ಬ್ಯಾಂಕ್ ಪ್ರವರ್ತಕರ ಷೇರು ಹೆಚ್ಚಳ ಪ್ರಸ್ತಾವ

ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರವರ್ತಕರು ಗರಿಷ್ಠ ಶೇ.೨೬ರಷ್ಟರ ವರೆಗೆ ಷೇರುಗಳನ್ನು ಹೊಂದಲು ಅವಕಾಶ ಕೊಡಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ(ಆರ್‌ಬಿಐ) ಆಂತರಿಕ ಕಾರ್ಯಕಾರಿ ಸಮಿತಿಯೊಂದು ಪ್ರಸ್ತಾವ ಸಲ್ಲಿಸಿದೆ. ಈಗಿರುವ ನಿಯಮಗಳ ಅನ್ವಯ ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರವರ್ತಕರು ಶೇ.೧೫ರಷ್ಟಕ್ಕಿಂತ ಹೆಚ್ಚು ಷೇರು ಹೊಂದುವಂತೆ ಇಲ್ಲ. ಈಗಿರುವ ಶೇ.೧೫ರ ಮಿತಿಯನ್ನು ಮುಂದಿನ ಹದಿನೈದು ವರ್ಷಗಳ ಅವಧಿಯಲ್ಲಿ ಶೇ.೨೬ರಷ್ಟಕ್ಕೆ ಹೆಚ್ಚಿಸಬಹುದು ಎಂದು ಸಮಿತಿಯು ಅಭಿಪ್ರಾಯ ವ್ಯಕ್ತಪಡಿಸಿದೆ. ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಗೆ ಸೂಕ್ತ ತಿದ್ದುಪಡಿಗಳನ್ನು ತಂದ ನಂತರ, ದೊಡ್ಡ ಕಾರ್ಪೊರೇಟ್ ಕಂಪನಿಗಳು ಖಾಸಗಿ ಬ್ಯಾಂಕ್ಗಳ ಪ್ರವರ್ತಕರಾಗಲು ಅವಕಾಶ ಕಲ್ಪಿಸಬಹುದು ಎಂದು ಸಮಿತಿಯು ಹೇಳಿದೆ. ಬ್ಯಾಂಕ್ನ ಪ್ರವರ್ತಕರಲ್ಲದವರು ತಲಾ ಶೇ.೧೫ರಷ್ಟಕ್ಕಿಂತ ಷೇರುಗಳನ್ನು ಹೊಂದಿರುವಂತಿಲ್ಲ ಎಂಬ ನಿಯಮ ರೂಪಿಸಬಹುದು ಎಂದು ಅದು ಪ್ರಸ್ತಾವದಲ್ಲಿ ಹೇಳಿದೆ. ದೇಶದ ಖಾಸಗಿ ಬ್ಯಾಂಕ್ಗಳ ಮಾಲೀಕತ್ವದ ವಿಚಾರವಾಗಿ ಈಗಿರುವ ನಿಯಮಗಳು, ಬ್ಯಾಂಕ್ಗಳಲ್ಲಿ ಕಾರ್ಪೊರೇಟ್ ವ್ಯವಸ್ಥೆ ಹೇಗಿದೆ ಎಂಬುದನ್ನು ಪರಿಶೀಲಿಸಲು ಆರ್‌ಬಿಐ ಜೂನ್‌ನಲ್ಲಿ ಈ ಸಮಿತಿಯನ್ನು ರಚಿಸಿತ್ತು. ಸಮಿತಿಯ ವರದಿಯನ್ನು ಆರ್‌ಬಿಐ ಶುಕ್ರವಾರ ಬಿಡುಗಡೆ ಮಾಡಿದೆ.

ವ್ಯಕ್ತಿಗಳು ಹಾಗೂ ಸಂಸ್ಥೆಗಳು ಬ್ಯಾಂಕಿಂಗ್‌ ಪರವಾನಗಿ ಪಡೆಯುವುದಿದ್ದರೆ ಯಾವ ಅರ್ಹತೆಗಳನ್ನು ಹೊಂದಿರಬೇಕು ಎಂಬ ಬಗ್ಗೆಯೂ ಪರಿಶೀಲಿಸುವಂತೆ ಸಮಿತಿಗೆ ಸೂಚಿಸಲಾಗಿತ್ತು. ಚೆನ್ನಾಗಿ ನಡೆಯುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆಸ್ತಿಯು ಒಟ್ಟು ಮೊತ್ತವು ೫೦ ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚಿದ್ದರೆ, ಅವುಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಪರಿಗಣಿಸಬಹುದು. ಆದರೆ ಅವು ಕನಿಷ್ಠ ೧೦ ವರ್ಷಗಳಿಂದ ವಹಿವಾಟು ನಡೆಸುತ್ತಿರಬೇಕು. ಕಾರ್ಪೊರೇಟ್ ಕಂಪನಿಗಳು ನಡೆಸುತ್ತಿರುವ ಎನ್‌ಬಿಎಫ್‌ಸಿಗಳನ್ನೂ ಬ್ಯಾಂಕ್ ಆಗಿ ಪರಿವರ್ತಿಸಲು ಪರಿಗಣಿಸಬಹುದು ಎಂದು ಸಮಿತಿ ಹೇಳಿದೆ. ಪೇಮೆಂಟ್ಸ್ ಬ್ಯಾಂಕ್‌ಗಳು ಕಿರು ಹಣಕಾಸಿನ ಬ್ಯಾಂಕ್ ಆಗಿ ಪರಿವರ್ತನೆ ಹೊಂದುವ ಇರಾದೆ ವ್ಯಕ್ತಪಡಿಸಿದರೆ, ಅವುಗಳ ಮೂರು ವರ್ಷಗಳ ಅನುಭವವನ್ನು ಹಾಗೂ ಆ ಅವಧಿಯಲ್ಲಿ ಅವುಗಳ ವಹಿವಾಟು ಹೇಗಿತ್ತು ಎಂಬುದನ್ನು ಪರಿಗಣಿಸಿದರೆ ಸಾಕು ಎಂದು ಪ್ರಸ್ತಾವದಲ್ಲಿ ಹೇಳಲಾಗಿದೆ.

Courtesyg: Google (photo)

Journalist,Translator,avid bibliophile

Leave a Reply

Your email address will not be published. Required fields are marked *

Back To Top