ಸಾಲಗಳ ಕಂತು ಮರುಪಾವತಿ ಅವಧಿ ಮುಂದೂಡಿಕೆ ವೇಳೆಯ ಬಡ್ಡಿಯನ್ನು ಮನ್ನಾ ಮಾಡಿದರೆ, ಮೊತ್ತ 6 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಲಿದೆ. ಈ ಹೊರೆಯನ್ನು ಬ್ಯಾಂಕ್‌ಗಳ ಮೇಲೆ ಹೊರಿಸಿದರೆ, ಅವು ನಿವ್ವಳ ಮೌಲ್ಯದ ದೊಡ್ಡ ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಬಡ್ಡಿ ಮನ್ನಾದಿಂದ ಹೆಚ್ಚಿನ ಬ್ಯಾಂಕ್‌ಗಳ ಅಡಿಪಾಯ ಅಲುಗಾಡಲಿದೆ. ಇದರಿಂದಾಗಿ ಸಾಲದ ಕಂತುಗಳ ಮರುಪಾವತಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿತ್ತೇ ವಿನಹ ಬಡ್ಡಿ ಮನ್ನಾದ ಯೋಚನೆ ಮಾಡಿರಲಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದು ವೇಳೆ ಎಲ್ಲ ಸಾಲಗಳ ಮೇಲಿನ ಆರು ತಿಂಗಳ ಬಡ್ಡಿ ಮನ್ನಾ ಮಾಡಿದರೆ, ೬೫ ವರ್ಷದಲ್ಲಿ ಗಳಿಸಿದ ನಿವ್ವಳ ಮೌಲ್ಯದ ಅರ್ಧದಷ್ಟು ಕಳೆದುಕೊಳ್ಳಬೇಕಾಗುತ್ತದೆ. ಚಕ್ರ ಬಡ್ಡಿಯ ಭಾರವನ್ನು ಬ್ಯಾಂಕ್‌ಗಳು ಹೊರಲು ಸಾಧ್ಯವಿಲ್ಲ. ಅದನ್ನು ಠೇವಣಿದಾರರಿಗೆ ವರ್ಗಾವಣೆ ಮಾಡುವುದು ಅನಿವಾರ್ಯ ಎಂದರು. ಭಾರತದಲ್ಲಿ ಪ್ರತಿ ಸಾಲದ ಖಾತೆಗೆ ಪ್ರತಿಯಾಗಿ 8.5 ಠೇವಣಿ ಖಾತೆಗಳಿವೆ. ಆರು ತಿಂಗಳ ಎಲ್ಲ ಸಾಲಗಳ ಮೇಲಿನ ಬಡ್ಡಿ ಮೊತ್ತ 88,078 ಕೋಟಿ ರೂ. ಆಗಲಿದೆ. ಈ ಅವಧಿಯಲ್ಲಿ ಠೇವಣಿದಾರರಿಗೆ ನೀಡಬೇಕಾದ ಬಡ್ಡಿಯ ಮೊತ್ತ 75,157 ಕೋಟಿ ರೂ. ಎಂದು ಎಸ್‌ಬಿಐ ತಿಳಿಸಿದೆ ಎಂದು ಮೆಹ್ತಾ ಮಾಹಿತಿ ನೀಡಿದರು.ಸಾಲ ಮರುಪಾವತಿಯಲ್ಲಿ ಕೆಲವು ರಿಯಾಯಿತಿ ಕೊಡುವಂತೆ ಕೋರಿ ವಿವಿಧ ಕೈಗಾರಿಕಾ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅರ್ಥವ್ಯವಸ್ಥೆ ಅಸ್ತವ್ಯಸ್ತವಾಗಿರುವ ಸಂದರ್ಭದಲ್ಲಿ ಇನ್ನಷ್ಟು ಹಾನಿ ಉಂಟುಮಾಡುವ ಯಾವುದೇ ಆದೇಶ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
Courtesyg: Google (photo)