ಸಂಕ್ರಾತಿ ಹಿಂದಿನ ದಿನ ರೂಪಾಯಿ 66 ಪೈಸೆ ಕುಸಿತ ಕಂಡು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ; ಡಾಲರ್‌ಗೆ 86.79 ರೂ. ಆಗಿದೆ. ಕಳೆದ 2 ವರ್ಷದಲ್ಲಿ ಕಂಡ ತೀವ್ರ ಕುಸಿತ ಇದಾಗಿದ್ದು, 2024ರಲ್ಲಿ ರೂಪಾಯಿ ಬೆಲೆ ಶೇ.3ರಷ್ಟು ಕುಸಿಯಿತು; ಡಾಲರ್ ಎದುರು ನಿರಂತರವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ. ಇದು ಆರಂಭಗೊಂಡಿದ್ದು-ಅಮೆರಿಕದ ಫೆಡರಲ್ ಬ್ಯಾಂಕ್ ಸೆಪ್ಟೆಂಬರ್ 18, 2024ರಂದು ಬಡ್ಡಿಯನ್ನು 50 ಬೇಸ್ ಪಾಯಿಂಟ್(ಬಿಪಿ ಎಸ್)ಗಳಿಂದ ಕಡಿತಗೊಳಿಸಿದ ಬಳಿಕ. ಆನಂತರ ನವೆಂಬರ್ 17 ಹಾಗೂ ಡಿಸೆಂಬರ್ 18ರಂದು ಮತ್ತೊಮ್ಮೆ 25 ಬಿಪಿಎಸ್ ಕಡಿತಗೊಂಡಿತು.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಯಾವುದೇ ಕರೆನ್ಸಿಯ ಮೌಲ್ಯವು ಅದರ ಬೇಡಿಕೆ ಮತ್ತು ಪೂರೈಕೆಯನ್ನು ಆಧರಿಸಿರುತ್ತದೆ. ಮಾರುಕಟ್ಟೆಯಲ್ಲಿ ಸರಕು-ಉತ್ಪನ್ನವೊಂದರ ಮೌಲ್ಯ ನಿಗದಿಯಾಗುವುದು ಕೂಡ ಇದೇ ರೀತಿ. ಉತ್ಪನ್ನವೊಂದಕ್ಕೆ ಬೇಡಿಕೆ ಹೆಚ್ಚಿ, ಪೂರೈಕೆ ಸ್ಥಿರವಾಗಿದ್ದಾಗ ಬೇಡಿಕೆಯನ್ನು ಸರಿದೂಗಿಸಲು ಬೆಲೆ ಹೆಚ್ಚುತ್ತದೆ; ಪೂರೈಕೆ ಸ್ಥಿರವಾಗಿದ್ದು ಬೇಡಿಕೆ ಕುಸಿದಾಗ, ಬಳಕೆದಾರರನ್ನು ಆಕರ್ಷಿಸಲು ಬೆಲೆ ಕಡಿಮೆ ಮಾಡಲಾಗುತ್ತದೆ. ಸರಕು ಮತ್ತು ಫೋರೆಕ್ಸ್ ಮಾರುಕಟ್ಟೆ ನಡುವಿನ ವ್ಯತ್ಯಾಸವೆಂದರೆ, ಕರೆನ್ಸಿಯನ್ನು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಬೇರೆ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯತೆಗೆ ಹೋಲಿಸಿದರೆ ಬೇಡಿಕೆ ಕುಸಿದಾಗ, ವಿದೇಶಿ ಕರೆನ್ಸಿ ಎದುರು ದೇಶಿ ಕರೆನ್ಸಿಯ ಮೌಲ್ಯ ಕಡಿಮೆಯಾಗುತ್ತದೆ; ವಿದೇಶಿ ಕರೆನ್ಸಿ ಮೌಲ್ಯ ತನ್ನಿಂದತಾನೇ ಹೆಚ್ಚುತ್ತದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದೇಶಿ ಕರೆನ್ಸಿಯ ಬೇಡಿಕೆ/ಪೂರೈಕೆಯನ್ನು ನಿರ್ಧರಿಸುವ ಹಲವು ಅಂಶಗಳಿವೆ: ಮೊದಲಿಗೆ, ದೇಶದ ಕೇಂದ್ರ ಬ್ಯಾಂಕಿನ ಹಣಕಾಸು ಕಾರ್ಯನೀತಿ. ಸಡಿಲ ಹಣಕಾಸು ಕಾರ್ಯನೀತಿ ಹೊಂದಿರುವ ಕೇಂದ್ರ ಬ್ಯಾಂಕ್‌ಗಳಿಗೆ ಹೋಲಿಸಿದರೆ, ಕಠಿಣ ಕಾರ್ಯನೀತಿ ಹೊಂದಿರುವ ಕೇಂದ್ರ ಬ್ಯಾಂಕ್‌ಗಳ ಕರೆನ್ಸಿಗೆ ಹೆಚ್ಚು ಮೌಲ್ಯ ಇರಲಿದೆ. ದೇಶವೊಂದು ಸರಕು ಮಾರಾಟ ಮತ್ತು ಹೂಡಿಕೆ ಉದ್ದೇಶಕ್ಕೆ ದುರ್ಬಲ ಕರೆನ್ಸಿಯನ್ನು ಮಾರುಕಟ್ಟೆಗೆ ಪೂರೈಸಿದಾಗ, ಅದರ ಮೌಲ್ಯ ಕುಸಿಯುತ್ತದೆ.
ಎರಡನೆಯದಾಗಿ, ಯಾವುದೇ ಕರೆನ್ಸಿಯ ಬೇಡಿಕೆಯನ್ನು ನಿರ್ಧರಿಸುವ ಪ್ರಮುಖ ಅಂಶವೆಂದರೆ, ದೇಶದ ಉತ್ಪನ್ನ/ಸೇವೆಗಳು/ಆಸ್ತಿಗೆ ವಿದೇಶಿ ಬೇಡಿಕೆ. ದೇಶದ ಉತ್ಪನ್ನ/ಆಸ್ತಿ ಖರೀದಿಗೆ ಮುನ್ನ ವಿದೇಶಿಯರು ಸ್ಥಳೀಯ ಕರೆನ್ಸಿಯನ್ನು ಖರೀದಿಸಬೇಕಿರುವುದರಿಂದ, ಉತ್ಪನ್ನ/ಆಸ್ತಿಗೆ ಬೇಡಿಕೆ ಹೆಚ್ಚಿದಂತೆ, ದೇಶಿ ಕರೆನ್ಸಿಗೂ ಬೇಡಿಕೆ ಹೆಚ್ಚುತ್ತದೆ; ಆ ಮೂಲಕ ಕರೆನ್ಸಿಯ ಮೌಲ್ಯ ಹೆಚ್ಚುತ್ತದೆ. ಉತ್ಪನ್ನ/ಆಸ್ತಿಗೆ ಬೇಡಿಕೆ ಕುಸಿದರೆ, ಕರೆನ್ಸಿಯ ಮೌಲ್ಯ ಕಡಿಮೆಯಾಗುತ್ತದೆ.
ಮೂರನೆಯದಾಗಿ, ವಿದೇಶಿ ಹೂಡಿಕೆದಾರರು ದೇಶದಿಂದ ಬಂಡವಾಳ ಹಿಂಪಡೆಯುತ್ತಿರುವುದು. ಇದರಿಂದ ರೂಪಾಯಿ ಮೇಲೆ ಒತ್ತಡ ಹೆಚ್ಚುತ್ತಿದೆ. ಡೊನಾಲ್ಡ್ ಟ್ರಂಪ್ ಸರ್ಕಾರವು ಚೀನಾದ ಉತ್ಪನ್ನಗಳ ಮೇಲೆ ಶೇ.60 ರವರೆಗೆ, ಕೆನಡಾ-ಮೆಕ್ಸಿಕೋದ ಉತ್ಪನ್ನಗಳ ಮೇಲೆ ಶೇ. 25 ಹಾಗೂ ಭಾರತ ಸೇರಿದಂತೆ ಬೇರೆ ದೇಶಗಳ ಉತ್ಪನ್ನಗಳ ಮೇಲೆ ಶೇ.20 ಸುಂಕ ವಿಧಿಸುವಿಕೆಯನ್ನು ಪ್ರಸ್ತಾಪಿಸಿರುವುದರಿಂದ, ಹೊಮ್ಮುತ್ತಿರುವ ಆರ್ಥಿಕತೆಗಳಿಂದ ಹಣ ಅಮೆರಿಕದೆಡೆಗೆ ಹರಿಯಲಾರಂಭಿಸಿತು. ಭಾರತದ ಆರ್ಥಿಕತೆ ಅಮೆರಿಕ ಹಾಗೂ ಚೀನಾದಷ್ಟು ವೈವಿಧ್ಯೀಕರಣಗೊಂಡಿಲ್ಲ. ವಿದೇಶಿ ಕೇಂದ್ರ ಬ್ಯಾಂಕ್‌ಗಳು ತಮ್ಮ ವಿತ್ತ ಕಾರ್ಯನೀತಿಯನ್ನು ಮರುವಿಮರ್ಶೆ ಮಾಡುತ್ತಿರು ವುದರಿಂದ, ಜಾಗತಿಕ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಅತ್ತಿಂದಿತ್ತ ಮಾಡುತ್ತಿದ್ದಾರೆ; ಭಾತರದಂಥ ದೇಶಗಳಿಂದ ಬಂಡವಾಳ ಹಿಂಪಡೆದು, ಮುಂದುವರಿದ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ದೇಶದಲ್ಲಿ ಕೊರೋನಾ ಬಳಿಕ ಹಣದುಬ್ಬರ ತೀವ್ರವಾಗಿ ಹೆಚ್ಚಿದ್ದರಿಂದ, ಆರ್‌ಬಿಐ ಹಣಕಾಸು ನೀತಿಯನ್ನು ಬಿಗಿಗೊಳಿಸಿತ್ತು. ಅಮೆರಿಕದ ಫೆಡರಲ್ ರಿಸರ್ವ್‌ನ ಕಠಿಣ ಹಣಕಾಸು ನೀತಿಗೆ ಹೋಲಿಸಿದರೆ, ಆರ್‌ಬಿಐ ಹಣಕಾಸು ನೀತಿ ಅಳ್ಳಕವಾಗಿದೆ. ಡಾಲರ್ ಬಲಗೊಂಡಿರುವುದರಿಂದ ರೂಪಾಯಿ ಮಾತ್ರವಲ್ಲದೆ, ಬ್ರೆಜಿಲ್‌ನ ರಿಯಲ್, ಮೆಕ್ಸಿಕೋದ ಪೆಸೋ ಮತ್ತು ಕೊರಿಯಾದ ವನ್ ಕೂಡ ಅಪಮೌಲ್ಯಗೊಂಡಿದೆ.
ನಾಲ್ಕನೆಯದು, ಅಮೆರಿಕಕ್ಕೆ ಹೋಲಿಸಿದರೆ, ಭಾರತದಲ್ಲಿ ಹಣದುಬ್ಬರ ಹೆಚ್ಚು ಇದೆ. ಅಮೆರಿಕದಲ್ಲಿ ಹಣದುಬ್ಬರ ಹಾಗೂ ಬೆಳವಣಿಗೆ ದರ ಎರಡೂ ಶೇ.2.7 ಇದೆ. ಭಾರತದದಲ್ಲಿ ಅಕ್ಟೋಬರ್ 2014ರಲ್ಲಿ ಶೇ.10.87 ಇದ್ದ ಹಣದುಬ್ಬರ ಡಿಸೆಂಬರ್‌ನಲ್ಲಿ ಶೇ.8.4ಕ್ಕೆ ಇಳಿದಿದೆ. ಹಣದುಬ್ಬರ ಹೆಚ್ಚಿದಂತೆ, ಪದಾರ್ಥಗಳ ಬೆಲೆ ಅಧಿಕಗೊಳ್ಳುತ್ತದೆ.
ಐದನೆಯದು, ವಾಹನಗಳ ಹೆಚ್ಚಳದಿಂದ ಕಚ್ಚಾ ತೈಲದ ಆಮದು ಅಧಿಕಗೊಂಡಿದೆ ಹಾಗೂ ಭಾರತೀಯರ ಗೀಳುಗಳಲ್ಲಿ ಒಂದಾದ ಚಿನ್ನದ ಆಮದು ವರ್ಷೇವರ್ಷೇ ಹೆಚ್ಚುತ್ತಲೇ ಇದೆ. ಇವನ್ನು ಡಾಲರ್ ನೀಡಿ ಖರೀದಿ ಸಬೇಕಾಗುತ್ತದೆ. ಇದರಿಂದ ಡಾಲರ್‌ಗೆ ಬೇಡಿಕೆ ಹೆಚ್ಚಿ ರೂಪಾಯಿ ದುರ್ಬಲಗೊಳ್ಳುತ್ತದೆ. ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆ ಕಡಿಮೆಯಾಗಿದ್ದರೂ, ದೇಶದಲ್ಲಿ ಪೆಟ್ರೋಲ್/ಡೀಸೆಲ್ ಬೆಲೆ ಹೆಚ್ಚುತ್ತಲೇ ನಡೆದಿದೆ. ಸಂಚಾರ/ ಸಾಗಣೆ ಎರಡಕ್ಕೂ ಅಗತ್ಯವಾಗಿರುವ ಇಂಧನದ ಬೆಲೆ ಹೆಚ್ಚಳದಿಂದ ಸರಕು, ಉತ್ಪನ್ನಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಜನರ ಮೇಲೆ ಹೊರೆ ಹೆಚ್ಚಿದೆ.
ಆರನೆಯದು, ದೇಶದ ರಫ್ತು ಹೆಚ್ಚುತ್ತಿಲ್ಲ. ಆಮದು ಮತ್ತು ರಫ್ತು ಸಮಾನವಾಗಿದ್ದರೆ, ರೂಪಾಯಿ ಮೌಲ್ಯ ಅಧಿಕಗೊಳ್ಳುತ್ತದೆ. ಆದರೆ, ʻಮೇಕ್ ಇನ್ ಇಂಡಿಯʼ ಎಂದು ಎಷ್ಟು ಭಜನೆ ಮಾಡಿದರೂ, ರಫ್ತು ಹೆಚ್ಚುತ್ತಿಲ್ಲ. ದೇಶ ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಉತ್ಪಾದನೆ ವೆಚ್ಚವಿರುವ ಚೀನಾ, ಬಾಂಗ್ಲಾ, ಮ್ಯಾನ್ಮಾರ್ ಮತ್ತಿತರ ದೇಶಗಳೊಡನೆ ಸ್ಪರ್ಧಿಸಬೇಕಿದೆ; ಜೊತೆಗೆ, ಉತ್ಪನ್ನಗಳ ಗುಣಮಟ್ಟ ಉತ್ತಮವಾಗಿರಬೇಕು. ಜನರ ಕೊಳ್ಳುವ ಸಾಮರ್ಥ್ಯ ಕುಸಿತದಿಂದ, ಸರಕು/ಸೇವೆಗಳಿಗೆ ದೇಶಿ ಬೇಡಿಕೆ ಹೆಚ್ಚುತ್ತಿಲ್ಲ. ಹೆಚ್ಚಬೇಕೆಂದರೆ, ಉದ್ಯೋಗಾವಕಾಶ ಹೆಚ್ಚಬೇಕು; ಜನರ ಕೈಯಲ್ಲಿ ಕಾಸು ಓಡಾಡಬೇಕು. ರೂಪಾಯಿ ಅಪಮೌಲ್ಯದಿಂದ ಭಾರತದ ಉತ್ಪನ್ನಗಳು ಆಮದುದಾರರಿಗೆ ಅಗ್ಗವಾಗುತ್ತವೆ. ಇದೆಲ್ಲದರಿಂದಾಗಿ, ರಫ್ತಿನಿಂದ ಭಾರಿ ಮೊತ್ತ ನಿರೀಕ್ಷಿಸಲು ಸಾಧ್ಯವಿಲ್ಲ.
ಆರ್‌ಬಿಐ ತನ್ನ ಕಾಯ್ದಿಟ್ಟ ಡಾಲರ್ ನಿಧಿಯನ್ನು ಬಳಸಿಕೊಂಡು, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದರಿಂದ ಸೆಪ್ಟೆಂಬರ್ 2024ರಲ್ಲಿ 700 ಶತಕೋಟಿ ಡಾಲರ್ ಇದ್ದ ವಿದೇಶಿ ಕಾಯ್ದಿಟ್ಟ ನಿಧಿಯು ಕಳೆದ 8 ತಿಂಗಳಲ್ಲಿ ಅತಿ ಕಡಿಮೆ ಎನ್ನಬಹುದಾದ 640 ಶತಕೋಟಿ ಡಾಲರ್ ತಲುಪಿದೆ. ಒಂದು ವೇಳೆ ಆರ್‌ಬಿಐ ಮಧ್ಯಪ್ರವೇಶಿಸದೆ ಇದ್ದಲ್ಲಿ ರೂಪಾಯಿ ಮೌಲ್ಯ ಇನ್ನಷ್ಟು ಕುಸಿ ದಿರುತ್ತಿತ್ತು. ಆರ್ಥಿಕತೆ ಹಾಳಾಗದಂತೆ ಮತ್ತು ಮಾರುಕಟ್ಟೆ ಹೆಚ್ಚು ಚಂಚಲಗೊಳ್ಳದಂತೆ ರೂಪಾಯಿಯ ಮೌಲ್ಯವನ್ನು ಕಡಿತಗೊಳಿಸುವುದು ಆರ್‌ಬಿಐ ಅನುಸರಿಸಿಕೊಂಡು ಬಂದಿರುವ ನೀತಿ.
ಮೂರು ಭಾರತಗಳು: ದೇಶದಲ್ಲಿ ಬಡತನ, ಅಸಮಾನತೆ, ಕೋಮುದ್ವೇಷ, ಜಾತಿವೈಶಮ್ಯ-ತಾರತಮ್ಯದಿಂದ ಸಾಮಾಜಿಕ ನೇಯ್ಗೆ ದುರ್ಬಲವಾಗಿದೆ; ಸಾಮಾಜಿಕ ಅಶಾಂತಿಯಲ್ಲದೆ, ತೀವ್ರ ಅಸಮಾನತೆ ಇದೆ. ಸಾಮಾಜಿಕ ಸ್ವಾಸ್ಥ್ಯ ಇಲ್ಲದಿರುವಾಗ ಆರ್ಥಿಕ ಪ್ರಗತಿಯಿಂದಷ್ಟೇ ಪ್ರಯೋಜನ ಆಗದು. ಜಿಡಿಪಿ ಲೆಕ್ಕದಲ್ಲಿ ನಮ್ಮದು ಐದನೇ ಬೃಹತ್ ಆರ್ಥಿಕತೆ(ಜಿಡಿಪಿ 4 ಟ್ರಿಲಿಯನ್ ಡಾಲರ್. ಅಂದರೆ, ಅಂದಾಜು 330 ಲಕ್ಷ ಕೋಟಿ ರೂ. ಇದರಲ್ಲಿ ಅಂಬಾ ನಿ-ಅದಾನಿ ಪಾಲು 200 ಶತಕೋಟಿ ಡಾಲರ್). ಆದರೆ, ತಲಾದಾಯ ಪಟ್ಟಿಯಲ್ಲಿ 192 ದೇಶಗಳಲ್ಲಿ 141ನೇ ಸ್ಥಾನ! ಜಾಗತಿಕ ತಲಾದಾಯ 13,900 ಡಾಲರ್; ಚೀನಾ 12,969 ಹಾಗೂ ಭಾರತ 2,700 ಡಾಲರ್. ಈ ದ್ವಂದ್ವವನ್ನು ವಿವರಿಸುವುದು ಹೇಗೆ?
2023ರಲ್ಲಿನ ಆರ್ಥಿಕ ಅಸಮಾನತೆಯು 1950ರ ಮಟ್ಟವನ್ನು ಮೀರಿದೆ ಎಂದು ಪೀಪಲ್ಸ್ ರಿಸರ್ಚ್ ಆನ್ ಇಂಡಿಯಾಸ್ ಕನ್ಸೂಮರ್ ಇಕಾನಮಿ(ಪ್ರೈಸ್) ಅಧ್ಯಯನ ಹೇಳಿದೆ. ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋ ಧನೆ ಮಂಡಳಿ(ಎನ್‌ಸಿಎಇಆರ್) ಮತ್ತು ಪ್ರೈಸ್ ನಡೆಸಿದ ಮನೆವಾರು ಆದಾಯ ಸಮೀಕ್ಷೆಯ ಅಂಕಿಅಂಶವನ್ನು ಈ ಅಧ್ಯಯನ ಆಧರಿಸಿದೆ. ಆದಾಯ ಅಸಮಾನತೆಯನ್ನು ಅಳೆಯುವ ಜಿನಿ ಗುಣಾಂಕವು 2023ರಲ್ಲಿ 0.41 ಇದ್ದು, 1955ರಲ್ಲಿ 0.371 ಇದ್ದಿತ್ತು. ಈ ಗುಣಾಂಕವು ವ್ಯಕ್ತಿ/ಕುಟುಂಬಗಳ ನಡುವೆ ಆದಾಯ ವ್ಯತ್ಯಾಸವನ್ನು ಅಳೆಯುತ್ತದೆ. ಶೂನ್ಯ ಜಿನಿ ಗುಣಾಂಕ ಎಂದರೆ ಪರಿಪೂರ್ಣ ಸಮಾನತೆ ಹಾಗೂ 1 ಎಂದರೆ ಸಂಪೂರ್ಣ ಅಸ ಮಾನತೆ. ಜಿನಿ ಗುಣಾಂಕ ಗ್ರಾಮೀಣ ಪ್ರದೇಶದಲ್ಲಿ 0.405(1955ರಲ್ಲಿ 0.341) ಹಾಗೂ ನಗರ ಪ್ರದೇಶದಲ್ಲಿ 0.382(1955ರಲ್ಲಿ 0.392) ಇದೆ. ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಮೂಲಸೌಲಭ್ಯದಲ್ಲಿ ಹೂಡಿಕೆಯೊಟ್ಟಿಗೆ ಸಾಮಾಜಿಕ ಸುರಕ್ಷಾ ಜಾಲದ ವಿಸ್ತರಣೆ ಹಾಗೂ ಪ್ರಗತಿಪರ ತೆರಿಗೆ ವ್ಯವಸ್ಥೆಯಿಂದ ಪ್ರಗತಿಯ ಲಾಭವನ್ನು ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡಬಹುದು; ನರೇಗಾ, ನೇರ ಹಣ ವರ್ಗಾವಣೆ(ಡಿಬಿಟಿ) ಮತ್ತು ಆರ್ಥಿಕ ಒಳಗೊಳ್ಳುವಿಕೆ ಉಪಕ್ರಮಗಳಿಂದ ಕೆಳಹಂತದ ಶೇ. 50ರಷ್ಟು ಮಂದಿಯ ಆದಾಯದಲ್ಲಿ ಸ್ವಲ್ಪ ಮಟ್ಟಿನ ಹೆಚ್ಚಳವಾಗಿದೆ. ಆದರೆ, ಅತಿ ಹೆಚ್ಚು ವರಮಾನ ಇರುವವರಲ್ಲಿ ಐಶ್ವರ್ಯ ಕ್ರೋಡೀಕರಣವಾಗುತ್ತಿದೆ ಎಂದು ಅಧ್ಯಯನ ಹೇಳಿದೆ.
ʻದೇಶ ಕೆಲವೇ ವರ್ಷಗಳಲ್ಲಿ ಜಪಾನ್, ಜರ್ಮನಿಯನ್ನು ಹಿಂದೆ ಹಾಕಿ 3ನೇ ದೊಡ್ಡ ಆರ್ಥಿಕತೆ ಆಗಲಿದೆʼ ಎಂಬ ಮಾತು ಪ್ರಧಾನ ಸೇವಕರಿಂದ ಹಿಡಿದು ಚಿಳ್ಳೆಪಳ್ಳೆ ನಾಯಕರಿಂದ ಪ್ರತಿದಿನ ಕೇಳುತ್ತಲೇ ಇರುತ್ತೇವೆ. ದೇಶದ ನವೋದ್ಯಮ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಬ್ಲೂಮ್ಸ್ ವೆಂಚರ್ಸ್‌ನ ʻಇಂಡಸ್ ವ್ಯಾಲಿ ರಿಪೋರ್ಟ್ 2024ʼ ಪ್ರಕಾರ, ದೇಶದ 100 ಕೋಟಿ ಜನರು ಸಹರಾ ಕೆಳಗಿನ ದೇಶಗಳಿಗಿಂತ ಬಡತನದಲ್ಲಿ ಬದುಕುತ್ತಿದ್ದಾರೆ. ದೇಶದ ಜಿಡಿಪಿಯ ಶೇ.60ರಷ್ಟು ಪಾಲು ಜನಸಾಮಾನ್ಯರು ಜೀವನ ನಿರ್ವಹಣೆಗೆ ಮಾಡುವ ದೈನಂದಿನ ಖರ್ಚುಗಳಿಂದ ಬರುತ್ತಿದೆ. ಇದು ಜಾಗತಿಕ ಸರಾಸರಿಗಿಂತ ಬಹಳ ಹೆಚ್ಚು. ಚೀನಾದಲ್ಲಿ ಇದು ಶೇ.40 ಇದೆ. ಮೂಲಸೌಕರ್ಯಗಳ ಮೇಲಿನ ಹೂಡಿಕೆ ಶೇ.30 ಮಾತ್ರ ಇದೆ. ಎನ್‌ಪಿಎ(ಅನುತ್ಪಾದಕ ಸಾಲ) ಮತ್ತು ಕೋವಿಡೋತ್ತರ ಆರ್ಥಿಕ ಅನಿಶ್ಚಿತತೆಯಿಂದ ಮೂಲಸೌಕರ್ಯ ನಿರ್ಮಾಣದಲ್ಲಿ ಖಾಸಗಿ ಹೂಡಿಕೆ ಕಡಿಮೆಯಾಗಿದೆ. ಸರ್ಕಾರ ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಿ, ಹೂಡಿಕೆ ಮಾಡುತ್ತಿರುವುದರಿಂದ ಖಾಸಗಿ ಹೂಡಿಕೆದಾರರಿಗೆ ಬಂಡವಾಳ ಕ್ರೋಡೀಕರಣ ಕಷ್ಟವಾಗುತ್ತಿದೆ. ಬೇಡಿಕೆ ಕೊರತೆಯಿಂದ ದೇಶಿ ಉದ್ಯಮ ರಂಗದಲ್ಲಿ ಉತ್ಪಾದನೆ ಕುಸಿದಿದೆ. ನೇರ ತೆರಿಗೆ ಪಾವತಿದಾರರ ಸಂಖ್ಯೆ ಈಗಲೂ ಶೇ.1.5ನ್ನು ದಾಟಿಲ್ಲ. ಒಕ್ಕೂಟ ಸರ್ಕಾರ ಜಿಎಸ್‌ಟಿ, ಸೆಸ್ ಇತ್ಯಾದಿ ಅಡ್ಡದಾರಿ ಮೂಲಕ ಸಂಗ್ರಹಿಸುತ್ತಿರುವ ತೆರಿಗೆಗಳು ಬಡ/ಕೆಳ ಮಧ್ಯಮ ವರ್ಗದವರ ಮೇಲೆ ವಿಪರಿಣಾಮ ಬೀರುತ್ತಿವೆ. ಜನರ ದುಡಿಮೆಯ ಬಹುಪಾಲು ದೈನಂದಿನ ಅಗತ್ಯಗಳಿಗೆ ವೆಚ್ಚ ಆಗುತ್ತಿದ್ದು, ಉಳಿತಾಯ, ಹೆಚ್ಚುವರಿ ಖರೀದಿ ಇಲ್ಲವೇ ಹೂಡಿಕೆ ಸಾಧ್ಯವಾಗುತ್ತಿಲ್ಲ. ಖರೀದಿಸುವ ಶಕ್ತಿ ಹೆಚ್ಚದೆ ಇರುವುದರಿಂದ, ಜಿಡಿಪಿ ಇಲ್ಲವೇ ತಲಾದಾಯ ಹೆಚ್ಚುವ ಸಾಧ್ಯತೆ ಇಲ್ಲ.
ವರದಿ ಪ್ರಕಾರ, ಇಲ್ಲಿ ಮೂರು ಭಾರತಗಳಿವೆ; ಮೊದಲಿನದು-1 ಲಕ್ಷ ರೂ. ಮಾಸಿಕ ಆದಾಯವಿರುವ 3 ಕೋಟಿ ಕುಟುಂಬಗಳ 12 ಕೋಟಿ ಜನರಿರುವ ಉಪಭೋಗಿ ವರ್ಗ. ಇವರನ್ನು ಗುರಿಯಾಗಿಸಿಕೊಂಡೇ ಸರ್ಕಾರದ ನೀತಿಗಳು, ಉತ್ಪನ್ನಗಳು ಹಾಗೂ ಸೇವೆಗಳು ರೂಪುಗೊಳ್ಳುತ್ತವೆ. ಎರಡನೆಯದು, ಮಾಸಿಕ 20,000 ರೂ. ಗಳಿಸುವ ಏಳು ಕೋಟಿ ಕುಟುಂಬಗಳ ಅಂದಾಜು 30 ಕೋಟಿ ಮಂದಿ. ಇವರು ಏಣಿಯ ಮೆಟ್ಟಿಲೇರಲು ಹೆಣ ಗುತ್ತ, ನಿರಂತರ ಕನಸು ಕಾಣುತ್ತ ಇರುವಂಥವರು. 3ನೇ ಭಾರತದಲ್ಲಿ ಅಂದಾಜು 100 ಕೋಟಿ ಮಂದಿ ಇದ್ದಾರೆ; ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡುವ ಚೋಮನ ಮಕ್ಕಳು. ಸಣ್ಣ ಅನಾರೋಗ್ಯ, ವೈಯಕ್ತಿಕ ಸಮಸ್ಯೆ ಇವ ರನ್ನು ಸಾಲದ ಸುಳಿಗೆ ತಳ್ಳುತ್ತದೆ. ವರ್ಲ್ಡ್ ಇನ್‌ಈಕ್ವಾಲಿಟಿ ಲ್ಯಾಬ್ ಪ್ರಕಾರ, ದೇಶದಲ್ಲಿ ಶೇ.10ರಷ್ಟು ಅತಿ ಶ್ರೀಮಂತರಿದ್ದು, ಇವರು ವರಮಾನದಲ್ಲಿ ಶೇ.57.7 ಹಾಗೂ ಒಟ್ಟು ಸಂಪತ್ತಿನಲ್ಲಿ ಶೇ.65ರಷ್ಟು ಪಾಲು ಹೊಂದಿ ದ್ದಾರೆ (2022ರಲ್ಲಿ).
ʻಇಂಥ ಸಮೀಕ್ಷೆ/ವರದಿ/ಅಧ್ಯಯನಗಳು ಅಧಿಕೃತವಲ್ಲ; ದೇಶದ ಹೆಸರು ಕೆಡಿಸಲು ವಿಚ್ಛಿದ್ರಕಾರಿ ಶಕ್ತಿಗಳು ನಡೆಸುತ್ತಿರುವ ಪ್ರಯತ್ನʼ ಎಂದು ದೂರಲಾಗುತ್ತದೆ. ಆದರೆ, ಅಸಮಾನತೆ ನಿವಾರಿಸದೆ ಮತ್ತು ಉದ್ಯೋಗಾವಕಾಶ ಹೆಚ್ಚಿಸದೆ, ಉತ್ಪನ್ನ-ಸೇವೆಗಳಿಗೆ ಬೇಡಿಕೆ ಹೆಚ್ಚುವುದಿಲ್ಲ. ಜಾಗತಿಕ ಮಾರುಕಟ್ಟೆ ಅತ್ಯಂತ ಸ್ಪರ್ಧಾತ್ಮಕವಾಗಿರುವುದರಿಂದ, ದೇಶವನ್ನು ರಫ್ತು ಆಧರಿತ ಆರ್ಥಿಕತೆಯಾಗಿ ಮಾಡುವುದು ಕಷ್ಟಕರ. ಯುವಜನರಲ್ಲಿ ನಿರುದ್ಯೋಗ ಪ್ರಮಾಣ ಕಳೆದ 50 ವರ್ಷದಲ್ಲಿ ಅತಿ ಹೆಚ್ಚು ಇದೆ(ಶೇ.8). ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ(ಐಎಲ್‌ಒ)ಯ ಇಂಡಿಯಾ ಎಂಪ್ಲಾಯ್ಮೆಂಟ್ ರಿಪೋರ್ಟ್ 2024 ಪ್ರಕಾರ, ಕಾಯಂ ಉದ್ಯೋಗಿಗಳ ಸಂಖ್ಯೆ ಶೇ.21 ಮಾತ್ರ. ಶೇ.78ರಷ್ಟು ಮಂದಿ ಅಸಂಘಟಿತ ಕ್ಷೇತ್ರದಲ್ಲಿದ್ದು, ಉದ್ಯೋಗ ಅಭದ್ರತೆ ಎದುರಿಸುತ್ತಿದ್ದಾರೆ. ಇವರಿಗೆ ಪಿಂಚಣಿ ಇಲ್ಲವೇ ವಿಮೆ ಸೌಲಭ್ಯ ಇಲ್ಲ. 15-29 ವಯೋಮಾನದವರು, ನಗರ ಪ್ರದೇಶದಲ್ಲಿರುವವರು ಮತ್ತು ವಿದ್ಯಾವಂತ ಯುವತಿಯರಲ್ಲಿ ನಿರುದ್ಯೋಗ ಹೆಚ್ಚು ಇದೆ.
ನರೇಗಾ ಬಿಟ್ಟರೆ ಉದ್ಯೋಗ ಸೃಷ್ಟಿಸುವ ಬೇರೆ ಸರ್ಕಾರಿ ಕಾರ್ಯಕ್ರಮಗಳಿಲ್ಲ. ಪ್ರಧಾನಿ ʼಉದ್ಯೋಗ ಹುಡುಕುವ ಬದಲು ಉದ್ಯೋಗದಾತರಾಗಬೇಕುʼ ಎನ್ನುತ್ತಾರೆ. ಆದರೆ, ಅಗತ್ಯ ಶಿಕ್ಷಣ/ತರಬೇತಿ, ಬಂಡವಾಳ, ಸೇವೆ-ಉತ್ಪನ್ನಗಳಿಗೆ ಮಾರುಕಟ್ಟೆ ಎಲ್ಲಿದೆ? ಸರ್ಕಾರದ ಆದ್ಯತೆಗಳು ಬದಲಾಗಬೇಕಿದೆ. 2023-24ರ ಆಯವ್ಯಯದಲ್ಲಿ 45 ಲಕ್ಷ ಕೋಟಿ ರೂ. ವೆಚ್ಚದಲ್ಲಿ 10 ಲಕ್ಷ ಕೋಟಿ ರೂ. ಮೂಲಸೌಲಭ್ಯ ಕ್ಷೇತ್ರಕ್ಕೆ ನೀಡಲಾಗಿದೆ. ಆದರೆ, ಮಾನವಾಭಿವೃದ್ಧಿಗೆ ನೇರ ಸಂಬಂಧವಿರುವ ಆರೋಗ್ಯ ಕ್ಷೇತ್ರಕ್ಕೆ 89,155 ಕೋಟಿ ಹಾಗೂ ಶಿಕ್ಷಣಕ್ಕೆ 1.12 ಲಕ್ಷ ಕೋಟಿ ರೂ. ಮಾತ್ರ ನೀಡಲಾಗಿದೆ. ಬ್ರೆಜಿಲ್ ಶಿಕ್ಷಣಕ್ಕೆ ಜಿಡಿಪಿಯಲ್ಲಿ ಶೇ.6.5 ಹಾಗೂ ಆರೋಗ್ಯ ರಕ್ಷಣೆಗೆ ಶೇ.9ರಷ್ಟು ಹೂಡಿಕೆ ಮಾಡುತ್ತದೆ. ಇದರಿಂದ, ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ(ಎಚ್‌ಡಿಐ) 194 ದೇಶಗಳಲ್ಲಿ 134 ನೇ ಸ್ಥಾನದಲ್ಲಿದೆ. ಮೂಲಸೌಲಭ್ಯದಲ್ಲಿ ಹೂಡಿಕೆಯಿಂದ ಜಿಡಿಪಿ ಹೆಚ್ಚುತ್ತದೆ ಎನ್ನುವುದು ನಿಜ. ಆದರೆ, ಸಾಮಾಜಿಕ ಹೂಡಿಕೆಯಿಂದ ದೀರ್ಘಕಾಲೀನ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ದೇಶವನ್ನು ರಫ್ತು ಆಧರಿತ ಆರ್ಥಿಕತೆಯಾಗಿ ಮಾಡುವ ಮೂಲಕ ಸಬಲೀಕರಣ ಸಾಧ್ಯವಿಲ್ಲ. ರೂಪಾಯಿ ಸೇರಿದಂತೆ ಕರೆನ್ಸಿಗಳ ಮೌಲ್ಯ ಕುಸಿತ ಸ್ವಾಭಾವಿಕವಲ್ಲ; ಅದು ಅಮೆರಿಕದಂಥ ಶ್ರೀಮಂತ ದೇಶಗಳ ರಕ್ಷಣಾತ್ಮಕ ನೀತಿ, ಅಧಿಕ ಸುಂಕದ ಬೆದರಿಕೆ ಮತ್ತು ಉತ್ಪಾದನೆ ಘಟಕಗಳ ಸ್ಥಳಾಂತರಕ್ಕೆ ಆಮಿಷ ಒಡ್ಡುವಿಕೆಯಿಂದ ಸಂಭವಿಸುತ್ತವೆ. ಇದನ್ನು ಸೂಕ್ತ ಆರ್ಥಿಕ ನೀತಿಯ ಮೂಲಕ ಎದುರಿಸಬೇಕಾಗುತ್ತದೆ.
ʻವಿಕಸಿತ ಭಾರತʼ, ʼ5 ಟ್ರಿಲಿಯನ್ ಆರ್ಥಿಕತೆʼ, ʻವಿಶ್ವ ಗುರುʼ ʻದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ರಾಮಮಂದಿರ ಉದ್ಘಾಟನೆಯಾದ ಜನವರಿ 22, 2024ರಂದುʼ ಎಂದೆಲ್ಲ ಸುಳ್ಳುಗಳನ್ನು ಬಿತ್ತುವ ಮೂಲಕ ರೂಪಾಯಿ ಮೌಲ್ಯವನ್ನು ಎತ್ತಿಹಿಡಿಯಲು ಆಗುವುದಿಲ್ಲ. ಅಸಮಾನತೆ ನಿವಾರಣೆ, ಉದ್ಯೋಗ ಸೃಷ್ಟಿ, ದೇಶಿ ಬೇಡಿಕೆ ಹೆಚ್ಚಳ, ಉದ್ಯಮಕ್ಕೆ ಬೆಂಬಲ, ಶಿಕ್ಷಣ-ತರಬೇತಿ/ಆರೋಗ್ಯ ರಕ್ಷಣೆ ಮತ್ತಿತರ ಸಾಮಾಜಿಕ ಕ್ಷೇತ್ರದಲ್ಲಿ ಹೂಡಿಕೆಯಂಥ ಸಕಾರಾತ್ಮಕ ಕ್ರಿಯೆಗಳ ಮೂಲಕ ದೇಶಿ ಆರ್ಥಿಕತೆಯನ್ನು ಸದೃಢಗೊಳಿಸುವ ಅಗತ್ಯವಿದೆ.