ಹಚ್ಚ ಹಸಿರು ವಾತಾವರಣವಿರುವ ಲಕ್ಷದ್ವೀಪದಲ್ಲಿ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಭೂಮಿ ನಿಯಂತ್ರಣ ನಿಯಮಗಳು ಜನರ ಆಕ್ರೋಶಕ್ಕೆ ಕಾರಣವಾಗಿವೆ.
ಭಾರತ ಸೇರಿದಂತೆ ಎಲ್ಲೆಡೆಯಿಂದ ದ್ವೀಪಕ್ಕೆ ಆಗಮಿಸುವವರ ಮೇಲೆ ಕಡ್ಡಾಯ ಕ್ವಾರಂಟೈನ್ ಈ ಮೊದಲು ಜಾರಿಯಲ್ಲಿತ್ತು. ಆದರೆ, ನೂತನವಾಘಿ ನೇಮಕಗೊಂಡ ಆಡಳಿತಗಾರ ಪ್ರಫುಲ್ ಖೋಡಾ ಪಟೇಲ್ ಈ ನಿಯಮವನ್ನು ತೆಗೆದುಹಾಕಿದ್ದರಿಂದ, ಒಂದೇ ಒಂದು ಕೋವಿಡ್ ಪ್ರಕರಣಗಳು ಇಲ್ಲದಿದ್ದ ದ್ವೀಪದಲ್ಲಿ ಮೇ 24ರಂದು 6,847 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ, ಜನವಸತಿ ಇರುವ ದ್ವೀಪಗಳಲ್ಲಿ ಎರಡು ತಿಂಗಳು ಲಾಕ್ಡೌನ್ ಘೋಷಿಸಲಾಗಿದೆ. ಇದನ್ನು ಬಳಸಿಕೊಂಡು ಈ ಕೇಂದ್ರಾಡಳಿತ ಪ್ರದೇಶದ ಆಡಳಿತವು ನಿರಂಕುಶ ಕಾನೂನುಗಳನ್ನು ಜಾರಿಗೊಳಿಸುತ್ತಿದೆ ಎನ್ನುವುದು ದೂರು. ಇದಕ್ಕೆ ಉದಾಹರಣೆ, ಅಪಾರ ಅಧಿಕಾರ ಹೊಂದಿರುವ “ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ’ದ ಸ್ಥಾಪನೆ. ಈ ಕಾಯಿದೆ ಸ್ಥಳೀಯ ಸಾಮಾಜಿಕ ಹಾಗೂ ಪಾರಿಸರಿಕ ಪರಿಸ್ಥಿತಿಗೆ ಪೂರಕವಾಗಿಲ್ಲ. ಪ್ರಾಧಿಕಾರವು ಭೂಮಿ ಮಾಲೀಕರನ್ನು ಯಾವುದೇ ಕಾರಣ ನೀಡದೆ ತೆರವುಗೊಳಿಸಬಹುದು. ಇದನ್ನು ರಿಯಲ್ ಎಸ್ಟೇಟ್ ಕುಳಗಳ ಪರವಾಗಿ ಮಾಡಲಾಗುತ್ತಿದೆ ಎಮದು ಸ್ಥಳೀಯರು ದೂರಿದ್ದಾರೆ.
ಪಟೇಲ್ ದ್ವೀಪ ರಾಜ್ಯಕ್ಕೆ ನೇಮಕಗೊಂಡ ಪ್ರಪ್ರಥಮ ರಾಜಕಾರಣಿ. ಈವರೆಗೆ ನಾಗರಿಕ ಸೇವೆಯ ಅಧಿಕಾರಿಗಳಿಗೆ ದ್ವೀಪದ ಆಡಳಿದ ಹೊಣೆಗಾರಿಕಿಎ ನೀಡಲಾಗುತ್ತಿತ್ತು. ಅವರು ಗುಜರಾತ್ನ ಮಾಜಿ ಗೃಹ ಸಚಿವ. ಹೊಸ ನಿಯಂತ್ರಣ ಕಾಯಿದೆಯು ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಡಿಎ)ಗಳನ್ನು ರಚಿಸಲು ಆಡಳಿತಾಧಿಕಾರಿಗೆ ಅಧಿಕಾರ ಕೊಡಲಿದ್ದು, ಈ ಪ್ರಾಧಿಕಾರಗಳು ಯಾವುದೇ ಪ್ರದೇಶವನ್ನು ವಶಕ್ಕೆ ಪಡೆದುಕೊಂಡು, ತನಗಿಷ್ಟಬಂದಂತೆ ಅಭಿವೃದ್ಧಿ ಪಡಿಸಬಹುದು ಹಾಗೂ ಅಲ್ಲಿದ್ದವರನ್ನು ಸ್ಥಳಾಂತರಿಸಬಹುದು. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಪ್ರಾಧಿಕಾರದಲ್ಲಿ ಸರ್ಕಾರ ನೇಮಿಸಿದ ಅಧ್ಯಕ್ಷ, ನಗರ ಯೋಜನೆ ಅಧಿಕಾರಿ ಹಾಗೂ ಸರ್ಕಾರ ನೇಮಿಸಿದ ಮೂವರು “ಪರಿಣತ’ರಲ್ಲದೆ, ಇಬ್ಬರು ಸ್ಥಳೀಯ ಪ್ರತಿನಿಧಿಗಳಿರುತ್ತಾರೆ.
ಲಕ್ಷದ್ವೀಪಗಳು ಪಾರಿಸರಿಕವಾಗಿ ಸೂಕ್ಷ್ಮ ಪ್ರದೇಶವಾಗಿದ್ದು, ಅದನ್ನು ಸುಸ್ಥಿರವಾಗಿ ಅಭಿವೃದ್ಧಿಪಡಿಸಬೇಕೇ ಹೊರತು, ರಿಯಲ್ ಎಸ್ಟೇಟ್ ಲಾಬಿಗೆ ಒಪ್ಪಿಸಬಾರದು ಎಂಬ ಒತ್ತಾಯ ಸ್ಥಳೀಯರದ್ದು.