ಒಂದು ಕಾಲಕ್ಕೆ ಅತ್ಯಂತ ಪ್ರತಿಷ್ಟಿತ ಹಾಗೂ ಸಧೃಡ ಕೃಷಿಯೆಂದು ಹೆಮ್ಮೆ ಪಡುತ್ತಿದ್ದ ಕಾಫಿ ಬೆಳೆಗಾರರೆಂದರೆ ಐಷಾರಾಮೀ ದೊರೆಗಳೆಂದು ಬೇರೆಯವರು ಹೇಳುತ್ತಿದ್ದ ಮಲೆನಾಡಿನ ಕಾಫಿ ಬೆಳೆ ಸೋತದ್ದೆಲ್ಲಿ. ಸುಮಾರಾಗಿ ಎಂಬತ್ತರ ದಶಕದವರೆಗೂ ಕಾಫಿಯ ಸ್ಥಿತಿ ಹಾಗೇ ಇತ್ತು. ಆಂತರಿಕ ಬಳಕೆ ಬಹಳ ಕಡಿಮೆ ಇದ್ದು ಅದು ವರ್ಷಕ್ಕೆ ಐವತ್ತು ಸಾವಿರ ಟನ್ ಮೀರುತ್ತಿರಲಿಲ್ಲ. ಅದರಲ್ಲೂ ತಮಿಳುನಾಡೇ ಮುಖ್ಯ ಗ್ರಾಹಕ ರಾಜ್ಯವಾಗಿತ್ತು. ಉಳಿದ ಎಲ್ಲಾ ಕಾಫಿ ರಫ್ತಾಗುತ್ತಿತ್ತು. ಅಂದಿನ ಕಾಲಕ್ಕೆ ದೊಡ್ಡ ಮೊತ್ತವೆನ್ನಬಹುದಾದ ನಾಲ್ಕು ನೂರು ಕೋಟಿ ರುಪಾಯಿಯಷ್ಟು ವಿದೇಶೀ ವಿನಿಮಯ ಗಳಿಸುತ್ತಿದ್ದ ಪ್ರತಿಷ್ಟೆ ಕಾಫಿಗಿತ್ತು.
ಬ್ರಿಟಿಷರ ಕಾಲದಲ್ಲೇ ಪ್ರಾರಂಭವಾದ ಕಾಫಿ ಬೋರ್ಡ್ ಹಾಗೇಯೇ ಇನ್ನಷ್ಟು ಶಕ್ತವಾಗಿ ಮುಂದುವರಿದು ಕಾಫಿ ಬೆಳೆಯ ಸಂಪೂರ್ಣ ನಿಯಂತ್ರಣ ಕಾಫಿ ಬೋರ್ಡಿನ ಕೈಯಲ್ಲಿತ್ತು. ಕಾಫಿ ಬೆಳೆಯುವ ಪ್ರದೇಶದ ವಿಸ್ತೀರ್ಣದ ನಿಯಂತ್ರಣ, ಲೆಕ್ಕ ಪತ್ರಗಳನ್ನಿಡುವುದು, ಸಂಗ್ರಹ ಮತ್ತು ಮಾರಾಟ ಅಷ್ಟೇ ಅಲ್ಲದೇ ಸಂಶೋಧನೆಗಳು ಕೂಡಾ ಕಾಫಿಬೋರ್ಡಿನ ಸಂಪೂರ್ಣ ಸ್ವಾಮ್ಯದಲ್ಲಿತ್ತು. ಕೃಷಿಕನಿಗೆ ಸರ್ಕಾರ ಅನುಮತಿಯೊಂದಿಗೆ ಕಾಫಿ ಬೆಳೆದು ಕಾಫಿ ಬೋರ್ಡಿನ ಗೋದಾಮಿಗೆ ತಂದು ಸುರಿಯುವುದಷ್ಟೇ ಕೆಲಸವಾಗಿತ್ತು. ಅಂತರಿಕ ಬಳಕೆ ಬೇಕಷ್ಟನ್ನು ಬಿಡುಗಡೆಮಾಡಿ ಉಳಿದ ಎಲ್ಲ ಕಾಫಿಯನ್ನು ಕಾಫಿಬೋರ್ಡ್ ತಾನೇ ರಫ್ತು ಮಾಡಿ ಬೆಳಗಾರರಿಗೆ ಕಂತು ಕಂತು ಕಂತಾಗಿ ಹಣ ಪಾವತಿ ಮಾಡುತ್ತಿತ್ತು. ಈ ಕಂತಿನ ಹಣ ನಾಲ್ಕೈದು ವರ್ಷಗಳಿಗೂ ಚಾಚಿಕೊಂಡಿರುತ್ತಿದ್ದು ಪ್ರತಿ ವರ್ಷವೂ ನಿರಂತರವಾಗಿ ಹಣದ ಹರಿವಿರುತ್ತಿತ್ತು.
ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತವಾದಾಗಲೂ ಅದು ಬೆಳೆಗಾರರನ್ನು ಅಷ್ಟಾಗಿ ಭಾದಿಸದೆ ಒಂದು ರೀತಿ ಬೆಲೆ ಸ್ಥಿರತೆಯ ಅನುಕೂಲ ದೊರೆಯುತ್ತಿತ್ತು. ಉಳಿದೆಲ್ಲಾ ಬೆಳೆಗಳು ಕಷ್ಟ ನಷ್ಟ ಅನುಭವಿಸುತ್ತಿದ್ದಾಗಲೂ ಕಾಫಿ ಬೆಳೆಗಾರ ಸಧೃಢವಾಗಿದ್ದ.ಈ ಕಾರಣಕ್ಕಾಗಿಯೇ ಎಂಬತ್ತರ ದಶಕದಲ್ಲಿ ಅನೇಕ ಬೆಳೆಗಾರರು ನಮಗೂ ಕಾಫಿ ಬೋರ್ಡಿನಂತಹ ವ್ಯವಸ್ಥೆ ಬೇಕೆಂದು ಕೇಳತೊಡಗಿದ್ದರು. ರೈತ ಸಂಘ ಕೂಡಾ ಎಲ್ಲ ಕೃಷಿ ಉತ್ಪನ್ನ ಗಳಿಗೆ ಕಾಫಿಬೋರ್ಡಿನಂತಹ ವ್ಯವಸ್ಥೆ ಸೂಕ್ತವೆಂದು ಹೇಳುತ್ತಿತ್ತು.
ಅಂತಹ ಕಾಲದಲ್ಲಿ ಅಡಿಕೆಯ ಬೆಲೆ ನೆಲಕಚ್ಚಿ ಬೆಳೆಗಾರರು ಕಂಗಾಲಾಗಿ ತೋಟದ ಕೆಲಸ ನಿಲ್ಲಿಸಿದ್ದನ್ನೂ, ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಬರಿಯ ಮದ್ಯಾಹ್ನದ ಗಂಜಿಗಾಗಿ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದ ದುರ್ಭರ ದಿನಗಳನ್ನು ನಾನು ಕಂಡಿದ್ದೇನೆ.
ಹಾಗಾದರೆ ಈ ಸಂತೃಪ್ತಿಯ ಭಾವದಲ್ಲಿದ್ದ ಕಾಫಿಗೆ ಬಂದ ವಿಪತ್ತೇನು?.
ನಮ್ಮೆಲ್ಲ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಂತೆ ಕಾಫೀ ಬೋರ್ಡ್ ಕೂಡಾ ಜಡವಾಗುತ್ತ ಹೋಯಿತು. ನಮ್ಮ ರಫ್ತು ಚೆನ್ನಾಗಿದ್ದುದರಿಂದ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸುವ ವಿಚಾರವನ್ನೇ ಮಾಡಲಿಲ್ಲ. ಎಲ್ಲಾ ಸಂಸ್ಥೆಗಳಂತೆ ಕಾಫಿ ಬೋರ್ಡಿನಲ್ಲೂ ರಾಜಕಾರಣ ಪ್ರವೇಶಿತು. ಕಾಫಿಬೆಳೆಯ ಜ್ಞಾನವಿಲ್ಲದ ರಾಜಕಾರಣಿಗಳು ಕಾಫಿಬೋರ್ಡಿನ ನಿಯಂತ್ರಣ ಪಡೆದು ಅವರೇ ಐಷಾರಾಮಿಗಳಾದರು. ಕಾಫಿ ಬೋರ್ಡು ಬೆಳೆಗಾರರ ಸಂಸ್ಥೆಯಾಗಿ ಉಳಿದಿಲ್ಲ ಬ ಅತೃಪ್ತಿ ಬೆಳೆಗಾರರಲ್ಲಿ ಮೂಡಿತು
.ಅದೇ ವೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಒಂದೇ ಸಮನೆ ಏರುತ್ತಿತ್ತು. ಅದರ ಫಲ ನಮಗೆ ಸಿಗುತ್ತಿಲ್ಲ ಎಂಬ ಕೂಗೆದ್ದಿತು. ಎಲ್ಲ ಕಡೆ ಜಾಗತೀಕರಣದ ಗಾಳಿ ಬೀಸುತ್ತಿತ್ತು. ದೊಡ್ಡ ವ್ಯಾಪಾರಿಗಳು ಕಾಫಿ ವ್ಯಾಪಾರಕ್ಕಿಳಿಯಲು ಹೊಂಚು ಹಾಕಿ ಕಾದಿದ್ದರು.
ಕಾಫಿಯನ್ನು ಕಾಫಿ ಬೋರ್ಡಿನ ನಿಯಂತ್ರಣದಿಂದ ಬಿಡಿಸಿ ಮುಖ್ತ ಮಾರುಕಟ್ಟೆಗೆ ಬಿಡಬೇಕೆಂಬ ಕೂಗೆದ್ದಿತು.ಮೊದಲೇ ಖಾಸಗೀಕರಣದತ್ತ ವಾಲಿದ್ದ ಅಂದಿನ ಸರ್ಕಾರ ಬಹಳ ಜಾಣತನದಿಂದ ಇದನ್ನು ಸಾಧಿಸಿತು.
ಮೊದಲಿಗೆ ಶೇ, ಮೂವತ್ತರಷ್ಟು ಕಾಫಿಯನ್ನು ಬೆಳೆಗಾರರು ಯಾರಿಗೆ ಬೇಕಾದರೂ ಮುಖ್ಯವಾಗಿ ಮಾರಬಹುದೆಂದು ಅನುಮತಿ ನೀಡಿತು.( 30 % ಎಫ್ ಎಸ್ ಕ್ಯು ಅಂದರೆ ಫ್ರೀ ಸೇಲ್ ಕೋಟಾ) ಇದು ಕೋಟೆ ಬಾಗಿಲು ತೆಗೆದಂತಾಯಿತು. ಯಾರೂ ಇದನ್ನು ಪಾಲಿಸಲಿಲ್ಲ. ಯಾಕೆಂದರೆ ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕೊಟ್ಟ ಬೆಲೆ ಬೆಳೆಗಾರರರು ಕನಸಿನಲ್ಲಿಯೂ ಊಹಿಸದಂತಿತ್ತು. ಕೋಟೆ ಬಾಗಿಲು ತೆಗೆದಂತಾಗಿ ಬೆಳೆಗಾರರರು ಸರ್ಕಾರವನ್ನು ಲೆಕ್ಕಿಸದೆ ಬೇಕು ಬೇಕಾದಂತೆ ಮಾರಿದರು. ಎರಡೇ ವರ್ಷವಾಗುವುದರೊಳಗೆ ಸರ್ಕಾರ ಕಾಫಿಯ ಎಲ್ಲ ನಿಯಂತ್ರಣವನ್ನು ಕಿತ್ತುಹಾಕಿ ಸಂಪೂರ್ಣ ಮುಕ್ತವಾಗಿಸಿತು.
ಆಗಲೂ ಕೆಲವರು ಪ್ರಜ್ಞಾವಂತರಿಗೆ ಮುಂದಾಗುವ ಅನಾಹುತದ ಯೋಚನೆಯಿತ್ತು. ಬೆಳೆಗಾರರದ್ದೇ ಆದ ಸಂಘಟನೆಯೊಂದು ಇರಬೇಕು ಬೆಲೆ ನಿಯಂತ್ರಣ ಮಾಡದಿದ್ದರೆ ಖಂಡಿತ ತೊಂದರೆಗೆ ಸಿಲುಕಿಕೊಳ್ಳುತ್ತೇವೆಂದು ಊಹಿಸಿ. ಅಡಿಕೆ ಬೆಳೆಗಾರರು ಆಗಲೇ ಯಶಸ್ವಿಯಾಗಿ ನಡೆಸುತ್ತಿದ್ದ ಕ್ಯಾಂಪ್ಕೋದ ಸಂಸ್ಥಾಪಕರುಗಳ ಸಹಾಯ ಪಡೆದು ಕೊಮಾರ್ಕ್ ಎನ್ನುವ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಿದರು.
ಅಷ್ಟರಲ್ಲಾಗಲೇ ಕಾಫಿ ಬೆಲೆ ಕುಸಿಯತೊಡಗಿತ್ತು.
ಒಂದರೆಡು ವರ್ಷ ಯಶಸ್ವಿಯಾಗಿ ನಡೆದ ಕೊಮಾರ್ಕ್ ಅನುಭವದ ಕೊರತೆ ಮತ್ತು ಕೆಲವು ಅವಸರದ ತೀರ್ಮಾನಗಳಿಂದ ಕುಸಿದು ಬಿದ್ದಿತು. ಕೋಮಾರ್ಕ ನಡೆಯುತ್ತಿದ್ದ ಕಾಲದಲ್ಲಿ ಖಾಸಗಿ ವ್ಯಾಪಾರಿಗಳು ಕೊಮಾರ್ಕ್ ನ ಬೆಲೆಯನ್ನಾಧರಿಸಿಯೇ ಬೆಲೆ ನಿಗದಿ ಮಾಡಬೇಕಾದ ಒತ್ತಡದಲ್ಲಂತೂ ಇದ್ದರು ಮತ್ತು ಇದರಿಂದ ಬೆಲೆ ಮತ್ತಷ್ಟು ಕುಸಿಯದಂತೆ ತಡೆಯಲು ಸಾಧ್ಯವಾಯಿತು.
ಕೊಮಾರ್ಕ್ ಹಿನ್ನೆಲೆಗೆ ಸರಿದ ಮೇಲೆ ಕಾಫಿ ಬೆಳೆಗಾರರರು ಅತಂತ್ರರಾದರು:
ಇಲ್ಲಿ ಖಂಡಿತವಾಗಿ ಒಬ್ಬ ವ್ಯಕ್ತಿಯನ್ನು ಉಲ್ಲೇಖಿಸಲೇ ಬೇಕು. ಅವರು ದುರಂತವನ್ನಪ್ಪಿದ ಕನಸುಗಾರ ಸಿದ್ಧಾರ್ಥ. ಇಂತಹ ಖಾಸಗಿ ವ್ಯಕ್ತಿಗಳ ಇತಿಮಿತಿಗಳನ್ನು ಬದಿಗಿಟ್ಟು ನೋಡಿದರೂ. ಅವರೊಬ್ಬರೇ ಕಾಫಿಯ ಆಂತರಿಕ ಮಾರುಕಟ್ಟೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲು ಕಾರಣರಾದುದಲ್ಲದೆ. ನಾನು ಮೊದಲು ಬೆಳೆಗಾರ ನಂತರ ವ್ಯಾಪಾರಿ ಎಂದು ಧೃಡವಾಗಿ ನಿಂತವರು. ಕೊಮಾರ್ಕ ನ ನಂತರ ವ್ಯಾಪಾರಿಗಳು ಸಿದ್ಧಾರ್ಥರ ಅಮಾಲ್ಗಮೇಟೆಡ್ ಬೀನ್ ಕಾಫಿ (ಎ.ಬಿ.ಸಿ) ಕಂಪೆನಿ ದರಗಳೇ ಕಾಫಿ ಬೆಲೆಯನ್ನು ನಿರ್ಧರಿಸುವ ಅಳತೆಗೋಲಾಗಿತ್ತು. ಸಿದ್ಧಾರ್ಥರ ಸೋಲು ವೈಯಕ್ತಿ ಪ್ರಯತ್ನಗಳಿಗಿಂತ ಸಾಂಸ್ಥಿಕ ರೂಪದ ವ್ಯವಸ್ಥೆ ಯಾಕೆ ಅಗತ್ಯವೆಂದು ಮತ್ತೆ ತೋರಿಸಿಕೊಟ್ಟಿತು.
ಈಗ ಕಾಫಿ ಬೆಳೆಗಾರರು ದಿಕ್ಕೆಟ್ಟು ಕುಳಿತಿದ್ದಾರೆ. ಎಲ್ಲ ರೀತಿಯಿಂದಲೂ ಅತ್ಯಂತ ವೈಜ್ಞಾನಿಕವಾಗಿದ್ದ ವ್ಯವಸ್ಥೆಯಾಗಿದ್ದ ಆದರೆ ರಾಜಕಾರಣಕ್ಕೆ ಬಲಿಯಾಗಿ ನಾಶವಾದ ಕಾಫಿ ಬೋರ್ಡಿನಂತಹ ಸಂಸ್ಥೆಯನ್ನು ಹೋರಾಡಿ ಉಳಿಸುಕೊಳ್ಳುವ ಬದಲಿಗೆ ಅದರ ಅಂತ್ಯಕ್ಕೆ ಕೈ ಜೋಡಿಸಿದ ಫಲವನ್ನು ಅನುಭವಿಸುತ್ತಿದ್ದೇವೆ,
ಕೊಮಾರ್ಕ್ ನಂತಹ ಸಹಕಾರಿ ಸಂಸ್ಥೆಯನ್ನು ಸರಿಯಾಗಿ ನಡೆಸಿ ಉಳಿಸಿಕೊಳ್ಳದ ನಾವು ಬೇರೆಯವರನ್ನು ದೂರಿ ಪ್ರಯೋಜನ ಇಲ್ಲ.
ಇದರೊಂದಿಗೆ ಅರಣ್ಯ ನಾಶ, ನಮ್ಮ ಅಭಿವೃದ್ಧಿ ಯೋಜನೆಗಳು, ಬದಲಾದ ವಾತಾವರಣ ಗಳಿಂದ ನಮ್ಮ ಅತ್ಯುತ್ಕೃಷ್ಟ ಅರೇಬಿಕಾ ಕಾಫಿ ನಾಶದ ಹಂತದಲ್ಲಿದೆ. ಪ್ರಾಣಿಗಳ ಹಾವಳಿ ಮಿತಿ ಮೀರಿದೆ.
ಕಾಫಿಗೆ ಈಗ ದೊರೆಯುತ್ತಿರುವ ಬೆಲೆ ಇಪ್ಪತ್ತು ವರ್ಷಗಳ ಹಿಂದಿನ ಬೆಲೆ !
ಖರ್ಚು ಹತ್ತಾರು ಪಟ್ಟು ಏರಿದೆ. ಕಾಫಿಯೊಂದನ್ನೇ ನಂಬಿ ಬದುಕುವ ಸ್ಥಿತಿ ಈಗ ಇಲ್ಲ.
ಈಗ ಸರ್ಕಾರ ಕಾಫಿ ಬೋರ್ಡನ್ನೇ ಮುಚ್ಚುವ ಮಾತಾಡುತ್ತಿದೆ. ಯಾಕೆಂದರೆ ಕಾಫಿ ಬೋರ್ಡಿನ ವಶದಲ್ಲಿರುವ ಸಾವಿರಾರು ಕೋಟಿ ಆಸ್ತಿಯನ್ನು ಮಾರಬಹುದು. ಮತ್ತು ಸಂಶೋಧನೆಯನ್ನು ಕೂಡಾ ಖಾಸಗಿಯವರಿ ಗೆ ಕೊಟ್ಟಿದ್ದೇನೇಂದು ಹೇಳಬಹುದು.
ಈ ಹಿನ್ನೆಲೆಯಲ್ಲಿ ಯೋಚಿಸಿ ನೋಡಿ ಈಗ ಸರ್ಕಾರ ಎ.ಪಿ.ಎಂ..ಸಿ ಯನ್ನು ಮುಚ್ಚುವುದಿಲ್ಲ ಬದಲಿಗೆ ರೈತರಿಗೆ ಬೇಕಾದಲ್ಲಿ ಮಾರುವ ಸ್ವಾತಂತ್ರ ನೀಡುತ್ತೇನೆ ಎನ್ನುತ್ತಿದೆ.
ಈ ಸ್ವಾತಂತ್ರ ದೊರೆತ ಒಂದೆರಡು ವರ್ಷ ಈ ಕಾರ್ಪೋರೇಟಿಗರು ಬೆಳೆಗಾರರರು ಊಹಿಸದ ಬೆಲೆ ಕೊಡುತ್ತಾರೆ. ಅಲ್ಲಿಗೆ ಎ.ಪಿ.ಎಂ.ಸಿ ಯೂ ಮತ್ತು ಇತರ ಸಣ್ಣ ವ್ಯಾಪಾರಸ್ಥರೂ ಮುಳುಗುತ್ತಾರೆ. ಇದನ್ನು ಯಾರೂ ಹೇಳುತ್ತಿಲ್ಲ ಬದಲಿಗೆ ದಳ್ಳಾಳಿಗಳ ಬಗ್ಗೆ ಮಾತಾಡುತ್ತಾರೆ. (ಎ.ಪಿ.ಎಂ.ಸಿ ಸರಿಪಡಿಸಿ ದಳ್ಳಾಳಿಗಳಿಂದ ಮುಕ್ತವಾಗಿಸಲು ಸರ್ಕಾರಕ್ಕೇ ಯಾಕೆ ಸಾಧ್ಯವಿಲ್ಲ?) ಹೌದು ಈ ದಳ್ಳಾಳಿಗಳು ನಾಶವಾಗುತ್ತಾರೆ ಈ ದಳ್ಳಾಳಿಗಳ ಲಾಭವನ್ನು ಕಾರ್ಪೊರೇಟಿಗರು ತಿನ್ನುತ್ತಾರೆ ಅಷ್ಟೇ. ( ಕಾಫಿಯಲ್ಲಿ ಈಗ ಆಗಿರುವುದೂ ಅದೇ)
ನಂತರ ರೈತರ ಜುಟ್ಟು ಮಾತ್ರವಲ್ಲ ಇಡೀ ದೇಹವೇ ಕಾರ್ಪೋರೇಟ್ ಧನಿಗಳ ಸ್ವತ್ತು. ಅದಕ್ಕಾಗಿಯೇ ಸಿದ್ಧವಾಗಿದೆ. ಹನ್ನೆರಡು ಗಂಟೆಗಳ ಕೆಲಸದ ಕಾನೂನು.
ಈಗ ರೈತ ಕಾರ್ಮಿಕರು ಒಟ್ಟಾಗದಿದ್ದರೆ ಓಡಿಹೋಗಲು ತಾಣವೂ, ಪಶ್ಚಾತ್ತಾಪ ಪಡಲು ಪುರುಸೊತ್ತೂ ಇರುವುದಿಲ್ಲ.