ಲಾಭಕೋರತನ, ಮಿಲಿಟರೀಕರಣ ಹಾಗೂ ಹವಾಮಾನ ಬದಲಾವಣೆ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಮೇಘಸ್ಪೋಟದಿಂದ ಊರೊಂದು ಕೊಚ್ಚಿಹೋಗಿದೆ. ಯುರೋಪಿನ ನಾಗರಿಕರು ಉಷ್ಣ ಅಲೆಯಿಂದ ಬಳಲುತ್ತಿರುವ ಹೊತ್ತಿನಲ್ಲೇ ಅಮೆರಿಕ ಪ್ರವಾಹ/ಚಂಡಮಾರುತಕ್ಕೆ ಈಡಾಗಿದೆ. ಆಗ್ನೇಯ ಏಷ್ಯಾದ ದೇಶಗಳಲ್ಲಿ ಮಳೆ ಋತುಗಳೇ ಬದಲಾಗಿವೆ. ನೇಚರ್‌ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಪ್ರತಿದಿನ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್‌ ಪ್ರಮಾಣ 90.5 ದಶಲಕ್ಷ ಟನ್‌ ಮುಟ್ಟಿದೆ (2020). 1850ರಲ್ಲಿ ಭೂಮಿಯ ತಾಪಮಾನವನ್ನು ದಾಖಲಿಸಲು ಆರಂಭಿಸಿದ ಬಳಿಕ 2024ರಲ್ಲಿ ಅತಿ ಹೆಚ್ಚು ಉಷ್ಣತೆ ದಾಖಲಾಗಿದೆ. ಹವಾಮಾನ ಸಂಕಷ್ಟ ಎನ್ನುವುದು ಹೊಸಿಲು ದಾಟಿ ಒಳಗೆ ಪ್ರವೇಶಿಸಿದೆ. ‌ಇದರ ಜೊತೆಗೆ ಶಸ್ತ್ರಾಸ್ತ್ರ ಉದ್ಯಮದ ಲಾಭಕೋರತ ನದಿಂದ ಪರಿಸರದ ಮೇಲೆ ತೀವ್ರ ಹಾನಿ ಆಗುತ್ತಿದೆ.

ಯುದ್ಧಗಳು ಪರಿಸರದ ಮೇಲೆ ತೀವ್ರ ಮತ್ತು ಶಾಶ್ವತ ಋಣಾತ್ಮಕ ಪರಿಣಾಮ ಬೀರುತ್ತವೆ; ಮಣ್ಣಿನ ನಾಶ, ವಾಯು- ಜಲ ಮಾಲಿನ್ಯ ಮತ್ತು ಆವಾಸಸ್ಥಾನ ನಾಶಗೊಳ್ಳುತ್ತದೆ. ಪರಿಸರ ವ್ಯವಸ್ಥೆಗೆ ಭಂಗವಲ್ಲದೆ, ನೈಸರ್ಗಿಕ ಸಂಪನ್ಮೂಲಗಳು ಖಾಲಿ ಆಗುತ್ತವೆ. ಸ್ಫೋಟಕಗಳಿಂದ ನೇರ, ತಕ್ಷಣ ಪರಿಣಾಮ ಮತ್ತು ಮಾಲಿನ್ಯ- ಆವಾಸಸ್ಥಾನ ನಾಶದಿಂದ ದೀರ್ಘಕಾಲೀನ ಪರಿಣಾಮ ಆಗಲಿದೆ. ಸ್ಫೋಟದಿಂದ ಭಾರ ಲೋಹಗಳು ಬಿಡುಗಡೆ ಆಗುತ್ತವೆ; ಇಂಧನಗಳ ದಹನದಿಂದ ಸಾರಜನಕ ಆಕ್ಸೈಡ್‌,ಇಂಗಾಲದ ಡೈಆಕ್ಸೈಡ್‌ ಮತ್ತಿತರ ಹಾನಿಕರ ಅನಿಲ ಗಳು ಬಿಡುಗಡೆಯಾಗುತ್ತವೆ; ಇದು ಆಮ್ಲ ಮಳೆ ಮತ್ತು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ.ರಾಸಾಯನಿಕಗಳು,ಇಂಧನ-ತೈಲ ಸೋರಿಕೆಯಿಂದ ಜಲ ಮೂಲಗಳು ಕಲುಷಿತಗೊಳ್ಳುತ್ತವೆ. ಸೇನಾ ಕಾರ್ಯಾಚರಣೆಯಿಂದ ಅರಣ್ಯ, ಜೌಗು ಪ್ರದೇಶಗಳು ಮತ್ತು ಇನ್ನಿತರ ಆವಾಸಸ್ಥಾನಗಳು ನಾಶವಾಗಲಿವೆ; ವನ್ಯಜೀವಿಗಳ ಸ್ಥಳಾಂತರ, ಪರಿಸರ ಸಮ ತೋಲಕ್ಕೆ ಧಕ್ಕೆ ಮತ್ತು ಬೇಟೆಯಲ್ಲದೆ, ಅರಣ್ಯ ನಾಶದಿಂದ ಇಂಗಾಲದ ಸಿಂಕ್‌ಗಳಿಗೆ ಧಕ್ಕೆಯಾಗುತ್ತದೆ. ಪ್ರವಾಹ ಮತ್ತು ಭೂಕುಸಿತದಂಥ ನೈಸರ್ಗಿಕ ವಿಕೋಪಗಳು ಉಲ್ಬಣಗೊಳ್ಳ ಲಿದೆ.ಕೃಷಿ ಭೂಮಿಗೆ ಹಾನಿಯಿಂದ ಆಹಾರ ಕೊರತೆ ಮತ್ತು ಕ್ಷಾಮ ಸಂಭವಿಸಬಹುದು.ನೀರು ಮತ್ತು ಮರಮಟ್ಟಿನಂಥ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹೆಚ್ಚಲಿದೆ. ಅಧ್ಯಯನ ಗಳ ಪ್ರಕಾರ,ಯುದ್ಧದಿಂದ ಸಂಪನ್ಮೂಲ ನಾಶ ಮತ್ತು ಸಂರಕ್ಷಣೆ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತದೆ.

ಶಸ್ತ್ರಾಸ್ತ್ರ ಸಂಘರ್ಷ ಹೆಚ್ಚಳ: ಜಗತ್ತು ದ್ವೇಷಪೂರಿತವಾಗುತ್ತಿದೆ; ಎಲ್ಲೆಡೆ ತೀವ್ರ ಸ್ವರೂಪದ ಶಸ್ತ್ರಾಸ್ತ್ರ ಸಂಘರ್ಷಗಳು ಹೆಚ್ಚುತ್ತಿವೆ. 2024ರಲ್ಲಿ ಇಂಥ 59 ಸಂಘರ್ಷಗಳು ಸಂಭವಿಸಿದ್ದವು. ಜಾಗತಿಕ ಶಾಂತಿ ಸೂಚ್ಯಂಕ(ಜಿಪಿಐ, 2024)ದ ಪ್ರಕಾರ, 87 ದೇಶಗಳಲ್ಲಿ ಶಾಂತಿ ಸೂಚ್ಯಂಕ ಕುಸಿದಿದೆ. ಇದೇ ಹೊತ್ತಿನಲ್ಲಿ ಜಾಗತಿಕ ಸೇನಾ ವೆಚ್ಚ 9 ವರ್ಷದಿಂದ ಸತತವಾಗಿ ಹೆಚ್ಚುತ್ತಿದ್ದು, 2024ರಲ್ಲಿ 2.7 ಲಕ್ಷ ಕೋಟಿ ಡಾಲರ್‌ ಮುಟ್ಟಿದೆ; 2023ಕ್ಕೆ ಹೋಲಿಸಿದರೆ, ಶೇ.9.4ರಷ್ಟು ಹೆಚ್ಚಳ. ಜಗತ್ತಿನ ಒಟ್ಟು ದೇಶಿ ಉತ್ಪಾದನೆ(ಜಿಡಿಪಿ)ಯಲ್ಲಿ ಸೇನಾ ವೆಚ್ಚ ಶೇ.2.5 ಹಾಗೂ ಸಂಘ ರ್ಷಪೀಡಿತ ದೇಶಗಳಲ್ಲಿ ಶೇ.4.4 ಇದೆ. ರಷ್ಯಾ-ಉಕ್ರೇನ್‌ ಯುದ್ಧದ ಹಿನ್ನೆಲೆಯಲ್ಲಿ ಯೂರೋಪಿನ ಸೇನಾ ವೆಚ್ಚ ಶೇ.17, ರಷ್ಯಾದ ಸೇನಾ ವೆಚ್ಚ ಶೇ.38 ಹಾಗೂ ಉಕ್ರೇನಿನ ಸೇನಾ ವೆಚ್ಚ ಶೇ.2.9ರಷ್ಟು ಹೆಚ್ಚಿದೆ. ಯುರೋಪಿಯನ್‌ ದೇಶಗಳ ರಿಆರ್ಮ್‌ ಪ್ಲ್ಯಾನ್-ರೆಡಿನೆಸ್‌ 2030, ಸೇನೆ ವೆಚ್ಚವನ್ನು 800 ಶತಕೋಟಿ ಯುರೋಗೆ ಹೆಚ್ಚಿಸಲು ಹೇಳಿದೆ; ಇದು ಯುರೋ ಪ್‌ ಖಂಡದ 28 ದೇಶಗಳ ಒಕ್ಕೂಟವಾದ ಯುರೋಪಿಯನ್‌ ಯೂನಿಯನ್ನಿನ ಜಿಡಿಪಿಯ ಶೇ.3.5. 2024ರಲ್ಲಿ ನೇಟೋ(ನಾರ್ಥ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್‌; ಅಮೆರಿಕ ಸೇರಿ ದಂತೆ 32 ದೇಶಗಳ ಒಕ್ಕೂಟ) ದೇಶಗಳು ಸೇನೆಗೆ 1.5 ಲಕ್ಷ ಕೋಟಿ(1.5 ಟ್ರಿಲಿಯನ್‌) ಡಾಲರ್‌ ವೆಚ್ಚ ಮಾಡಿದ್ದು, ಇದರಲ್ಲಿ ಅಮೆರಿಕದ ಪಾಲು 997 ಶತಕೋಟಿ ಡಾಲರ್.‌ ನೇಟೋ 2025 ರಲ್ಲಿ ಈ ಮೊತ್ತವನ್ನು ದುಪ್ಪಟ್ಟು ಮಾಡಲು ನಿರ್ಧರಿಸಿದೆ. ಇದಕ್ಕೆ ಪೂರಕವಾಗಿ ಪ್ರಮುಖ ಶಸ್ತ್ರಾಸ್ತ್ರ ಉತ್ಪಾದನೆ ಕಂಪನಿಗಳ ವಹಿವಾಟು ಹೆಚ್ಚಿದೆ; 2024ರಲ್ಲಿ 318.7 ಶತಕೋಟಿ ಡಾಲರ್‌ ವಹಿವಾಟು ನಡೆಸಿವೆ: 2023ಕ್ಕೆ ಹೋಲಿಸಿದರೆ ಶೇ.29 ರಷ್ಟು ಹೆಚ್ಚಳ.

ಅಮೆರಿಕ, ಪಶ್ಚಿಮ ಯುರೋಪ್‌, ಜಪಾನ್‌, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ ಒಳಗೊಂಡ ಪ್ರಥಮ ಜಗತ್ತಿನ ಆರ್ಥಿಕತೆಯ ಚಾಲನ ಶಕ್ತಿ- ಶಸ್ತ್ರಾಸ್ತ್ರ ಮಾರಾಟ. ಈ ದೇಶಗಳು ಯುದ್ಧ ದಲ್ಲಿ ತೊಡಗಿಕೊಂಡ ಎರಡೂ ದೇಶಗಳಿಗೂ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತವೆ; ಯುದ್ಧ ಆರಂಭಿಸಲು ಅಗತ್ಯ ಸನ್ನಿವೇಶ ಸೃಷ್ಟಿ ಮಾಡುತ್ತವೆ. ಅಮೆರಿಕ, ಫ್ರಾನ್ಸ್‌, ರಷ್ಯಾ, ಚೀನಾ ಮತ್ತು ಜರ್ಮನಿ ಜಾಗತಿಕ ಶಸ್ತ್ರಾಸ್ತ್ರ ವಹಿವಾಟಿನಲ್ಲಿ ಶೇ.72ರಷ್ಟು ಪಾಲು ಹೊಂದಿವೆ. ಸಿಪ್ರಿ(ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್ಸ್ಟಿ ಟ್ಯೂಟ್‌ ) ಪ್ರಕಾರ, 2024ರಲ್ಲಿ ನೂರು ಶಸ್ತ್ರಾಸ್ತ್ರ ಉತ್ಪಾದನೆ ಕಂಪನಿಗಳ ವಹಿವಾಟು 632 ಶತಕೋಟಿ ಡಾಲರ್ ಇತ್ತು.‌ ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಅಮೆರಿಕದ ಲಾಕ್‌ ಹೀಡ್‌ ಮಾರ್ಟಿನ್, ರೇಥಿಯಾನ್‌ ಟೆಕ್ನಾಲ ಜೀಸ್(ಆರ್ಟಿಎಕ್ಸ್), ನಾರ್ತ್‌ರಾಪ್‌ ಗ್ರುಮ್ಮನ್‌‌, ಬೋಯಿಂಗ್‌ ಮತ್ತು ಜನರಲ್‌ ಡೈನಮಿಕ್ಸ್‌ ಮೊದಲ ಐದು ಸ್ಥಾನಗಳಲ್ಲಿವೆ; ಆನಂತರ ಬಿಎಇ ಸಿಸ್ಟಮ್ಸ್‌(ಇಂಗ್ಲೆಂಡ್), ಸಫ್ರಾನ್(ಫ್ರಾನ್ಸ್), ನಾರಿಂಕೋ ಮತ್ತು ಎವಿಕ್‌ (ಚೀನಾ), ಎಂಬಿಡಿಎ(ಜರ್ಮನಿ), ಥೇಲ್ಸ್(ಫ್ರಾ ನ್ಸ್)‌, ಲಿಯೊನಾರ್ಡೋ(ಇಟಲಿ) ಹಾಗೂ ಎಲ್‌3 ಹ್ಯಾರಿಸ್ ಟೆಕ್ನಾಲಜೀಸ್(ಅಮೆರಿಕ) ಇವೆ. ಬಹುತೇಕ ಯುದ್ಧಗಳಿಗೆ ಇವೇ ಕಂಪನಿಗಳು ಶಸ್ತ್ರಾಸ್ತ್ರ ಪೂರೈಸುತ್ತವೆ ಮತ್ತು ಅಮೆರಿಕದ ಕರಾಳಹಸ್ತ ಢಾಳಾಗಿ ಕಾಣುತ್ತದೆ.

ಸೇನೆ ಚಟುವಟಿಕೆಗಳಿಂದ ಮಾಲಿನ್ಯ: ಮಿಲಿಟರಿ ಕಾರ್ಯಾಚರಣೆಗಳು ತೀವ್ರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಅಂದಾಜಿನ ಪ್ರಕಾರ, ಒಟ್ಟು ಮಾಲಿನ್ಯದಲ್ಲಿ ಮಿಲಿಟರಿ ಪಾಲು ಶೇ.5.5.
ವಿಶ್ವಸಂಸ್ಥೆ ರೂಪಿಸಿದ ಎಸ್‌ಡಿಜಿ(ಸಾಮಾನ್ಯ ಅಭಿವೃದ್ಧಿ ಗುರಿ)ಗಳ ಮೇಲೆ ಸೇನಾ ವೆಚ್ಚದ ಹೆಚ್ಚಳದ ಪರಿಣಾಮ ಕುರಿತ ಅಧ್ಯಯನದ ಪ್ರಕಾರ, ಯುರೋಪಿಯನ್‌ ಯೂನಿಯನ್ನಿನ ರಿಆರ್ಮ್‌ ಪ್ಲ್ಯಾನ್-ರೆಡಿನೆಸ್‌ 2030 ಪ್ರಸ್ತಾವದಿಂದ ಮಿಲಿಟರಿ ವೆಚ್ಚ ಶೇ.1ರಷ್ಟು ಮತ್ತು ಇದರಿಂದ ಕೊಳೆ ಗಾಳಿ ತುಂಬುವಿಕೆ ಶೇ.2ರಷ್ಟು ಹೆಚ್ಚಲಿದೆ.

2023ರಲ್ಲಿ ನೇಟೋ ದೇಶಗಳ ವಾರ್ಷಿಕ ಕೊಳೆಗಾಳಿ ಪ್ರಮಾಣ 4,861 ದಶಲಕ್ಷ ಟನ್‌ ಇಂಗಾಲದ ಡೈಆಕ್ಸೈಡ್‌ಗೆ ಸಮ (ಎಂಟಿ ಸಿಒ2ಇ) ಇತ್ತು( ಅಮೆರಿಕ ಹೊರತುಪಡಿಸಿ). ಇದರಿಂದ ಆದ ವಾರ್ಷಿಕ ಪರಿಸರ ನಷ್ಟ 119 ರಿಂದ 264 ಶತಕೋಟಿ ಡಾಲರ್; ಅಮೆರಿಕ ಈಗಾಗಲೇ ಪ್ಯಾರಿಸ್‌ ಒಪ್ಪಂದ( 2015ರಲ್ಲಿ ಪ್ಯಾರಿಸ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಶೃಂಗದಲ್ಲಿ ಜಾಗತಿಕ ತಾಪಮಾನ ಹೆಚ್ಚಳವನ್ನು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಮಾಡಲು 196 ದೇಶಗಳು ಸಮ್ಮತಿಸಿದ್ದವು) ದಿಂದ 2 ಬಾರಿ ಹೊರಬಂದಿದೆ; ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ʻಹವಾಮಾನ ಬದಲಾವಣೆʼ ಎಂಬುದು ಇಲ್ಲವೇ ಇಲ್ಲ ಎನ್ನುತ್ತಾರೆ. ಅಮೆರಿಕದ ಸೇನೆ ಜಗತ್ತಿನ ಅತ್ಯಂತ ದೊಡ್ಡ ಇಂಧನ(ಹೈಡ್ರೋಕಾರ್ಬನ್)‌ ಬಳಕೆದಾರ. ರಾಯ್ಟರ್‌ ವರದಿ ಪ್ರಕಾರ, 2022ರಲ್ಲಿ ಪೆಂಟಗನ್‌ ಚಟುವಟಿಕೆಗಳಿಂದ 48 ದಶಲಕ್ಷ ಮೆಟ್ರಿಕ್‌ ಟನ್ ಕೊಳೆಗಾಳಿ ಜಮೆಯಾಗಿತ್ತು(ಇದರಲ್ಲಿ ಅಂತಾರಾಷ್ಟ್ರೀಯ ಸಾಗಣೆ ಮತ್ತು ಬಂಕರ್‌‌ ಇಂಧನ ಸೇರ್ಪಡೆಯಾಗಿಲ್ಲ). ಇದು ಫಿನ್ಲೆಂಡ್‌, ಗ್ವಾಟೆಮಾಲಾ ಮತ್ತು ಸಿರಿಯಾ ವರ್ಷವೊಂದಕ್ಕೆ ಹೊರಚೆಲ್ಲುವ ಸಿಒ2 ಗೆ ಸಮ.

ಸೇನೆಯ ಚಟುವಟಿಕೆಗಳಿಗೆ ಅಪಾರ ಪ್ರಮಾಣದ ಇಂಧನ ಅಗತ್ಯವಿದೆ. ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದ ಮೊದಲ ಮೂರು ವರ್ಷದಲ್ಲಿ 230 ದಶಲಕ್ಷ ಟನ್‌ ಸಿಒ2 ಬಿಡುಗಡೆ ಯಾಗಿದೆ; ಇದು ಆಸ್ಟ್ರಿಯಾ, ಹಂಗರಿ, ಜೆಕ್ ಗಣರಾಜ್ಯ ಮತ್ತು ಸ್ಲೋವಾಕಿಯಾದ ವಾರ್ಷಿಕ ಹೊರಸೂಸುವಿಕೆಗೆ ಸಮ. ಯುದ್ಧದಿಂದ ಉಂಟಾಗುವ ಮಾಲಿನ್ಯವನ್ನು ಲೆಕ್ಕ ಮಾಡಿದ ಮೊದಲ ಪ್ರಯತ್ನ ಇದು. ಸೇನೆ ಹೊರಸೂಸುವ ಸಿಒ2 ಪ್ರಮಾಣವು ವಿಶ್ವದ ಅನೇಕ ದೇಶಗಳ ಒಟ್ಟು ಹೊರಸೂಸುವಿಕೆಗಿಂತ ಹೆಚ್ಚು ಇದೆ; ಜಾಗತಿಕವಾಗಿ ಬಿಡುಗಡೆಯಾಗುವ ಹಸಿರು ಮನೆ ಅನಿಲದಲ್ಲಿ ಸೇನೆ ಶೇ. 5.5ರಷ್ಟನ್ನು ಬಿಡುಗಡೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ.

ಯುದ್ಧ, ಮಿಲಿಟರೀಕರಣ ಹಾಗೂ ಹವಾಮಾನ ಬದಲಾವಣೆ ನಡುವಿನ ಸಂಬಂಧದ ಬಗ್ಗೆ ಮಾಹಿತಿ-ಜಾಗೃತಿ-ಅರಿವು ಕಡಿಮೆ. 2022ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಶಸ್ತ್ರಾಸ್ತ್ರ ಸಂಘರ್ಷದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಕುರಿತು 27 ನಿಯಮಗಳನ್ನು ಅಂಗೀಕರಿಸಿತು. ಆದರೆ, ಮಿಲಿಟರಿ ಚಟುವಟಿಕೆಯಿಂದ ಉತ್ಪತ್ತಿಯಾಗುವ ಹಸಿರುಮನೆ ಅನಿಲಗಳ ಬಗ್ಗೆ ಇದರಲ್ಲಿ ಯಾವುದೇ ಉಲ್ಲೇಖ ಇರಲಿಲ್ಲ. ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಒಪ್ಪಂದದ ಚೌಕಟ್ಟು(ಯುಎನ್‌ಎಫ್‌ ಸಿಸಿಸಿ) ಸೇನೆಯ ಇಂಧನ ಬಳಕೆಯನ್ನು ಲೆಕ್ಕ ಹಾಕುತ್ತದೆಯೇ ಹೊರತು, ಶಸ್ತ್ರಾಸ್ತ್ರ ತಯಾರಿಕೆ ಉದ್ದಿಮೆ, ಪೂರೈಕೆ ಸರಪಳಿ ಹಾಗೂ ಸೇನೆಯ ಚಟುವಟಿಕೆಗಳಿಂದ ಹೊರಹೊಮ್ಮುವ ಮಾಲಿನ್ಯ ಕುರಿತು ಏನೂ ಹೇಳುವುದಿಲ್ಲ. ಇದರಿಂದ, ಸಂಪೂರ್ಣ ಚಿತ್ರಣ ಲಭ್ಯವಾಗುತ್ತಿಲ್ಲ ಎಂದು ವರ್ಲ್ಡ್‌ ಕ್ಲೈಮೇಟ್‌ ಆಂಡ್‌ ಸೆಕ್ಯುರಿಟಿ ರಿಪೋರ್ಟ್‌, 2024 ಹೇಳಿದೆ. ಇಂಗ್ಲೆಂಡ್‌ ಮತ್ತು ಯುರೋಪಿನಲ್ಲಿ ನಡೆದ ಅಧ್ಯಯನದ ಪ್ರಕಾರ, ಶಸ್ತ್ರಾಸ್ತ್ರ- ಉಪಕರಣಗಳ ಖರೀದಿ ಹಾಗೂ ಇನ್ನಿತರ ಪೂರೈಕೆ ಸರಪಳಿಗಳಿಂದ ಹೆಚ್ಚು ಮಾಲಿನ್ಯ ಉಂಟಾಗುತ್ತದೆ. ಕದನ ಅಂತ್ಯಗೊಂಡ ಬಳಿಕ ಸಮರ್ಪಕ ಮೌಲ್ಯಮಾಪನ ನಡೆಯುತ್ತಿಲ್ಲ. ಈ ದೇಶಗಳಲ್ಲಿ ಅರಣ್ಯನಾಶದ ಹೆಚ್ಚಳದಿಂದ ಮಾಲಿನ್ಯವೂ ಹೆಚ್ಚಿರುತ್ತದೆ.

ಬ್ರೆಜಿಲ್‌ನಲ್ಲಿ ನವೆಂಬರ್‌ 10, 2025ರಿಂದ ನಡೆಯಲಿರುವ ಪರಿಸರ ಶೃಂಗ, ಸಿಒಪಿ 30(ಕಾನ್ಫೆರೆನ್ಸ್‌ ಆಫ್‌ ಪಾರ್ಟೀಸ್)‌ರ ಸಿಇಒ ಅನಾ ಟೋನಿ ಪ್ರಕಾರ, ಹವಾಮಾನ ಬದಲಾವಣೆಯು ʼಅತಿ ದೊಡ್ಡ ಯುದ್ಧʼವಾಗಿದ್ದು, ದೇಶದೊಳಗೆ ಮತ್ತು ಹೊರಗೆ ಸಂಘರ್ಷವನ್ನು ಹುಟ್ಟುಹಾಕಬಹುದು. ಸಿಒಪಿ 30ರಲ್ಲಿ ಮಿಲಿಟರಿ ಮೂಲಸೌಲಭ್ಯಗಳನ್ನು ಇಂಗಾಲಸ್ನೇಹಿ ಆಗಿಸು ವಿಕೆ, ಮಿಲಿಟರಿ ಪೂರೈಕೆ ಸರಪಳಿಯಲ್ಲಿ ಇಂಧನ ಸ್ಥಿತ್ಯಂತರ ಮತ್ತು ಸೇನೆಯ ಕೊಳೆಗಾಳಿ ಕುರಿತು ವರದಿ ಸಲ್ಲಿಸುವಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಅಂತಾರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ʼಹವಾಮಾನ ಬದಲಾವಣೆಯಿಂದ ಆಗುವ ಹಾನಿಯನ್ನು ತಡೆಯುವ ಜವಾಬ್ದಾರಿ ದೇಶಗಳ ಮೇಲೆ ಇದೆʼ ಎಂದು ಇತ್ತೀಚೆಗೆ ಹೇಳಿದೆ.

ಯುದ್ಧದಿಂದ ಸರ್ವನಾಶ: ಯುದ್ಧದಿಂದ ಆಗುವ ಜೀವಹಾನಿ-ಪರಿಸರ ನಾಶಕ್ಕೆ ಗಾಜಾ ಒಂದು ಜ್ವಲಂತ ನಿದರ್ಶನ. ಅಕ್ಟೋಬರ್‌ 7, 2023ರಂದು ಹಮಾಸ್‌ ದಾಳಿಯಿಂದ 1,200 ಜನ ಮೃತಪಟ್ಟ ಬಳಿಕ ಇಸ್ರೇಲ್‌ ಪ್ರತಿದಾಳಿ ನಡೆಸಿತು; 251 ಒತ್ತೆಯಾಳುಗಳ ಬಿಡುಗಡೆ ನೆವದಲ್ಲಿ ಆರಂಭವಾದ ಹತ್ಯಾಕಾಂಡ 21 ತಿಂಗಳುಗಳ ಬಳಿಕವೂ ಮುಂದುವರಿದಿದ್ದು, ಗಾಜಾ ಪಟ್ಟಿಯನ್ನು ನರಕವಾಗಿಸಿದೆ. ಇಸ್ರೇಲ್‌ ಮತ್ತು ಮೆಡಿಟರೇನಿಯನ್‌ ಸಮುದ್ರದ ನಡುವೆ 365 ಚದರ ಕಿಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಗಾಜಾದ ಜನಸಂಖ್ಯೆ ಅಂದಾಜು 23 ಲಕ್ಷ. ಯುದ್ಧದಿಂದ 17,000 ಮಕ್ಕಳು ಸೇರಿದಂತೆ 59,000 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ(ಜುಲೈ 26, 2025); 200ಕ್ಕೂ ಅಧಿಕ ಪತ್ರಕರ್ತರು ಹಾಗೂ 500ಕ್ಕೂ ಅಧಿಕ ನೆರವು ಕಾರ್ಯಕರ್ತರು ಹತ್ಯೆ ಆಗಿದ್ದಾರೆ; 1.4 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರಿಂದ ಗಾಜಾ 21ನೇ ಶತಮಾನದ ಅತ್ಯಂತ ಅಪಾಯಕರ ಯುದ್ಧಭೂಮಿಯಾಗಿ ಪರಿಣಮಿ ಸಿದೆ. ಪ್ರಸ್ತುತ 20 ಲಕ್ಷ ಮಂದಿ ಕೇವಲ 45 ಚದರ ಕಿಮೀ ಪ್ರದೇಶದಲ್ಲಿ ಉಸಿರು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಶೇ. 80ರಷ್ಟು ಕೃಷಿ ಭೂಮಿ ಹಾಳಾಗಿದೆ; ಆಸ್ಪತ್ರೆಗಳು, ಶಾಲೆಗಳು, ವಾಣಿಜ್ಯ, ಧಾರ್ಮಿಕ ಹಾಗೂ ಕೈಗಾರಿಕೆ ಕಟ್ಟಡಗಳು ಹಾನಿಗೀಡಾಗಿವೆ. ಯುನಿಸೆಫ್‌ ಪ್ರಕಾರ, ಗಾಜಾ ಪಟ್ಟಿಯಲ್ಲಿ ಜಗತ್ತಿನ ಬೇರೆಲ್ಲೂ ಇಲ್ಲದಷ್ಟು ಅಂಗಾಂಗ ಕಳೆದುಕೊಂಡ ಮಕ್ಕಳು ಇದ್ದಾರೆ. ಮಾರ್ಚ್‌ 2025ರಲ್ಲಿ 2ನೇ ಯುದ್ಧವಿರಾಮ ಅಂತ್ಯಗೊಂಡ ಬಳಿಕ ಇಸ್ರೇಲ್‌ ತನ್ನ ಹಿಡಿತ ಬಿಗಿಗೊಳಿಸಿದೆ. ವಿಶ್ವಸಂಸ್ಥೆ ಪ್ರಕಾರ, ಮೇ ಬಳಿಕ ಆಹಾರಕ್ಕಾಗಿ ನೆರವು ಕೇಂದ್ರಗಳ ಬಳಿ ಸೇರಿದ್ದ 1,000ಕ್ಕೂ ಅಧಿಕ ಜನರನ್ನು ಕೊಲ್ಲಲಾಗಿದೆ. 6 ತಿಂಗಳಿನಿಂದ 5 ವರ್ಷ ದೊಳಗಿನ ಮಕ್ಕಳಲ್ಲಿ ಅಪೌಷ್ಟಿಕತೆ ತೀವ್ರಗೊಳ್ಳುತ್ತಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತ ನ್ಯಾಹು ʻಸಂಪೂರ್ಣ ಜಯʼ ಮತ್ತು ʻಇಸ್ರೇಲಿನ ಸೇನೆ ಸಂಪೂರ್ಣ ವಾಪಸ್‌ ಆಗಬೇಕುʼ ಎಂದು ಹಮಾಸ್‌ ಹಟ ಹಿಡಿದಿವೆ. ಇದರಿಂದ ಶಾಂತಿ ಮರೀಚಿಕೆಯಾಗಿದೆ.

ಇನ್ನೊಂದು ನಿದರ್ಶನ: ಮಿತ್ರ ರಾಷ್ಟ್ರಗಳು ಜಪಾನಿನ ಹಿರೋಷಿಮಾ ಮೇಲೆ ಆಗಸ್ಟ್‌ 6 ರಂದು ಹಾಕಿದ ʻಲಿಟ್ಲ್‌ ಮ್ಯಾನ್‌ʼ ಮತ್ತು ನಾಗಾಸಾಕಿ ಮೇಲೆ ಆಗಸ್ಟ್‌ 9,1945 ರಂದು ಎಸೆದ ʼಫ್ಯಾಟ್‌ ಬಾಯ್‌ʼ ಅಣುಬಾಂಬ್‌ಗಳು ಅಪಾರ ಜೀವಹಾನಿಗೆ ಕಾರಣವಾದವು; ವರ್ಷಾಂತ್ಯದ ವೇಳೆಗೆ ಹಿರೋಷಿಮಾದಲ್ಲಿ ಅಂದಾಜು 140,000 ಹಾಗೂ ನಾಗಾಸಾಕಿಯಲ್ಲಿ ಅಂದಾ ಜು 74,000 ಮಂದಿ ಮೃತಪಟ್ಟರು. ಬದುಕುಳಿದವರು ವಿವಿಧ ರೀತಿಯ ಕ್ಯಾನ್ಸರ್ ಮತ್ತು ಇತರ ವಿಕಿರಣ ಸಂಬಂಧಿತ ಕಾಯಿಲೆಗಳಿಂದ ದೀರ್ಘಕಾಲ ಬಳಲಿದರು.ತ್ಯಾಜ್ಯಗಳ ಶುದ್ಧೀಕರಣಕ್ಕೆ ಒಂದು ವರ್ಷ ತೆಗೆದುಕೊಂಡಿತು.

ಲೇಖಕಿ ಮಾರ್ಗರೇಟ್ ಮೀಡ್, ʻಪರಿಸರವನ್ನು ನಾಶ ಮಾಡಿದರೆ ನಮಗೆ ಸಮಾಜವೆಂಬುದೇ ಇರುವುದಿಲ್ಲʼ; ʻಯುದ್ಧ ಎನ್ನುವುದು ಕೇವಲ ಸೃಷ್ಟಿಯೇ ಹೊರತು ಜೈವಿಕ ಅಗತ್ಯವಲ್ಲʼ ಎಂದು ಹೇಳುತ್ತಾರೆ. ಆದರೆ, ಯುದ್ಧಗಳು ವ್ಯಾಪಾರ ಆಗಿರುವ ಮತ್ತು ಪರಿಸರ ಸಂರಕ್ಷಣೆ ಎನ್ನುವುದು ನಿರ್ಲಕ್ಷಿತವಾಗಿರುವ ಜಗತ್ತಿನಲ್ಲಿ ಇದನ್ನು ಡೊನಾಲ್ಡ್‌ ಟ್ರಂಪ್‌, ಬೆಂಜಮಿನ್‌ ನೇತನ್ಯಾಹು ಮತ್ತಿತರರಿಗೆ ಅರ್ಥ ಮಾಡಿಸುವುದು ಹೇಗೆ?
……………………………………..

Journalist,Translator,avid bibliophile

Leave a Reply

Your email address will not be published. Required fields are marked *

Back To Top