ಕೇಂದ್ರ ಸರ್ಕಾರ ಲಕ್ಷ್ಮೀ ವಿಲಾಸ್ ಬ್ಯಾಂಕ್(ಎಲ್‌ವಿಬಿ) ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿದ್ದು, ಠೇವಣಿದಾರರು ಗರಿಷ್ಠ 25 ಸಾವಿರ ರೂ.ಮಾತ್ರ ಹಿಂಪಡೆಯಬಹುದು ಎಂದು ತಿಳಿಸಿದೆ. ಖಾಸಗಿ ವಲಯದ ಬ್ಯಾಂಕ್‌ನ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದ್ದರಿಂದ, ಸೂಪರ್‌ಸೀಡ್ ಮಾಡಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆ ನೀಡಿತ್ತು. ಬ್ಯಾಂಕ್ ಪುನಶ್ಚೇತನಕ್ಕೆ ವಿಶ್ವಾಸಾರ್ಹ ಯಾವುದೇ ಯೋಜನೆ ಇಲ್ಲದ ಕಾರಣ ಠೇವಣಿದಾರರ ಹಿತಾಸಕ್ತಿ ಕಾಯಲು ಹಾಗೂ ಹಣಕಾಸು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸ್ಥಿರತೆಯ ದೃಷ್ಟಿಯಿಂದ ಸೂಪರ್‌ಸೀಡ್ ಸಲಹೆ ಹೊರತಾಗಿ ಬೇರೆ ಆಯ್ಕೆಗಳು ಇರಲಿಲ್ಲ. ಕೇಂದ್ರ ಸರ್ಕಾರ ಠೇವಣಿ ಹಿಂಪಡೆಯುವಿಕೆ ಮೇಲೆ ಮೂವತ್ತು ದಿನಗಳ ಅವಧಿ ಮಿತಿ ಹೇರಿದೆ ಎಂದು ಆರ್‌ಬಿಐ ತಿಳಿಸಿದೆ. ಕೆನರಾ ಬ್ಯಾಂಕಿನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಟಿ.ಎನ್. ಮನೋಹರನ್ ಅವರನ್ನು ಎಲ್‌ವಿಬಿಯ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕದಲ್ಲಿ ಬ್ಯಾಂಕಿನ ಅರವತ್ತು ಶಾಖೆಗಳು ಇವೆ. ಜುಲೈ 2017ರಲ್ಲಿ 190 ರೂ. ಇದ್ದ ಬ್ಯಾಂಕ್ ಷೇರು ಮೌಲ್ಯ 15.5೦ ರೂ.ಗೆ ಕುಸಿತ ಕಂಡಿದೆ. ಬ್ಯಾಂಕ್‌ನ ಮಾರಾಟಕ್ಕೆ ಒಂದು ವರ್ಷದಿಂದಲೂ ಪ್ರಯತ್ನ ನಡೆದಿದೆ. ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಜೊತೆ ಎಲ್ವಿ ಬಿ ವಿಲೀನ ಪ್ರಸ್ತಾವನೆಯನ್ನು ಆರ್‌ಬಿಐ ಕಳೆದ ವರ್ಷ ತಿರಸ್ಕರಿಸಿತ್ತು. ಬ್ಯಾಂಕ್‌ನ್ನು ಸಿಂಗಾಪುರದ ಡಿಬಿಎಸ್ ಬ್ಯಾಂಕ್ ಜೊತೆಗೆ ವಿಲೀನಗೊಳಿಸುವ ಪ್ರಸ್ತಾವನೆ ಇಡಲಾಗಿದೆ.
Courtesyg: Google (photo)