ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಚಳಿ ಜೊತೆಗೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ನಿವಾರ್ ಚಂಡಮಾರುತದ ಪರಿಣಾಮವಾದ ಈ ಹವಾಮಾನ ವ್ಯತ್ಯಯವು ರಾಜ್ಯದ ಹಲವೆಡೆ ಕಂಡುಬAದಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ/ ಗ್ರಾಮಾಂತರ, ತುಮಕೂರು, ಮಂಡ್ಯ ಜಿಲ್ಲೆಯ ಕೆಲವೆಡೆ ಮಳೆಯಾಗುತ್ತಿದೆ. ಈ ಜಿಲ್ಲೆಗಳಲ್ಲಿ ನಿನ್ನೆಯೇ ಯೆಲ್ಲೊ ಅಲರ್ಟ್ ಘೋಷಿಸಲಾಗಿತ್ತು. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನಾಲ್ಕು ದಿನ ಅಲ್ಲಲ್ಲಿ ಹಾಗೂ ಉತ್ತರ ಒಳನಾಡಿನಲ್ಲಿ ಮೂರು ದಿನ ಮತ್ತು ಕರಾವಳಿಯಲ್ಲಿ ನ.26 ಮತ್ತು 27ರಂದು ಅಲ್ಲಲ್ಲಿ ಮಳೆಯಾಗಲಿದೆ. ನಿವಾರ್ನ ಕೇಂದ್ರ ಬಿಂದುವಾದ ಪುದುಚೇರಿ ಮತ್ತು ತಮಿಳುನಾಡಿನ ವಿವಿಧೆಡೆ ಭಾರಿ ಮಳೆ ಆಗಿದ್ದು, ಚಂಡಮಾರುತ ನ.25ರಮಧ್ಯರಾತ್ರಿ ಭೂ ಪ್ರದೇಶವನ್ನು ಅಪ್ಪಳಿಸಿದೆ. ಬುಧವಾರ ಬೆಳಗ್ಗೆ 7 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ನಿವಾರ್ ವೇಗ ಸಂಜೆಗೆ 16 ಕಿಮೀಗೆ ಹೆಚ್ಚಿತ್ತು. ಚಂಡಮಾರುತ ಭೂಪ್ರದೇಶಕ್ಕೆ ಅಪ್ಪಳಿಸಿದಾಗ 120-130 ಕಿಮೀ ವೇಗದಲ್ಲಿ ಗಾಳಿ ಬೀಸಿದೆ. ಮಧ್ಯರಾತ್ರಿಗೆ ವೇಗ 145 ಕಿಮೀ ತಲುಪಿತ್ತು. ತಮಿಳುನಾಡು ಮತ್ತುಪುದುಚೇರಿ ಸರ್ಕಾರಗಳು ಪರಿಹಾರ ಕಾರ್ಯಕ್ಕೆಂದು ಐಎನ್ಎಸ್ ಸುಮಿತ್ರಾ ಮತ್ತು ಐಎನ್ಎಸ್ ಜ್ಯೋತಿ ಯುದ್ಧನೌಕೆಗಳನ್ನು ಸಿದ್ಧವಿರಿಸಿ ಕೊಂಡಿವೆ. ಭಾರತೀಯ ನೌಕಾಪಡೆ ಮತ್ತು ಕರಾವಳಿ ಗಸ್ತು ಪಡೆ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಕರಾವಳಿ ಪ್ರದೇಶಗಳಲ್ಲಿ ರಾಜ್ಯ ವಿಪತ್ತು ನಿರ್ವಹಣೆ ತಂಡಗಳ ಜತೆಗೆ ಕೇಂದ್ರ ವಿಪತ್ತು ನಿರ್ವಹಣೆ ಪಡೆಯ ತಂಡಗಳನ್ನು ನಿಯೋಜಿಸಲಾಗಿದೆ. ನಿವಾರ್ನಿಂದ ಹೆಚ್ಚು ತೊಂದರೆಗೆ ಒಳಗಾಗುವ ಪುದುಚೇರಿ ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳ ಮೇಲೆ ಹೆಚ್ಚು ಗಮನವಿರಿಸಲಾಗಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಜೆ ೭ರಿಂದ ೧೨ ತಾಸು ವಿಮಾನ ಸಂಚಾರ ಇರುವುದಿಲ್ಲ. ಮೆಟ್ರೊ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿನ 16 ಜಿಲ್ಲೆಗಳಲ್ಲಿ ನ.26ರಂದು ರಜೆ ಘೋಷಿಸಲಾಗಿದೆ.
ಪುದುಚೇರಿ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿರುವ ಒಂದು ಲಕ್ಷಕ್ಕೂ ಅಧಿಕ ಜನರನ್ನು ತೆರವು ಮಾಡಲಾಗಿದೆ, ತಮಿಳುನಾಡಿನಲ್ಲಿ 1,445 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 50 ತಂಡ ಹಾಗೂ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶ ಕರಾವಳಿಯಲ್ಲಿ 30 ತಂಡಗಳನ್ನು ನಿಯೋಜಿಸಲಾಗಿದೆ.
Courtesyg: Google (photo)