ಸುಪ್ರೀಂ ಕೋರ್ಟ್‌ನ ಒಂದು ಮಹತ್ವದ ತೀರ್ಪು ರಾಜ್ಯಪಾಲರ ʻಪಾಕೆಟ್ ವಿಟೋ’ವನ್ನು ಕೊನೆಗೊಳಿಸಿದೆ. ಆದರೆ, ಕಪಾಳಮೋಕ್ಷದಿಂದ ಬುದ್ದಿ ಕಲಿಯದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಮದುರೈನ ಕಾಲೇಜೊಂ ದರಲ್ಲಿ ʻಜೈ ಶ್ರೀರಾಂʼ ಎಂದು ಮೂರು ಬಾರಿ ಘೋಷಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ವಿವಾದ ಸೃಷ್ಟಿಸಿದ್ದಾರೆ. ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆಯಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಬಿಜೆಪಿ ಆಯ್ಕೆಯಾದ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ, ದ್ರಾವಿಡ ಮುನ್ನೇತ್ರ ಕಳಗಂ ಸರ್ಕಾರದ ಮಗ್ಗಲುಮುಳ್ಳಾಗಿ ಪರಿಣಮಿಸಿದ್ದರು. ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಹೊರನಡೆದಿದ್ದು ಸೇರಿದಂತೆ, ಹಲವು ವಿವಾದಕ್ಕೆ ಕಾರಣವಾಗಿದ್ದರು. ಆದರೆ, ವಿಧಾನಸಭೆ ಅಂಗೀಕರಿಸಿದ್ದ 12 ಮಸೂದೆಗಳಿಗೆ ಸಹಿ ಹಾಕದೆ ದೀರ್ಘ ಕಾಲ ಉಳಿಸಿಕೊಂಡಿದ್ದು ಅವರಿಗೆ ಮುಳುವಾಗಿ ಪರಿಣಮಿಸಿತು. ಮಸೂದೆಗಳಲ್ಲಿ ಕೆಲವು 2020 ರಿಂದ ಬಾಕಿ ಉಳಿದಿದ್ದವು. 2023ರಲ್ಲಿ ಸರ್ಕಾರವು ರಾಜ್ಯಪಾಲರ ಮೇಲೆ ಸುಪ್ರೀಂ ಕೋರ್ಟ್‌ಗೆ ದೂರು ನೀಡಿ, ಇಂಥ ವಿಳಂಬವು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿತು. ಕೋರ್ಟ್ ಈ ಸಂಬಂಧ ರಾಜ್ಯಪಾಲರಿಗೆ ನೋಟಿಸ್ ನೀಡಿತು. ರಾಜ್ಯಪಾಲರು ನೋಟಿಸ್‌ಗೆ ತಲೆಕೆಡಿಸಿಕೊಳ್ಳದೆ, ನವೆಂಬರ್ 2023 ರಲ್ಲಿ ನಿರ್ದಿಷ್ಟ ಕಾರಣ ನೀಡದೆ ಹತ್ತು ಮಸೂದೆಗಳಿಗೆ ಅನುಮೋದನೆ ತಡೆಹಿಡಿದರು. ಉಳಿದ ಎರಡು ಮಸೂದೆಯನ್ನೂ ಅನುಮೋದಿಸಲಿಲ್ಲ. ಸಂವಿಧಾನದ ಪ್ರಕಾರ, ಮಸೂದೆಗಳನ್ನು ಶಾಸಕಾಂಗ ಮರುಅನುಮೋದಿಸಿ ಕಳಿಸಿದಾಗ, ರಾಜ್ಯಪಾಲರು ಅನುಮೋದನೆ ನೀಡಬೇಕಾಗುತ್ತದೆ. ಆದರೆ, ರಾಜ್ಯಪಾಲರು ರಾಷ್ಟ್ರೀಯ ಕಾನೂನುಗಳೊಂದಿಗೆ ಸಂಘರ್ಷವಿದೆ ಎಂಬ ನೆಪ ನೀಡಿ, ಈ ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳಿಸಿದರು.
ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಲ್ಲಿ ರಾಜ್ಯಪಾಲರ ಕಿರಿಕಿರಿಗಳು ಶಾಸಕಾಂಗದ ಅಧಿಕಾರಕ್ಕೆ ಧಕ್ಕೆ ತಂದಿವೆ ಮತ್ತು ಒಕ್ಕೂಟ ನೀತಿಗೆ ವಿರುದ್ಧವಾಗಿವೆ. 2023 ರಲ್ಲಿ ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಅಧಿಕಾರಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ನೇತೃತ್ವದ ಶಾಸಕಾಂಗ ಅಂಗೀಕರಿಸಿದ ಕೆಲವು ಮಸೂದೆಗಳಿಗೆ ಒಪ್ಪಿಗೆ ನೀಡಲಿಲ್ಲ. 200ನೇ ವಿಧಿಯಡಿ ಮರುಪರಿಶೀಲನೆಗೆ ವಿಧಾನಸಭೆಗೆ ಕಳುಹಿಸದಿದ್ದಕ್ಕೆ ಸುಪ್ರೀಂ ಕೋರ್ಟ್ ಅವರನ್ನು ಗದರಿಸಿತು. ಕೇರಳ ರಾಜ್ಯಪಾಲರಾಗಿದ್ದ ಆರಿಫ್ ಮೊಹಮ್ಮದ್ ಖಾನ್, ವಿಶ್ವವಿದ್ಯಾನಿಲಯಗಳಿಗೆ ನೇಮಕ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸರ್ಕಾರಕ್ಕೆ ತಲೆನೋವಾಗಿದ್ದರು. ಒಮ್ಮೆ ರಸ್ತೆಯಲ್ಲಿ ಕುಳಿತು ಪ್ರತಿಭಟನೆಯನ್ನೂ ನಡೆಸಿದ್ದರು!ಹಲವಾರು ಮಸೂದೆಗಳನ್ನು ಎರಡು ವರ್ಷಗಳಿಗೂ ಹೆಚ್ಚು ಕಾಲ ತಡೆಹಿಡಿದು, ನವೆಂಬರ್ 2023 ರಲ್ಲಿ ರಾಷ್ಟ್ರಪತಿ ಅವರಿಗೆ ರವಾನಿಸಿದ್ದರು. ಕೇಂದ್ರ ಅವರನ್ನು ಬಿಹಾರಕ್ಕೆ ವರ್ಗಾಯಿಸಿ, ಗೋವಾ ಮೂಲದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಜನವರಿ 2,2024ರಂದು ಅವರ ಜಾಗದಲ್ಲಿ ಕೂರಿಸಿತು. ತೆಲಂಗಾಣದಲ್ಲಿ 10 ಕ್ಕೂ ಹೆಚ್ಚು ಪ್ರಮುಖ ಮಸೂದೆಗಳು ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರ ಬಳಿ ಉಳಿದುಕೊಂಡಿದ್ದವು. ಏಳು ಮಸೂದೆಗಳನ್ನು ಸರ್ಕಾರವು ಸೆಪ್ಟೆಂಬರ್ 2022 ರಲ್ಲಿ ರಾಜ್ಯಪಾಲರಿಗೆ ಕಳುಹಿಸಿತ್ತು. 2024ರ ಚುನಾವಣೆಯಲ್ಲಿ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ, ಮುಖಭಂಗ ಅನುಭವಿಸಿದರು. ಅವರ ಸ್ಥಾನವನ್ನು ತ್ರಿಪುರಾ ಮೂಲದ ಜಿಷ್ಣು ದೇವ್ ವರ್ಮಾ ಅವರು ಜುಲೈ 31, 2024 ರಿಂದ ಪ್ರತಿಷ್ಠಾಪನೆಗೊಂಡರು. ವರ್ಮಾ ಈ ಹಿಂದೆ ತ್ರಿಪುರದ ಉಪ ಮುಖ್ಯಮಂತ್ರಿ ಆಗಿದ್ದರು. ದಿಲ್ಲಿಯ ಆಪ್ ಸರ್ಕಾರವನ್ನು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಇನ್ನಿಲ್ಲದಂತೆ ಕಾಡಿದರು. ಕರ್ನಾಟಕದ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಮಧ್ಯಪ್ರದೇಶ ಮೂಲದವರು. ಜುಲೈ 11,2021 ರಿಂದ ಸೇವೆಯಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣದಲ್ಲಿ ಯಾವುದೇ ವಿಳಂಬವಿಲ್ಲದೆ ತನಿಖೆಗೆ ಅನುಮತಿ ನೀಡಿದ್ದರು. ಬಿಜೆಪಿ ಪಂಜಾಬಿನ ರಾಜ್ಯಪಾಲ ಗುಲಾಬ್ ಸಿಂಗ್ ಕಟಾರಿಯಾ ಈಮೊದಲು ಅಸ್ಸಾಂ ರಾಜ್ಯಪಾಲ ಆಗಿದ್ದರು. ಈ ರಾಜ್ಯಪಾಲರಲ್ಲಿ ಹೆಚ್ಚಿನವರು ಆಡಳಿತ ಪಕ್ಷವನ್ನು ಇನ್ನಿಲ್ಲದಂತೆ ಕಾಡಿದ್ದಾರೆ, ಕಾಡುತ್ತಿದ್ದಾರೆ.
ವಿವಾದವೇನು?: ತಮಿಳುನಾಡಿನ ವಿಶ್ವವಿದ್ಯಾನಿಲಯಗಳ ಉಪಕುಲಪತಿ ನೇಮಕದಲ್ಲಿ ರಾಜ್ಯಪಾಲರ ಅಧಿಕಾರವನ್ನು ಕಡಿಮೆಗೊಳಿಸುವ ಮಸೂದೆಯು ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು. 12 ಮಸೂದೆ ಗಳನ್ನು 2022ರಲ್ಲಿ ರಾಜ್ಯಪಾಲರಿಗೆ ಕಳಿಸಲಾಗಿತ್ತು. ನವೆಂಬರ್ 2023ರಲ್ಲಿ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದಾಗ, ರಾಜ್ಯಪಾಲರು 2 ಮಸೂದೆಗಳನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಿದರು. ಸರ್ಕಾರ ವಿಧಾನಸಭೆಯ ವಿಶೇಷ ಅಧಿವೇಶನ ಕರೆದು 10 ಮಸೂದೆಗಳನ್ನು ಅಂಗೀಕರಿಸಿತು. ಅವನ್ನು ರಾಜ್ಯಪಾಲರಿಗೆ ಕಳಿಸಿದಾಗ, ಅವರು ಅದನ್ನು ರಾಷ್ಟ್ರಪತಿಗೆ ರವಾನಿಸಿದರು. ರಾಷ್ಟ್ರಪತಿ ಅವರು ಒಂದು ಮಸೂದೆ ಅಂಗೀಕರಿಸಿ, 7ನ್ನು ತಿರಸ್ಕರಿಸಿದರು; 2 ತ್ರಿಶಂಕು ಸ್ಥಿತಿಯಲ್ಲಿ ಉಳಿದುಕೊಂಡವು.
ಸಂವಿಧಾನವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎಚ್ಚರಿಕೆಯಿಂದ ವಿಭಾಗಿಸಿದೆ. ಕೇಂದ್ರವು ವಿಧಿ 245ರನ್ವಯ ಇಡೀ ದೇಶ ಇಲ್ಲವೇ ಪ್ರಾಂತ್ಯವೊಂದಕ್ಕೆ ಅನ್ವಯಿಸುವ ಕಾನೂನು ರಚಿಸಬಹುದು; ರಾಜ್ಯಗಳು ತಮ್ಮ ಗಡಿ ಯೊಳಗೆ ಶಾಸನ ರೂಪಿಸುವ ಅಧಿಕಾರ ಹೊಂದಿವೆ. ಸಂವಿಧಾನದ 7ನೇ ಪರಿಚ್ಛೇದವು ಶಾಸನಸಭೆಗಳ ಅಧಿಕಾರವನ್ನು 3 ಪಟ್ಟಿಯಲ್ಲಿ ವರ್ಗೀಕರಿಸಿದೆ. ಇದರಲ್ಲಿ ಪಟ್ಟಿ 2 ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದೆ. ರಾಜ್ಯದ ಕಾಯಿದೆಯೊಂದು ಸಂಸತ್ತಿನ ಕಾಯಿದೆಯೊಡನೆ ಸಂಘರ್ಷಕ್ಕಿಳಿದಲ್ಲಿ, ಸಂಸತ್ತಿನ ಕಾಯಿದೆಗೆ ಆದ್ಯತೆ ನೀಡಲಾಗುತ್ತದೆ.
ಸಂವಿಧಾನದ ವಿಧಿ 200 ಪ್ರಕಾರ, ರಾಜ್ಯಪಾಲರು ಮಸೂದೆಯೊಂದಕ್ಕೆ ಸಹಿ ಹಾಕಬಹುದು ಅಥವಾ ತಡೆಹಿಡಿದು, ಮರುಪರಿಶೀಲನೆಗೆ ಶಾಸನಸಭೆಗೆ ವಾಪಸ್ ಕಳಿಸಬಹುದು ಇಲ್ಲವೇ ರಾಷ್ಟ್ರಪತಿ ಅವರಿಗೆ ರವಾನಿಸಬಹುದು. ತಮಿಳುನಾಡು ಪ್ರಕರಣದಲ್ಲಿ ಕೇಂದ್ರ ಸರ್ಕಾರವು ನಾಲ್ಕನೇ ಆಯ್ಕೆಯಿದೆ ಎಂದು ವಾದಿಸಿತು; ಅಂದರೆ, ರಾಜ್ಯಪಾಲರು ಮಸೂದೆಯನ್ನು ಮರುಪರಿಶೀಲನೆಗೆ ವಿಧಾನಸಭೆಗೆ ವಾಪಸ್ ಕಳಿಸದೆ ತಡೆ ಹಿಡಿಯಬಹುದು; ಅಂದರೆ, ʻಪಾಕೆಟ್ ವಿಟೋʼ ಪ್ರಯೋಗಿ ಸಬಹುದು ಎಂದಿತು. ಈ ವಾದವನ್ನು ಸುಪ್ರೀಂ ಮನ್ನಿಸಲಿಲ್ಲ. ಪಂಜಾಬ್ ರಾಜ್ಯ ವಿ/ಎಸ್ ಪಂಜಾಬ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಪ್ರಕರಣ(2023)ದಲ್ಲಿ ನ್ಯಾಯಾಲಯ, ʻವಿಧಿ 200 ಪ್ರಕಾರ ರಾಜ್ಯಪಾಲರು ಸ್ವತಂತ್ರ ಅಧಿಕಾರ ಹೊಂದಿಲ್ಲ. ವಿಧಾನಸಭೆ ಮಸೂದೆಯೊಂದನ್ನು ಅಂಗೀಕರಿಸಿ ರಾಜ್ಯಪಾಲರಿಗೆ ಕಳಿಸಿದ ಬಳಿಕ ಅವರಿಗೆ ಇರುವುದು ಮೂರು ಆಯ್ಕೆ ಮಾತ್ರ-ಸಹಿ ಹಾಕುವುದು, ಸಹಿ ಹಾಕದೆ ವಿಧಾನಸಭೆಗೆ ಮರುಪರಿಶೀಲನೆಗೆ ಕಳಿಸುವುದು ಇಲ್ಲವೇ ರಾಷ್ಟ್ರಪತಿಗೆ ರವಾನಿಸುವುದು.
ʻಮಸೂದೆಯೊಂದನ್ನು ರಾಷ್ಟ್ರಪತಿಗೆ ಕಳಿಸಬೇಕೇ, ಬೇಡವೇ ಎಂಬುದನ್ನು ರಾಜ್ಯಪಾಲರು ವಿವೇಚನೆ ಬಳಸಿ ನಿರ್ಧರಿಸಬೇಕು; ಅವರಿಗೆ ಅಂಥ ಅಧಿಕಾರ ಇದೆʼ ಎಂಬ ಕೇಂದ್ರ ಸರ್ಕಾರದ ವಾದವನ್ನು ಕೋರ್ಟ್ ಒಪ್ಪಲಿಲ್ಲ. ಸಚಿವ ಸಂಪುಟದ ಅನುಮತಿಯಿಲ್ಲದೆ ಮೂರು ಸಂದರ್ಭದಲ್ಲಿ ಮಾತ್ರ ರಾಜ್ಯಪಾಲರು ವಿವೇಚನಾಧಿಕಾರ ಬಳಸಬಹುದು- ಮಸೂದೆಯು ನ್ಯಾಯಾಲಯಗಳ ಅಧಿಕಾರವನ್ನು ಕಡಿಮೆ ಮಾಡಿದರೆ ಅಥವಾ ರಾಷ್ಟ್ರಪತಿಯವರ ಸಮ್ಮತಿ ಅಗತ್ಯವಿರುವ ಮಸೂದೆ ಆಗಿದ್ದರೆ(ವಿಧಿ 31ರಡಿ ಮಸೂದೆಯನ್ನು ನ್ಯಾಯಾಂಗದ ಪರಿಶೀಲನೆಯಿಂದ ರಕ್ಷಿಸಬೇಕಿದ್ದಲ್ಲಿ) ಇಲ್ಲವೇ ಮಸೂದೆಯು ಸಾಂವಿಧಾನಿಕ ಮೌಲ್ಯಗಳನ್ನು ಬುಡಮೇಲು ಮಾಡಿದ್ದರೆ ಮಾತ್ರ. ಆದರೆ, ವಿವೇಚನಾಧಿಕಾರ ಬಳಸಿ ಕೈಗೊಂಡ ನಿರ್ಧಾರವನ್ನು ಕೂಡ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ರಾಮೇಶ್ವರ ಪ್ರಸಾದ್ ವಿ/ಎಸ್ ಭಾರತ ಸರ್ಕಾರ(2006) ಪ್ರಕರಣದಲ್ಲಿ, ʼವಿಧಿ 361 ರಾಜ್ಯಪಾಲರಿಗೆ ವೈಯಕ್ತಿಕ ರಕ್ಷಣೆ ನೀಡುತ್ತದೆ; ಆದರೆ, ಅವರ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದುʼ ಎಂದು ನ್ಯಾಯಾಲಯ ಹೇಳಿತ್ತು.
ನಿರ್ಣಾಯಕ ತೀರ್ಪು: ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ಪೀಠವು ʻರಾಜ್ಯಪಾಲರು ಮಸೂದೆಗಳನ್ನು ತಿರಸ್ಕರಿಸುವ ಸಂಪೂರ್ಣ ಅಧಿಕಾರ ಹೊಂದಿಲ್ಲ. ಒಪ್ಪಿಗೆಯನ್ನು ತಡೆಹಿಡಿದರೆ ಇಲ್ಲವೇ ಮಸೂದೆಯನ್ನು ಮರುಪರಿಶೀಲನೆಗೆ ವಿಧಾನಸಭೆಗೆ ಹಿಂತಿರುಗಿಸಲು ನಿರ್ಧರಿಸಿದರೆ, ಅದಕ್ಕೆ ಕಾರಣ ನೀಡಬೇಕು. ಒಂದುವೇಳೆ ವಿಧಾನಸಭೆಯು ಮಸೂದೆಯನ್ನು ಮತ್ತೆ ಅಂಗೀಕರಿಸಿದರೆ, ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳಿಸುವ ಅಧಿಕಾರ ಹೊಂದಿರುವುದಿಲ್ಲʼ ಎಂದು ಸ್ಪಷ್ಟವಾಗಿ ಹೇಳಿದೆ.
ಜೊತೆಗೆ, ರಾಜ್ಯಪಾಲರ ಅಧಿಕಾರ ಮತ್ತು ಕರ್ತವ್ಯಗಳೇನು, ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ಅವರು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಸ್ಪಷ್ಟ ಮಾರ್ಗಸೂಚಿ ರೂಪಿಸಿತು. ಮಸೂದೆಗಳನ್ನು ಅನಿರ್ದಿಷ್ಟ ಕಾಲ ತಡೆ ಹಿಡಿಯುವ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಿತು. ವಿಧಾನಸಭೆ ಮಸೂದೆಯನ್ನು ಮರುಅಂಗೀಕರಿಸಿದರೆ, ರಾಜ್ಯಪಾಲರು ತಮ್ಮ ʻಸಮ್ಮತಿಯನ್ನು ತಡೆಹಿಡಿಯಬಾರದುʼ ಎಂದು ಸಂವಿಧಾನ ಹೇಳುತ್ತದೆ. ಒಪ್ಪಿಗೆ ತಡೆಹಿಡಿದ ನಂತರ ರಾಜ್ಯಪಾಲರು ಮಸೂದೆಯನ್ನು ಹಿಂದಿರುಗಿಸುವುದು ಕಡ್ಡಾಯವೇ ಅಥವಾ ಐಚ್ಛಿಕವೇ? ರಾಜ್ಯಪಾಲರು ಅನಿರ್ದಿಷ್ಟ ಕಾಲ ವಿಳಂಬ ಮಾಡಬಹುದೇ ಅಂದರೆ ಪಾಕೆಟ್ ವೀಟೋ ಚಲಾಯಿಸಬಹುದೇ? ಯಾವುದೇ ವಿವರಣೆ ನೀಡದೆ ಒಪ್ಪಿಗೆಯನ್ನು ತಡೆಹಿಡಿಯಬಹುದೇ? ಸಂಪೂರ್ಣ ವೀಟೋ ಮೂಲಕ ಮಸೂದೆಯನ್ನು ಕೊಲ್ಲಬಹುದೇ? ವಿಧಾನಸಭೆ ಮತ್ತೆ ಅಂಗೀಕರಿಸಿದ ನಂತರ ಕಡತವನ್ನು ರಾಷ್ಟ್ರಪತಿಗಳಿಗೆ ರವಾನಿಸಬಹುದೇ? ರಾಜ್ಯಪಾಲರು ಸ್ವತಂತ್ರರೇ ಅಥವಾ ರಾಜ್ಯ ಸರ್ಕಾರದ ಸಲಹೆ ಮೇರೆಗೆ ಕಾರ್ಯನಿರ್ವಹಿಸಬೇಕೇ? ರಾಜ್ಯಪಾಲರ ಮಸೂದೆ ಕುರಿತ ಅನುಮತಿ ನೀಡಿಕೆಗೆ ಕಾಲಮಿತಿ ಇದೆಯೇ? ನ್ಯಾಯಾಲಯಗಳು ಅವರ ಕ್ರಮಗಳನ್ನು ಪರಿಶೀಲಿಸಬಹುದೇ? ಎಂಬೆಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿತು.
ರಾಜ್ಯಪಾಲರು ಮಸೂದೆಯನ್ನು ಸಲಹೆ-ಪ್ರತಿಕ್ರಿಯೆ-ಶಿಫಾರಸುಗಳೊಂದಿಗೆ ʻಸಾಧ್ಯವಾದಷ್ಟು ಬೇಗʼ ವಾಪಸು ಮಾಡಬೇಕು. ವಿವರಣೆ ನೀಡದೆ ಅಥವಾ ಯಾವುದೇ ಕ್ರಮವಿಲ್ಲದೆ ಒಪ್ಪಿಗೆ ತಡೆಹಿಡಿಯುವಿಕೆ(ಸಂಪೂರ್ಣ ವೀಟೋ ಚಲಾವಣೆ)ಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ವಾಪಸಾದ ಮಸೂದೆಯನ್ನು ಶಾಸಕಾಂಗವು ಮರುಅಂಗೀಕರಿಸದಿರಲು ನಿರ್ಧರಿಸಿದರೆ ಮಾತ್ರ ಮಸೂದೆ ವಿಫಲಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿತು.
ಅನಿರ್ದಿಷ್ಟ ವಿಳಂಬ ವಜಾ: ಅನಿರ್ದಿಷ್ಟ ವಿಳಂಬ(ಪಾಕೆಟ್ ವಿಟೋ) ಪರಿಕಲ್ಪನೆಯನ್ನು ಕೂಡ ನ್ಯಾಯಾಲಯ ವಜಾಗೊಳಿಸಿತು. ʻಸಾಧ್ಯವಾದಷ್ಟು ಬೇಗʼ ಎಂದರೆ ಶೀಘ್ರವಾಗಿ ಕಾರ್ಯನಿರ್ವಹಿಸಬೇಕು ಎಂದರ್ಥ. ಮಸೂದೆಗಳನ್ನು ಅನಿರ್ದಿಷ್ಟ ಕಾಲ ತಡೆ ಹಿಡಿಯು ವುದು ಅಸಂವಿಧಾನಿಕ. ವಿಧಾನಸಭೆ ಮಸೂದೆಯನ್ನು ಮರುಅಂಗೀಕರಿಸಿದ ನಂತರ, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಲೇಬೇಕಾಗುತ್ತದೆ. ವಿಧಿ 200 ಹೇಳುವ ʻಸಮ್ಮತಿಯನ್ನು ತಡೆಹಿಡಿಯಬಾರದುʼ ಎನ್ನುವುದು ಆದೇಶ. ಮರು ಅನು ಮೋದಿತ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳಿಸುವುದು ಕಾನೂನುಬಾಹಿರ. ಆದರೆ, ಮಸೂದೆಯನ್ನು ಮೂಲಭೂತವಾಗಿ ಬದಲಿಸಿದರೆ ಅಥವಾ ಸಾಂವಿಧಾನಿಕ ಸಮಸ್ಯೆಯನ್ನು ಸೃಷ್ಟಿಸಿದಲ್ಲಿ ಇಲ್ಲವೇ ರಾಷ್ಟ್ರಪತಿ ಅವರ ಪರಿಶೀಲನೆ ಅಗತ್ಯವಿದ್ದರೆ ಮಾತ್ರ ಇದಕ್ಕೆ ವಿನಾಯಿತಿ ನೀಡಬಹುದು ಎಂದು ಹೇಳಿದೆ.
ʻಸಾಧ್ಯವಾದಷ್ಟು ಬೇಗʼ ಎಂಬುದು ಅಸ್ಪಷ್ಟ ಪದ. 2014ರ ನಂತರ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ರಾಜ್ಯಪಾಲರು ಈ ಅಸ್ಪಷ್ಟತೆಯ ಲಾಭ ಪಡೆದುಕೊಂಡು, ಮಸೂದೆಗಳನ್ನು ವಿಲೇವಾರಿ ಮಾಡುತ್ತಿಲ್ಲ. 2016ರಲ್ಲಿ ಅರುಣಾಚಲ ಪ್ರದೇಶ ವಿಧಾನಸಭೆ (ನಬಮ್ ರೆಬಿಯಾ ಮತ್ತು ಬಮಾಂಗ್ ಫೆಲಿಕ್ಸ್ ವಿ/ಎಸ್ ಉಪಸಭಾಪತಿ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ʻಸಾಧ್ಯವಾದಷ್ಟು ಬೇಗʼ ಎಂಬ ಪದ ಬಳಸಿಕೊಂಡು ಮಸೂದೆಗೆ ಅನಿರ್ದಿಷ್ಟ ಕಾಲ ಒಪ್ಪಿಗೆ ತಡೆ ಹಿಡಿಯಲು ಸಾಧ್ಯವಿಲ್ಲ. ಮಸೂದೆಯನ್ನು ಶೀಘ್ರವಾಗಿ ವಿಧಾನಸಭೆಗೆ ಹಿಂತಿರುಗಿಸಬೇಕು ಮತ್ತು ತಿದ್ದುಪಡಿಗೆ ಶಿಫಾರಸು ನೀಡಬೇಕು ಎಂದು ಹೇಳಿತ್ತು. ಇದನ್ನು ಬಿಜೆಪಿಯೇತರ ರಾಜ್ಯಗಳ ರಾಜ್ಯಪಾಲರು ಪರಿಗಣಿಸಲಿಲ್ಲ.
ರಾಜ್ಯಪಾಲರು ಸಚಿವ ಸಂಪುಟದ ಸಲಹೆ ಮೇರೆಗೆ ಕಾರ್ಯನಿರ್ವಹಿಸಬೇಕು. ವಿಧಿ 200 ಹೈಕೋರ್ಟ್ ನ್ನು ದುರ್ಬಲಗೊಳಿಸಬಹುದಾದ ಮಸೂದೆಗಳನ್ನು ಕಾಯ್ದಿರಿಸಲು ರಾಜ್ಯಪಾಲರಿಗೆ ಅನುಮತಿ ನೀಡುತ್ತದೆ. ರಾಜ್ಯದ ಕಾನೂನಿಗೆ ರಾಷ್ಟ್ರಪತಿಗಳ ಅನುಮೋದನೆ ಅಗತ್ಯವಿರುವಾಗ(ಉದಾಹರಣೆಗೆ, ವಿಧಿ 254(2) ಅಡಿಯಲ್ಲಿ ಕೇಂದ್ರದ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದಾಗ ಇಲ್ಲವೇ ಸಚಿವ ಸಂಪುಟದ ಸಲಹೆಯನ್ನು ಅನುಸರಿಸುವುದರಿಂದ ಪ್ರಜಾಪ್ರಭುತ್ವ ಅಥವಾ ಕಾನೂನಿಗೆ ಭಂಗ ಬಂದರೆ) ಮಾತ್ರ ಮಸೂದೆಯನ್ನು ಕಾಯ್ದಿರಿಸಬಹುದು. ಆದರೆ, ವಿಧಿ 200 ರಡಿ ರಾಜ್ಯಪಾಲರು ತೆಗೆದುಕೊಳ್ಳುವ ಕ್ರಮಗಳು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ. ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿ ಸಿರುವ ರಾಜ್ಯಪಾಲರು ಶಾಸಕಾಂಗ ಅಂಗೀಕರಿಸಿದ 10 ಮಸೂದೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಸಂವಿಧಾನಬಾಹಿರ, ಕಾನೂನುಬಾಹಿರ ಮತ್ತು ತಪ್ಪಾದ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ವಿಧಿ 142 ನೀಡಿದ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡ ಸುಪ್ರೀಂ, ಮಸೂದೆಗಳು ಮರುಅನುಮೋದಿಸಲ್ಪಟ್ಟು ಸಲ್ಲಿಸಿದ ದಿನಾಂಕ(ನವೆಂಬರ್ 18, 2023)ದಿಂದ ರಾಜ್ಯಪಾಲರ ಒಪ್ಪಿಗೆ ದೊರೆತಿದೆ ಎಂದು ಆದೇಶಿಸಿತು. ರಾಷ್ಟ್ರಪತಿ ಅವರ ಕ್ರಮಗಳು- ಒಂದು ಮಸೂದೆಗೆ ಸಮ್ಮತಿ, ಏಳು ಮಸೂದೆಗಳ ತಿರಸ್ಕಾರ ಮತ್ತು ಎರಡನ್ನು ಪರಿಗಣಿಸದೆ ಇರುವು ಕ್ರಮವು ಶೂನ್ಯ ಮತ್ತು ಅನೂರ್ಜಿತ ಎಂದು ಹೇಳಿತು. ಸುಪ್ರೀಂ ಕೋರ್ಟ್‌ನ ಈ ತೀರ್ಪು ಐತಿಹಾಸಿಕವಾಗಿದ್ದು, ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿದ ಕಾನೂನಿನ ವಿಕಸನದಲ್ಲಿ ಒಂದು ಹೆಗ್ಗುರುತಾಗಿದೆ.
ದರ್ಪದ ನಿಲುವು: ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡದಿದ್ದರೆ, ʻಮಸೂದೆ ಸತ್ತಿದೆʼ ಎಂದು ಪರಿಗಣಿಸಬೇಕು ಎಂದು ಏಪ್ರಿಲ್ 2023 ರಲ್ಲಿ ರಾಜ್ಯಪಾಲ ರವಿ ಹೇಳಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬೇಕು. ಅವರ ಹೇಳಿಕೆಯು ವಿಧಿ 159 ಹೇಳುವ ʻಸಂವಿಧಾನದ ನೀತಿಗೆ ತದ್ವಿರುದ್ಧವಾಗಿದೆʼ. ರಾಜ್ಯಪಾಲರು ಪ್ರಮಾಣವಚನದ ಪಾವಿತ್ರ್ಯವನ್ನು ಎತ್ತಿಹಿಡಿಯಬೇಕು ಮತ್ತು ರಾಜಕೀಯ ಪರಿಗಣನೆಗಳಿಂದ ಕಳಂಕಿತರಾಗದೆ ʻಸಂಸದೀಯ ಪ್ರಜಾಪ್ರಭುತ್ವದ ಸ್ಥಾಪಿತ ಸಂಪ್ರದಾಯಗಳಿಗೆʼ ಅನುಸಾರವಾಗಿ ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
ಹತ್ತು ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಕ್ರಮಗಳು ರಾಜಕೀಯ ಪರಿಗಣನೆಗಳನ್ನು ಆಧರಿಸಿದ್ದವು; ಬಿಜೆಪಿಯೇತರ ರಾಜ್ಯಗಳ ರಾಜ್ಯಪಾಲರು ಚುನಾಯಿತ ಸರ್ಕಾರಗಳನ್ನು ನಿಷ್ಕ್ರಿಯಗೊಳಿಸಲು ಹಾಗೂ ಜನಾದೇಶವನ್ನು ನಿರಾ ಕರಿಸುತ್ತಿದ್ದಾರೆ. ʻರಾಜ್ಯಪಾಲರು ಸಾಧ್ಯವಾದಷ್ಟು ಬೇಗ ಮಸೂದೆಗಳನ್ನು ಶಿಫಾರಸುಗಳೊಂದಿಗೆ ಹಿಂತಿರುಗಿಸಬೇಕು. ಒಂದುವೇಳೆ ಶಾಸಕಾಂಗವು ಮಸೂದೆಯನ್ನು ಮರುಅಂಗೀಕರಿಸಿದರೆ, ರಾಜ್ಯಪಾಲರು ಒಪ್ಪಿಗೆ ತಡೆಹಿಡಿಯುವಂತಿಲ್ಲʼ ಎಂದು ಹೇಳಿದೆ.
ಮಸೂದೆಗಳ ವಿಲೇವಾರಿಗೆ ಕಾಲಮಿತಿ ನಿಗದಿ: ಸುಪ್ರೀಂ ಕೋರ್ಟ್ ಮಸೂದೆಗಳ ವಿಲೇವಾರಿಗೆ ಕಾಲಮಿತಿ ವಿಧಿಸಿರುವುದು ಮಹತ್ವದ ಬೆಳವಣಿಗೆ. ರಾಜ್ಯಪಾಲರು ಒಂದು ತಿಂಗಳೊಳಗೆ ಮಸೂದೆಗೆ ಒಪ್ಪಿಗೆ ತಡೆಹಿಡಿಯುವ ಇಲ್ಲವೇ ರಾಷ್ಟ್ರ ಪತಿಗಳಿಗೆ ರವಾನಿಸುವ ಕುರಿತು ನಿರ್ಧರಿಸಬೇಕು. ಒಂದು ವೇಳೆ ಮಸೂದೆಗೆ ಒಪ್ಪಿಗೆ ನೀಡದಿದ್ದಲ್ಲಿ, ಮೂರು ತಿಂಗಳೊಳಗೆ ಶಾಸನಸಭೆಗೆ ಹಿಂತಿರುಗಿಸಬೇಕು. ಮಸೂದೆಯನ್ನು ಶಾಸಕಾಂಗವು ಪುನಃ ಅಂಗೀಕರಿಸಿ ಕಳಿಸಿದರೆ, ಒಂದು ತಿಂಗಳೊಳಗೆ ಒಪ್ಪಿಗೆ ನೀಡಬೇಕು; ರಾಷ್ಟ್ರಪತಿಗಳಿಗೆ ಕಳಿಸುವುದಿದ್ದಲ್ಲಿ, ಮೂರು ತಿಂಗಳೊಳಗೆ ಮಾಡಬೇಕು. ಇಂಥ ಕಡತಗಳನ್ನು ರಾಷ್ಟ್ರಪತಿ ಅವರು ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂದು ಕಾಲಮಿತಿ ಹೇರಲಾಗಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಕಾಲಮಿತಿಯು ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ಸರ್ಕಾರಿಯಾ ಆಯೋಗ ಶಿಫಾರಸು ಮಾಡಿದ ಸಮಯದ ಚೌಕಟ್ಟಿಗೆ ಹೊಂದಿಕೆಯಾಗುತ್ತದೆ. ರಾಜ್ಯಪಾಲರು ಕಳುಹಿಸುವ ಮಸೂದೆಗಳ ಕುರಿತು ರಾಷ್ಟ್ರಪತಿಗಳು ನಿರ್ಧರಿಸಲು ಆಯೋಗವು ನಾಲ್ಕು ತಿಂಗಳು ಕಾಲಾವಕಾಶ ನೀಡಿತ್ತು.
ಮಸೂದೆಗಳ ವಿಲೇವಾರಿಗೆ ಕಾಲಮಿತಿ ವಿಧಿಸುವಿಕೆಯು ವಿಧಾನಸಭೆಗಳ ಸ್ವಾಯತ್ತೆಯನ್ನು ಕಾಯುವ ದೊಡ್ಡ ಹೆಜ್ಜೆಯಾಗಿದೆ. ರಾಜ್ಯಪಾಲರು ಕೇಂದ್ರ ಸರ್ಕಾರದಿಂದ ನೇಮಕಗೊಂಡಿದ್ದರೂ, ರಾಜ್ಯ ಶಾಸಕಾಂಗದ ನೆರವು ಹಾಗೂ ಸಲಹೆ ಯನ್ವಯ ಕಾರ್ಯ ನಿರ್ವಹಿಸಬೇಕು; ರಾಜ್ಯಪಾಲರ ಕಚೇರಿಯು ರಾಜಕೀಯ ವಿವಾದಗಳ ಮೂಲ ಆಗಬಾರದು; ಬದಲಿಗೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ರಾಜ್ಯಪಾಲರ ಕಚೇರಿಯು ಸ್ವತಂತ್ರ ಆಡಳಿತ ಕೇಂದ್ರವಲ್ಲ; ಬದಲಿಗೆ ಶಾಸನ ಮತ್ತು ಪ್ರಜಾಸತ್ತಾತ್ಮಕ ತತ್ವಗಳಿಗೆ ಬದ್ಧವಾಗಿರಬೇಕು ಎಂದು ನ್ಯಾಯಾಲಯ ಹೇಳಿತು.
ತೀರ್ಪು ನೀಡಿದ ಸ್ಪಷ್ಟ ಸಂದೇಶವೆಂದರೆ, ರಾಜ್ಯಪಾಲರ ಕಚೇರಿಯು ಸಂಸದೀಯ ಪ್ರಜಾಸತ್ತಾತ್ಮಕ ಜವಾಬ್ದಾರಿಗಳಿಗೆ ಹೊರತಾಗಿಲ್ಲ; ರಾಜ್ಯಪಾಲರು ಯಾವುದೇ ಕಾರಣ ನೀಡದೆ ಮಸೂದೆಗಳಿಗೆ ಸಹಿ ಹಾಕಲು ನಿರಾಕರಿಸುವುದು ಸಂವಿಧಾನಾ ತ್ಮಕ ಪ್ರಕ್ರಿಯೆಗಳನ್ನು ಬುಡಮೇಲು ಮಾಡುತ್ತದೆ. ರಾಜ್ಯಪಾಲರ ಕ್ರಮಗಳು ʻಸತ್ಯದ ಕೊರತೆಯನ್ನು ಹೊಂದಿವೆʼ ಮತ್ತು ʻಸಂವಿಧಾನ ಕಲ್ಪಿಸಿದ ಕಾರ್ಯವಿಧಾನದ ಸ್ಪಷ್ಟ ಉಲ್ಲಂಘನೆʼ. ಅವರು ಸುಪ್ರೀಂ ಕೋರ್ಟ್‌ನ ʻತೀರ್ಪುಗಳು ಮತ್ತು ನಿರ್ದೇಶನಗಳಿಗೆ ಸರಿಯಾದ ಗೌರವ ತೋರಿಸುವಲ್ಲಿ ವಿಫಲರಾಗಿದ್ದಾರೆʼ. ತಮ್ಮ ಕಾರ್ಯ ನಿರ್ವಹಣೆಯಲ್ಲಿ ʻಇತರ ಬಾಹ್ಯ ಪರಿಗಣನೆಗಳಿಂದʼ ಪ್ರೇರಿತರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಇದೊಂದು ಐತಿಹಾಸಿಕ ತೀರ್ಪು. ಒಕ್ಕೂಟ ವ್ಯವಸ್ಥೆಯ ರಕ್ಷಣೆಯಲ್ಲಿ ಹೆಗ್ಗುರುತಾಗಿದೆ. ಕಳೆದ ದಶಕದಲ್ಲಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಿಜೆಪಿ ದುರ್ಬಲಗೊಳಿಸಿದ್ದು, ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಕೈಗೊಂಬೆ ರಾಜ್ಯಪಾಲರನ್ನು ನೇಮಿಸಿದೆ. ಅವರು ಶಾಸಕಾಂಗ ರೂಪಿಸುವ ಮಸೂದೆಗಳನ್ನು ತಡೆಹಿಡಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ಪ್ರವೃತ್ತಿ ತಮಿಳುನಾಡು ಮಾತ್ರವಲ್ಲದೆ, ಕರ್ನಾಟಕ, ತೆಲಂಗಾಣ, ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲೂ ಕಂಡುಬಂದಿದೆ.
ದಕ್ಷಿಣ ರಾಜ್ಯಗಳ ಸ್ಥಿತಿ: ಕೇರಳ ಸರ್ಕಾರವು ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಬಳಿ ಉಳಿದ ಮಸೂದೆಗಳ ವಿಲೇವಾರಿಗೆ ಸಂಬಂಧಿಸಿದಂತೆ, ಸುಪ್ರೀಂ ಮೊರೆಹೋಗಲು ನಿರ್ಧರಿಸಿದೆ. ಕೇರಳ ಈ ಹಿಂದೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಮತ್ತು ರಾಷ್ಟ್ರಪತಿ ಬಳಿ ಉಳಿದ ಕಡತಗಳ ವಿಲೇವಾರಿ ಸಂಬಂಧ ಸುಪ್ರೀಂ ಕದ ತಟ್ಟಿತ್ತು. ರಾಷ್ಟ್ರಪತಿ ಬಳಿ ರಾಜ್ಯಪಾಲರು ಕಳಿಸಿದ 4 ಮಸೂದೆಗಳು ಉಳಿದುಕೊಂಡಿವೆ. ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಜನವರಿ 2024ರಲ್ಲಿ ಕಳುಹಿಸಿದ 11 ಮಸೂದೆಗಳಲ್ಲಿ ಕೇವಲ ಮೂರನ್ನು ಮಾತ್ರ ಸೆಪ್ಟೆಂಬರ್‌ನಲ್ಲಿ ಅಂಗೀಕರಿಸಿದ್ದರು. ಆನಂತರ ಏಪ್ರಿಲ್ 15, 2025ರಂದು ಬೆಂಗಳೂರು ಅರಮನೆ(ಭೂಕಬಳಿಕೆ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2025, ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಅಧಿನಿಯಮ ಹಾಗೂ ಬಿಬಿಎಂಪಿ ತಿದ್ದುಪಡಿ ಮಸೂದೆ 2025ಕ್ಕೆ ಅಂಕಿತ ಹಾಕಿದ್ದಾರೆ.
ಕರ್ನಾಟಕದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲು ಕುರಿತು ಕಂಡಲ್ಲೆಲ್ಲ ಮಾತನ್ನಾಡುತ್ತಿರುವ ಪ್ರಧಾನಿ ಇಲ್ಲವೇ ಗೃಹ ಸಚಿವರು, ಸುಪ್ರೀಂ ಕೋರ್ಟ್ ತೀರ್ಪು ಕುರಿತು ಉಸಿರೆತ್ತಿಲ್ಲ. ಆದರೆ, ಈ ಜೋಡಿ ಸುಮ್ಮನಿರುವುದಿಲ್ಲ ಎಂಬುದನ್ನು ಮರೆಯಬಾರದು.