ಹೊಸ ಸ್ವರೂಪದ ಕೊರೊನಾ ಕಾಣಿಸಿಕೊಂಡಿರುವ ಬ್ರಿಟನ್ನಿಂದ ರಾಜ್ಯಕ್ಕೆ ಬಂದವರಲ್ಲಿ 10 ಮಂದಿ ಕೋವಿಡ್ ಬಂದಿರುವುದು ದೃಢಪಟ್ಟಿದೆ. ಅಲ್ಲಿಂದ ಮರಳಿದವರಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 14 ಜನರ ಪೈಕಿ ಐವರು ಶಿವಮೊಗ್ಗದವರಾಗಿದ್ದು, ಚಿಕ್ಕಮಗಳೂರಿನ ಎರಡು ವರ್ಷದ ಮಗು ಹಾಗೂ ಪುರುಷರೊಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಉಳಿದವರು ಬೆಂಗಳೂರಿನವರಾಗಿದ್ದಾರೆ. ಅಲ್ಲಿಂದ ಬಂದವರಲ್ಲಿ ಈವರೆಗೆ ಒಟ್ಟು 1,419 ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. 744 ಮಂದಿಗೆ ಸೋಂಕು ತಗುಲಿಲ್ಲ ಎಂದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. 661 ಮಂದಿ ವರದಿಗೆ ಎದುರು ನೋಡುತ್ತಿದ್ದಾರೆ. ಇಂಗ್ಲೆಂಡಿನಿಂದ ಬಂದವರಲ್ಲಿ 403 ಮಂದಿಗೆ ಆರ್ಟಿ–ಪಿಸಿಆರ್ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗಿದೆ. ವಿದೇಶಗಳಿಂದ ಬಂದ1,202 ಜನರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗಿದೆ. ಈವರೆಗೆ 2.65 ಲಕ್ಷ ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ 1,005 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.14 ಲಕ್ಷ ದಾಟಿದೆ. ಈ ತಿಂಗಳು 25 ದಿನಗಳಲ್ಲಿ 29,592 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 1,183 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಸೋಂಕಿತರಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,044 ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ 578 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.85 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 79 ಪ್ರಕರಣಗಳು, ಅಲ್ಲಿ ಸೋಂಕಿತರ ಸಂಖ್ಯೆ 52,124 ಕ್ಕೆ ತಲುಪಿದೆ. ಹಾಸನದಲ್ಲಿ 43, ಕಲಬುರ್ಗಿಯಲ್ಲಿ-34, ದಕ್ಷಿಣ ಕನ್ನಡದಲ್ಲಿ 30, ಮಂಡ್ಯದಲ್ಲಿ-೨೪ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ರಾಜ್ಯದ 28 ಜಿಲ್ಲೆಯಲ್ಲಿ ಹೊಸದಾಗಿ ಯಾವುದೇ ಮರಣ ಪ್ರಕರಣ ಕಂಡುಬAದಿಲ್ಲ.
ಗುಣಮುಖ: ಒಂದೇ-ದಿನ 89 ಸಾವಿರ ಆರ್ಟಿ–ಪಿಸಿಆರ್ ಸೇರಿದಂತೆ 98 ಸಾವಿರ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ 1.35 ಕೋಟಿ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕೋವಿಡ್ ಪೀಡಿತರಲ್ಲಿ 1,102 ಮಂದಿಗೆ ಕಾಯಿಲೆ ವಾಸಿಯಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 8.88 ಲಕ್ಷಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 13,508 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 208 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.
Courtesyg: Google (photo)