ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್‌ಗಳ ಪ್ರಥಮ ಮತ್ತು ದ್ವಿತೀಯ ಹಾಗೂ ಸರ್ಕಾರಿ ಎಂಜಿನಿಯರಿAಗ್ ಕಾಲೇಜುಗಳ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷ ಸೇರಿ ಒಟ್ಟು 1,55,396 ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕೆ ಯೋಜನೆಯ ಭಾಗವಾಗಿ ಅಂದಾಜು 155.40 ಕೋಟಿ ರೂ. ವೆಚ್ಚದಲ್ಲಿ ತಲಾ 10 ಸಾವಿರ ರೂ. ಮೌಲ್ಯದ ಟ್ಯಾಬ್ಲೆಟ್(ಪರ್ಸನಲ್ ಮೊಬೈಲ್ ಕಂಪ್ಯೂಟರ್) ಉಚಿತವಾಗಿ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 44,326 ವಿದ್ಯಾರ್ಥಿಗಳಿದ್ದಾರೆ. ಇತರ ಹಿಂದುಳಿದ ವರ್ಗಗಳ 91,210, ಅಲ್ಪಸಂಖ್ಯಾತರ 10,977, ಸಾಮಾನ್ಯ ವಿಭಾಗದ 8,883 ವಿದ್ಯಾರ್ಥಿಗಳಿದ್ದಾರೆ. ಯೋಜನೆಗೆ ತಗಲುವ ವೆಚ್ಚವನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಮಾಜ ಕಲ್ಯಾಣ ಇಲಾಖೆ-44.32 ಕೋಟಿ ರೂ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-91.21 ಕೋಟಿ ರೂ. ಮತ್ತು ಅಲ್ಪಸಂಖ್ಯಾತ ಇಲಾಖೆಯಿಂದ-10.98 ಕೋಟಿ ರೂ. ಅನುದಾನ ಪಡೆಯಲು ಹಾಗೂ ಉಳಿದ ಸಾಮಾನ್ಯ ವಿದ್ಯಾರ್ಥಿಗಳಿಗೆ ತಗಲುವ ವೆಚ್ಚವನ್ನು 8.88 ಕೋಟಿ ರೂ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಭರಿಸಲು ಮುಂದಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಆಯಾ ಇಲಾಖೆಗಳಿಗೆ ಮಂಜೂರು ಮಾಡಿದ ಅನುದಾನದಲ್ಲಿಯೇ ಈ ವೆಚ್ಚವನ್ನು ಭರಿಸಬೇಕು. ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ನೀಡುವುದರಿಂದ ಡಿಜಿಟಲ್ ಕಲಿಕೆ ಮತ್ತು ಆನ್‌ಲೈನ್ ಕಲಿಕೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ಸಾಮಾಜಿಕವಾಗಿ ಕೆಳಸ್ತರಕ್ಕೆ ಸೇರಿದವರಾಗಿದ್ದಾರೆ.
ಟ್ಯಾಬ್ಲೆಟ್‌ಗಳಲ್ಲಿ ವೈಫೈ ಮತ್ತು ಸಿಮ್ ಬಳಕೆಯಿಂದ ಇಂಟರ್‌ನೆಟ್ ಸಂಪರ್ಕ ಸಾಧಿಸಬಹುದು. ಜೊತೆಗೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ನಡುವೆ ಇರುವ ಡಿಜಿಟಲ್ ತಂತ್ರಜ್ಞಾನದ ಅರಿವಿನ ಅಂತರ(ಡಿಜಿಟಲ್–ಡಿವೈಡ್) ತೊಡೆದು ಹಾಕುವ ಉದ್ದೇಶ ಹೊಂದಲಾಗಿದೆ ಎಂದೂ ಇಲಾಖೆಯ ಮೂಲಗಳು ಸಮರ್ಥನೆ ನೀಡಿವೆ. 2019–20ನೇ ಸಾಲಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಥಮ ವರ್ಷ ಪದವಿಯ ಅಂದಾಜು 1.10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ನೀಡಿತ್ತು.
Courtesyg: Google (photo)