ಇದೇ ಹೊತ್ತಿನಲ್ಲಿ ಈ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ದಿಲ್ಲಿಯ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಉತ್ತರ ಪ್ರದೇಶ– ದೆಹಲಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಶುಕ್ರವಾರವೂ ಭಾಗಶಃ ಬಂದ್ ಆಗಿದ್ದವು. ರೈತರು ನಡೆಸುತ್ತಿರುವ ಪ್ರತಿಭಟನೆ 11 ದಿನ ಪೂರ್ಣಗೊಳಿಸಿದೆ. ಸರ್ಕಾರ ಮಾತುಕತೆ ನಡೆಸಲು ಇಚ್ಛಿಸುವುದಾದರೆ ಅಧಿಕೃತ ಆಹ್ವಾನ ನೀಡಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ಮಾಡುವ ಪ್ರಸ್ತಾಪವಿದ್ದು, ರೈತರು ಯಾವಾಗ ಕರೆದರೂ ಮಾತುಕತೆಗೆ ಸಿದ್ಧ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಹೇಳಿತ್ತು. ಆದರೆ, ಕಾಯ್ದೆ ರದ್ದುಪಡಿಸಬೇಕು ಎಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ.ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ರಾಷ್ಟ್ರದಾದ್ಯಂತ ರೈಲು ತಡೆ ನಡೆಸಲಾಗುವುದು ಎಂದು ರೈತ ಸಂಘಟನೆಗಳು ಹೇಳಿವೆ.
ಕಾಯ್ದೆ ಬಗ್ಗೆ ರೈತರಿಗೆ ಆಕ್ಷೇಪಗಳಿದ್ದರೆ, ಮಾತುಕತೆಗೆ ಸರ್ಕಾರ ಸಿದ್ಧವಿದೆ. ಇಂಥ ಸಂದರ್ಭದಲ್ಲಿ ಹೋರಾಟ ತೀವ್ರಗೊಳಿಸುವುದು ಸರಿಯಲ್ಲ ಎಂದು ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಹೇಳಿದ್ದಾರೆ. ಪ್ರತಿಕ್ರಿಯಿಸಿರುವ ರೈತರು, ಹಟ ಹಿಡಿದಿರುವುದು ಸರ್ಕಾರವೇ ವಿನಾ ರೈತರಲ್ಲ. ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕಿಸಾನ್ ಸಭಾ ಹೇಳಿದೆ. ಕಾಯ್ದೆಗಳಲ್ಲಿ ಏಳು ಬದಲಾವಣೆ ಮಾಡುವುದಾಗಿ ಕೇಂದ್ರ ಭರವಸೆ ನೀಡಿದೆ. ಆದ್ದರಿಂದ ಪ್ರತಿಭಟನೆಯನ್ನು ಕೈಬಿಡಬೇಕು. ಮಾತುಕತೆಗೆ ದಿನಾಂಕವನ್ನು ಶೀಘ್ರ ನಿರ್ಧರಿಸುವಂತೆ ಮನವಿ ಮಾಡಿದ್ದೇನೆ. ಇಂಥ ಸಮಯದಲ್ಲಿ ಹೋರಾಟವನ್ನು ಘೋಷಿಸುವುದು ಸೂಕ್ತವಲ್ಲ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
Courtesyg: Google (photo)