ಪಟಾಕಿ ನಿಷೇಧ ಕುರಿತ ರಾಜ್ಯ ಸರ್ಕಾರದ ಆದೇಶ ಪರಿಣಾಮಕಾರಿಯಾಗಿಲ್ಲ ಎಂದು ಹೇಳಿರುವ ಹೈಕೋರ್ಟ್, ನ.೧೩ರಂದು ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಪಟಾಕಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ವಿಷ್ಣು ಭರತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮು.ನ್ಯಾ. ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ಹಸಿರು ಪಟಾಕಿಗಳನ್ನು ಮಾತ್ರ ಬಳಸಬಹುದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಹಸಿರು ಪಟಾಕಿಯ ಅರ್ಥವನ್ನೇ ಸರಿಯಾಗಿ ವಿವರಿಸಿಲ್ಲ. ಹಸಿರು ಪಟಾಕಿ ಬಗ್ಗೆ ವ್ಯಾಖ್ಯಾನಿಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಲ್ಲ. ಆದೇಶವನ್ನು ಅನುಷ್ಠಾನಕ್ಕೆ ತರಬೇಕಾದ ಅಧಿಕಾರಿಗಳಿಗೂ ಹಸಿರು ಪಟಾಕಿ ಎಂದರೆ ಯಾವುದು ಎಂಬುದು ಗೊತ್ತಿಲ್ಲ ಪರಿಷ್ಕೃತ ಆದೇಶ ಹೊರಡಿಸಲು ಇನ್ನೂ ಕಾಲ ಮಿಂಚಿಲ್ಲ ಎಂದು ಹೇಳಿತು. ಪಟಾಕಿ ನಿಷೇಧ ಕುರಿತು ಕೋಲ್ಕತ್ತಾ ಹೈಕೋರ್ಟ್ನ ಆದೇಶವನ್ನು ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದರು. ಹಸಿರು ಪಟಾಕಿ ಹೊರತಾಗಿ ಬೇರೆ ಎಲ್ಲ ರೀತಿಯ ಪಟಾಕಿಗಳ ಬಳಕೆ ನಿಷೇಧಿಸಲಾಗಿದೆ ಎಂದು ಸರ್ಕಾರಿ ವಕೀಲರು ಹೇಳಿದರು. ಪಟಾಕಿ ದಹನದಿಂದ ಆಗುವ ದುಷ್ಪರಿಣಾಮಗಳ ಕುರಿತು ಪ್ರಸ್ತಾಪಿಸಿದ ನ್ಯಾಯಾಲಯ, ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಪೀಠ ದೃಢ ಆದೇಶ ಹೊರಡಿಸಬಹುದು. ಪಟಾಕಿ ಬಳಕೆಯಿಂದ ಕೊರೊನಾ ಹರಡುವ ಅಪಾಯವಿದೆ. ಹೀಗಾಗಿ, ರಾಜ್ಯ ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕಿದೆ ಎಂದಿತು. ಬೆಂಗಳೂರಿನ ನಾನಾ ಕಡೆ ಶಬ್ದ ಮಾಲಿನ್ಯದ ಪ್ರಮಾಣ ಅಳತೆ ಮಾಡಲು ಸಾಧ್ಯವೇ ಎಂಬ ಕುರಿತು ವಿವರಣೆ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತು.
Courtesyg: Google (photo)