ನೌಕಾಪಡೆ ನಡೆಸುವ ಕಾರ್ಯಾಚರಣೆಗೆ ಹೊಂದಿ ಕೊಳ್ಳುವಂತೆ ವಿನ್ಯಾಸಗೊಳಿಸಲಾಗಿರುವ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಯನ್ನು ಅರಬ್ಬಿ ಸಮುದ್ರದಲ್ಲಿ ಭಾನುವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಸದ್ದಿಲ್ಲದೇ ಶತ್ರುಪಡೆಯ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಕಾರ್ಯಾಚರಣೆಗಾಗಿಯೇ, ದೇಶೀಯವಾಗಿ ನಿರ್ಮಿಸಲಾಗಿರುವ ಐಎನ್‌ಎಸ್ ಚೆನ್ನೈ ನೌಕೆ ನೆರವಿನಿಂದ ಕ್ಷಿಪಣಿಯ ಪರೀಕ್ಷೆಯನ್ನು ನೆರವೇರಿಸಲಾಯಿತು. ಬಹಳ ಸಂಕೀರ್ಣವಾದ ತಂತ್ರಗಾರಿಕೆಯ ನಂತರ ನಡೆಸಿದ ಈ ಪರೀಕ್ಷೆಯಲ್ಲಿ ಕ್ಷಿಪಣಿಯು ನಿಗದಿಪಡಿಸಿದ ಗುರಿಯನ್ನು ಕರಾರುವಾಕ್ಕಾಗಿ ತಲುಪಿತು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧನೌಕೆಗಳಿಂದ ಚಿಮ್ಮಿ ದೂರದಲ್ಲಿರುವ ಶತ್ರುಪಡೆಯ ನೌಕೆ, ಕ್ಷಿಪಣಿಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿರುವ ಕಾರಣ, ಈ ಬ್ರಹ್ಮೋಸ್ ಕ್ಷಿಪಣಿಗಳು ಭಾರತೀಯ ನೌಕಾಪಡೆಯ ಬತ್ತಳಿಕೆಗೆ ಸೇರ್ಪಡೆಗೊಂಡ ಮತ್ತೊಂದು ಮಾರಕಾಸ್ತ್ರವಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.ಬ್ರಹ್ಮೋಸ್ ಕ್ಷಿಪಣಿಗಳನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಕ್ಷಿಪಣಿಗಳನ್ನು ಜಲಾಂತರ್ಗಾಮಿಗಳಿಂದ, ಯುದ್ಧನೌಕೆಗಳು, ಯುದ್ಧವಿಮಾನ ಇಲ್ಲವೇ ಭೂಮೇಲ್ಮೈಯಿಂದಲೂ ಉಡಾಯಿಸಲು ಸಾಧ್ಯವಿದೆ.