ಅಕ್ಟೋಬರ್ ೧೦ರಿಂದ ಆರಂಭವಾಗಿರುವ ಚಿತ್ತಾ ಮಳೆ, ರಾಜಧಾನಿಯನ್ನು ಕಾಡಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಧಾರಾಕಾರವಾಗಿ ಸುರಿದಿದೆ. ಅಕ್ಟೋಬರ್ ನಂತರ ಹಿಂಗಾರು ಆರಂಭವಾಗಲಿದೆ. ಕಳೆದ ಹತ್ತು ವರ್ಷದಿಂದ ಹಿಂಗಾರು ದಕ್ಷಿಣ ಒಳನಾಡಿನ ಬೆಂಗಳೂರನ್ನು ಕಾಡುತ್ತಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಅತಿ ಹೆಚ್ಚು ಮಳೆಯಾಗುತ್ತಿತ್ತು.ಆದರೆ, ಕೆಲ ವರ್ಷಗಳಿಂದ ಅಕ್ಟೋಬರ್‌ನಲ್ಲಿ ಭಾರಿ ಮಳೆ ಸುರಿಯುತ್ತಿದೆ ಎಂದು ಪರಿಣತರು ಹೇಳುತ್ತಾರೆ. “ಚಿತ್ತಾ’ ಹಿಂಗಾರಿನ ಮೊದಲ ಮಳೆ. ಯಾವಾಗ ಬೇಕಾದರೂ, ಮಿತಿಯಿಲ್ಲದೆ ಸುರಿಯುತ್ತದೆ ಎಂದು ಪೂರ್ವಜರು “ಚಿತ್ತಾ’ ಮಳೆಯನ್ನು “ಕುರುಡು ಚಿತ್ತಾ’ ಎಂದು ಕರೆಯುತ್ತಿದ್ದರು. ಈ ಮಳೆಗೆ ಕಣ್ಣಿಲ್ಲ ಎನ್ನುವುದು ಅವರ ನಂಬಿಕೆ. ಅಕ್ಟೋಬರ್ ನಂತರ ಈಶಾನ್ಯ ಮಾರುತಗಳು ಆರಂಭವಾಗಲಿದ್ದು, ಚಂಡಮಾರುತ ಏಳುವುದರಿಂದ ರಾಜ್ಯದ ಒಳನಾಡಿನಲ್ಲಿ ಹೆಚ್ಚು ಮಳೆಯಾಗುತ್ತದೆ. ಅಕ್ಟೋಬರ್‌ನಲ್ಲಿ ಬೆಂಗಳೂರಿಗೆ ಸುರಿಯುವ ವಾಡಿಕೆ ಮಳೆ ಪ್ರಮಾಣ ೧೮೦ ಮಿಮೀ. ಆದರೆ, ಈ ವರ್ಷ ಅ.೨೨ರೊಳಗೆ ೧೬೧ ಮಿ.ಮೀ ಸುರಿದಿದೆ. ಕಳೆದ ಐದು ವರ್ಷಗಳಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣ ನೋಡಿದರೆ, ಎರಡು ವರ್ಷ ಮಾತ್ರ ವಾಡಿಕೆ (ವಾಡಿಕೆ ಮಳೆ ೨೩೪ ಮಿ.ಮೀ)ಗಿಂತ ಕಡಿಮೆ ಹಾಗೂ ಎರಡು ವರ್ಷ ಹೆಚ್ಚು ಮಳೆಯಾಗಿದೆ. ಈ ವರ್ಷ ಮಳೆಯ ತೀವ್ರತೆ ಹೆಚ್ಚಿದ್ದು, ಮಂಗಳವಾರ ಒಂದೇ ರಾತ್ರಿ ೧೨೪.೫ ಮಿಮೀ ಮಳೆಯಾಗಿದೆ. ಈ ಹಿಂದೆ ೧೯೯೭ರ ಅ.೧ರಂದು ೧೭೮.೯ ಮಿಮೀ ಹಾಗೂ ೨೦೧೯ರ ಅ.೯ರಂದು ೧೪೦.೫ ಮಿಮೀ ಮಳೆಯಾಗಿತ್ತು. ಒಂದೇ ದಿನ ಭಾರಿ ಮಳೆಯಾದರೆ ಅದನ್ನು ಬೆಂಗಳೂರು ತಡೆದುಕೊಳ್ಳಲಾರದು. ತಗ್ಗಿನಲ್ಲಿ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ.