ಪ್ರದೇಶವೊಂದರ ಜನರ ಏಳಿಗೆಗೆ ಯಾವುದೇ ಭೂಮಿಯನ್ನು ಹೆದ್ದಾರಿಯೆಂದು ಅಥವಾ ಹೊಸ ಹೆದ್ದಾರಿ ನಿರ್ಮಾಣ ಮಾಡುವ ಭೂಮಿಯೆಂದು ಅಧಿಸೂಚನೆ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಭಾರತ್‌ಮಾಲಾ ಯೋಜನೆಯಡಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚೆನ್ನೈ–ಕೃಷ್ಣಗಿರಿ–ಸೇಲಂ ನಡುವೆ ನಿರ್ಮಾಣವಾಗಲಿರುವ ಎಂಟು ಪಥಗಳ ಎಕ್ಸ್ಪ್ರೆಸ್‌ವೇಗೆ ಪೀಠ ಹಸಿರು ನಿಶಾನೆ ನೀಡಿದೆ.ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್, ಬಿ.ಆರ್.ಗವಾಯಿ ಹಾಗೂ ಕೃಷ್ಣ ಮುರಾರಿ ಅವರಿದ್ದ ಪೀಠ ಹೇಳಿದೆ. ಎಕ್ಸ್ಪ್ರೆಸ್‌ವೇ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿದ್ದ ಮದ್ರಾಸ್ ಹೈಕೋರ್ಟಿನ ಆದೇಶವನ್ನು ರದ್ದುಗೊಳಿಸಿದೆ.
ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, ಕೇಂದ್ರ ಸರ್ಕಾರ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದವು. ಉದ್ದೇಶಿತ ಎಕ್ಸ್ಪ್ರೆಸ್‌ವೇ ಚೆನ್ನೈ–ಸೇಲಂ ನಡುವೆ ಪ್ರಯಾಣ ಅವಧಿಯನ್ನು ಮೂರು ಗಂಟೆ ಮತ್ತು ದೂರವನ್ನು 68 ಕಿ.ಮೀ ಕಡಿತಗೊಳಿಸಲಿದೆ. 277.30 ಕಿ.ಮೀ ಉದ್ದದ ಎಕ್ಸ್ಪ್ರೆಸ್‌ವೇ ನಿರ್ಮಾಣಕ್ಕೆ 2018ರಲ್ಲಿ ಒಪ್ಪಿಗೆ ನೀಡಲಾಗಿತ್ತು. ಯೋಜನೆಯಿಂದ ಕೃಷಿ ಭೂಮಿ ಹಾಗೂ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು, ರೈತರು ಹಾಗೂ ಸ್ಥಳೀಯ ನಿವಾಸಿಗಳು ದೂರು ಸಲ್ಲಿಸಿದ್ದರು. ಏತನ್ಮಧ್ಯೆ ಚೆನ್ನೈ–ಸೇಲಂ ಕಾರಿಡಾರ್‌ಗೆ ಒಂದಿಂಚು ಭೂಮಿ ಕೊಡುವುದಿಲ್ಲ ಎಂದಿರುವ ರೈತರು, ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ. ಎರಡು ನಗರಗಳ ನಡುವೆ ಈಗಾಗಲೇ ಮೂರು ಹೆದ್ದಾರಿಗಳಿದ್ದು, ಹೊಸ ಯೋಜನೆಯಿಂದ ಪ್ರಯೋಜನವಿಲ್ಲ. ಹೀಗಿರುವಾಗ ನಮ್ಮ ಕೃಷಿ ಭೂಮಿಯನ್ನು ಏಕೆ ಬಿಟ್ಟುಕೊಡಬೇಕು ಎಂದು ಯೋಜನೆ ವಿರುದ್ಧದ ಅಭಿಯಾನದ ವಕ್ತಾರ ಅರುಲ್ ಅರುಮುಗಂ ಹೇಳಿದರು
.
Courtesyg: Google (photo)