ತೀಚಿನ ದಿನಗಳಲ್ಲಿ ಸಾರಿಗೆಯೇತರ ಆದಾಯ ಕ್ರೋಢೀಕರಣಕ್ಕೆ ಹೆಚ್ಚಿನ ಗಮನಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಂದಿರುವ ಪಾರ್ಸಲ್ ಮತ್ತು ಕಾರ್ಗೊ ಸೇವೆ ಉತ್ತಮ ಸಾರ್ವಜನಿಕ ಸೇವೆಯಾಗಿದೆ ಎಂದು ಹೇಳಿದರು.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಕಾರ್ಗೊ ಸೇವೆ ಒದಗಿಸಲಾಗುತ್ತದೆ. ವಾರ್ಷಿಕ ಸುಮಾರು 80 ಕೋಟಿ ಆದಾಯ ಗಳಿಸುವ ನಿರೀಕ್ಷೆಯಿದೆ. ರಾಜ್ಯದ 88 ತಾಲ್ಲೂಕು ಬಸ್ ನಿಲ್ದಾಣ ಮತ್ತು ಅಂತಾರಾಜ್ಯದ 21 ಬಸ್ ನಿಲ್ದಾಣಗಳು ಸೇರಿದಂತೆ 109 ಬಸ್ ನಿಲ್ದಾಣಗಳಲ್ಲಿ ಈ ಸೇವೆ ದೊರೆಯಲಿವೆ. ಮುಂದಿನ ದಿನಗಳಲ್ಲಿ ಇತರೆ ಬಸ್ ನಿಲ್ದಾಣಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು. ಮನೆ ಬಾಗಿಲಿಗೆ ಸೇವೆ ವಿಸ್ತರಿಸುವ ಯೋಜನೆಯೂ ಇದೆ ಎಂದರು.

# ಮೊಬೈಲ್ ರಕ್ತದಾನ ಬಸ್:
ಕೆಎಸ್‍ಆರ್‍ಟಿಸಿಯ ಹಳೆಯ ಹವಾನಿಯಂತ್ರಿತ ಬಸ್‍ಗಳನ್ನು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಉಚಿತವಾಗಿ ನೀಡಲಾಗಿದ್ದು, ಕ್ಯಾನ್ಸರ್ ಬಗ್ಗೆ ತಿಳುವಳಿಕೆ ಕೂಡ ಮೂಡಿಸಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ಗುರುತಿಸಲು ಈ ವಾಹನವನ್ನು ಉಪಯೋಗಿಸಲಾಗುತ್ತದೆ. ರೋಟರಿ ಸಂಸ್ಥೆ ಮೊಬೈಲ್ ರಕ್ತದಾನ ಬಸ್ ಮಾರ್ಪಡಿಸಿದೆ.

ಈ ಬಸ್ ಮೂಲಕ ಸ್ವಯಂಪ್ರೇರಿತ ರಕ್ತದಾನಿಗಳನ್ನು ಕೂಡ ಪ್ರೇರೇಪಿಸಬಹುದಾಗಿದೆ. ಕೋವಿಡ್‍ನಿಂದ ಮೃತಪಟ್ಟ ಸಾರಿಗೆ ಸಂಸ್ಥೆಗಳ ನೌಕರರ ಕುಟುಂಬದವರಿಗೆ 30 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದರು. ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾತನಾಡಿ, ಕೊರೊನಾ ನಂತರ ಸಂಕಷ್ಟಕ್ಕೀಡಾಗಿರುವ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಬೇರೆ ಬೇರೆ ಮೂಲದಿಂದ ಆದಾಯ ಗಳಿಸಲು ಅನುಕೂಲವಾಗುವಂತೆ ಪಾರ್ಸಲ್ ಹಾಗೂ ಕಾರ್ಗೊ ಸೇವೆ ಆರಂಭಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಜೀವವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸಿ ಮೃತರಾದ 117 ಮಂದಿ ಕುಟುಂಬಕ್ಕೆ 30 ಲಕ್ಷ ರೂ. ವಿಮಾ ಪರಿಹಾರ ನೀಡಲಾಗುತ್ತದೆ. ಇಂದು ಏಳು ಮಂದಿಯ ಕುಟುಂಬದವರಿಗೆ ಸಾಂಕೇತಿಕವಾಗಿ ನೀಡಲಾಗಿದೆ ಎಂದರು.

ಸಾರಿಗೆ ಸಂಸ್ಥೆಗಳ ಹಳೆಯ ಬಸ್‍ನ್ನು ಶೌಚಾಲಯ, ಸ್ನಾನಗೃಹ, ರಕ್ತದಾನ ಸೇರಿದಂತೆ ಬೇರೆ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ನಂತರ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಐರಾವತ ಬಸ್‍ನಲ್ಲಿ ವಿಧಾನಸೌಧದಿಂದ ಮೆಜೆಸ್ಟಿಕ್‍ವರೆಗೆ ಪ್ರಯಾಣಿಸಿದರು.

ಸಚಿವರಾದ ಉಮೇಶ್ ಕತ್ತಿ, ಡಾ.ಸುಧಾಕರ್, ಕೆಎಸ್‍ಆರ್‍ಟಿಸಿಯ ಅಧ್ಯಕ್ಷ ಎಂ.ಚಂದ್ರಪ್ಪ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್, ವಾಯುವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್, ವಿಧಾನಪರಿಷತ್ ಸದಸ್ಯ ರಮೇಶ್‍ಗೌಡ, ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ.ರಾಮಚಂದ್ರ, ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದಶಿ ಅಂಜುಮ್ ಪರ್ವೇಜ್ ಇತರರು ಉಪಸ್ಥಿತರಿದ್ದರು.

Journalist,Translator,avid bibliophile

Leave a Reply

Your email address will not be published. Required fields are marked *

Back To Top