ಫ್ರಾನ್ಸ್ನ ಎಮಾನ್ಯುಎಲ್ ಶೆಪೆಂತೆರ್ ಮತ್ತು ಅಮೆರಿಕದ ಜೆನ್ನಿಫೆರ್ ಡೌನಾ 2020ನೇ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಂಶವಾಹಿ ಸರಪಳಿಯ ತಿದ್ದುವಿಕೆ(ಜೀನೋಮ್ ಎಡಿಟಿಂಗ್) ವಿಧಾನದ ಅಭಿವೃದ್ಧಿಗಾಗಿ ಪ್ರಶಸ್ತಿ ನೀಡಲಾಗುತ್ತಿದೆ. ಎಮಾನ್ಯುಯೆಲ್ ಅವರು ಜರ್ಮನಿಯ ಬರ್ಲಿನ್ನ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ನ ಪ್ಯಾಥೊಜೆನ್ ವಿಭಾಗದ ನಿರ್ದೇಶಕಿ. ಜೆನ್ನಿಫೆರ್ ಡೌನಾ ಅಮೆರಿಕದ ಬರ್ಕ್ಲೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್. ತಳಿ ತಂತ್ರಜ್ಞಾನದಲ್ಲಿ ಅತ್ಯಂತ ಪರಿಣಾಮಕಾರಿ ಸಾಧನಗಳನ್ನು ಇಬ್ಬರೂ ಅನ್ವೇಷಿಸಿದ್ದಾರೆ. ತಳಿಗುಣ ತಿದ್ದುಪಡಿಗೆ ಬಳಸಲಾಗುವ ಅತ್ಯಂತ ಸೂಕ್ಷ್ಮ ಕ್ರಿಸ್ಪರ್ ಕತ್ತರಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಬಳಸಿ ಸಂಶೋಧಕರು ಪ್ರಾಣಿ, ಸಸ್ಯ ಹಾಗೂ ಸೂಕ್ಷ್ಮಜೀವಿಗಳ ಡಿಎನ್ಎಯನ್ನು ಅತ್ಯಂತ ನಿಖರವಾಗಿ ಬದಲಿಸಿಬಿಡಬಹುದು. ಇದರಿಂದ ತಳಿಗಳ ಅಭಿವೃದ್ಧಿ, ಕ್ಯಾನ್ಸರ್ಗೆ ಚಿಕಿತ್ಸೆ ಹಾಗೂ ಅನುವಂಶಿಕ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಿದೆ ಎಂದು ನೊಬೆಲ್ ಸಮಿತಿ ಹೇಳಿದೆ.