ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಗುಬ್ಬಚ್ಚಿಗಳು ಕಾಣೆಯಾಗಿವೆ. ಮಾಲಿನ್ಯ, ಆಹಾರದ ಕೊರತೆ, ವಾಹನ ದಟ್ಟಣೆ ಇತ್ಯಾದಿ ಇದಕ್ಕೆ ಕಾರಣ. ಗುಬ್ಬಿಗಳ ಜಾಗವನ್ನು ಪಾರಿವಾಳಗಳು ಆಕ್ರಮಿಸಿಕೊಂಡಿದ್ದು, ಗುಬ್ಬಚ್ಚಿಗಳ ಅವನತಿಗೆ ಕಾರಣವಾದ ಅಂಶಗಳೇ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಗುಬ್ಬಚ್ಚಿಗಳು ಕಾಣೆಯಾಗಿವೆ. ಮಾಲಿನ್ಯ, ಆಹಾರದ ಕೊರತೆ, ವಾಹನ ದಟ್ಟಣೆ ಇತ್ಯಾದಿ ಇದಕ್ಕೆ ಕಾರಣ. ಗುಬ್ಬಿಗಳ ಜಾಗವನ್ನು ಪಾರಿವಾಳಗಳು ಆಕ್ರಮಿಸಿಕೊಂಡಿದ್ದು, ಗುಬ್ಬಚ್ಚಿಗಳ ಅವನತಿಗೆ ಕಾರಣವಾದ ಅಂಶಗಳೇ ಪಾರಿವಾಳಗಳಿಗೆ ಪೂರಕವಾಗಿ ಪರಿಣಮಿಸಿವೆ.
ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಮಾನವ ಹಸ್ತಕ್ಷೇಪ ಮತ್ತು ಪರಿಸರ ಮಾಲಿನ್ಯ ಕಾರಣ. ನಗರೀಕರಣ, ಆಧುನೀಕರಣ ಮತ್ತು ಅರಣ್ಯನಾಶದಿಂದ ಗುಬ್ಬಿಗಳ ಸಾಂಪ್ರದಾಯಿಕ ಆವಾಸಸ್ಥಾನ ನಾಶವಾಗಿದೆ; ಆಧುನಿಕ ಕಟ್ಟಡ ಗಳ ವಿನ್ಯಾಸದಿಂದ ಗುಬ್ಬಚ್ಚಿಗಳು ಗೂಡು ಕಟ್ಟಲು ತಾವು ಇಲ್ಲವಾಗಿದೆ. ಕೀಟನಾಶಕಗಳ ವ್ಯಾಪಕ ಬಳಕೆಯಿಂದ ಆಹಾರ ವಿಷವಾಗುತ್ತಿರುವುದಲ್ಲದೆ, ಗುಬ್ಬಿಗಳ ಆಹಾರವಾದ ಕೀಟಗಳೂ ಇಲ್ಲವಾಗುತ್ತಿವೆ. ಗುಬ್ಬಚ್ಚಿಗಳು ಮರಿಗಳನ್ನು ಬೆಳೆಸುವಾಗ, ಜಮೀನಿನಲ್ಲಿರುವ ಬೆಳೆ ಅದರ ಆಹಾರ ಮೂಲ. ವಾಯು ಮತ್ತು ಶಬ್ದ ಮಾಲಿನ್ಯವಲ್ಲದೆ, ವಾಹನಗಳಲ್ಲಿ ಇಂಧನ(ಪೆಟ್ರೋಲ್)ದ ತಳ್ಳುವ ಶಕ್ತಿಯನ್ನು ಹೆಚ್ಚಿಸಲು ಬಳಕೆಯಾಗುವ ಟೆಟ್ರಾ ಈಥೈಲ್ ಲೆಡ್ ಹೊರಸೂಸುವ ಸೂಕ್ಷ್ಮ ಸೀಸದ ಕಣಗಳು ಮತ್ತು ಮೊಬೈಲ್ ಟವರ್‌ಗಳ ವಿಕಿರಣದಿಂದ, ಗುಬ್ಬಿಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿ ಮೇಲೆ ನಕಾರಾತ್ಮಕ ಪರಿಣಾಮವುಂಟಾಗಿದೆ. ಕೀಟನಾಶಕಗಳ ಬಳಕೆ ಮತ್ತು ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಕೈ ಬಿಟ್ಟಿರುವುದರಿಂದ, ಮನುಷ್ಯರ ಜೀವನಶೈಲಿ ಬದಲಾಗಿದೆ. ಮನೆಯಲ್ಲಿ ಧಾನ್ಯಗಳನ್ನು ಶುಚಿಗೊಳಿಸುವ ದೃಶ್ಯ ಈಗ ಅಪರೂಪ; ಪೊಟ್ಟಣ ಕಟ್ಟಿದ ಧಾನ್ಯಗಳ ಬಳಕೆ ಹಾಗೂ ಆಹಾರ ಸೇವನೆಯಿಂದ ಗುಬ್ಬಚ್ಚಿಗಳಿಗೆ ಆಹಾರದ ಕೊರತೆಯಾಗಿದೆ. ಯಾವುದೇ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವಿರುವ ಪಾರಿವಾಳಗಳು ಗುಬ್ಬಿಗಳ ಜಾಗವನ್ನು ಆಕ್ರಮಿಸಿವೆ.
ಹಿಕ್ಕೆ ರೋಗಗಳ ಆಗರ: ಜೀರ್ಣಗೊಂಡ ಆಹಾರ ಮತ್ತು ಮೂತ್ರದ ಮಿಶ್ರಣವಾದ ಹಿಕ್ಕೆಯಲ್ಲಿ 60 ಕ್ಕೂ ಹೆಚ್ಚು ರೋಗಕಾರಕಗಳು ಮತ್ತು ಪರಾವಲಂಬಿಗಳು ಇರುತ್ತವೆ. ಹಿಕ್ಕೆಯ ನೇರ ಸಂಪರ್ಕದಿಂದ ಸಮಸ್ಯೆಯಲ್ಲದೆ, ಶ್ವಾಸಕೋಶ ಅಥವಾ ಇನ್ನಿತರ ಆರೋಗ್ಯ ಸಮಸ್ಯೆ ಇರುವವರು ಒಣಗಿದ ಹಿಕ್ಕೆಯಿಂದ ದೂರ ಇರಬೇಕು. ಹಿಕ್ಕೆಯ ಕಣಗಳು ಗಾಳಿ ಮೂಲಕ ಪ್ರವೇಶಿಸಿ, ಶ್ವಾಸನಾಳದ ಮಾರ್ಗದಲ್ಲಿ ಕಿರಿಕಿರಿ ಉಂಟುಮಾಡುತ್ತವೆ; ಹಿಸ್ಟೋಪ್ಲಾಸ್ಮಾಸಿಸ್ ಅಥವಾ ಕ್ರಿಪ್ಟೋಕೊಕೊಸಿಸ್‌ನಂತಹ ಶಿಲೀಂಧ್ರ ರೋಗಗಳನ್ನು ಹರಡುವ ಸಾಧ್ಯತೆಯೂ ಇದೆ. ಹಿಕ್ಕೆಯಿಂದ ಮಣ್ಣು ಕೂಡ ಕಲುಷಿತಗೊಳ್ಳುತ್ತದೆ. ಪಾರಿವಾಳಗಳು ತ್ಯಾಜ್ಯದ ಸಾಗಣೆಗೆ ಬಳಕೆಯಾಗುವ ಶಕ್ತಿಯನ್ನು ಉಳಿಸಲು ಹಾರುವಾಗ ಹಿಕ್ಕೆ ಹಾಕುತ್ತವೆ; ತಂದೆ-ತಾಯಿ ಪಕ್ಷಿಗಳು ಮರಿಗಳ ಜೆಲ್ ಲೇಪಿತ ಮಲದ ಚೀಲಗಳನ್ನು ಗೂಡಿನಿಂದ ಹೊರಸಾಗಿಸುತ್ತವೆ; ಗೂಡನ್ನು ಶತ್ರುಗಳಿಂದ ಮರೆಮಾಚುವುದು ಉದ್ದೇಶ. ಭೂಮಿಗೆ ಹೋಲಿಸಿದರೆ ನೀರಿನಲ್ಲಿ ಮಲ ಬೇಗ ಕರಗುವುದರಿಂದ, ಈಜುಕೊಳ, ನೀರಿನ ಟ್ಯಾಂಕ್ ಇತ್ಯಾದಿ ಜಲಮೂಲಗಳಲ್ಲಿ ಮಲ ವಿಸರ್ಜಿಸುತ್ತವೆ.
ಉಸಿರಾಟದ ಸಮಸ್ಯೆಗೆ ಕಾರಣ: ವ್ಯಕ್ತಿಯೊಬ್ಬ ದೀರ್ಘ ಕಾಲದಿಂದ ಒಣ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ, ಅದಕ್ಕೆ ಆತನ ವೃತ್ತಿ ಸೇರಿದಂತೆ ಹಲವು ಕಾರಣಗಳಿರುತ್ತವೆ; ರೈತರು, ಕೋಳಿ ವ್ಯಾಪಾರಿಗಳು, ಬೆಸುಗೆ ಹಾಕುವವವರು, ಹತ್ತಿ-ಉಣ್ಣೆ ಅಥವಾ ವಸ್ತ್ರೋದ್ಯಮದಲ್ಲಿ ಇರುವವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುವ ಸಾಧ್ಯತೆ ಹೆಚ್ಚು. ಮನೆಯ ಬಾಲ್ಕನಿ ಅಥವಾ ಕಟ್ಟೆ, ಹವಾನಿಯಂತ್ರಣ ಘಟಕ(ಏಸಿ)ದ ಮೇಲ್ಭಾಗದಲ್ಲಿ ಪಾರಿವಾಳಗಳು ಇದ್ದರೆ ಅಥವಾ ಆಗಾಗ ಅವುಗಳಿಗೆ ಆಹಾರ ನೀಡುವ ಅಭ್ಯಾಸವಿದ್ದರೆ, ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ ಆಗಬಹುದು. ಎಕ್ಸ್ ರೇ, ಸಿ.ಟಿ. ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆಯಿಂದ ವ್ಯಕ್ತಿ ಶಿಲೀಂಧ್ರ, ಬೂಷ್ಟು(ಮೌಲ್ಡ್), ತೇವಾಂಶ ಇಲ್ಲವೇ ಪಾರಿವಾಳದ ಹಿಕ್ಕೆಗಳಿಗೆ ಒಡ್ಡಿಕೊಂಡಿರುವನೇ ಎಂಬುದು ಗೊತ್ತಾಗಲಿದೆ. ಒಂದುವೇಳೆ ಶ್ವಾಸಕೋಶಕ್ಕೆ ಶಾಶ್ವತ ಹಾನಿಯಾಗಿದ್ದಲ್ಲಿ, ಅದು ಪುಪ್ಪುಸುರಿತ(ಹೈಪರ್ ಸೆನ್ಸಿಟಿವಿಟಿ
ನ್ಯುಮೋನೈಟಿಸ್ ಅಥವಾ ಬರ್ಡ್ ಫ್ಯಾನ್ಸಿಯರ್ಸ್ ಲಂಗ್). ಶ್ವಾಸಕೋಶದಲ್ಲಿ ಗಾಯ, ಎದೆಯಲ್ಲಿ ಬಿಗಿತ, ಉಸಿರಾಟದ ತೊಂದರೆ ಮತ್ತು ದೀರ್ಘಕಾಲದ ಕೆಮ್ಮು ಇದರ ಲಕ್ಷಣಗಳು. ಹೈಪರ್ ಸೆನ್ಸಿಟಿವಿಟಿ ನ್ಯುಮೋನೈಟಿಸ್ ಒಂದು ಸೋಂಕಲ್ಲ; ಬದಲಾಗಿ, ಪಾರಿವಾಳದ ಹಿಕ್ಕೆಗಳಲ್ಲಿ ಇರುವ ರಾಸಾಯನಿಕ ಅಥವಾ ಅಲರ್ಜನ್ ಗಳು ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಉತ್ತೇಜಿಸುವುದರಿಂದ ಉಂಟಾಗುವ ಪರಿಣಾಮ. ಇದು ನಿರ್ದಿಷ್ಟ ವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಪಾರಿವಾಳಗಳ ಸಂಪರ್ಕ ಹೊಂದಿರುವವರಲ್ಲಿ ಈ ಸಮಸ್ಯೆ ಹೆಚ್ಚುತ್ತಿದೆ.
ಪಾರಿವಾಳಗಳಿಗೆ ಸಂಬಂಧಿಸಿದಂತೆ ಮಳೆಗಾಲದ ತಿಂಗಳುಗಳು ಮುಖ್ಯ. ಆಗ ಚಳಿಗಾಲಕ್ಕೆ ಸಿದ್ಧವಾಗಲು ಕುತ್ತಿಗೆ ಸುತ್ತ ಇರುವ ಸಣ್ಣ ಗರಿಗಳನ್ನು ಉದುರಿಸಿ, ಹೊಸ ಗರಿಗಳನ್ನು ಬೆಳೆಸಿಕೊಳ್ಳುತ್ತವೆ. ಗರಿಗಳ ದೂಳು ಮನುಷ್ಯ ರನ್ನು ಸೇರುತ್ತದೆ. ಪಾರಿವಾಳಗಳ ಸಾಕಣೆದಾರರು ಮತ್ತು ಮಾರಾಟಗಾರರು ಕ್ರಮೇಣ ಶ್ವಾಸಕೋಶದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಶ್ವಾಸಕೋಶಗಳು ದುರ್ಬಲವಾಗುತ್ತವೆ. ಗೊತ್ತಾಗುವ ಹೊತ್ತಿಗೆ ತಡವಾಗಿರುವ ಸಾಧ್ಯತೆ ಇದೆ.
ವರದಿ ಹೇಳುವುದೇನು?: ʻಸ್ಟೇಟ್ ಆಫ್ ಇಂಡಿಯಾಸ್ ಬರ್ಡ್ಸ್ 2023ʼ (State of India’s Birds 2023: A framework to leverage semi-structured citizen science for bird, https://stateofindiasbirds.in /conservation.2000-2023) ವರದಿ ಪ್ರಕಾರ, 2000-2023ರ ಅವಧಿಯಲ್ಲಿ ದೇಶದಲ್ಲಿ ಪಾರಿವಾಳಗಳ ಸಂಖ್ಯೆ ಶೇ.150 ಕ್ಕಿಂತ ಹೆಚ್ಚಾಗಿದೆ. ಬೇರೆಲ್ಲ ಪಕ್ಷಿಗಳಿಗೆ ಹೋಲಿಸಿದರೆ, ಇದು ಅತ್ಯಧಿಕ ಶೇಕಡಾವಾರು ಹೆಚ್ಚಳ. ʻಪಾರಿವಾಳಗಳು ಮಾನವ ವಾಸಸ್ಥಳದಲ್ಲಿ ಗೂಡು ಕಟ್ಟುವ ಮತ್ತು ಅವರು ನೀಡುವ ಯಾವುದೇ ಆಹಾರವನ್ನು ತಿನ್ನುವ ಮೂಲಕ ಹೊಂದಿಕೊಂಡಿವೆ,ʼ ಎಂದು ವರದಿ ಹೇಳುತ್ತದೆ. ಪಾರಿವಾಳಗಳಿಗೆ ನಗರಗಳ ಸಂಚಾರ ವೃತ್ತಗಳು ಮತ್ತು ಪಾದಚಾರಿ ಮಾರ್ಗದಲ್ಲಿ ಧಾನ್ಯ ನೀಡುವುದು ಸಾಮಾನ್ಯ ದೃಶ್ಯ. ಜನ ಪಾರಿವಾಳಗಳನ್ನು ಇಷ್ಟಪಡಲು ಕಾರಣವೇನೆಂದರೆ, ಅವುಗಳನ್ನು ಸಾಕುವುದು ಸುಲಭ ಮತ್ತು ಹೊರಗೆ ಬಿಟ್ಟರೆ, ಸಾಕಿದವನ ಬಳಿಗೆ ವಾಪಸಾಗುತ್ತವೆ. ಬೇರಾವುದೇ ಪಕ್ಷಿಯಲ್ಲಿ ಇಂಥ ನಿಷ್ಠೆಯನ್ನು ನೋಡಲು ಸಾಧ್ಯವಿಲ್ಲ. ಎಲ್ಲಾ ಜೀವಿಗಳು ಪವಿತ್ರ ; ಪಾರಿವಾಳಗಳಿಗೆ ಆಹಾರ ನೀಡುವುದು ಪುಣ್ಯದ ಕೆಲಸ ಎಂದು ಕೆಲವರು ಭಾವಿಸುತ್ತಾರೆ. ಆದರೆ, ವೈದ್ಯರು ಮತ್ತು ಆರೋಗ್ಯ ವೃತ್ತಿಪರರ ಪ್ರಕಾರ, ಪಾರಿವಾಳಗಳು ಪೀಡೆಗಳು. ಅವನ್ನು ಹಾರುವ ಇಲಿಗಳು ಎನ್ನಲಾಗುತ್ತದೆ. ಆಹಾರ ನೀಡುವ ಮೂಲಕ ಅವುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದು ಆರೋಗ್ಯ ಸಮಸ್ಯೆ ಸೃಷ್ಟಿಸುತ್ತಿದೆ. ಇದರಿಂದ ಆಹಾರ ನೀಡುವಿಕೆಯನ್ನು ಪುಣ್ಯದ ಕೆಲಸ ಎಂದು ಸಮರ್ಥಿಸಿಕೊಳ್ಳಲು ಆಗುವುದಿಲ್ಲ.
ʻಪಾರಿವಾಳಗಳು ಹಳ್ಳಿಗಳಲ್ಲಿ ಜಮೀನಿನಲ್ಲಿರುವ ಧಾನ್ಯ ತಿನ್ನುತ್ತವೆ. ಆದರೆ, ನಗರಗಳಲ್ಲಿ ಅವುಗಳಿಗೆ ಆಹಾರ ನೀಡಬೇಕಾಗುತ್ತದೆʼ ಎಂದು ಹಲವರು ಹೇಳುತ್ತಾರೆ. ಇಂಥ ಕಾಳಜಿಗೆ ಅರ್ಥವಿಲ್ಲ. ಜನಸಂಖ್ಯೆ ಹೆಚ್ಚಳ, ತ್ವರಿತ ನಗರೀಕರಣದಿಂದ ಮಾಲಿನ್ಯ ಹಾಗೂ ತಾಪಮಾನ ಹೆಚ್ಚಿದ್ದು, ಇದರಿಂದ ಹಲವು ಪಕ್ಷಿ ಪ್ರಭೇದಗಳು ಕ್ಷಯಿಸುತ್ತಿವೆ; ಕೆಲವು ನಿರ್ವಂಶವಾಗಿವೆ. ಆದರೆ, ಪಾರಿವಾಳಗಳ ಸಂಖ್ಯೆ ವೃದ್ಧಿಸಿದೆ. ಇದಕ್ಕೆ ಕಾರಣಗಳೆಂದರೆ, ಅವು ನಗರವೆಂಬ ಕಾಂಕ್ರೀಟ್ ಕಾಡಿಗೆ ಹೊಂದಿಕೊಂಡು ಗೂಡು ಕಟ್ಟುತ್ತವೆ; ವರ್ಷವಿಡೀ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಮನುಷ್ಯರು ಅವಕ್ಕೆ ಆಹಾರ ನೀಡುತ್ತಾರೆ. ಈಮೊದಲು ನೈಸರ್ಗಿಕ ಭಕ್ಷಕಗಳಾದ ಗೂಬೆ, ಗಿಡುಗ ಇತ್ಯಾದಿಗಳು ಮತ್ತು ಹಾವುಗಳು ಪಾರಿವಾಳಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತಿದ್ದವು. ಆದರೆ, ನಗರೀಕರಣದಿಂದ ಇವುಗಳ ಸಂಖ್ಯೆ ಕಡಿಮೆಯಾಗಿದ್ದು, ಪಾರಿವಾಳಗಳ ಸಂಖ್ಯೆ ಹೆಚ್ಚಿದೆ.
ಸ್ಟೇಟ್ ಆಫ್ ಇಂಡಿಯಾಸ್ ಬರ್ಡ್ಸ್ ವರದಿ ಪ್ರಕಾರ, ನಗರ ಪ್ರದೇಶಗಳಲ್ಲಿ ಆಹಾರ ಲಭ್ಯತೆ ಹೆಚ್ಚಳದಿಂದ ಕಾಗೆಗಳು ಮತ್ತು ಪಾರಿವಾಳಗಳ ಸಂಖ್ಯೆ ಅಧಿಕವಾಗಿದೆ. ಇವು ಇತರ ಹಕ್ಕಿಗಳನ್ನು ಕ್ರಮೇಣ ಹೊರಹಾಕಿವೆ. ಜನ ಮತ್ತು ಪಾರಿವಾಳಗಳ ಸಂಬಂಧ ʻಗೊಂದಲಕರʼ. ಏಕೆಂದರೆ, ಮನುಷ್ಯರ ಸೇವನೆಗೆಂದು ಬೆಳೆದ ಲಕ್ಷಾಂತರ ಕಿಲೋಗ್ರಾಂ ಧಾನ್ಯವನ್ನು ಪಾರಿವಾಳಗಳಿಗೆ ತಿನ್ನಿಸುತ್ತೇವೆ; ಇದಕ್ಕೆ ಪ್ರತಿಯಾಗಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಗಳಿಗೆ ಈಡಾಗುತ್ತಿದ್ದೇವೆ. ಬಹುತೇಕ ಕಡೆ ಪಾರಿವಾಳಗಳ ಸ್ಪರ್ಧೆ ಪ್ರತಿಷ್ಠಿತ ವಿಷಯ. ಇದಕ್ಕಾಗಿ ಅವನ್ನು ಸಾಕಿ, ತರಬೇತಿ ನೀಡಲಾಗುತ್ತದೆ. ನಗರ ಪ್ರದೇಶದಲ್ಲಿ ಪಾರಿವಾಳಗಳ ಮಾರುಕಟ್ಟೆ ಇರುತ್ತದೆ; ಸುತ್ತಮುತ್ತ ಹಿಕ್ಕೆಗಳ ವಾಸನೆ ಹರಡಿರುತ್ತದೆ.
ಜಾಗೃತಿ ಮೂಡಿಸಬೇಕಿದೆ: ಪಾರಿವಾಳಗಳಿಂದ ಹರಡುವ ರೋಗಗಳನ್ನು ನಿಭಾಯಿಸುವ ಉತ್ತಮ ಮಾರ್ಗವೆಂದರೆ, ಈ ಬಗ್ಗೆ ಜಾಗೃತಿ ಮೂಡಿಸುವುದು. ಇದರಿಂದ ಪಾರಿವಾಳಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುವ ಮಾನವ ನಡವಳಿಕೆಗಳು ಬದ ಲಾಗುತ್ತವೆ. ಆಹಾರ ಕೊಡುವುದನ್ನು ನಿಲ್ಲಿಸಿದರೆ ಮತ್ತು ಪರಿಸರದಲ್ಲಿ ಇತರ ಹಕ್ಕಿಗಳ ಸಂಖ್ಯೆ ಸಮತೋಲದಲ್ಲಿದ್ದರೆ, ಪಾರಿವಾಳಗಳ ಸಂಖ್ಯೆ ಇಳಿಯುತ್ತದೆ. ಆದರೆ, ಜನ ಆಹಾರ ನೀಡದಂತೆ ಮಾಡುವುದು ಒಂದು ಸವಾಲು. ದಕ್ಷಿಣ ದೆಹಲಿಯ ಅಪಾರ್ಟ್ಮೆಂಟ್ ಒಂದರ ನಿವಾಸಿಗಳ ಕಲ್ಯಾಣ ಸಂಘ ಇದನ್ನು ಸುಲಭವಾಗಿ ಪರಿಹರಿಸಿತು. ವಸತಿ ಸಂಕೀರ್ಣದ ಮೂರು ಕುಟುಂಬಗಳು ತಮ್ಮ ಬಾಲ್ಕನಿಯಲ್ಲಿ ಪಾರಿವಾಳಗಳಿಗೆ ಆಹಾರ ನೀಡುತ್ತಿದ್ದವು. ಅಪಾರ್ಟ್ಮೆಂಟಿನ ನೆಲ ಮಹಡಿಯಲ್ಲಿ ಹಿಕ್ಕೆ ಬೀಳುತ್ತಿತ್ತು. ಹಿಕ್ಕೆ ಇಲಿಗಳನ್ನು ಆಕರ್ಷಿಸುತ್ತಿದ್ದು, ಕಾಟ ಹೆಚ್ಚಿದೆ ಎಂದು ಮನವರಿಕೆ ಮಾಡಿಕೊಟ್ಟ ಬಳಿಕ ಆ ಕುಟುಂಬಗಳು ಆಹಾರ ನೀಡುವುದನ್ನು ನಿಲ್ಲಿಸಿದವು. ಮುಂಬೈನಲ್ಲಿ ಪಾರಿವಾಳ ವಿವಾದ ಸಿವಿಲ್ ನ್ಯಾಯಾಲಯವನ್ನು ತಲುಪಿತು. ಮೇಲ್ಮಡಿಯವರು ಬಾಲ್ಕನಿಯಲ್ಲಿ ಪಾರಿವಾಳಗಳಿಗೆ ನೀರು ಮತ್ತು ಧಾನ್ಯ ನೀಡುವ ಮೂಲಕ ಇತರ ನಿವಾಸಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ವರ್ಲಿಯ ಅಪಾರ್ಟ್‌ಮೆಂಟ್ ಸಂಕೀರ್ಣದ ಇಬ್ಬರು ನಿವಾಸಿಗಳು ನ್ಯಾಯಾಲಯದ ಕದ ತಟ್ಟಿದರು. ʻಪಾರಿವಾಳಗಳ ಹುಚ್ಚು ಹಾರಾಟದಿಂದ ತೊಂದರೆಯಾಗುತ್ತಿದ್ದು, ಹಿಕ್ಕೆ ಕಿಟಕಿ ಮೇಲೆ ಬಿದ್ದು ಕೆಟ್ಟ ವಾಸನೆ ಬರುತ್ತಿದೆ. ಇದರಿಂದ ಚರ್ಮದ ಕಾಯಿಲೆ ಉಲ್ಬಣಗೊಂಡಿದೆ. ಕೊಳೆತ ಧಾನ್ಯ ಮತ್ತು ನೀರಿನಿಂದ ಸೊಳ್ಳೆಗಳು ಹೆಚ್ಚಿವೆʼ ಎಂದು ವಾದಿಸಿದರು. ಆದರೆ, ತಮ್ಮ ಕ್ರಿಯೆ ಕಾನೂನುಬಾಹಿರವಲ್ಲ ಅಥವಾ ಅಪರಾಧವಲ್ಲ ಎಂದು ಮೇಲ್ಮಡಿಯವರು ಸಮರ್ಥಿಸಿಕೊಂಡರು. ʻಸೇವಾ ಕಾರ್ಯದಿಂದ ಬೇರೆಯವರಿಗೆ ತೊಂದರೆ ಆಗಬಾರದು. ಮೇಲ್ಮಹಡಿ ನಿವಾಸಿ ಬಾಲ್ಕನಿಯಲ್ಲಿ ಪಕ್ಷಿಗಳಿಗೆ ಆಹಾರ ನೀಡುವುದನ್ನು ಶಾಶ್ವತವಾಗಿ ನಿರ್ಬಂಧಿಸಲಾಗಿದೆ,ʼ ಎಂದು ನ್ಯಾಯಾಲಯ ಆದೇಶಿಸಿತು.
ಪಾರಿವಾಳಗಳಿಗೆ ಆಹಾರ ನೀಡಬಾರದು ಎಂಬ ಬಗ್ಗೆ ಸಣ್ಣ ಪ್ರಮಾಣದಲ್ಲಿ ಜಾಗೃತಿ ಮೂಡುತ್ತಿದೆ. ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಸ್ಥಳ ನಿಗದಿಪಡಿಸುವ ಪ್ರಯತ್ನಗಳು ನಡೆದಿವೆ. ಉದ್ಯಾನಗಳು ಮತ್ತು ಸಾರ್ವಜನಿಕ ಪ್ರದೇಶಗಳು ಸ್ಥಳೀಯ ಆಡಳಿತಕ್ಕೆ ಸೇರುವುದರಿಂದ, ಅಲ್ಲಿ ಆಹಾರ ನೀಡುವ ಕುರಿತು ಜನ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಆದರೆ, ಠಾಣೆ ಮತ್ತು ಮುಂಬೈ ಪುರಸಭೆಗಳು ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವವರಿಗೆ 500 ರೂ.ವರೆಗೆ ದಂಡ ವಿಧಿಸಲು ಪ್ರಯತ್ನಿಸಿದವು. ದೆಹಲಿ ಆಡಳಿತವು ಕೆಲವು ಸಂಚಾರ ವೃತ್ತಗಳ ಸುತ್ತ ಗ್ರಿಲ್ ಅಳವಡಿಸಿ, ಆಹಾರ ನೀಡುವುದನ್ನು ನಿಲ್ಲಿಸಲು ಪ್ರಯತ್ನಿ ಸಿತು. ಆದರೆ, ಆಹಾರ ನೀಡುವವರು ಗ್ರಿಲ್‌ಗಳನ್ನು ಕಿತ್ತುಹಾಕಿದರು.
ಜನಾರೋಗ್ಯವು ಸುತ್ತಲಿನ ಪ್ರಾಣಿಗಳ ಆರೋಗ್ಯ ಮತ್ತು ಪರಿಸರದೊಡನೆ ನಿಕಟ ಸಂಪರ್ಕ ಹೊಂದಿದೆ. ಇಂಥ ತಿಳಿವಳಿಕೆಯಿಂದ ರೋಗಕಾರಕಗಳು, ರೋಗದ ವಾಹಕಗಳು ಮತ್ತು ಅವು ಪರಿಸರಕ್ಕೆ ಹೇಗೆ ಹೊಂದಿಕೊಳ್ಳು ತ್ತವೆ ಎನ್ನುವುದು ಗೊತ್ತಾಗಲಿದೆ. ಪಾರಿವಾಳಗಳ ಹೆಚ್ಚಳ ಒಂದು ಗಂಭೀರ ಸಮಸ್ಯೆಯಾಗಿದ್ದು, ವ್ಯಕ್ತಿ ಅಥವಾ ಸಂಘಗಳು ಇದನ್ನು ಪರಿಹರಿಸಲು ಸಾಧ್ಯವಿಲ್ಲ. ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿರುವುದರಿಂದ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ನಗರಸಭೆ/ಪುರಸಭೆ/ಪಟ್ಟಣ ಪಂಚಾಯತಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕಿದೆ. ಸರ್ಕಾರದ ಮಟ್ಟದಲ್ಲಿ ಸಮರ್ಪಕ ಕಾರ್ಯನೀತಿಯನ್ನು ರೂಪಿಸಬೇಕಿದೆ. ದೆಹಲಿ ಮಹಾನಗರ ಪಾಲಿಕೆಯು ನಗರದಾದ್ಯಂತ ಪಕ್ಷಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ಮುಚ್ಚುವ ಕುರಿತು ಚಿಂತನೆ ನಡೆಸುತ್ತಿದೆ. ಪಾರಿವಾಳಗಳಿಂದ ಶ್ವಾಸಕೋಶದ ಕಾಯಿಲೆ ಬರಬಹುದು ಎನ್ನುವುದು ಹೆಚ್ಚು ಜನರಿಗೆ ತಿಳಿದಿಲ್ಲ. ಸಮಸ್ಯೆ ಇರುವುದು ಅರಿವಿನ ಕೊರತೆಯಲ್ಲಿ. ಪ್ರತಿದಿನ ಉದ್ಯಾನ, ಪಾರ್ಕಿಂಗ್ ಸ್ಥಳ ಇತ್ಯಾದಿಯಲ್ಲಿ ಪಾರಿವಾಳಗಳಿಗೆ ಧಾನ್ಯ ನೀಡುವವರಿಗೆ ಇದರಿಂದ ಆಗುವ ಹಾನಿ ಕುರಿತು ಜಾಗೃತಿ ಮೂಡಿಸಬೇಕಿದೆ.