ಇತ್ತೀಚಿನ ಮೂರು ಕಾಯ್ದೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರೈತರ ಪ್ರತಿನಿಧಿಗಳ ನಡುವಣ ಏಳನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಹಾಗಾಗಿ, ಈಗ ಎಲ್ಲರ ಕಣ್ಣು ಸುಪ್ರೀಂ ಕೋರ್ಟ್ನತ್ತ ನೆಟ್ಟಿದೆ. ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರವು ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ಪ್ರಶ್ನಿಸಿ ಮತ್ತು ಕಾಯ್ದೆಗಳಿಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಎಂಟು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಡೆಸಲಿದೆ.
ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ 50ಕ್ಕೂ ಹೆಚ್ಚು ರೈತರಿಗೆ ಸಭೆಯ ಆರಂಭದಲ್ಲಿಯೇ ಶ್ರದ್ಧಾಂಜಲಿ ಸಲ್ಲಿಸಬೇಕು ಎಂದು ರೈತ ಮುಖಂಡರು ಮುಂದಿಟ್ಟ ಬೇಡಿಕೆಯನ್ನು ಸರ್ಕಾರ ಮನ್ನಿಸಿದೆ. ಸರ್ಕಾರದ ಪ್ರತಿಷ್ಠೆಯೇ ಯಾವುದೇ ಪರಿಹಾರ ಸಾಧ್ಯವಾಗದಿರಲು ಕಾರಣ ಎಂದು ರೈತರು ಆರೋಪಿಸಿದ್ದಾರೆ. ಮೂರು ಕಾಯ್ದೆಗಳ ರದ್ದತಿ ಮತ್ತು ಕನಿಷ್ಠ ಬೆಂಬಲ ಬೆಲೆ ಖಾತರಿಯ ಭರವಸೆಯ ಬೇಡಿಕೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಸಿದ್ಧ. ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರವು ಹೇಳಿದೆ.
ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ೪೦ ದಿನಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೀವ್ರ ಚಳಿ ಮತ್ತು ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಿಂದಾಗಿ ಪ್ರತಿಭಟನೆಯ ಸ್ಥಳದಲ್ಲಿ ನೀರು ನಿಂತಿದ್ದರೂ ಅವರು ಎದೆಗುಂದಿಲ್ಲ. ಗಣರಾಜ್ಯೋತ್ಸವ ದಿನವಾದ ಜನವರಿ ೨೬ರ ಮೊದಲು ಸಮಸ್ಯೆ ಪರಿಹಾರ ಆಗದಿದ್ದರೆ ದೆಹಲಿಯಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವುದಾಗಿ ರೈತರು ಹೇಳಿದ್ದಾರೆ.
ವಿದ್ಯಾರ್ಥಿಗಳ ಪತ್ರ:- ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಪಂಜಾಬ್ ವಿಶ್ವವಿದ್ಯಾಲಯದ 35 ವಿದ್ಯಾರ್ಥಿಗಳು ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದ ಆಧಾರದಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿಯಾಣ ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದಾರೆ, ಅಶ್ರುವಾಯು ಷೆಲ್ ಸಿಡಿಸಿದ್ದಾರೆ ಮತ್ತು ಲಾಠಿ ಪ್ರಹಾರ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ನ್ಯಾಯಾಲಯವು ಆದೇಶಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿತ್ತು. ರೈತರು ಶಾಂತಿಯುತವಾಗಿಯೇ ಪ್ರತಿಭಟಿಸುತ್ತಿದ್ದಾರೆ. ಆದರೆ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರವು ಸಂವೇದನಾಶೀಲವಾಗಿ ಇಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಮುಗ್ಧ ರೈತರ ಮೇಲೆ ರಾಜಕೀಯ ದ್ವೇಷದಿಂದ ದಾಖಲಿಸಲಾಗಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಲು ಆದೇಶಿಸಬೇಕು ಎಂದೂ ವಿದ್ಯಾರ್ಥಿಗಳು ಪತ್ರದಲ್ಲಿ ಆಗ್ರಹಿಸಿದ್ದಾರೆ.
Courtesyg: Google (photo)