2050ರ ವೇಳೆಗೆ ಅತಿ ಹೆಚ್ಚು ನೀರಿನ ಕಂಟಕ ಎದುರಿಸುವ ವಿಶ್ವದ ನೂರು ನಗರಗಳ ಪಟ್ಟಿಯಲ್ಲಿ ದೇಶದ 30 ನಗರಗಳು ಇರಲಿದ್ದು, ಬೆಂಗಳೂರು ಮತ್ತು ಹುಬ್ಬಳಿ-ಧಾರವಾಡ ಈ ಪಟ್ಟಿಯಲ್ಲಿ ಸೇರಿವೆ ಎಂದು ವರ್ಲ್ಡ್ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಹೇಳಿದೆ. ಹವಾಮಾನ ವೈಪರೀತ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳದೇ ಇದ್ದಲ್ಲಿ, ಇಂಥ ಕಠಿಣ ಪರಿಸ್ಥಿತಿ ಎದುರಿಸಬೇಕಾಗಲಿದೆ. ನೀರಿನ ಸಂಕಷ್ಟ ಎದುರಿಸಲಿರುವ ದೇಶದ ನಗರಗಳಲ್ಲಿ ರಾಜಸ್ಥಾನದ ಜೈಪುರ ಮೊದಲ ಹಾಗೂ ಕೇರಳದ ಕಣ್ಣೂರು ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು ಹತ್ತನೆಯ ಮತ್ತು ಹುಬ್ಬಳಿ-ಧಾರವಾಡ ಹದಿನಾರನೇ ಸ್ಥಾನದಲ್ಲಿವೆ. 2020ರಲ್ಲಿ ನೀರಿನ ಕಂಟಕ ಎದುರಿಸುತ್ತಿರುವ ವಿಶ್ವದ ನೂರು ನಗರಗಳ ಪಟ್ಟಿಯಲ್ಲಿ ಇಂದೋರ್ ಮಾತ್ರ ಇದೆ. 2050ರ ವೇಳೆಗೆ ನೀರಿನ ಸಮಸ್ಯೆಗೆ ಒಳಗಾಗುವ ಅಪಾಯವಿರುವ ವಿಶ್ವದ ನೂರು ನಗರಗಳಲ್ಲಿ ಈಜಿಪ್ಟ್ ಅಲೆಕ್ಸಾಂಡ್ರಿಯ ಮೊದಲ ಸ್ಥಾನದಲ್ಲಿದ್ದು, ಚೀನಾದ 30 ನಗರಗಳು, ಜಕಾರ್ತಾ, ಜೊಹಾನ್ಸ್ಬರ್ಗ್, ಇಸ್ತಾನ್‌ಬುಲ್, ಹಾಂಗ್‌ಕಾAಗ್, ಮೆಕ್ಕಾ, ರಿಯೊ ಡಿ ಜನೈರೊ ಮೊದಲಾದ ನಗರಗಳು ಈ ಪಟ್ಟಿಯಲ್ಲಿ ಸೇರಿವೆ. ತಕ್ಷಣ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ, ಇವು 2050ರ ವೇಳೆಗೆ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸಲಿವೆ ಎಂದು ವರದಿ ಹೇಳಿದೆ. ಈ ನೂರು ನಗರಗಳಲ್ಲಿ ಅಂದಾಜು 35 ಕೋಟಿ ಜನರು ನೆಲೆಸಿದ್ದಾರೆ. ಇವು ಆಯಾ ದೇಶ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ. 2050ರ ವೇಳೆಗೆ ಈ ನಗರಗಳ ಜನಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ. ನೀರಿನ ಕೊರತೆ ಜತೆಗೆ ಜನಸಂಖ್ಯೆಯಲ್ಲೂ ಏರಿಕೆ ಆಗುವುದರಿಂದ ಪರಿಸ್ಥಿತಿ ಬಿಗಡಾಯಿಸಲಿದೆ. ಆದ್ದರಿಂದ, ಅಗತ್ಯ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
- ನಿರ್ವಹಣೆ ಅತ್ಯಗತ್ಯ:ಈ ನಗರಗಳು ಪದೇಪದೆ ಪ್ರವಾಹಕ್ಕೆ ಒಳಗಾಗುವುದನ್ನು, ನೀರಿನ ಕೊರತೆ ಎದುರಿಸುವುದನ್ನು ತಪ್ಪಿಸಲು ನೈಸರ್ಗಿಕ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆ-ಕಟ್ಟೆಗಳು, ಜೌಗು ಪ್ರದೇಶಗಳಲ್ಲಿ ಜಲಮರುಪೂರಣ ಮಾಡುವುದು ಉಪಯುಕ್ತ. ಈ ನಗರಗಳ ಭವಿಷ್ಯವನ್ನು ಮರುರೂಪಿಸುವ ಒಂದು ಅವಕಾಶ ಇದೆ’ ಎಂದು ಡಬ್ಲ್ಯುಡಬ್ಲ್ಯುಎಫ್ ಭಾರತದ ಕಾರ್ಯಕ್ರಮ ನಿರ್ದೇಶಕ ಡಾ.ಸೀಜಲ್ ವೋರಾ ಹೇಳಿದ್ದಾರೆ. ನಗರ ಯೋಜನೆ, ಜಲಮೂಲಗಳ ಸಂರಕ್ಷಣೆ, ಜೌಗು ಪ್ರದೇಶಗಳ ಸಂರಕ್ಷಣೆ, ಜಲಮರುಪೂರಣದಂತಹ ಕ್ರಮಗಳನ್ನು ಒಳಗೊಂಡ ಸಮಗ್ರ ನೀರಿನ ನಿರ್ವಹಣೆ ಕಾರ್ಯಕ್ರಮವನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿ ರೂಪಿಸಬಹುದು ಎಂದು ಡಬ್ಲ್ಯುಡಬ್ಲ್ಯುಎಫ್ ಹೇಳಿದೆ.
- ಭಾರತದ ೩೦ ನಗರಗಳು:ಜೈಪುರ, ಇಂದೋರ್, ಠಾಣೆ, ವಡೋದರ, ಶ್ರೀನಗರ, ರಾಜ್ಕೋಟ್, ಕೋಟ, ನಾಸಿಕ್, ವಿಶಾಖಪಟ್ಟಣ, ಬೆಂಗಳೂರು, ಕೋಲ್ಕತ್ತಾ, ಅಹಮದಾಬಾದ್, ಜಬಲ್ಪುರ, ಮುಂಬೈ, ಲಖನೌ, ಹುಬ್ಬಳ್ಳಿ-ಧಾರವಾಡ, ನಾಗ್ಪುರ, ಚಂಡೀಗಢ, ಅಮೃತಸರ, ಲೂಧಿಯಾನ, ಜಲಂಧರ್, ಪುಣೆ, ಧನ್ಬಾದ್, ಭೋಪಾಲ್, ಗ್ವಾಲಿಯರ್, ಸೂರತ್, ದೆಹಲಿ, ಅಲೀಗಢ, ಕೋಯಿಕ್ಕೋಡ್, ಕಣ್ಣೂರು.
- Courtesyg: Google (photo)